ಮೋದಿಯವರ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಲಿರುವ ಶಿವಸೇನಾ ವರಿಷ್ಠ ಠಾಕ್ರೆ

Update: 2016-10-16 10:04 GMT

ಹೊಸದಿಲ್ಲಿ,ಅ.16: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆಯು ಸ್ಪರ್ಧಿಸಲಿದೆ ಎಂಬ ಸ್ಪಷ್ಟ ಸುಳಿವುಗಳ ನಡುವೆಯೇ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಶೀಘ್ರವೇ ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಲಿದ್ದಾರೆ. ಬಿಜೆಪಿಯೊಂದಿಗೆ ಠಾಕ್ರೆ ಸಂಬಂಧ ಹಳಸುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಕುತೂಹಲ ಮೂಡಿಸಿದೆ.

 ಠಾಕ್ರೆ ಗಂಗಾ ಆರತಿಯನ್ನು ಮಾಡುವ ಸಲುವಾಗಿ ವಾರಣಾಸಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆಯಾದರೂ, ಇದು ಚುನಾವಣಾ ಕಣಕ್ಕೆ ಧುಮುಕುವ ಮುನ್ನ ಪ್ರಮುಖ ಹಿಂದಿ ಭಾಷಿಕ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ರಾಜಕೀಯದ ನಾಡಿಯನ್ನು ಕಂಡು ಕೊಳ್ಳುವ ಪ್ರಯತ್ನವೆಂದು ಪರಿಗಣಿಸಲಾಗಿದೆ. ಶಿವಸೇನೆಯ ನಾಯಕ ಸಂಜಯ ರಾವುತ್ ಅವರು ವಾರಣಾಸಿಗೆ ಠಾಕ್ರೆಯವರ ಉದ್ದೇಶಿತ ಭೇಟಿಯನ್ನು ಖಚಿತ ಪಡಿಸಿದರಾದರೂ,ಯಾವಾಗ ಈ ಭೇಟಿ ನಡೆಯಲಿದೆ ಎನ್ನುವುದನ್ನು ಗುಟ್ಟಾಗಿಯೇ ಇಟ್ಟಿದ್ದಾರೆ.

ಎನ್‌ಡಿಎದ ಎರಡನೇ ಅತ್ಯಂತ ದೊಡ್ಡ ಅಂಗಪಕ್ಷವಾಗಿರುವ ಶಿವಸೇನೆಯು ಉ.ಪ್ರದೇಶ ವಿಧಾನಸಭೆಯ 403 ಸ್ಥಾನಗಳ ಪೈಕಿ ಸುಮಾರು 200 ಸ್ಥಾನಗಳಿಗೆ ಸ್ಪರ್ಧಿಸಲು ಉದ್ದೇಶಿಸಿದೆ. ಪಕ್ಷದ ಈ ಕ್ರಮವು ಗಡಿಯಾಚೆಯ ಸರ್ಜಿಕಲ್ ದಾಳಿಗಳನ್ನು ಚುನಾವಣಾ ಬಂಡವಾಳವನ್ನಾಗಿಸಿಕೊಂಡು ಮತದಾರರ ದೇಶಭಕ್ತಿ ಭಾವನೆಗಳಿಗೆ ಕನ್ನ ಹಾಕಿ ಮತಗಳನ್ನು ದೋಚುವ ಹವಣಿಕೆಯಲ್ಲಿರುವ ಬಿಜೆಪಿಯ ರಾಜಕೀಯ ಲಾಭದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕೂಡ ಆ.2ರಂದು ಬೃಹತ್ ರೊಡ್ ಶೋ ನಡೆಸುವ ಮೂಲಕ ವಾರಣಾಸಿಯಿಂದಲೇ ತನ್ನ ಪಕ್ಷದ ಚುನಾವಣಾ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿರುವುದು ಗಮನಾರ್ಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News