‘ತಮಿಳುನಾಡಿಗೆ ನೀರು ಹರಿಸುವುದು ಅನಿವಾರ್ಯ’

Update: 2016-10-04 18:45 GMT

ಬೆಂಗಳೂರು, ಅ.4: ತಮಿಳುನಾಡಿಗೆ ಅ.6ರಿಂದ 18ರವರೆಗೆ ಪ್ರತಿ ದಿನ 2 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸಬೇಕೆಂಬ ಸುಪ್ರೀಂ ಕೋರ್ಟ್‌ನ ಮಧ್ಯಾಂತರ ತೀರ್ಪನ್ನು ಪಾಲಿಸುವುದು ರಾಜ್ಯ ಸರಕಾರಕ್ಕೆ ಅನಿವಾರ್ಯ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್. ಡಿ.ದೇವೇಗೌಡ ಹೇಳಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಪಾಲನೆ ಮಾಡುವುದು ಅನಿವಾರ್ಯ. ಆದರೆ ರಾಜ್ಯ ಸರಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎನ್ನುವುದು ಅವರಿಗೆ ಬಿಟ್ಟದ್ದು ಎಂದರು.
ಕಾವೇರಿ ವಿವಾದದಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿದೆ. ಆದರೆ ಈ ಸೋಲಿಗೆ ಯಾರನ್ನು ದೂರುವುದು, ಹೊಣೆಯಾಗಿಸುವುದು ಸರಿಯಲ್ಲ. ಕೋರ್ಟ್‌ನಲ್ಲಿ ರಾಜ್ಯದ ಪರ ನಾರಿಮನ್ ಉತ್ತಮ ರೀತಿಯಲ್ಲಿ ವಾದ ಮಂಡಿಸಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಸುಪ್ರಿಂಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಟಾರ್ನಿ ಜನರಲ್ ವಾದ ಮಂಡಿಸಿದ್ದಾರೆ. ನಾರಿಮನ್ ಹಾಗೂ ಅಟಾರ್ನಿ ಜನರಲ್‌ರ ರಾಜ್ಯ ಪರ ಕಾಳಜಿಗೆ ನಾನು ಆಭಾರಿಯಾಗಿದ್ದೇನೆ ಎಂದು ಅಭಿನಂದನೆ ಸಲ್ಲಿಸಿದರು.
ನಾನು ಬೇಜವಾಬ್ದಾರಿಯಿಂದ ಆಮರಣಾಂತ ಉಪವಾಸ ಮಾಡಿಲ್ಲ. ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ಸಚಿವರು ಉಪವಾಸ ಸತ್ಯಾಗ್ರಹ ಕೈ ಬಿಡಿ ಅಂತಾ ಒತ್ತಾಯ ಮಾಡಿದರು. ಕಾವೇರಿ ವಿವಾದ ಅತ್ಯಂತ ಜಟಿಲ ಸಮಸ್ಯೆ. ಕೂಡಲೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಉಭಯ ರಾಜ್ಯಗಳ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
 
ರಾಜ್ಯದ ಪರ ಕ್ಷಮೆಕೋರಿದ ದೇವೇಗೌಡ: ಕಾವೇರಿ ವಿಚಾರದಲ್ಲಿ ರಾಜ್ಯ ಪರ ನಾರಿಮನ್ ಸುಪ್ರೀಂ ಕೋರ್ಟ್‌ನಲ್ಲಿ ಸರಿಯಾದ ರೀತಿಯಲ್ಲಿ ವಾದ ಮಂಡಿಸಿದ್ದಾರೆ. ಆದರೆ ಬಿಜೆಪಿಯ ನಾಯಕರು ನಾರಿಮನ್ ಸರಿಯಾದ ರೀತಿಯಲ್ಲಿ ವಾದ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಇದರಿಂದ ನಾರಿಮನ್‌ರ ಮನಸ್ಸಿಗೆ ನೋವಾಗಿದೆ. ರಾಜ್ಯದ ಯಾವ ನಾಯಕರೂ ಕೂಡ ಹಾಗೆ ಮಾತಾಡಬಾರದು. ಅವರು ಹಿರಿಯ ನ್ಯಾಯವಾದಿಗಳು. ರಾಜ್ಯದ ಪರ ಮೂರು ದಶಕಗಳ ಕಾಲ ವಾದ ಮಂಡಿಸಿದ ಅನುಭವವಿದೆ. ರಾಜ್ಯದ ಜನರ ಪರವಾಗಿ ನಾರಿಮನ್‌ರಲ್ಲಿ ನಾನು ಕ್ಷಮೆ ಕೋರುತ್ತೇನೆ. ಅಲ್ಲದೆ ಕೂಡಲೆ ಅವರನ್ನು ಖುದ್ದು ಭೇಟಿ ಮಾಡಿ ಕ್ಷಮೆ ಕೋರುತ್ತೇನೆ ಎಂದರು. ರಾಜ್ಯಪರ ವಾದ ಮಂಡಿಸುವಲ್ಲಿ ನಾರಿಮನ್ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂಬ ಆರೋಪಗಳಿಂದ ಬೇಸತ್ತು, ಈ ಪ್ರಕರಣದಿಂದ ಹಿಂದೆ ಸರಿಯುವುದಾಗಿ ನೊಂದು ತಿಳಿಸಿದ್ದರು. ಆದರೆ ರಾಜ್ಯದ ಸಂದಿಗ್ಧ ಸ್ಥಿತಿಯಲ್ಲಿ ನೀವು ಹಿಂದೆ ಸರಿಯುವುದು ಸೂಕ್ತವಲ್ಲ. ನಿಮ್ಮ ಸ್ಥಾನಕ್ಕೆ ಬೇರೆಯವರು ಬಂದರೂ ರಾಜ್ಯಕ್ಕೆ ನ್ಯಾಯ ದೊರಕಿಸಿ ಕೊಡಲಾರರು ಬಂದು ವಾದ ಮಂಡಿಸಿ ಅಂತ ನಾರಿಮನ್‌ಗೆ ಪತ್ರದ ಮೂಲಕ ಮನವಿ ಮಾಡಿದ್ದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News