ವಾರಣಾಸಿ: ಕಾಲ್ತುಳಿತಕ್ಕೆ ಕನಿಷ್ಠ 24 ಬಲಿ

Update: 2016-10-15 18:32 GMT

60ಕ್ಕೂ ಅಧಿಕ ಮಂದಿಗೆ ಗಾಯ ♦ ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ  ♦ಧಾರ್ಮಿಕ ಸಮಾವೇಶದಲ್ಲಿ ನಡೆದ ದುರಂತ
 

ವಾರಣಾಸಿ,ಅ.15: ಗಂಗಾ ನದಿಯ ದಂಡೆಯಲ್ಲಿನ,ವಾರಣಾಸಿ ಮತ್ತು ಚಂದಾವುಲಿ ಗಡಿಯಲ್ಲಿರುವ ರಾಜ್‌ಘಾಟ್ ಸೇತುವೆಯಲ್ಲಿ ಶನಿವಾರ ಮಧ್ಯಾಹ್ನ ಧಾರ್ಮಿಕ ಸಮಾವೇಶಕ್ಕಾಗಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದ ಸಂದರ್ಭ ನೂಕುನುಗ್ಗಲಿನಿಂದಾಗಿ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯರೂ ಸೇರಿದಂತೆ ಕನಿಷ್ಠ 24 ಜನರು ಸಾವನ್ನಪ್ಪಿದ್ದಾರೆ. ಇತರ 60 ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂದು ಪೊಲೀಸರು ಭೀತಿ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳನ್ನು ವಾರಣಾಸಿ ಮತ್ತು ಚಂದಾವುಲಿಗಳ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ತನ್ನ ಸ್ವಕ್ಷೇತ್ರ ವಾರಣಾಸಿಯಲ್ಲಿ ಸಂಭವಿಸಿರುವ ಈ ದುರಂತಕ್ಕೆ ಪ್ರಸ್ತುತ ಬ್ರಿಕ್ಸ್ ಶೃಂಗಸಭೆಗಾಗಿ ಗೋವಾದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ನೋವನ್ನು ವ್ಯಕ್ತಪಡಿಸಿರುವ ಅವರು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ಎರಡು ಲ.ರೂ. ಮತ್ತು ಗಾಯಾಳುಗಳಿಗೆ ತಲಾ 50,000 ರೂ.ಗಳ ಪರಿಹಾರವನ್ನೂ ಅವರು ಪ್ರಕಟಿಸಿದ್ದಾರೆ.

 ಡೋಮರಿ ಗ್ರಾಮದಲ್ಲಿ ಸಸ್ಯಾಹಾರ ಮತ್ತು ಸದಾಚಾರಗಳನ್ನು ಉತ್ತೇಜಿಸಲು ನಡೆಯುತ್ತಿರುವ ಎರಡು ದಿನಗಳ ಧಾರ್ಮಿಕ ಸಮಾವೇಶಕ್ಕಾಗಿ ಬಾಬಾ ಜೈ ಗುರುದೇವ್ ಅವರ ಸಹಸ್ರಾರು ಅನುಯಾಯಿಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ ಪದವ್ ಮತ್ತು ರಾಜಘಾಟ್ ಸೇತುವೆಗಳ ನಡುವೆ ಕಾಲ್ತುಳಿತದಿಂದಾಗಿ ಸಾವುಗಳು ಸಂಭವಿಸಿವೆ.

ರಕ್ಷಣಾ ಕಾರ್ಯಕರ್ತರು ಮೃತರ ಶವಗಳು ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು,ಸೇತುವೆ ತುಂಬ ಚಪ್ಪಲಿಗಳು,ಗಾಯಾಳುಗಳ ಬಟ್ಟೆಗಳು ಹರಡಿಬಿದ್ದಿದ್ದವು.

ಭಕ್ತರು ಶಿಬಿರದತ್ತ ಸಾಗುತ್ತಿದ್ದಾಗ ಪೊಲೀಸರು ಅವರನ್ನು ಹಿಂದಕ್ಕೆ ತಳ್ಳತೊಡಗಿದರು. ಆದರೆ ಜನರು ಮುಂದೊತ್ತಿ ಸಾಗುತ್ತಲೇ ಇದ್ದರು. ಇದೇ ವೇಳೆ ಮುಂದೆ ಸೇತುವೆ ಕುಸಿದಿದೆ ಎಂಬ ವದಂತಿ ನೂಕು ನುಗ್ಗಲಿಗೆ ಕಾರಣವಾಯಿತು ಎಂದು ಜೈ ಗುರುದೇವ ಸಂಸ್ಥಾನದ ವಕ್ತಾರ ರಾಜ್ ಬಹಾದುರ್ ತಿಳಿಸಿದರು. ದುರ್ಘಟನೆಗೆ ಜಿಲ್ಲಾಡಳಿತ ಕಾರಣವೆಂದು ಅವರು ಆರೋಪಿಸಿದರು.

 ಶಿಬಿರದಲ್ಲಿ ಸುಮಾರು ಮೂರು ಸಾವಿರ ಜನರ ಉಪಸ್ಥಿತಿಗೆ ಪರವಾನಿಗೆ ಪಡೆದುಕೊಂಡಿದ್ದ ಸಂಘಟಕರು ಆನಂತರ ಭಾರೀ ಸಂಖ್ಯೆಯಲ್ಲಿ ಜನರನ್ನು ಕರೆತಂದಿದ್ದರು ಎನ್ನಲಾಗಿದೆ.

ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಐಜಿಪಿ ಹರಿಓಂ ಶರ್ಮಾ ತಿಳಿಸಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಮೃತರಿಗೆ ತಲಾ ಎರಡು ಲಕ್ಷ ರೂ. ಪರಿಹಾರವನ್ನು ಮತ್ತು ಗಾಯಾಳುಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವುದಾಗಿ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News