ಪ್ರವೀಣ್‌ಪೂಜಾರಿ ಹತ್ಯೆ ಬಗ್ಗೆ ಬಿಜೆಪಿ ವೌನ ಧನಂಜಯ್‌ಕುಮಾರ್ ಪ್ರಶ್ನೆ

Update: 2016-10-21 18:34 GMT

ಬೆಂಗಳೂರು, ಅ.21: ಆರೆಸೆಸ್ಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯನ್ನು ಖಂಡಿಸಿ ಪ್ರತಿಭಟನಾ ಧರಣಿಗಳನ್ನು ನಡೆಸುತ್ತಿರುವ ಬಿಜೆಪಿ ನಾಯಕರು, ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ್‌ಪೂಜಾರಿ ಹತ್ಯೆ ವಿಚಾರದಲ್ಲಿ ಯಾಕೆ ವೌನ ವಹಿಸಿದ್ದಾರೆ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಸಿ.ಎಂ.ಧನಂಜಯ್‌ಕುಮಾರ್ ಪ್ರಶ್ನಿಸಿದ್ದಾರೆ.

ಶುಕ್ರವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರುದ್ರೇಶ್ ಹತ್ಯೆಯು ಅತ್ಯಂತ ಖಂಡನೀಯ. ಆದರೆ, ಬಿಜೆಪಿ ನಾಯಕರು ಈ ಹತ್ಯೆಯನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಗಾರಿದರು.
ಶವದ ಮುಂದೆ ರಾಜಕೀಯ ಮಾಡುವ ಸಂಸ್ಕೃತಿಯನ್ನು ಬಿಜೆಪಿ ನಾಯಕರು ಬೆಳೆಸಿಕೊಳ್ಳುತ್ತಿದ್ದಾರೆ. ಪ್ರಾಥಮಿಕ ಹಂತದಲ್ಲೆ ಬಿಜೆಪಿ ನಾಯಕರು, ಪೊಲೀಸರಿಗೆ ಸಹಕಾರ ನೀಡಿದ್ದರೆ ರುದ್ರೇಶ್‌ರನ್ನು ಹತ್ಯೆ ಮಾಡಿದವರನ್ನು ಬಂಧಿಸಲು ಸಾಧ್ಯವಾಗುತ್ತಿತ್ತು. ಆದರೆ, ಅವರು ಪೊಲೀಸರ ವಿರುದ್ಧವೆ ಪ್ರತಿಭಟನೆಗೆ ಮುಂದಾಗಿದ್ದು ಖಂಡನೀಯ ಎಂದು ಧನಂಜಯ್‌ಕುಮಾರ್ ಹೇಳಿದರು.
ರುದ್ರೇಶ್ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ತನಿಖೆಗೆ ವಹಿಸುವಂತೆ ಬಿಜೆಪಿ ನಾಯಕರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಎನ್‌ಐಎ ರಚನೆಯ ಉದ್ದೇಶದ ಅರಿವಿಲ್ಲದ ಬಿಜೆಪಿ, ಇದೀಗ ಎಲ್ಲ ಪ್ರಕರಣಗಳನ್ನು ಎನ್‌ಐಎಗೆ ವಹಿಸುವಂತೆ ಕೋರುತ್ತಿದೆ. ಎನ್‌ಐಎ ರಚನೆಗೆ ವಿರೋಧ ವ್ಯಕ್ತಪಡಿಸಿದವರು, ಇದೀಗ ಅದೇ ಸಂಸ್ಥೆಗೆ ತನಿಖೆಯ ಜವಾಬ್ದಾರಿ ವಹಿಸುವಂತೆ ಕೋರುತ್ತಿರುವುದು ಹಾಸ್ಯಾಸ್ಪದ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸಿಕೊಳ್ಳದೆ, ಬಿಜೆಪಿಯವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಗಳನ್ನು ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಡೆದಿರುವ ಅಪರಾಧ ಪ್ರಕರಣಗಳ ಕುರಿತು ಮಾಜಿ ಗೃಹ ಸಚಿವ ಆರ್.ಅಶೋಕ್ ಜೊತೆ ಸಾರ್ವಜನಿಕವಾಗಿ ಬಹಿರಂಗ ಚರ್ಚೆಗೆ ಸಿದ್ಧ ಎಂದು ಅವರು ಸವಾಲು ಹಾಕಿದರು.ರೆಸೆಸ್ಸ್ ಕಾರ್ಯಕರ್ತರು ತಮ್ಮ ರಕ್ಷಣೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಅವರಿಗೆ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಲು ಅನುಮತಿ ನೀಡುವಂತೆ ಮಾಜಿ ಕಾನೂನು ಸಚಿವ ಸುರೇಶ್‌ಕುಮಾರ್‌ನೀಡಿರುವ ಹೇಳಿಕೆಯು ಅತ್ಯಂತ ಖಂಡನೀಯ ಧನಂಜಯ್‌ಕುಮಾರ್ ಹೇಳಿದರು.
ಮಹಾದಾಯಿ: ಮಹಾದಾಯಿ ನದಿ ನೀರಿಗಾಗಿ ರೈತರು ನಡೆಸುತ್ತಿರುವ ಹೋರಾಟದ ಕುರಿತು ಬಿಜೆಪಿ ನಾಯಕರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಗೋವಾದಲ್ಲಿ ಅವರದ್ದೇ ಪಕ್ಷದ ಸರಕಾರವಿದ್ದರೂ ಮಾತುಕತೆ ಮೂಲಕ ಮಹಾದಾಯಿ ಜಲ ವಿವಾದ ಬಗೆಹರಿಯುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಿಲ್ಲ ಎಂದು ಅವರು ದೂರಿದರು.
ಬಹುಮಾನ ಘೋಷಣೆ: ಆರೆಸೆಸ್ಸ್ ಕಾರ್ಯಕರ್ತ ರುದ್ರೇಶ್‌ರನ್ನು ಹತ್ಯೆ ಮಾಡಿರುವ ಆರೋಪಿಗಳ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಸಿ.ಎಂ.ಧನಂಜಯ್‌ಕುಮಾರ್ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News