ಈ ಕಂಪೆನಿ ನಿಮ್ಮ ಫೇಸ್‌ಬುಕ್, ಟ್ವಿಟ್ಟರ್ ಪೋಸ್ಟ್‌ಗಳಿಗೆ ನೀಡಲಿದೆ ವಿಮೆಯ ಸುರಕ್ಷತೆ!

Update: 2016-10-18 07:35 GMT

ಮುಂಬೈ, ಅ.18: ಫೇಸ್‌ಬುಕ್, ಟ್ವಿಟ್ಟರ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಅಭಿಪ್ರಾಯವನ್ನು ನಿರ್ಭೀತಿಯಿಂದ ಅಭಿವ್ಯಕ್ತಪಡಿಸಿದರೆ, ದೊಡ್ಡ ಮೊತ್ತದ ಪರಿಹಾರ ಕೇಳಿ ದಾವೆ ಹೂಡಬಹುದು ಎಂಬ ಅಂಜಿಕೆ ನಿಮ್ಮನ್ನು ಕಾಡುತ್ತಿದೆಯೇ? ಆ ಹೆದರಿಕೆ ಇನ್ನು ಬೇಡ. ಬಜಾನ್ ಅಲೈನ್ಸ್ ಇದೀಗ ಹೊಸ ವಿಮಾ ಯೋಜನೆಯೊಂದನ್ನು ಅಂತಿಮಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಚಟುವಟಿಕೆಗಳ ಮೇಲೆ ದಾವೆ ಹೂಡಿದ ಪಕ್ಷದಲ್ಲಿ ಉದ್ಭವಿಸುವ ಯಾವುದೇ ನಷ್ಟ ಪರಿಹಾರಕ್ಕೆ ವಿಮಾ ಸುರಕ್ಷೆ ನೀಡಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬ ವ್ಕಕ್ತಿ ಮಾಡಿದ ಪೋಸ್ಟ್ ಅಥವಾ ಸಂವಾದದ ವಿರುದ್ಧ ದಾವೆ ಹೂಡಿ, ಪರಿಹಾರ ಕೊಡಬೇಕಾಗಿ ಬಂದರೆ, ಸೈಬರ್ ವಿಮಾ ಸೌಲಭ್ಯ ಈ ವೆಚ್ಚವನ್ನು ಭರಿಸಲಿದೆ ಎಂದು ಕಂಪೆನಿಯ ಆಡಳಿತ ನಿರ್ದೇಶಕ ತಪನ್ ಸಿಂಘಾಲ್ ಪ್ರಕಟಿಸಿದ್ದಾರೆ. ಕಾರ್ಪೊರೇಟ್ ಕಂಪನಿಗಳಿಗೆ ಇರುವ ಸೈಬರ್ ವಿಮಾ ಸುರಕ್ಷೆ ಮಾದರಿಯಲ್ಲೇ ವೈಯಕ್ತಿಕ ಸೈಬರ್ ಸುರಕ್ಷಾ ಪಾಲಿಸಿಗಳನ್ನು ಬಿಡುಗಡೆ ಮಾಡಲು ಕೂಡಾ ಕಂಪೆನಿ ನಿರ್ಧರಿಸಿದೆ.

 ಸಾಮಾಜಿಕ ಜಾಲತಾಣ ಬಳಕೆದಾರರ ಘನತೆ, ಮಾಹಿತಿ ಉಲ್ಲಂಘನೆ ಅಥವಾ ನಷ್ಟದ ವಿರುದ್ಧ ರಕ್ಷಣೆ ನೀಡುವ ಸಲುವಾಗಿ, ಪ್ರಮುಖವಾದ ವೈಯಕ್ತಿಕ, ಹಣಕಾಸು ಅಥವಾ ಸೂಕ್ಷ್ಮ ಮಾಹಿತಿ ಕದಿಯಲ್ಪಟ್ಟರೆ ವ್ಯಕ್ತಿಗಳಿಗೆ ಹೊಸ ಯುಗದ ಅಪಾಯಗಳು ಎದುರಾಗುತ್ತವೆ. ಈ ಹಿನ್ನೆಲೆಯಲ್ಲಿ ಹೊಸ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ. ವೈಯಕ್ತಿಕ ಸೈಬರ್ ವಿಮೆ ಪಾಲಿಸಿಗಳಡಿ ಮಾಹಿತಿ ಕಳ್ಳತನ, ಐಡೆಂಟಿಟಿ ಳ್ಳತನ, ಸೈಬರ್ ಹ್ಯಾಕಿಂಗ್, ಕಿರುಕುಳ, ಬ್ಯಾಂಕ್ ಖಾತೆಗಳ ಹ್ಯಾಕಿಂಗ್‌ನಂಥ ಅಪಾಯಗಳ ವಿರುದ್ಧ ಸುರಕ್ಷತೆ ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News