ರೋಹಿತ್ ವೇಮುಲಾ ಆತ್ಮಹತ್ಯೆ ಬಗ್ಗೆ ತನಿಖಾ ಆಯೋಗದ ವರದಿ

Update: 2016-10-06 06:31 GMT

►ಆತ್ಮಹತ್ಯೆಗೆ ಕಾರಣ ಯಾರು?

►ವೇಮುಲಾ ದಲಿತನೇ, ಅಲ್ಲವೇ?

►ಹೈದರಾಬಾದ್ ವಿವಿಯ ತಪ್ಪಿದೆಯೇ?

►ಸ್ಮತಿ ಇರಾನಿ, ಬಂಡಾರು ಒತ್ತಡ ಹಾಕಿದ್ದರೇ?

ಹೊಸದಿಲ್ಲಿ, ಅ.6: ‘’ರೋಹಿತ್ ವೇಮುಲಾ ತಾಯಿ ಮೀಸಲಾತಿ ಲಾಭ ಪಡೆಯಲು ದಲಿತ ಹಣೆಪಟ್ಟಿ ಕಟ್ಟಿಕೊಂಡಿದ್ದರು; ಆತನನ್ನು ಹೈದರಾಬಾದ್ ಕೇಂದ್ರೀಯ ವಿವಿ ಹಾಸ್ಟೆಲ್‌ನಿಂದ ಹೊರಹಾಕಿರುವುದು ಸಮರ್ಥನೀಯ; 26ರ ವರ್ಷದ ಸಂಶೋಧನಾ ವಿದ್ಯಾರ್ಥಿಯ ಆತ್ಮಹತ್ಯೆಗೆ ವೈಯಕ್ತಿಕ ಹತಾಶೆ ಕಾರಣವೇ ಹೊರತು ತಾರತಮ್ಯ ಅಲ್ಲ; ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ ಹಾಗೂ ಸ್ಮತಿ ಇರಾನಿ ತಮ್ಮ ಕಾರ್ಯವನ್ನು ನಿಭಾಯಿಸಿದ್ದಾರೆಯೇ ವಿನಃ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಅಧಿಕಾರಿಗಳ ಮೇಲೆ ಒತ್ತಡ ತಂದಿಲ್ಲ.’’

ರಾಷ್ಟ್ರವನ್ನೇ ತಲ್ಲಣಗೊಳಿಸಿದ್ದ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದ ಬಗ್ಗೆ ನಡೆದ ನ್ಯಾಯಾಂಗ ತನಿಖೆಯ ವರದಿಯ ಪ್ರಮುಖ ಅಂಶಗಳು ಇವು.

ವೇಮುಲಾ ಆತ್ಮಹತ್ಯೆ ನಡೆದ 11 ದಿನಗಳ ಬಳಿಕ ಸಾರ್ವಜನಿಕ ಒತ್ತಡ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ 2016ರ ಜನವರಿ 28ರಂದು ಈ ಏಕ ಸದಸ್ಯ ಆಯೋಗವನ್ನು ನೇಮಕ ಮಾಡಿತ್ತು. ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಕೆ.ರೂಪನ್‌ವಾಲ್ ಇದೀಗ 41 ಪುಟಗಳ ವರದಿಯನ್ನು ಆಗಸ್ಟ್‌ನಲ್ಲಿ ಸಲ್ಲಿಸಿದ್ದಾರೆ. ತನಿಖಾ ಆಯೋಗ 50 ಮಂದಿಯ ಅಭಿಪ್ರಾಯ ಪಡೆದಿದ್ದು, ಇದರಲ್ಲಿ ಬಹುತೇಕ ಮಂದಿ ವಿವಿ ಬೋಧಕರು, ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿ. ಐದು ಮಂದಿ ವಿವಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದು, ಇವರು ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದ ಜಂಟಿ ಕ್ರಿಯಾ ಸಮಿತಿಯ ಸದಸ್ಯರು.

ವೇಮುಲಾ ಆತ್ಮಹತ್ಯೆ ನಿರ್ಧಾರ ವೈಯಕ್ತಿಕ ಕಾರಣದಿಂದಲೇ ವಿನಃ ಸರಕಾರ ಅಥವಾ ವಿಶ್ವವಿದ್ಯಾನಿಲಯದ ಒತ್ತಡದಿಂದಲ್ಲ ಎಂದು ವರದಿ ಸ್ಪಷ್ಟಪಡಿಸಿದೆ. ವೇಮುಲಾ ಆತ್ಮಹತ್ಯೆಗೆ ಕಾರಣವಾದ ಅಂಶಗಳ ಬಗ್ಗೆ ಅಧ್ಯಯನ ನಡೆಸಲು ಮತ್ತು ವಿದ್ಯಾರ್ಥಿಗಳ ದೂರುಗಳನ್ನು ಪರಾಮರ್ಶೆ ನಡೆಸಲು ಹಾಗೂ ಹೈದರಾಬಾದ್ ಕೇಂದ್ರೀಯ ವಿವಿ ಸುಧಾರಣೆಗೆ ಕ್ರಮಗಳನ್ನು ಶಿಫಾರಸ್ಸು ಮಾಡಲು ಆಯೋಗ ನೇಮಕ ಮಾಡಲಾಗಿತ್ತು.

ವರದಿಯ 12 ಪುಟಗಳಲ್ಲಿ ವೇಮುಲಾ ತಾಯಿ ವಿ.ರಾಧಿಕಾ ದಲಿತ ಹಣೆಪಟ್ಟಿ ಕಟ್ಟಿಕೊಂಡಿರುವುದಷ್ಟೇ ವಿನಃ ಮೂಲತಃ ದಲಿತರಲ್ಲ ಎಂದು ಪ್ರತಿಪಾದಿಸಲಾಗಿದೆ.

ವರದಿಯ ಇನ್ನೊಂದು ಪ್ರಮುಖ ಅಂಶವೆಂದರೆ, ವೇಮುಲಾ ವಿವಿಯಲ್ಲಿ ಯಾವ ತಾರತಮ್ಯವನ್ನೂ ಎದುರಿಸಿರಲಿಲ್ಲ. ವೇಮುಲಾ ಹಾಗೂ ಅವರ ಸಹಪಾಠಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕಿರುವುದು ರಾಜಕೀಯ ಒತ್ತಡದಿಂದ ಅಲ್ಲ ಎನ್ನುವುದು. ಒಂಬತ್ತು ಮಂದಿಯ ಸಮಿತಿಯ ಶಿಫಾರಸ್ಸಿನ ಆಧಾರದಲ್ಲೇ ವಿವಿ ಆಡಳಿತ ಈ ನಿರ್ಧಾರ ಕೈಗೊಂಡಿರುವುದು ಸಮರ್ಥನೀಯ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News