ನನ್ನಜ್ಜ ಮದನ್ ಪೂಜಾರಿ (ಮಾಸ್ಟರ್)

Update: 2016-10-02 04:42 GMT

ನನ್ನಜ್ಜ ಶಾಲಾ ವಿದ್ಯಾಭ್ಯಾಸ ಪಡೆದಿದ್ದೆ ಹೋರಾಟದಿಂದ. ಅಂದಿನ ಸಾಮಾಜಿಕ ಪರಿಸ್ಥಿತಿ ಹಾಗಿತ್ತು. ಇವರು ಶಾಲಾ ತರಗತಿ ಪ್ರವೇಶಿಸಿದರೆ ಕೆಲವು ಮಂದಿ ತರಗತಿಯಿಂದ ಎದ್ದು ಮನೆಗೆ ಹೋಗುತ್ತಿದ್ದರು. ಮತ್ತೊಂದಷ್ಟು ಮಂದಿ ಇವರು ಶಾಲೆಗೆ ಬರುತ್ತಾರೆಂದು ಶಾಲೆಗೆ ಬರುತ್ತಿರಲಿಲ್ಲ. ಹೀಗೆ ಶಿಕ್ಷಣ ಹೋರಾಟದಲ್ಲಿ ಯಶಸ್ವಿಯಾದ ಪೆರ್ಲದ ಮದನ ಪೂಜಾರಿ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪದವಿ ಕಲಿಯುತ್ತಿದ್ದಾಗ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದವರು.

ಇಂದಿನ ಅಕ್ಷರ ಪ್ರಪಂಚ, ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕೆ.ಪಿ.ಮದನ ಮಾಸ್ಟರ್ ಅವರು ಪರಿಚಿತರಲ್ಲದಿದ್ದರೂ ಸಾರ್ವಜನಿಕ ಜೀವನದಲ್ಲಿ ಕೃಷಿಯಿಂದ ತೊಡಗಿ ಕ್ರೀಡೆ ತನಕ, ಶಿಕ್ಷಣದಿಂದ ತೊಡಗಿ ರಾಜಕೀಯ ತನಕ ಸಾಕಷ್ಟು ಮಂದಿ ಇಂದಿಗೂ ಅವರ ಅನುಭವವನ್ನು ತಿಳಿದುಕೊಳ್ಳಲು ಬರುತ್ತಾರೆ.

ವಿವಾಹವಾದ ಮೇಲೆ ಕಾಲೇಜಿಗೆ ಸೇರಿದವರು. ಸ್ವಾತಂತ್ರ್ಯ ಹೋರಾಟ ಪರ ಬಾವುಟಗುಡ್ಡೆ, ಮೈದಾನ ಮುಂತಾದೆಡೆ ಪ್ರತಿಭಟನೆಯಲ್ಲಿ ಭಾಗವಹಿಸಿ ಪೊಲೀಸರು ಬಂಧಿಸಿದರೂ ಕೇಸಿಲ್ಲದೆ ಬಿಡುಗಡೆ ಆಗಿದ್ದರು. ಆದರೆ, ನಿರಂತರವಾಗಿ ಚಳವಳಿಯಲ್ಲಿ ತೊಡಗಿದ್ದಾರೆಂದು ಪೊಲೀಸರು ವಾರಂಟ್ ಹೊರಡಿಸಿದ್ದರು. ಶಿಕ್ಷಣ ಮುಂದುವರಿಸಬೇಕೆಂಬ ಕಾರಣಕ್ಕಾಗಿ ಮಂಗಳೂರು ತೊರೆದು ಇಂದಿನ ತಮಿಳುನಾಡಿನ ನಾಗರ್ ಕೋವಿಲ್ ಎಂಬಲ್ಲಿ ಭೂಗತರಾಗಿದ್ದರು. ಈ ಪ್ರದೇಶ ಅಂದಿನ ಕೊಟ್ಟಿ - ತಿರುವಾಂಕೂರು ರಾಜನ ಅಧೀನದಲ್ಲಿತ್ತು. ಅದೇ ಸಂದರ್ಭದಲ್ಲಿ ಅಂದಿನ ಕಾಲದಲ್ಲಿ ಟೆಲಿಗ್ರಾಂ ಕಳುಹಿಸಲು ಉಪಯೋಗಿಸಲಾಗುತ್ತಿದ ಮೋರ್ಸ್ ಕೋಡ್ ಕೋರ್ಸ್ ಕಲಿತರು. ಇದರಿಂದಾಗಿ ಅವರಿಗೆ ಮುಂದಿನ ದಿನಗಳಲ್ಲಿ ಭಾರತೀಯ ರೈಲ್ವೆಯಲ್ಲಿ ಸೇನಾಪಡೆಯ ಪರವಾಗಿ ಕೆಲಸ ಮಾಡಲು ಅವಕಾಶ ದೊರಕಿತ್ತು.

ಹಲವು ವರ್ಷಗಳ ಕಾಲ ಭಾರತೀಯ ರೈಲ್ವೆಯಲ್ಲಿ ಅಸಿಸ್ಟೆಂಟ್ ಟ್ರಾಫಿಕ್ ಆಪರೇಟರ್ ಉದ್ಯೋಗಿಯಾಗಿ ಅವರು ಪಂಜಾಬ್ ರಾಜ್ಯದ ಜಲಂಧರ್, ಬೆಂಗಳೂರು, ತಮಿಳುನಾಡಿನ ಮದ್ರಾಸ್, ಮೆಟುಪಾಲಯಂ, ಕೊಡೈಕನಲ್ ಮುಂತಾದೆಡೆ ಕೆಲಸ ಮಾಡಿದ್ದರು.

ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಹುಟ್ಟೂರಿಗೆ ವಾಪಸಾಗಿ ಇಪ್ಪತ್ತೈದು ಎಕರೆ ಜಮೀನು ಗೇಣಿಗೆ ಪಡೆದು ಕೃಷಿ ಆರಂಭಿಸಿದರು. ಭತ್ತ, ಕಬ್ಬು, ತೆಂಗು, ಅಡಿಕೆ, ಕರಿಮೆಣಸು, ಗೋಡಂಬಿ ಪ್ರಮುಖ ಬೆಳೆಗಳಾಗಿತ್ತು. ಪೆರ್ಲದಲ್ಲಿದ್ದ ಶಾಲೆ ಹೈಸ್ಕೂಲ್ ಆದಾಗ ದೈಹಿಕ ಶಿಕ್ಷಕ ಬೇಕೆಂಬ ಹಿನ್ನೆಲೆಯಲ್ಲಿ ಅವರು ಮದ್ರಾಸಿನ ವೈಎಂಸಿಎ ಸಂಸ್ಥೆಯಲ್ಲಿ ಶಾರೀರಿಕ ಶಿಕ್ಷಣ ಪಡೆದರು.ಇದೇ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದ ಮಹಾತ್ಮ ಗಾಂಧೀಜಿಯವರನ್ನು ಭೇಟಿಯಾಗಿ ಚರ್ಚಿಸಿದ್ದರು.

ಪೆರ್ಲ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಇಂಗ್ಲಿಷ್ ಮತ್ತು ದೈಹಿಕ ಶಿಕ್ಷಕರಾಗಿ 19 ವರ್ಷ ಸೇವೆ ಸಲ್ಲಿಸಿ ತನ್ನ ಶಿಷ್ಯನಿಗೆ ಕೆಲಸ ದೊರೆಯಲೆಂದು ಕೆಲಸಕ್ಕೆ ರಾಜೀನಾಮೆ ನೀಡಿದರು. ಈ ಸಂದರ್ಭದಲ್ಲಿ ತನಗೆ ಕೃಷಿ ಆದಾಯ ಇರುವುದರಿಂದ ಪಿಂಚಣಿ ಬೇಡವೆಂದು ಸರಕಾರಕ್ಕೆ ಪತ್ರ ಬರೆದು ಪಿಂಚಣಿ ಪಡೆದುಕೊಳ್ಳಲಿಲ್ಲ. ಪೆರ್ಲದಿಂದ ಬಜಕೂಡ್ಲು ತನಕ ಬಾಬಾಬ್ಯಾರಿ ಎಂಬವರು ರಸ್ತೆ ನಿರ್ಮಿಸಿದರು. ಅಲ್ಲಿಂದ ಮುಂದಕ್ಕೆ ಸುಮಾರು ಐದು ಕಿಲೋ ಮೀಟರ್ ಸಾರ್ವಜನಿಕ ರಸ್ತೆಯನ್ನು ತನ್ನ ಸ್ವಂತ ಶ್ರಮದಿಂದ ನಿರ್ಮಿಸಿದರು. ಅಂದಿನ ಕಾಲದಲ್ಲಿ ರಸ್ತೆ ನಿರ್ಮಾಣಕ್ಕೆ ಜನರು ಅಡ್ಡಿ ಪಡಿಸುತ್ತಾರೆಂದು ರಸ್ತೆ ಜಮೀನನ್ನು ತನ್ನ ಹೆಸರಿಗೆ ಖಾತೆ ಮಾಡಿಸಿದ್ದರು. ಇಂದಿನ ಕಾಲದಲ್ಲಿ ಅಂದಾಜು ಕೆಲವು ಕೋಟಿ ರೂಪಾಯಿ ವೆಚ್ಚವಾಗಬಹುದಾಗ ರಸ್ತೆಯನ್ನು ಆನಂತರ ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸಿದರು.

ಏಣ್ಮಕಜೆಯ ಅಬ್ಬಾಸ್ ಮಾಸ್ತರ್ ಅವರೊಂದಿಗೆ ಸೇರಿ ಅಸ್ಪ್ರಶ್ಯತಾ ನಿವಾರಣೆ, ಕೊರಗ ಮತ್ತು ದಲಿತರ ಶಿಕ್ಷಣಕ್ಕಾಗಿ ಶ್ರಮ ವಹಿಸಿದರು. ಮದನ ಮಾಸ್ತರ್ ಅವರು ದಲಿತ ಹುಡುಗರನ್ನು ಶಾಲೆಗೆ ಹೋಗುವಂತೆ ಪ್ರೇರೇಪಿಸಿದರೆ ಅಬ್ಬಾಸ್ ಮಾಸ್ತರ್ ಅವರು ದಲಿತ ಹುಡುಗರಿಗೆ ಹೊಸದಾಗಿ ನಾಮಕರಣ ಮಾಡಿ ಹಿಂದೂ ದೇವರ ಹೆಸರಿಟ್ಟು ಶಾಲೆಗೆ ದಾಖಲು ಮಾಡುತ್ತಿದ್ದರು. ಸ್ವಾತಂತ್ರ್ಯ ದೊರೆತು ಕೇರಳದಲ್ಲಿ ಮೊದಲ ಕಮ್ಯುನಿಸ್ಟ್ ಸರಕಾರ ಬಂದಾಗ ಕಾಡುಗಳಲ್ಲಿ ವಾಸಿಸುತ್ತಿದ್ದ ಕೊರಗ ಜನಾಂಗದವರಿಗೆ ಸರಕಾರದ ವತಿಯಿಂದ ಮನೆ ನಿರ್ಮಿಸಿಕೊಟ್ಟಿದ್ದಲ್ಲದೆ, ಅವರಿಗೆ ಪ್ರತ್ಯೇಕ ಬಾವಿ ತೋಡಿಸಿಕೊಟ್ಟಿದ್ದರು. ಕೇವಲ ಶಿಕ್ಷಕರಾಗಿರದೇ ಪ್ರಗತಿಪರ ಕೃಷಿಕರಾಗಿ, ರೈತರಿಗೆ ಮಾರ್ಗದರ್ಶಕರಾಗಿ ದೇಶದಲ್ಲಿ ಹಸಿರು ಕ್ರಾಂತಿ ಸಂದರ್ಭದಲ್ಲಿ ರೈತರಿಗೆ ಮಾರ್ಗದರ್ಶನ ಮಾಡಿದವರು. ಭೂಸುಧಾರಣೆ ಕಾಲದಲ್ಲಿ ಉಳುವವನಿಗೆ ಭೂಮಿ ನೀಡುವಲ್ಲಿ ಹಗಲಿರುಳು ದುಡಿದವರು.

ಶಿಕ್ಷಕರಾಗಿದ್ದಾಗ ಶಾಲೆಗೆ ಆರೇಳು ಕಿಲೋಮೀಟರ್ ನಡೆದುಕೊಂಡೇ ಹೋಗಬೇಕು. ತನ್ನ ಮನೆಯಿಂದ ಶಾಲೆ ತನಕ ದಾರಿಯುದ್ದಕ್ಕೂ ನೂರು ಜೇನು ಕುಟುಂಬಗಳನ್ನು ಇರಿಸಿದ್ದರು. ರಾಜಿ ಪಂಚಾಯಿತಿಯಲ್ಲಿ ಇವರು ಎತ್ತಿದ ಕೈ. ಸಾವಿರಾರು ಭೂಮಿ ಮತ್ತು ಇತರ ಯಾವುದೇ ವ್ಯಾಜ್ಯಗಳನ್ನು ಕಾನೂನು ಸಮ್ಮತ ಮತ್ತು ನ್ಯಾಯ ಪರವಾಗಿ ಇತ್ಯರ್ಥ ಮಾಡುತ್ತಿದ್ದರು. ಹೈಕೋರ್ಟ್ ಸೇರಿದಂತೆ ನ್ಯಾಯಾಲಗಳಲ್ಲಿದ್ದ ಹಲವಾರು ಪ್ರಕರಣಗಳನ್ನು ನ್ಯಾಯಾಲಯದ ಹೊರಗಡೆ ಇತ್ಯರ್ಥ ಮಾಡಿದ್ದರು.

ಗಾಂಧೀಜಿಯವರಿಂದ ಪ್ರಭಾವಿತರಾಗಿ ಇಂದೂ ಕೂಡ ಖಾದಿ ಬಟ್ಟೆ ತೊಡುವ, ಸರಳ ಜೀವನ ನಡೆಸುವ ಮದನ ಮಾಸ್ತರ್ ಅವರು ಕೇರಳದಲ್ಲಿ ಮೊದಲ ಸರಕಾರ ಬಂದ ಮೇಲೆ ಕಮ್ಯುನಿಸ್ಟ್ ಚಳವಳಿಯಲ್ಲಿ ಸೇರಿದರು. ಸಾಮಾನ್ಯವಾಗಿ ಜನರು ಮುಖ್ಯಮಂತ್ರಿಯನ್ನು ಕಾಣಲು ಹೋಗುವುದುಂಟು. ಆದರೆ, ಅಂದಿನ ಕೇರಳ ಮುಖ್ಯಮಂತ್ರಿ ಇ.ಎಂ.ಎಸ್.ನಂಬೂದಿರಿಪಾಡ್ ಅವರು ಮದನ ಮಾಸ್ಟರ್ ಅವರನ್ನು ಕಾಣಲು ಪೆರ್ಲ ಶಾಲೆಗೆ ಭೇಟಿ ನೀಡಿದ್ದಾರೆ. ಮಂಗಳೂರಿನಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿ ಭಾವಹಿಸಿ ಕಲ್ಲಡ್ಕ-ಕಾಞಂಗಾಂಡ್ ರಸ್ತೆಯಲ್ಲಿ ಹಿಂದಿರುಗುತ್ತಿದ್ದಾಗ ಇಎಂಎಸ್ ಅವರು ಲೋಕಸಭಾ ವಿಪಕ್ಷ ಮುಖಂಡ ಕಾಸರಗೋಡು ಸಂಸದರಾಗಿದ್ದ ಎ.ಕೆ.ಗೋಪಾಲನ್ ಅವರಲ್ಲಿ ಮದನ ಮಾಸ್ಟರನ್ನು ಭೇಟಿಯಾಗಬೇಕೆಂದು ಕೇಳಿದ್ದರು. ಅದಕ್ಕೆ ಕಾರಣ, ಪೆರ್ಲದ ಪೇಟೆಯಲ್ಲಿದ್ದ ಕೆಂಪಾಗಿದ್ದ ಆಲದ ಮರ.

ಎರಡೂ ಕಮ್ಯುನಿಸ್ಟ್ ಪಕ್ಷಗಳು ಅವರಿಗೆ ಮಂಜೇಶ್ವರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಸ್ಪರ್ಧಿಸಲು ಟಿಕೆಟ್ ನೀಡಿದ್ದರು. ತಾನು ಚುನಾವಣೆ ಸ್ಪರ್ಧಿಸದೆ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಜೈಲಿನಲ್ಲಿದ್ದ ಎಂ.ರಾಮಣ್ಣ ರೈ ಅವರ ಪರವಾಗಿ ಮಾರ್ಕ್ಸಾವಾದಿ ಕಮ್ಯೂನಿಸ್ಟ್ ಪಕ್ಷದಿಂದ ನಾಮಪತ್ರ ಸಲ್ಲಿಸಿ ಸ್ನೇಹಿತ ರೈ ಅವರನ್ನು ಶಾಸಕರನ್ನಾಗಿ ಮಾಡುತ್ತಾರೆ.

ಏಣ್ಮಕಜೆ ಗ್ರಾಮ ಪಂಚಾಯತ್‌ಗೆ ಇವರು ಕೆಲವು ಬಾರಿ ಅವಿರೋಧವಾಗಿಯೂ, ಹಲವು ಬಾರಿ ಚುನಾಯಿತರಾಗಿದ್ದರೂ ಅವರನ್ನು ಪಂಚಾಯತ್ ಅಧ್ಯಕ್ಷ ಆಗದಂತೆ ಪಟ್ಟಭದ್ರ ಹಿತಾಸಕ್ತಿಗಳು ನೋಡಿಕೊಂಡಿದ್ದರು. ಹೀನಾಯ ಅವಸ್ಥೆಯಲ್ಲಿ ಪೆರ್ಲ ಸಹಕಾರಿ ಸಂಘದ ಅಧ್ಯಕ್ಷರಾಗಿ, ಅದನ್ನು ಬ್ಯಾಂಕ್ ಮಾಡಿ, ಹೊಸ ಜಮೀನು, ಕಟ್ಟಡ ಕಟ್ಟಿಸಿ ಅಭಿವೃದ್ಧಿ ಪಡಿಸಿದ ಮೇಲೆ ಅಲ್ಲೂ ಅವರನ್ನು ಮತ್ತೆ ಚುನಾಯಿತರಾಗದಂತೆ ನೋಡಿಕೊಳ್ಳಲಾಯಿತು.

ಅಂದಿನ ಸಾಮಾಜಿಕ ಸ್ಥಿತಿಗತಿಯಲ್ಲಿ ಪ್ರವಾಹದ ವಿರುದ್ಧ ಈಜಾಡಿ ಸ್ವಯಂ ಆಸಕ್ತಿಯಿಂದ ಶಿಕ್ಷಣ ಪಡೆದು ಸಮಾಜದಲ್ಲಿ ಗೌರವ ಸ್ಥಾನಮಾನ ಪಡೆಯುವಲ್ಲಿ ಯಶಸ್ವಿಯಾದವರು.

Writer - ರಮೇಶ್ ಎಸ್. ಪೆರ್ಲ

contributor

Editor - ರಮೇಶ್ ಎಸ್. ಪೆರ್ಲ

contributor

Similar News