ಸೇನಾ ಶಿಬಿರದ ಮೇಲೆ ಉಗ್ರರ ದಾಳಿ: ಬಿಎಸ್‌ಎಫ್ ಯೋಧ ಬಲಿ

Update: 2016-10-03 03:22 GMT

ಶ್ರೀನಗರ, ಅ.3: ಸೇನಾ ಶಿಬಿರದ ಮೇಲೆ ರವಿವಾರ ರಾತ್ರಿ ಆರು ಮಂದಿ ಉಗ್ರರು ನಡೆಸಿದ ದಾಳಿಯಲ್ಲಿ ಗಡಿಭದ್ರತಾ ಪಡೆಯ ಒಬ್ಬ ಯೋಧ ಮೃತಪಟ್ಟು, ಮತ್ತೊಬ್ಬ ಗಾಯಗೊಂಡಿದ್ದಾರೆ. ಉರಿಯಲ್ಲಿ ಇಂಥದ್ದೇ ಘಟನೆ ನಡೆದು 19 ಯೋಧರನ್ನು ಹತ್ಯೆ ಮಾಡಿದ ಎರಡು ವಾರಗಳ ಬಳಿಕ ಈ ದಾಳಿ ನಡೆದಿದೆ. ಈ ಘಟನೆಯಿಂದ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ.
ಬಾರಾಮುಲ್ಲಾ ಜಿಲ್ಲೆಯ ಜಂಬಜ್‌ಪುರ 46 ರಾಷ್ಟ್ರೀಯ ರೈಫಲ್ ಕ್ಯಾಂಪಿನ ಮೇಲೆ ರಾತ್ರಿ 10.30ರ ಸುಮಾರಿಗೆ ಈ ದಾಳಿ ನಡೆದಿದ್ದು, ಗುಂಡಿನ ಚಕಮಕಿ ನಡೆದಿದೆ. ಸೇನಾ ಶಿಬಿರದ ಬಳಿ ಇದ್ದ ಸಾರ್ವಜನಿಕ ಉದ್ಯಾನವನಕ್ಕೆ ಪ್ರವೇಶಿಸುವ ಪ್ರಯತ್ನ ನಡೆಸಿದರೂ, ಸೇನೆ ಇದಕ್ಕೆ ಅವಕಾಶ ನೀಡಲಿಲ್ಲ. ಬಳಿಕ ಜೀಲಂ ನದಿ ದಂಡೆಯಿಂದ ಕಾರ್ಯಾಚರಣೆ ನಡೆಸಿದರು ಎಂದು ಬಾರಾಮುಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ ಪ್ರಕಟಿಸಿದೆ.
"ಶಿಬಿರದ ಹೊರಗೆಯೇ ಗಡಿಭದ್ರತಾ ಪಡೆ ಯೋಧರು ಇದನ್ನು ನಿಭಾಯಿಸಿದರು. ಉಗ್ರರ ಗುಂಡಿನ ದಾಳಿಗೆ ಪ್ರತಿ ದಾಳಿ ನಡೆದಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರಕಟಿಸಿದ್ದಾರೆ. ಗುಂಡಿನ ಚಕಮಕಿ ವೇಳೆ, ಬಿಎಸ್‌ಎಫ್ ಜವಾನನೊಬ್ಬ ತೀವ್ರ ಗಾಯಗೊಂಡಿದ್ದಾನೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಮೃತಪಟ್ಟ ಎಂದು ವಿವರಿಸಿದ್ದಾರೆ.
ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ, ಅಖನೂರ್ ವಲಯದ ಭಾರತೀಯ ಶಿಬಿರದತ್ತ ಗುಂಡಿನ ದಾಳಿ ನಡೆಸಿದೆ. ಗಡಿ ನುಸುಳುಕೋರರಿಗೆ ಸಹಾಯ ಮಾಡುವ ಸಲುವಾಗಿ ಇಂಥ ಕೃತ್ಯವನ್ನು ಪಾಕಿಸ್ತಾನ ನಿಯಮಿತವಾಗಿ ಮಾಡುತ್ತಿದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಾಚೆಗೆ ಗುಂಡು ಹಾರಿಸುವುದು 2003ರ ಕದನ ವಿರಾಮ ಒಪ್ಪಂದದ ಉಲ್ಲಂಘನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News