ಸಾಹಿತ್ಯದ ಹೆಸರಿನಲ್ಲಿ...

Update: 2016-10-12 18:56 GMT

ಈಗೀಗ ಹಲವು ಲೇಖಕರು ಭಾಷೆ-ಸಾಹಿತ್ಯ ಇವುಗಳ ಕುರಿತು ಹೇಳುವಾಗ, ಬರೆಯುವಾಗ, ಎಲ್ಲವೂ ಸರಿಯಿದೆ, ಸಮೃದ್ಧವಾಗಿದೆ, ಆತಂಕಪಡಬೇಕಾದ್ದೇನೂ ಇಲ್ಲ ಎಂದು ಹೇಳಿದರೆ, ಇನ್ನು ಕೆಲವರು ಹಾಗಿಲ್ಲ, ಕಾಲ ಬದಲಾಗಿದೆ, ಕನ್ನಡ ಭಾಷೆ-ಸಾಹಿತ್ಯವನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ, ಕನ್ನಡದ ಪಾಲಿಗೆ ಬರಹದ ಪ್ರಪಂಚ ಕಡಿಮೆ ಪ್ರಸ್ತುತವಾಗಿದೆ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಾರೆ. ಈ ಚರ್ಚೆ ಒಂದಾದರೆ ಸಮಾಜದಲ್ಲಿ ಸಾಹಿತ್ಯದ ಸ್ಥಾನವೇನು, ಅದು ಮುಖ್ಯವಾಗಿ ಉಳಿದಿದೆಯೇ ಅಥವಾ ಬೂಟಾಟಿಕೆಯ ವಸ್ತುವಾಗಿದೆಯೇ, ಸಾರ್ವಜನಿಕ ವರ್ಚಸ್ಸಿನ ಸಾಧನವಾಗಿದೆಯೇ ಎಂದೆಲ್ಲ ಯೋಚಿಸುವ ಪರಿಸ್ಥಿತಿ ಬಂದಿದೆ. ಇವುಗಳೆರಡರ ನಡುವೆ ಸತ್ಯ ಎಲ್ಲಿದೆ? ಯಾವುದು? ಎಂಬುದನ್ನು ಹುಡುಕಬೇಕು.
ಎಲ್ಲವೂ ಕಾಲಕ್ಕೆ ಶರಣಾಗಿರುತ್ತದೆ. ಕಾಲವು ಎಲ್ಲವನ್ನೂ ಗುಡಿಸಿ ಹಾಕುತ್ತದೆ. ಬೇಂದ್ರೆಯವರ ‘ಹಕ್ಕಿ ಹಾರುತಿದೆ ನೋಡಿದಿರಾ?’ ಕವಿತೆಯಲ್ಲಿ ಕಾಲದ ಶಕ್ತಿಯನ್ನು ಚಿತ್ರಿಸಲಾಗಿದೆ. ‘ಕಾಲಾಯ ತಸ್ಮೈ ನಮಃ’ ಎಂಬ ವಾಡಿಕೆಯ ಮಾತನ್ನು ಎಲ್ಲದಕ್ಕೂ ಅನ್ವಯಿಸಬಹುದು. ಹಾಗೆಯೇ ಕಾಲ ಮುನ್ನಡೆಯಲೇ ಇಲ್ಲ, ಅದರ ಬದಲು ನಾವೇ ಮುನ್ನಡೆದೆವು ಎಂಬರ್ಥದ ‘ಕಾಲೋ ನ ಯಾತೋ ವಯಮೇವ ಯಾತಾಃ’ ಎಂಬ ಪ್ರಸಿದ್ಧ ಶತಕವೊಂದು ಭರ್ತೃಹರಿಯ ಶತಕಗಳಲ್ಲಿದೆ. ಇಲ್ಲಿ ಮುನ್ನಡೆದೆವು ಎಂದರೆ ಅಭಿವೃದ್ಧಿ ಹೊಂದಿದೆವು ಎಂಬ ಸಂಕೇತಾರ್ಥವಿಲ್ಲ; ಬದಲಾಗಿ ನಾವು ಸಾವನ್ನು ಸಮೀಪಿಸಿದೆವು ಎಂಬ ಭಾವವಿದೆ. ಮನುಷ್ಯ ಶಾಶ್ವತವಲ್ಲ. ಬದಲಾಗಿ ಶಾಶ್ವತದೆದುರು ಶಾಶ್ವತವಾಗುವ ಮನುಷ್ಯ ತಳಿಯ ನಿರಂತರ ಸವಾಲುಗಳೇ ಮನುಷ್ಯ ಜನಾಂಗದ ಲಕ್ಷಣವೆಂಬ ಸಂಕೇತ. ಈ ಎಲ್ಲ ಗೊಂದಲಗಳ ನಡುವೆ ನಾವೆಲ್ಲಿದ್ದೇವೆ?

ಒಂದೊಂದು ಕಾಲಕ್ಕೆ ಒಂದೊಂದು ರೂಪ, ಆಕಾರ ಮತ್ತು ಸತ್ಯ. ಎಲ್ಲ ಸತ್ಯಗಳೂ ಒಂದೇ ಕಾಲದಲ್ಲಿರುವುದಿಲ್ಲ. ಹಾಗಿದ್ದಿದ್ದರೆ ಗತ, ವರ್ತಮಾನ ಮತ್ತು ಭವಿಷ್ಯ ಎಂಬ ಕಾಲಸೂತ್ರಗಳಿರಬೇಕಾಗಿರಲಿಲ್ಲ. ಸಾಹಿತ್ಯಕ್ಕೂ ರೂಪ ಸ್ವರೂಪ ಬದಲಾವಣೆಯಿದೆ. ಆದರೆ ಎಲ್ಲರೂ ಸಾಹಿತಿಗಳಾಗುವುದು ಸಾಧ್ಯವಿಲ್ಲ ಎಂಬುದು ಅವರವರಿಗೆ ಅರ್ಥವಾಗದಿದ್ದರೆ ಸಮಾಜ ಮತ್ತು ಮುಖ್ಯವಾಗಿ ಸಾಹಿತಿಗಳು ಅದನ್ನು ಹೇಳಬೇಕು; ಮನದಟ್ಟುಮಾಡಿಕೊಡಬೇಕು. ಈ ಕೆಲಸ ನಡೆಯದಿದ್ದರೆ ಸಾಹಿತ್ಯ ನರಳುತ್ತದೆ. ಸಾಹಿತ್ಯ ಹೇಗಾದರೂ ಇರುವ, ಇರಬೇಕಾದ, ಸರಕಲ್ಲ. ಇಂದು ಯಾರೂ ಬರೆಯದಿದ್ದರೂ ಓದುವುದಕ್ಕೆ ಬೇಕಾದಷ್ಟು ಸಾಹಿತ್ಯ ಈಗಾಗಲೇೆ ಸೃಷ್ಟಿಯಾಗಿದೆ ಎಂದು ತಿಳಿದರೆ ಬರೆಯುವ ಕೈಯೊಂದಿಗೆ ಮಿದುಳು, ಹೃದಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪ್ರಜ್ಞೆ ಕೆಲಸ ಮಾಡುತ್ತದೆ. ಬದಲಾವಣೆಯಲ್ಲಿ ಬದುಕಿನ ಮೌಲ್ಯಗಳು ಜಾಳಾಗುತ್ತಿವೆಯೇ? ಜಾಳು ಎಂಬುದು ಸೌಮ್ಯ ಪದ. ನಗೆಪಾಟಲು ಎಂಬುದು ಹೆಚ್ಚು ಪ್ರಸ್ತುತವೇ? ಹಾಗನ್ನಿಸದಿದ್ದರೆ ಅದೃಷ್ಟ. ಸಾಹಿತ್ಯದ ಚಟುವಟಿಕೆಗಳನ್ನು ಹಿಂದೆ ಕೆಲವೇ ಮಂದಿ ನಡೆಸುತ್ತಿದ್ದರು. ಅದನ್ನು ಉಳಿದವರು ಕುತೂಹಲದಿಂದ, ಬೆರಗಿನಿಂದ, ಅಚ್ಚರಿಯಿಂದ, ಸ್ವಲ್ಪಭಯಮಿಶ್ರಿತ ಗೌರವದಿಂದ, ಅಂತೂ ಒಟ್ಟಿನಲ್ಲಿ ಒಂದೊಂದು ರೀತಿಯ ಆಸಕ್ತಿಯಿಂದ ನೋಡುತ್ತಿದ್ದರು. ಹಾಗೆಂದು ತಾವು ಪಾತ್ರವಹಿಸು ತ್ತಿಲ್ಲವೆಂಬ ನಿರಾಶೆಯಿರಲಿಲ್ಲ. ಊರಿಗೆ ಊರೇ ಹಸೆಯಲಿ ಕುಳಿತರೆ ಆರತಿ ಬೆಳಗಲು ಜನವೆಲ್ಲಿ? ಎಂಬ ಮಾತಿಗೆ ಅರ್ಥ ಒದಗುತ್ತಿತ್ತು. ಯಾವುದೇ ಊರಿನಲ್ಲಿ ಯಾವುದೇ ಸಾಹಿತ್ಯ ಸಮಾರಂಭಗಳು ನಡೆದರೆ ಅದರಲ್ಲಿ ಆ ಊರಿನ ಶ್ರೇಷ್ಠ ಪ್ರತಿಭೆಗಳನ್ನು, ಪಾಂಡಿತ್ಯವನ್ನು ಕೈಬಿಡುವ ಪ್ರಶ್ನೆಯೇ ಇರಲಿಲ್ಲ. ಕಾರ್ಯಕ್ರಮ-ಸಮಾರಂಭಗಳಿಗೆ ಬೇಕಾದ ಹಣ ಸಂಗ್ರಹ, ಊಟ-ವಸತಿ, ಅಲಂಕಾರ ಇವುಗಳ ಹೊಣೆಯನ್ನು ಊರಿನ ಗಣ್ಯರು, ಶಕ್ತರು ವಹಿಸಿಕೊಳ್ಳುತ್ತಿದ್ದರು. ಸಾಹಿತ್ಯದ ಮಟ್ಟಿಗೆ ಮಾತ್ರ ಸಾಹಿತಿಗಳ ಮಾತಿಗೇ ಮಣೆ, ಮನ್ನಣೆ. ಇದರಿಂದಾಗಿ ಸಮಾರಂಭದ ಒಟ್ಟಂದ ಪರಿಪೂರ್ಣವಾಗುತ್ತಿತ್ತು; ಮತ್ತು ಅರ್ಥಪೂರ್ಣವಾಗುತ್ತಿತ್ತು. ಕಾರಂತರಂಥವರ ಊರಿನಲ್ಲಿ ಕಾರಂತರೇ. ಅವರಿಗೆ ಈ ಬಾರಿ ಅವಕಾಶ ಕೊಟ್ಟಿದೆ ಮುಂದಿನ ವರ್ಷ ಇನೊಬ್ಬರು ಎಂದಿರಲಿಲ್ಲ. ಅಥವಾ ಅವರನ್ನು ಅಧ್ಯಕ್ಷರನ್ನಾಗಿಸಿ ಆಯಿತು ಇನ್ನು ಅವರ ಮಾತು ಕೇಳಬೇಕಾಗಿಲ್ಲವೆಂಬ ಅಭಿಮತವಿರಲಿಲ್ಲ.
  

ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಸಾಹಿತ್ಯವೆಂಬುದೂ ಒಂದು ಸರಕಿನಂತೆ ಸಂಸ್ಥೆಗಳ ಕೈಯಲ್ಲಿ ಪಳಗಿಸಿಕೊಳ್ಳುತ್ತಿದೆ. ಎಲ್ಲ ಸಾಹಿತ್ಯ ಸಂಘಟನೆಗಳಲ್ಲಿ ಸಾಹಿತ್ಯದಲ್ಲಿ ಪರಿಣತರಲ್ಲದ ವ್ಯಾಪಾರಸ್ಥರು, ಅಧಿಕಾರಿಗಳು, ಕೈಗಾರಿಕೋದ್ಯಮಿಗಳು, ಪತ್ರಕರ್ತರು, ರಾಜಕಾರಣಿಗಳು ಸೇರಿಕೊಳ್ಳುತ್ತಿದ್ದಾರೆ. ಸೇರಿಕೊಳ್ಳಲಿ ಬಿಡಿ; ಆದರೆ ಸಮಾರಂಭದ ವೇದಿಕೆಗಳಲ್ಲಿ ಅವರೇ ತುಂಬಿಕೊಂಡು ಸಾಹಿತ್ಯದ ಉಸಿರುಗಟ್ಟುತ್ತಿದೆ. ಬಹುತೇಕ ಎಲ್ಲ ಸಾಹಿತ್ಯ ಸಮಾರಂಭಗಳು ಒಂದೇ ನಿಯಮಾನುಸಾರ ನಡೆಯುತ್ತಿದೆ. ಸಾಹಿತ್ಯ ಕಾರ್ಯಕ್ರಮಗಳ ಸಹಭಾಗಿತ್ವದಲ್ಲಿ ಸಾಂಸ್ಕೃತಿಕ ಮೆರವಣಿಗೆ, ಪುಸ್ತಕ ಪ್ರದರ್ಶನ, ನಡೆಯುವುದು ಮತ್ತು ಇವುಗಳಲ್ಲಿ ಶಾಲಾ ಮಕ್ಕಳನ್ನು ದುಡಿಸುವುದು ಸಾಮಾನ್ಯ ಮತ್ತು ಸಹಜ. ಆದರೆ ಆವರಣದಲ್ಲೇ ನೀರಿನ ಪಂಪ್, ಅಡಿಗೆ ಉಪಕರಣಗಳು, (ಈಚೆಗೆ ಇನ್ನೂ ಅತ್ಯಾಧುನಿಕ ಮಳಿಗೆಗಳೂ!) ಮುಂತಾದ ವಸ್ತುಗಳ ಸ್ಟಾಲ್‌ಗಳಿರುತ್ತವೆ. ಇವುಗಳ ಉದ್ಘಾಟನೆಗೆ ಮಂತ್ರಿಗಳಿಂದ ಗ್ರಾಮ ಪಂಚಾಯತ್‌ನ ಸದಸ್ಯರ ವರೆಗೆ ರಾಜಕಾರಣಿಗಳು ತುಂಬಿರುತ್ತಾರೆ. ಇವರು ಉದ್ಘಾಟಿಸಿದರೆ ಸಾಲದು, ವೇದಿಕೆಯಲ್ಲಿ ಒಂದಕ್ಕಿಂತ ಹೆಚ್ಚು ಸಾಲು ಕುರ್ಚಿಗಳಲ್ಲಿ ಇವರೇ ಶೋಭಿಸುತ್ತಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ತಮ್ಮ ಭಾಗಿತ್ವ ಮುಗಿದೊಡನೆಯೇ ಹೋಗುವುದೂ ಇದೆ. ಹಾಗಲ್ಲದಿದ್ದರೂ ಕಾರ್ಯಕ್ರಮ ಪೂರ್ತಿ ಉಳಿಯುವವರಿಲ್ಲ. ಕಾರ್ಯಕ್ರಮದ ಪ್ರತೀ ಅಂಗದೊಂದಿಗೆ ಧನ್ಯವಾದ ಹೇಳುವುದು, ಸ್ಮರಣಿಕೆಗಳು ಕೊಡುವುದು, ಇವುಗಳೊಂದಿಗೆ ನಿರೂಪಕನೆಂಬವನು ಆಯಾಯ ವ್ಯಕ್ತಿ ಆಡಿದ ಮಾತುಗಳ ಸಂಕ್ಷಿಪ್ತ ವರದಿಯನ್ನು ತನ್ನ ಮಾತುಗಳಲ್ಲಿ ಹೇಳುವುದು, ಇವೆಲ್ಲ ನಡೆಯುತ್ತವೆ. ಸಾಮಾನ್ಯ ಸಮಾರಂಭಗಳ ಭಾಷಣಕ್ಕೂ ಸಾಹಿತ್ಯ ಸಮಾರಂಭಗಳ ಭಾಷಣಕ್ಕೂ ವ್ಯತ್ಯಾಸವಿದೆಯೆಂದು ಅನೇಕರಿಗೆ ಗೊತ್ತಿಲ್ಲ. ವೇದಿಕೆಯಲ್ಲಿರುವ ಪ್ರತಿಯೊಬ್ಬರ ಹೆಸರು, ಸ್ಥಾನ, ಪದವಿ ಇವನ್ನೆಲ್ಲ ಹೇಳುವುದು ಈಗ ರೂಢಿಯಾಗಿದೆ. ಹೇಳದಿದ್ದರೆ ಅಥವಾ ಹೇಳಿದ್ದರಲ್ಲಿ ಲೋಪವಾದರೆ, ಅಪಚಾರವೆಂದು, ಹಕ್ಕುಚ್ಯುತಿಯ ವರೆಗೂ ಹೋಗಬಲ್ಲವರಿದ್ದಾರೆ. ಇನ್ನು ಸಮಯದ ಬಗ್ಗೆ ಯಾರಿಗೂ ಸಮಸ್ಯೆಯೇ ಇಲ್ಲ. ಭಾಷಣ ಮಾಡುವವರು ಎರಡೇ ಮಾತು ಎಂದು ಸುಳ್ಳು ಆಸೆ ಹುಟ್ಟಿಸಿ ಎರಡು ಗಂಟೆ ಹೊತ್ತು ಮಾತನಾಡುವವರೂ ಇದ್ದಾರೆ. ಕೊನೆಗೆ ತನ್ನ ಈ ಎರಡು ಮಾತುಗಳನ್ನು ಮುಗಿಸುತ್ತಾರೆ! ಈ ಅನುಭವವು ಸಾಹಿತ್ಯ ವಲಯದೊಳಗೆ ಪರಿಶ್ರಮಿಸುವವರಿಗೆಲ್ಲ ಆಗಿದೆಯೆಂದು ನಂಬುತ್ತೇನೆ. ಇವನ್ನು ಹಾಸ್ಯಮಯವಾಗಿ ಹೇಳಲು ಡುಂಡಿರಾಜ್, ಶ್ರೀನಿವಾಸ ವೈದ್ಯರಂಥವರಿದ್ದಾರೆ. ಎಷ್ಟೇ ಗಂಭೀರವಾಗಿ ಹೇಳಿದರೂ ಹಾಸ್ಯ ತಾನಾಗಿ ಇಣುಕುತ್ತದೆಯೆಂದು ನಂಬಿದ್ದೇನೆ. ನನಗೊಮ್ಮೆ ಕನಕ ಜಯಂತಿಯಲ್ಲಿ ಕನಕದಾಸರ ಬಗ್ಗೆ ಮಾತನಾಡಲು ಅವಕಾಶ ಸಿಕ್ಕಿತು. (ಯಾವ ಜಯಂತಿಯಾದರೂ ಇದೇ.) ಅಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರು, ಜಿಲ್ಲಾ/ತಾಲೂಕು ಪಂಚಾಯತ್ ಸದಸ್ಯರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಅಲ್ಲದೆ ತಹಶೀಲ್ದಾರರವರೆಗೆ ಸರಕಾರಿ ಅಧಿಕಾರಿಗಳು ನೆರೆದಿದ್ದರು. ಇವರೆಲ್ಲ ವೇದಿಕೆಯಲ್ಲಿ 3-4 ಸಾಲಿನಲ್ಲಿ ಗ್ರೂಫ್ ಫೋಟೊಗೆ ನಿಂತ/ಕುಳಿತ-ವರಂತೆ ಊರಿದ್ದರು. ಸಭಾಂಗಣದ ಅರ್ಧಾಂಶದಷ್ಟು ಶಾಲಾ ಮಕ್ಕಳನ್ನು ನಿರಾಶ್ರಿತರಂತೆ ತಂದು ಕೂರಿಸಿದ್ದರು. ನನಗೆ ಅದೃಷ್ಟವಶಾತ್ ಮುಂದಿನ ಸಾಲಲ್ಲಿ ಒಂದು ಕುರ್ಚಿ ಕೊಟ್ಟರು. ಪೂರ್ವಾಹ್ನ 10 ಗಂಟೆಗೆ ಆರಂಭವಾದ ಸಮಾರಂಭದ ಸ್ವಾಗತ ಭಾಷಣ ನಿಜಕ್ಕೂ ಭಾಷಣವೇ ಆಗಿ ಒಮ್ಮೆ ಮುಗಿದರೆ ಸಾಕು ಎಂಬಂತಿತ್ತು. ಅವರು ತಹಶೀಲ್ದಾರರ ವರೆಗೂ ಸ್ವಾಗತ ಹೇಳಿ ಆನಂತರ ಈ ದಿನದ ಮುಖ್ಯ ಭಾಷಣ ಮಾಡುವ ಶ್ರೀ... ಇವರಿಗೆ ಸ್ವಾಗತ ಎಂದಾಗ ಹಾರ ಹಾಕುವ ಸ್ವಯಂಸೇವಕ ಸ್ವಯಂವರದ ರಾಜಕುಮಾರಿಯ ಹಾಗೆ ಹಾರವನ್ನು ಹಿಡಿದುಕೊಂಡು ವೇದಿಕೆಯ ಉದ್ದಗಲ ನನ್ನನ್ನು ಹುಡುಕಲಾರಂಭಿಸಿದ. ನನಗೇ ಮುಜುಗರವಾಗಿ ನಾನು ಸಾಲಿನಿಂದೆದ್ದು ಅವನ ಬಳಿ ಹೋಗಿ ಕೊರಳೊಡ್ಡಿದೆ. (ಇಲ್ಲವಾದರೆ ಅದು ಇನ್ಯಾರದೋ ಪಾಲಾಗಿ ನಾನು ಮಿಸ್ ಆಗುತ್ತಿದ್ದೆನೇನೋ?) ಸಚಿವರು ಮತ್ತು ಇನ್ನೂ ಐದಾರು ಜನ ಗಣ್ಯರು ತಾಸುಗಟ್ಟಲೆ ಮಾತನಾಡಿದ್ದರ ಪ್ರಭಾವವೆಂಬಂತೆ ಜನರು ಒಬ್ಬೊಬ್ಬರಾಗಿ ಸಭಾತ್ಯಾಗ ಮಾಡಲಾರಂಭಿಸಿದರು. ಸಚಿವರು ಮಾತನಾಡಿದ ತಕ್ಷಣ ತನಗೆ ಮುಖ್ಯವಾದ ಇನ್ನೊಂದು ಕಾರ್ಯಕ್ರಮವಿದೆಯೆಂದು ಹೇಳಿ ತೆರಳಿದರು. ಅವರೊಂದಿಗೆ ವೇದಿಕೆಯೂ ಸಭೆಯೂ ಅರ್ಧ ಖಾಲಿಯಾಯಿತು. ಇನ್ನುಳಿದ ಗಣ್ಯರು ತಮಗೆ ತಿಳಿ(ಯ)ದಷ್ಟು ಕನಕನ ಬಗ್ಗೆ ಮಾತಾಡಿದರು. ಕೊನೆಗೆ ನನ್ನ ಸರದಿಯೂ ಬಂತು. ಆಗಲೇ ಗಂಟೆ ಒಂದೂವರೆ. ಅಂತು ನಾನು ಒಂದಿಷ್ಟು ಮಾತನಾಡೋಣವೆಂದು ಹೊರಟರೆ ನನ್ನ ಬಳಿ ಕೂತಿದ್ದವರ ಬಳಿ ಒಬ್ಬ ಸ್ವಯಂಸೇವಕ ಬಂದು ಊಟ ರೆಡಿಯಾಗಿದೆ ಎಂದು ಹೇಳಿದ. ಅವರು ದಬಕ್ಕನೆ ಎದ್ದು ಹೊರಟರು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ನಾನು ಭಾಷಣ ಆರಂಭಿಸಿ ಒಂದೆರಡು ನಿಮಿಷಗಳಲ್ಲಿ ಆಯೋಜಕರಲ್ಲೊಬ್ಬರಲ್ಲೊಬ್ಬರು ಒಂದು ಚೀಟಿ ತಂದುಕೊಟ್ಟರು. ಅದರಲ್ಲಿ ತಡವಾಗಿದೆ; ಬೇಗ ಮುಗಿಸಿ ಎಂದು ಬರೆದಿತ್ತು. ನಾನು ತಕ್ಷಣ ನನ್ನ ಭಾಷಣವನ್ನು ಮೊಟಕುಗೊಳಿಸಿ ತಡವಾಗಿದೆಯೆಂದು ಆಯೋಜಕರು ಹೇಳಿದ್ದರಿಂದ ಕನಕದಾಸರಿಗೆ ನನ್ನ ಶ್ರದ್ಧಾಂಜಲಿಯನ್ನರ್ಪಿಸಿ ಈ ಮುಖ್ಯ ಭಾಷಣವನ್ನು ಮುಗಿಸುತ್ತೇನೆ ಎಂದು ಹೇಳಿ ಕುಳಿತುಕೊಂಡೆ.
ಇನ್ನು ಕವಿಗೋಷ್ಠಿಗಳಂತೂ ಅವರ್ಣನೀಯ. ಅಲ್ಲಿ ಸಮಿತಿ ಸದಸ್ಯರು, ಅವರ ಹೆಂಡತಿ ಮಕ್ಕಳು ಹೀಗೆ ರೇಷನ್ ಕಾರ್ಡಿನ ಹಾಗೆ ಕವಿಗಳ ಪಟ್ಟಿಯಿರುತ್ತದೆ. ವೇದಿಕೆಯಲ್ಲಿ ಕವಿಗೋಷ್ಠಿಯ ಅಧ್ಯಕ್ಷರಾಗಿ ಒಬ್ಬ ಬಲಿಪಶು ವಿದ್ದರೆ, ಉಳಿದಂತೆ ಉದ್ಘಾಟಕ, ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿಗಳೋ, ಪೊಲೀಸು ಅಧೀಕ್ಷಕರೋ, ನಗರಸಭೆಯ ಅಧ್ಯಕ್ಷರೋ, ಸದಸ್ಯರೋ ಇರುತ್ತಾರೆ. (ಅದ್ಯಾಕೋ ಶಾಸಕರು ಕವಿಗೋಷ್ಠಿಯಲ್ಲಿ ಭಾಗವಹಿಸುವುದು ಕಡಿಮೆ!) ಕವಿಗಳೆಂದು ಮುದ್ರೆ ಇಟ್ಟಕೊಂಡವರೆಲ್ಲ ಸಭೆಯಲ್ಲೇ ಇರುತ್ತಾರೆ. ಇವರ ಹೆಸರನ್ನು ಕರೆದಾಗ ವೇದಿಕೆಗೆ ಹೋಗಿ ತಮ್ಮ ಕವಿತೆಯನ್ನು (ಜನ ಕೇಳಲಿ-ಬಿಡಲಿ) ಓದಿ, ಸ್ಮರಣಿಕೆ (ಇನ್ನು ಕೆಲವೆಡೆ ಸರ್ಟಿಫಿಕೇಟ್) ಪಡೆದು ಬಂದರೆ ಜನ್ಮ ಸಾರ್ಥಕ. ನನಗೆ ಇತ್ತೀಚೆಗೆ ಒಂದು ಕವಿಗೋಷ್ಠಿಯ ಆಮಂತ್ರಣ ಬಂತು. ಅದರ ಸಂಘಟಕರೊಬ್ಬರು ಸಿಕ್ಕಿದರು. ಅವರಲ್ಲಿ ನೀವು ಈ ಆಮಂತ್ರಣದೊಂದಿಗೆ ಒಂದು ಭೂತಕನ್ನಡಿ ಕೊಟ್ಟಿದ್ದರೆ ಒಳ್ಳೆಯದಿತ್ತು ಎಂದೆ. ಅವರಿಗೆ ಅರ್ಥವಾಗಲಿಲ್ಲ. ಯಾಕೆ? ಅಕ್ಷರ ಅಷ್ಟೂ ಚಿಕ್ಕದಿದೆಯಾ? ಎಂದರು. ಹಾಗೇನಿಲ್ಲ, ಕವಿಗಳನ್ನು ಹುಡುಕಲು ಸುಲಭವಾಗುತ್ತಿತ್ತು ಎಂದೆ. ಅವರು ಸಿಟ್ಟು ಮಾಡಿಕೊಂಡರು. ಬಹುಪಾಲು ನನಗೆ ಇನ್ನು ಮುಂದೆ ಆಮಂತ್ರಣ ಬರಲಿಕ್ಕಿಲ್ಲವೆಂದುಕೊಂಡಿದ್ದೇನೆ.
ಇಂತಹ ಉದಾಹರಣೆಗಳು ಬೇಕಷ್ಟು ಸಿಗುತ್ತವೆ. ಹೆಚ್ಚು ಹೇಳುವುದಕ್ಕೆ ಇಲ್ಲೂ ಅವಕಾಶವಿಲ್ಲವೆಂಬುದರೊಂದಿಗೆ ಇದನ್ನೂ ಮುಗಿಸಬೇಕಾಗುತ್ತದೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News