ಕೈಗೆ ಸಿಕ್ಕಿದ 'ಆರೋಪಿ'ಯನ್ನು ಬಿಟ್ಟ ಇಮಿಗ್ರೇಷನ್ ಅಧಿಕಾರಿಗಳು

Update: 2016-10-16 05:09 GMT

ಹೊಸದಿಲ್ಲಿ, ಅ.16: ಹಣಕಾಸು ವಂಚನೆ ಪ್ರಕರಣದಲ್ಲಿ ಕಾನೂನು ಜಾರಿ ನಿರ್ದೇಶನಾಲಯ ಲುಕೌಟ್ ನೋಟಿಸ್ ಹೊರಡಿಸಿದ್ದ ವಿವಾದಾತ್ಮಕ ಮಾಂಸ ರಫ್ತು ಉದ್ಯಮಿ ಮೊಯಿನ್ ಖುರೇಷಿ, ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ದುಬೈಗೆ ಪರಾರಿಯಾದ ಘಟನೆ ನಡೆದಿದೆ. ಸಂಬಂಧವೇ ಇಲ್ಲದ ನ್ಯಾಯಾಲಯ ಆದೇಶವನ್ನು ಅಧಿಕಾರಿಗಳಿಗೆ ತೋರಿಸಿ, ವಂಚಿಸಿರುವುದು ಬೆಳಕಿಗೆ ಬಂದಿದೆ.
ಇಮಿಗ್ರೇಷನ್ ಅಧಿಕಾರಿಗಳು ಖುರೇಷಿಯನ್ನು ವಶಕ್ಕೆ ಪಡೆದ ಬಳಿಕ, ಆದಾಯ ತೆರಿಗೆ ಪ್ರಕರಣವೊಂದಕ್ಕೆ ಸಂಬಂಧಿಸಿದ ನ್ಯಾಯಾಲಯ ಆದೇಶವನ್ನು ಅಧಿಕಾರಿಗಳಿಗೆ ತೋರಿಸಿದ್ದಾರೆ. ಇದರ ಅನ್ವಯ ಖುರೇಷಿ ವಿದೇಶ ಪ್ರವಾಸಕ್ಕೆ ಯಾವುದೇ ತಡೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಆತನಿಗೆ ದುಬೈ ವಿಮಾನ ಏರಲು ಅವಕಾಶ ನೀಡಿದರು. ಆದರೆ ಕಾನೂನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಬಂದು ಈ ಬಗ್ಗೆ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂತು. ಖುರೇಷಿ ಆಗಲೇ ವಿಮಾನ ನಿಲ್ದಾಣದಿಂದ ಹೊರಟಿದ್ದರು.
ಇಮಿಗ್ರೇಷನ್ ಅಧಿಕಾರಿಗಳ ಕರ್ತವ್ಯ ಲೋಪಕ್ಕಾಗಿ ಸರ್ಕಾರ ತನಿಖೆಗೆ ಆದೇಶಿಸಿದೆ. ಹಣಕಾಸು ವಂಚನೆ ಆರೋಪದಲ್ಲಿ ಈಗಾಗಲೇ ಲುಕೌಟ್ ನೋಟಿಸ್ ಹೊರಡಿಸಿರುವಾಗ ಹೇಗೆ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಯಿತು ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.
ಆದಾಯ ತೆರಿಗೆ ಇಲಾಖೆ ಹಾಗೂ ಕಾನೂನು ಜಾರಿ ನಿರ್ದೇಶನಾಲಯ ಲುಕೌಟ್ ನೋಟಿಸ್ ಹೊರಡಿಸಿರುವ ವಿಷಯ ಇಮಿಗ್ರೇಷನ್ ಅಧಿಕಾರಿಗಳಿಗೆ ತಿಳಿದಿದ್ದರೂ, ಖುರೇಷಿ ದುಬೈ ಪ್ರವಾಸ ಕೈಗೊಳ್ಳಲು ಆದಾಯ ತೆರಿಗೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಅನುಮತಿ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News