ಅಬುಧಾಬಿಯಲ್ಲಿ ದೇವಸ್ಥಾನಕ್ಕೆ ಸ್ಥಳ ನೀಡಿದ ಸರಕಾರ

Update: 2016-10-12 09:39 GMT

ಅಬುಧಾಬಿ, ಅಕ್ಟೋಬರ್ 12: ಅಬುಧಾಬಿಯಲ್ಲಿ ಪ್ರಪ್ರಥಮ ಹಿಂದೂ ದೇವಸ್ಥಾನವೊಂದು ಕಟ್ಟುವುದಕ್ಕಾಗಿ ಸರಕಾರ 20,000 ಚದರ ಮೀಟರ್(4.95ಎಕರೆ) ಜಮೀನು ಅನುಮತಿಸಿದೆ ಎಂದು ವರದಿಯಾಗಿದೆ. ಭಾರತ ಸೋಶಿಯಲ್ ಸೆಂಟರ್‌ನಲ್ಲಿ ಬ್ಯಾಡ್ಮಿಂಟನ್ ಟೂರ್ನಿಯ ಕುರಿತು ವಿವರಿಸಲು ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಈ ವಿವರವನ್ನು ಬಿಆರ್ ಶೆಟ್ಟಿ ನೀಡಿದ್ದಾರೆ.

ಅಬುಧಾಬಿ ನಗರದಿಂದ 30ಕಿ.ಮೀ. ದೂರದ ಅಲ್‌ವತ್ಬದಲ್ಲಿ ಅಲ್ ಅಮೀನ್ ರಸ್ತೆಯ ಸಮೀಪದಲ್ಲಿ ದೇವಸ್ಥಾನಕ್ಕೆ ಜಾಗ ನೀಡಲಾಗಿದ್ದೂ, ಯುಎಇ ಸಶಸ್ತ್ರ ಸೇನೆಯ ಉಪಸರ್ವ ಸೇನಾಧಿಕಾರಿ ಶೈಖ್ ಮುಹಮ್ಮದ್ ಸೂಚನೆ ಪ್ರಕಾರ ಈ ದೇವಸ್ಥಾನ ಸಮುಚ್ಚಯ ಮೇಲೆದ್ದು ನಿಲ್ಲಲಿದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯ ಯುಎಇ ಸಂದರ್ಶನದ ವೇಳೆ ವಿಶ್ವಾಸಿಗಳಿಗಾಗಿ ದೇವಸ್ಥಾನವೊಂದರ ವಿಚಾರ ಪ್ರಸ್ತಾಪವಾಗಿತ್ತು.

ಮಹಾವಿಷ್ಣು, ಪರಮೇಶ್ವರ, ಅಯ್ಯಪ್ಪ ಮುಂತಾದ ದೇವರುಗಳನ್ನು ಈ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಬಿಆರ್ ಶೆಟ್ಟಿ ತಿಳಿಸಿದ್ದಾರೆ. ನಿರ್ಮಾಣ ಚಟುವಟಿಕೆಗಳಿಗಿಂತ ಮುಂಚಿತವಾಗಿ ಕನ್ಸಲ್ಟನ್ಸಿಯನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ದೇವಸ್ಥಾನ ನಿರ್ಮಾಣದ ಕುರಿತು ಸವಿವರವಾದ ಮಾಹಿತಿಯನ್ನು ಕೆಲವೇ ದಿವಸಗಳಲ್ಲಿ ಘೋಷಿಸಲಾಗುವುದು ಎಂದಿದ್ದಾರೆ. ಮುಂದಿನ ದುರ್ಗಾಷ್ಠಮಿಗೆ ಮುಂಚಿತವಾಗಿ ದೇವಸ್ಥಾನ ನಿರ್ಮಾಣ ಕಾರ್ಯ ಪೂರ್ತಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಬಿಆರ್ ಶೆಟ್ಟಿ ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News