ಬೇಸಿಗೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಸಚಿವ ಶಿವಕುಮಾರ್

Update: 2016-10-22 13:46 GMT

ಬೆಂಗಳೂರು, ಅ. 22: ರಾಜ್ಯದ ಜಲಾಶಯಗಳಲ್ಲಿ ನೀರಿನ ಕೊರತೆ ಹಿನ್ನೆಲೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ನಿಜಕ್ಕೂ ಸವಾಲಿನ ಕೆಲಸ. ಅದನ್ನು ಸಮರ್ಥವಾಗಿ ನಿರ್ವಹಿಸಲು ಇಂಧನ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಇಂದನ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಅಭಯ ನೀಡಿದ್ದಾರೆ. ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗುವುದು. ಅಲ್ಲದೆ, ಬೆಂಗಳೂರು ನಗರದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಕಡಿತ ಮಾಡುವುದಿಲ್ಲ ಎಂದು ಸ್ಪಷ್ಟಣೆ ನೀಡಿದರು. ಏಳು ಗಂಟೆ ರೈತರಿಗೆ: ವಿದ್ಯುತ್ ಬಹುಬೇಡಿಕೆಯ ಅವಧಿಯಾಗಿರುವ ಬೆಳಗ್ಗೆ 6ಗಂಟೆಯಿಂದ 10ರ ವರೆಗೆ ಹಾಗೂ ಸಂಜೆ 6ರಿಂದ ರಾತ್ರಿ 10ಗಂಟೆಗೆ ವರೆಗೆ ರೈತರ ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ನೀಡುವುದಿಲ್ಲ. ಬದಲಿಗೆ ಉಳಿದ ಸಮಯದಲ್ಲಿ ಏಳು ಗಂಟೆ ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ನೀಡಲಾಗುವುದು ಎಂದರು.

ರಾಜ್ಯ ಸರಕಾರ ರೈತರಿಗೆ ಪ್ರತಿ ತಿಂಗಳು 50 ಸಾವಿರ ರೂ.ಗಳಷ್ಟು ವೌಲ್ಯದ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿದೆ. ಆದರೆ, ರಾಜ್ಯದ ರೈತರಿಗೆ ಈ ಬಗ್ಗೆ ಗೊತ್ತಾಗುತ್ತಿಲ್ಲ. ಅದನ್ನು ಅವರಿಗೆ ಅರ್ಥ ಮಾಡಿಸಲು ಇಂಧನ ಇಲಾಖೆ ಮುಂದಾಗಿದೆ ಎಂದು ಅವರು ತಿಳಿಸಿದರು.

ಇಂಧನ ಇಲಾಖೆ ಗ್ರಾಹಕರ ಕುಂದು-ಕೊರತೆಗಳನ್ನು ನಿವಾರಿಸಲು ಪ್ರತಿ ವಿದ್ಯುತ್ ಕೇಂದ್ರದ ವ್ಯಾಪ್ತಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಹಾಗೂ ಇಂಜಿನಿಯರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಗ್ರಾಹಕರನ್ನು ನೇಮಕ ಮಾಡಲಾಗಿದೆ ಎಂದು ಅವರು ಹೇಳಿದರು.

ಅನುಮತಿ ರದು್ದ: ಸಮರ್ಪಕ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ 3700 ಪವನ ವಿದ್ಯುತ್ ಸಂಸ್ಥೆಗಳಿಗೆ ನೀಡಿದ್ದ ಅನುಮತಿಯನ್ನು ರದ್ದು ಮಾಡಲಾಗಿದೆ. ರೈತರು ತಮ್ಮ ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ ಬಳಕೆ ಮಾಡಿ ಹೆಚ್ಚುವರಿ ವಿದ್ಯುತ್ ಅನ್ನು ಇಂಧನ ಇಲಾಖೆ ಗ್ರಿಡ್‌ಗೆ ಮಾರಾಟ ಮಾಡುವ ‘ಸೂರ್ಯ ರೈತ ಯೋಜನೆ’ ರಾಷ್ಟ್ರದಲ್ಲೆ ಮಾದರಿಯಾಗಿದೆ ಎಂದ ಅವರು ಹೇಳಿದರು.

ನೂರು ಮೆ.ವ್ಯಾ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಉದ್ದೇಶಿಸಿದ್ದು, ಈಗಾಗಲೇ ನೂರು ತಾಲೂಕುಗಳಲ್ಲಿ ಕಾರ್ಯಾರಂಭವಾಗಿವೆ. ಈ ಯೋಜನೆಯ ಬಗ್ಗೆ ಕೇಂದ್ರ ಸರಕಾರ ಪ್ರಶಂಸೆ ವ್ಯಕ್ತಪಡಿಸಿದೆ. ಅಲ್ಲದೆ, ಇನ್ನಿತರ ರಾಜ್ಯಗಳಲ್ಲಿಯೂ ಸ್ಥಾಪಿಸಲು ಉತ್ಸುಕವಾಗಿವೆ ಎಂದರು. ಪಾವಗಡದಲ್ಲಿ ವಿಶ್ವದ ದೊಡ್ಡ ಸೋಲಾರ್ ಪಾರ್ಡ್ ನಿರ್ಮಾಣವಾಗಲಿದೆ. ವಿದ್ಯುತ್ ಕೇಂದ್ರ ಸ್ಥಾಪನೆಯನ್ನು ಹೊರತುಪಡಿಸಿ ಒಂದೇ ಒಂದು ಎಕರೆ ಜಮೀನು ರೈತರಿಂದ ಖರೀದಿಸಿಲ್ಲ. ಪ್ರತಿ ಎಕರೆಗೆ 21ಸಾವಿರ ರೂ.ನಂತೆ ಮೂವತ್ತು ವರ್ಷಗಳ ಕಾಲ ರೈತರ ನಿರುಪಯುಕ್ತ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ಪಡೆದಿದ್ದೇವೆ ಎಂದರು.

‘ಹೊಸ ಬೆಳಕು’ ಯೋಜನೆಯಡಿ ಎಲ್‌ಇಡಿ ಬಲ್ಬ್ ವಿತರಣೆ ಮಾಡಲಾಗುತ್ತಿದ್ದು, ಇದೀಗ ನಗರ ಪ್ರದೇಶದಲ್ಲಿ 250 ರೂ.ಗಳಿಗೆ ಟೂಬ್‌ಲೈಟ್ ಹಾಗೂ ಫ್ಯಾನ್ ವಿತರಿಸಲು ಉದ್ದೇಶಿಸಲಾಗಿದೆ ಎಂದ ಅವರು, ಎಲ್ಲ ಪಂಚಾಯ್ತಿಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಸರಕಾರ ಕಚೇರಿಗಳಲ್ಲಿ ಕಡ್ಡಾಯವಾಗಿ ಎಲ್‌ಇಡಿ ಬಲ್ಬ್ ಬಳಕೆಗೆ ನಿಯಮ ರೂಪಿಸಿದ್ದು, ಸಂಪುಟದಲ್ಲಿ ಅನುಮೋದನೆ ಪಡೆದು ಕೊಳ್ಳಲಾಗುವುದು ಎಂದರು.

14 ಸಾವಿರ ಹುದ್ದೆಗಳ ಭರ್ತಿ: ಇಂಧನ ಇಲಾಖೆಯಲ್ಲಿ ಖಾಲಿಯಿರುವ ಎಂಜಿನಿಯರ್ ಹಾಗೂ ಲೈನ್‌ಮನ್ ಸೇರಿದಂತೆ ಮೊದಲ ಹಂತದಲ್ಲಿ 14 ಸಾವಿರ ಹುದ್ದೆಗಳನ್ನು ಅತ್ಯಂತ ಪಾರದರ್ಶಕವಾಗಿ ಭರ್ತಿ ಮಾಡಲಾಗಿದೆ. ಎರಡನೆ ಹಂತದಲ್ಲಿ ಇನ್ನೂ 11 ಸಾವಿರ ಇಂಜಿನಿಯರ್ ಹಾಗೂ ಲೈನ್‌ಮನ್‌ಗಳನ್ನು ನಿಯೋಜನೆ ಮಾಡಲಾಗುವುದು ಎಂದರು.

 ಸೋಲಾರ್ ಪ್ಲಾಂಟ್ ನಿರ್ಮಾಣ: ಪ್ರತಿಯೊಂದು ಕ್ಷೇತ್ರದಲಿಯೂ 100 ಮೆ.ವ್ಯಾಟ್ ಉತ್ಪಾದನೆಯ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತಿದ್ದು, ಈಗಾಗಲೇ 100 ತಾಲೂಕುಗಳಲ್ಲಿ ಕೆಲಸವನ್ನು ಆರಂಭಿಸಲಾಗಿದೆ. ಇದು ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ ಎಂದ ಅವರು, ಕೇಂದ್ರ ಸರಕಾರ ಸಹ ಇದನ್ನು ಮೆಚ್ಚಿಕೊಂಡಿದ್ದು, ಇತರೆ ರಾಜ್ಯಗಳಿಗೆ ಈ ಯೋಜನೆಯನ್ನು ವಿಸ್ತರಿಸುವ ಕುರಿತು ಚಿಂತನೆ ಮಾಡಲಾಗುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News