ಕೋಮುಗಲಭೆ ಎಂಬ ಸಂಚು

Update: 2016-09-27 05:07 GMT

ಕೋಮುಗಲಭೆಗಳು ನಿಜಕ್ಕೂ ಧಾರ್ಮಿಕ ಕಾರಣಗಳಿಗಾಗಿ ಸಂಭವಿಸುತ್ತವೆಯೇ? ನಿಜಕ್ಕೂ ತಮ್ಮ ತಮ್ಮ ಧರ್ಮಗಳ ಮೇಲಿನ ಪ್ರೀತಿಯಿಂದ ಬೀದಿಗಿಳಿದು ಸಾರ್ವಜನಿಕರಿಗೆ ನಾಶ, ನಷ್ಟ ಉಂಟು ಮಾಡುತ್ತಾರೆಯೇ? ಈ ಪ್ರಶ್ನೆಗೆ ವಿಶಿಷ್ಟ ರೀತಿಯಲ್ಲಿ ಒಬ್ಬ ವಿದ್ಯಾರ್ಥಿ ಉತ್ತರ ಹೇಳಿದ್ದಾನೆ. ಅವನ ಮೂಲಕ ಈ ಸಮಾಜದ ದೊಡ್ಡವರು ಬಹಳಷ್ಟು ಕಲಿಯಬೇಕಾಗಿದೆ. ನಮ್ಮ ಕೃತ್ಯಗಳನ್ನು ನಮ್ಮ ಮಕ್ಕಳು ಗಮನಿಸುತ್ತಿರುತ್ತಾರೆ ಮತ್ತು ಅವರು ಅದನ್ನು ಅನುಕರಿಸುತ್ತಾರೆ ಎನ್ನುವ ಎಚ್ಚರಿಕೆಯ ಪಾಠವನ್ನೂ ನಾವು ಈ ಘಟನೆಯ ಮೂಲಕ ಕಲಿಯಬೇಕಾಗಿದೆ. ಈ ಘಟನೆ ನಡೆದಿರುವುದು ಕೋಮುಗಲಭೆಗಳಿಗೆ ಒಂದು ಕಾಲದಲ್ಲಿ ಕುಖ್ಯಾತವಾಗಿದ್ದ ಮುಂಬೈ ಬಳಿಯ ಭಿವಂಡಿಯಲ್ಲಿ. ಇಲ್ಲಿನ ಪ್ರೌಢಶಾಲೆಯೊಂದರ ಗೋಡೆಯಲ್ಲಿ ಇದ್ದಕ್ಕಿದ್ದಂತೆಯೇ ಒಂದು ಧರ್ಮದ ಕುರಿತಂತೆ ತೀರಾ ಅವಹೇಳನಕಾರಿ ಹೇಳಿಕೆಗಳು ಗೋಚರಿಸತೊಡಗಿದವು. ಎರಡು,ಮೂರು ದಿನಗಳಿಗೊಮ್ಮೆ ಇದು ಮರುಕಳಿಸತೊಡಗಿದಂತೆಯೇ ಶಾಲೆಯ ವಾತಾವರಣದಲ್ಲಿ ಬಿಸಿಯೇರತೊಡಗಿತು. ಧರ್ಮದ ಮುಖಂಡರು ಒಟ್ಟು ಸೇರಿ ಪೊಲೀಸ್ ಠಾಣೆಗೆ ದೂರನ್ನೂ ನೀಡಿದರು. ಪ್ರಕರಣ ತೀವ್ರ ಕುತೂಹಲಕಾರಿಯಾಗಿದ್ದರಿಂದ ಪೊಲೀಸರು ಗುಟ್ಟಾಗಿ ತನಿಖೆಗೆ ಇಳಿದರು. ಶಾಲೆಯ ಆವರಣದಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಿದರು. ಇದಾದ ಬಳಿಕ ಮತ್ತೆ ಎರಡು ಬಾರಿ ಗೋಡೆಯ ಮೇಲೆ ಧಾರ್ಮಿಕ ನಿಂದನೆಯ ಕರಪತ್ರ ಕಾಣಿಸಿಕೊಂಡಿತು. ಸಿಸಿ ಕ್ಯಾಮರಾದಲ್ಲಿ ಈ ಧರ್ಮನಿಂದನೆಯನ್ನು ಮಾಡುತ್ತಿದ್ದ ವ್ಯಕ್ತಿಯೂ ಪತ್ತೆಯಾದ. ಅತ್ಯಂತ ಅಚ್ಚರಿಯ ಸಂಗತಿಯೆಂದರೆ ಅದೇ ಶಾಲೆಯ ಹತ್ತನೆ ತರಗತಿಯ ವಿದ್ಯಾರ್ಥಿ ಈ ಕೃತ್ಯವನ್ನು ಮಾಡುತ್ತಿದ್ದ. ಇನ್ನೂ ಕುತೂಹಲಕಾರಿಯಾದ ಸಂಗತಿಯೆಂದರೆ ಅವನು ತನ್ನ ಧರ್ಮವನ್ನೇ ನಿಂದಿಸಿ ಈ ರೀತಿಯಾಗಿ ಕರಪತ್ರವನ್ನು ಅಂಟಿಸುತ್ತಿದ್ದ. ಪೊಲೀಸರು ಅವನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ದಿಗ್ಭ್ರಮೆಯನ್ನು ಸೃಷ್ಟಿಸುವಂತಹ ವಿವರಗಳು ಹೊರಬಿದ್ದವು. ಆ ಹುಡುಗ ತನ್ನ ಧರ್ಮವನ್ನು ನಿಂದಿಸಿ ಕರಪತ್ರವನ್ನು ಅಂಟಿಸಿರುವುದು ಕೋಮುಗಲಭೆ ಸೃಷ್ಟಿಯಾಗಲಿ ಎನ್ನುವ ಕಾರಣಕ್ಕೆ. ಹಾಗೆಂದು ಆತ ಕೋಮುವಾದಿಯೇನೂ ಅಲ್ಲ. ಭಾರೀ ಕೋಮುಗಲಭೆಗಳು ನಡೆದರೆ ಶಾಲೆಗೆ ರಜೆ ಸಿಗುತ್ತದೆ. ಈ ವಿದ್ಯಾರ್ಥಿ ಕಲಿಕೆಯಲ್ಲಿ ತುಂಬಾ ಹಿಂದಿದ್ದ. ಅಧ್ಯಾಪಕರಿಂದ ಪದೇ ಪದೇ ಶಿಕ್ಷೆಗೆ ಒಳಗಾಗುತ್ತಿದ್ದ. ಹೋಮ್‌ವರ್ಕ್‌ಗಳನ್ನು ಮಾಡುವಲ್ಲೂ ವಿಫಲನಾಗುತ್ತಿದ್ದ. ಈ ಕಾರಣಕ್ಕಾಗಿ ಅವನಿಗೆ ಸುದೀರ್ಘವಾದ ರಜೆ ಬೇಕಾಗಿತ್ತು. ಕೋಮುಗಲಭೆಗಳು ಭುಗಿಲೆದ್ದರೆ ಶಾಲೆಗೆ ರಜೆ ಸಿಗುತ್ತದೆ ಎಂದು ತರ್ಕಿಸಿದ್ದ ವಿದ್ಯಾರ್ಥಿ ಅದಕ್ಕಾಗಿ ಗೋಡೆಯ ಮೇಲೆ ತನ್ನದೇ ಧರ್ಮವನ್ನು ನಿಂದಿಸಿ, ಇನ್ನೊಂದು ಧರ್ಮದ ಜನರ ತಲೆಗೆ ಕಟ್ಟುವುದಕ್ಕೆ ತಂತ್ರ ರೂಪಿಸಿದ್ದ. ಬಳಿಕ ಪೊಲೀಸರು ವಿದ್ಯಾರ್ಥಿಯ ಮೇಲೆ ಕ್ರಮ ತೆಗೆದುಕೊಂಡರು. ಪರಿಸ್ಥಿತಿಯನ್ನು ತಿಳಿಗೊಳಿಸಿದರು.

  ಶಾಲೆಗೆ ರಜೆ ಸಿಗಬೇಕೆಂದು ಒಬ್ಬ ವಿದ್ಯಾರ್ಥಿ ಇಡೀ ಊರಿಗೆ ಬೆಂಕಿ ಹಚ್ಚಲು ಹೊರಟದ್ದು ಇಂದಿನ ದಿನಗಳಲ್ಲಿ ವಿಶೇಷ ಅನ್ನಿಸಬೇಕಾಗಿಲ್ಲ. ಯಾಕೆಂದರೆ ಆ ವಿದ್ಯಾರ್ಥಿ ತಾನು ಏನನ್ನು ನೋಡಿದ್ದನೋ ಅದನ್ನೇ ಕಾರ್ಯಗತಗೊಳಿಸಲು ಯತ್ನಿಸಿದ್ದಾನಷ್ಟೇ. ಆತ ಈ ತಂತ್ರವನ್ನು ಕಲಿತದ್ದಾದರೂ ಎಲ್ಲಿಂದ? ಆತನಿಗೆ ಇಂತಹದೊಂದು ಪ್ರಳಯಾಂತಕ ಬುದ್ಧಿಯನ್ನು ಕೊಡುಗೆಯಾಗಿ ಕೊಟ್ಟವರು ಯಾರು? ವಿದ್ಯಾರ್ಥಿಯೊಬ್ಬ ಮಾಡಿದಾಕ್ಷಣ ನಮಗೆಲ್ಲ ಅಚ್ಚರಿ, ದಿಗ್ಭ್ರಮೆ ಸೃಷ್ಟಿಸುವಂತಹುದು ಒಬ್ಬ ರಾಜಕಾರಣಿ ಮಾಡಿದಾಗ ಯಾಕೆ ಏನೂ ಅನ್ನಿಸುವುದಿಲ್ಲ. ಮುಂಬೈಯಂತಹ ಶಹರದಲ್ಲಿ ಬಾಳ್‌ಠಾಕ್ರೆಯೂ ಸೇರಿದಂತೆ ಹಲವು ನಾಯಕರು ಬೆಳೆದಿರುವುದು ಇಂತಹ ಕೋಮುಗಲಭೆ ತಂತ್ರಗಳ ಮೂಲಕವೇ ಆಗಿವೆೆ. ಯಾವುದೇ ಬೃಹತ್ ಗಲಭೆಗಳು ಸಂಭವಿಸಿರುವುದು ಆಕಸ್ಮಿಕವಾಗಿ ಅಲ್ಲ. ಅವೆಲ್ಲವೂ ಪೂರ್ವನಿಯೋಜಿತವೇ ಆಗಿದೆ. ಮುಂಬೈ ಗಲಭೆಯ ಸಂದರ್ಭದಲ್ಲಿ ಅಮಾಯಕನೊಬ್ಬ ಬಹಿರ್ದೆಸೆಗೆ ಹೋದ ಸಂದರ್ಭದಲ್ಲಿ ಆತನನ್ನು ಕೊಲ್ಲಲಾಯಿತು. ಈ ಕೊಲೆ ಒಂದು ಕೋಮುಗಲಭೆಗೆ ಪೀಠಿಕೆಯಾಯಿತು. ಇಡೀ ಮುಂಬೈ ಹೊತ್ತಿ ಉರಿಯಿತು. ಅಂತಿಮವಾಗಿ ಈ ಗಲಭೆ ಇನ್ನೊಂದು ಸರಣಿ ಸ್ಫೋಟಗಳಿಗೆ ಕಾರಣವಾಯಿತು. ಇಡೀ ಮುಂಬೈನ ಆರ್ಥಿಕತೆಯೇ ಕೆಲಕಾಲ ತತ್ತರಿಸಿತು. ಅದರಿಂದ ದೇಶಕ್ಕಾಗಿರುವ ನಷ್ಟವೆಷ್ಟು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ. ಗುಜರಾತ್ ಗಲಭೆಯನ್ನು ತೆಗೆದುಕೊಳ್ಳೋಣ. ಗುಜರಾತ್ ಹತ್ಯಾಕಾಂಡಕ್ಕೆ ಕಾರಣವಾದುದು ಗೋಧ್ರಾ ರೈಲು ದಹನ. ಇದನ್ನು ಎಸಗಿದವರು ಯಾರು ಎನ್ನುವುದರ ಬಗ್ಗೆ ಈಗಲೂ ಅನುಮಾನ ಉಳಿದಿದೆ. ಗೋಧ್ರಾ ರೈಲು ದಹನವನ್ನು ಮುಸ್ಲಿಮರ ತಲೆಗೆ ಕಟ್ಟಿ ನೂರಾರು ಜನರನ್ನು ಅಲ್ಲಿನ ಸರಕಾರ ಬಂಧಿಸಿದೆಯಾದರೂ ಇದನ್ನು ಕಣ್ಣಾರೆ ಕಂಡವರಂತೂ ಯಾರೂ ಇಲ್ಲ. ರೈಲ್ವೆ ಸಚಿವಾಲಯ ನಡೆಸಿದ ತನಿಖೆಯಿಂದ ಹೊರ ಬಂದಿರುವ ಅಂಶವೆಂದರೆ ಬೆಂಕಿ ಹೊರಗಿನಿಂದ ಬಿದ್ದಿರುವುದಲ್ಲ, ಒಳಗಿನಿಂದಲೇ ಹಚ್ಚಿರುವುದು. ಇದೇ ಸಂದರ್ಭದಲ್ಲಿ ಕೆಲವು ಪಟೇಲ್ ಸಮುದಾಯದ ಮುಖಂಡರೂ ಇದನ್ನು ಪುಷ್ಟೀಕರಿಸುವಂತಹ ಹೇಳಿಕೆಯನ್ನು ನೀಡಿದ್ದರು. ಇತ್ತೀಚೆಗೆ ಹಿರಿಯ ನ್ಯಾಯಮೂರ್ತಿಯೊಬ್ಬರು, ಗೋಧ್ರಾ ದಹನವನ್ನು ಸಂಘಪರಿವಾರವೇ ಎಸಗಿರುವ ಸಾಧ್ಯತೆಯಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಅಂದರೆ ಒಂದು ದೊಡ್ಡ ಕೋಮುಗಲಭೆ ನಡೆಸುವುದಕ್ಕೆ ನೆಪವಾಗಿ ಗೋಧ್ರಾ ದಹನ ಕೃತ್ಯವನ್ನು ಎಸಗಲಾಯಿತು ಎನ್ನುವ ಅನುಮಾನವಂತೂ ಉಳಿದೇ ಇದೆ. ಕರ್ನಾಟಕದಲ್ಲೇ ವರ್ಷಗಳ ಹಿಂದೆ ಸಿಂದಗಿಯಲ್ಲಿ ನಡೆದ ಘಟನೆಯನ್ನು ನಾವು ಉದಾಹರಣೆಯಾಗಿ ತೆಗೆದುಕೊಳ್ಳೋಣ. ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಏಕಾಏಕಿ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಯಿತು. ಇದನ್ನು ಮುಸ್ಲಿಮರ ತಲೆಗೆ ಕಟ್ಟಿದ, ಸಂಘಪರಿವಾರ ಪ್ರತಿಭಟನೆಗೆ ಇಳಿಯಿತು. ಇಡೀ ಊರಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಇನ್ನೇನು ಕೋಮುಗಲಭೆ ಸಂಭವಿಸಬೇಕು ಎನ್ನುವಷ್ಟರಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಿದವರೇ ಸಂಘಪರಿವಾರದ ಜನರು ಎನ್ನುವುದು ಬೆಳಕಿಗೆ ಬಂತು. ಶ್ರೀರಾಮಸೇನೆಯ ಹಲವು ಕಾರ್ಯಕರ್ತರನ್ನು ಬಂಧಿಸಲಾಯಿತು. ಮಸೀದಿಗೆ ಹಂದಿಯ ರುಂಡ ಹಾಕುವವರು, ದೇವಸ್ಥಾನಕ್ಕೆ ದನದ ರುಂಡ ಹಾಕುವವರು ಪರಸ್ಪರ ವಿರೋಧಿ ಧರ್ಮದವರೇ ಆಗಿರಬೇಕಾಗಿಲ್ಲ. ಕೆಲವೊಮ್ಮೆ ಆಯಾ ಧರ್ಮೀಯರೇ ಅದನ್ನು ಎಸಗುವ ಸಾಧ್ಯತೆಗಳಿರುತ್ತವೆ. ಯಾಕೆಂದರೆ ಕೋಮುಗಲಭೆಗಳು ನಡೆದರೆ ಅವರಿಗೆ ಅದರಿಂದ ಬಹಳಷ್ಟು ಲಾಭಗಳಿವೆ.

ಶಾಲೆಗೆ ರಜೆ ಸಿಗಬೇಕು ಎಂದು ಕೋಮುಗಲಭೆಯೊಂದನ್ನು ಎಬ್ಬಿಸಲು ವಿದ್ಯಾರ್ಥಿ ಸಂಚು ರೂಪಿಸುತ್ತಾನೆ ಎಂದರೆ ನಮ್ಮ ಸಮಾಜ, ನಮ್ಮ ದೇಶ ಎತ್ತಕಡೆಗೆ ಸಾಗುತ್ತಿದೆ ಎನ್ನುವುದನ್ನು ನಾವು ಊಹಿಸಬಹುದು. ಇಂದು ನಾಗರಿಕರೆನಿಸಿಕೊಂಡವರು ಹೆಚ್ಚು ಹೆಚ್ಚು ಸಹನೆಯನ್ನು, ವಿವೇಕವನ್ನು ಹೊಂದಬೇಕಾದ ಅಗತ್ಯವನ್ನು ಇದು ಹೇಳುತ್ತದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳೂ ಕೋಮುಗಲಭೆಯನ್ನು ಹಚ್ಚುವ ಉದ್ದೇಶವನ್ನು ಹೊಂದಿರುತ್ತವೆ ಎಂಬ ಎಚ್ಚರಿಕೆಯಿಂದಲೇ ನಾವು ಪ್ರತಿ ದಿನವನ್ನೂ ಎದುರಿಸಬೇಕು. ಊರಿಗೆ ಬೆಂಕಿ ಬಿದ್ದರೆ ಅದರಲ್ಲಿ ತಮ್ಮ ಬೀಡಿ ಹಚ್ಚಿಕೊಳ್ಳಬಹುದು ಎಂದು ಯೋಚಿಸುವವರಷ್ಟೇ ಕೋಮುಗಲಭೆಗಳ ಸೃಷ್ಟಿಕರ್ತರಾಗಿರುತ್ತಾರೆ. ಅದರಿಂದ ನಾಶವಲ್ಲದೆ ಯಾವ ಲಾಭವೂ ಇಲ್ಲ ಎನ್ನುವ ಎಚ್ಚರಿಕೆ ನಮಗಿರಬೇಕು. ಆದುದರಿಂದ ಯಾವುದೇ ಅನಾಹುತಗಳು, ವದಂತಿಗಳು ಹರಡಿದಾಗ ಅವನ್ನು ತಕ್ಷಣ ನಂದಿಸುವ ಕೆಲಸ ನಮ್ಮಿಂದ ನಡೆಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News