ಅಮೆರಿಕದ ವಿರುದ್ಧ ಮತ್ತೆ ಕಿಡಿ ಕಾರಿದ ರಾಡ್ರಿಗೊ ಡುಟರ್ಟ್

Update: 2016-10-25 18:42 GMT

ಮನಿಲಾ, ಅ. 25: ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ಮಂಗಳವಾರ ಹೊಸದಾಗಿ ಅಮೆರಿಕದ ವಿರುದ್ಧ ವಾಗ್ದಾಳಿ ನಡೆಸಿದರು. ತಾನು ಅಧಿಕಾರದಲ್ಲಿ ದೀರ್ಘ ಕಾಲ ಇದ್ದರೆ, ಅಮೆರಿಕದೊಂದಿಗಿನ ದ್ವಿಪಕ್ಷೀಯ ರಕ್ಷಣಾ ಒಪ್ಪಂದವನ್ನು ಫಿಲಿಪ್ಪೀನ್ಸ್ ಉಪೇಕ್ಷಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

 ಅಧಿಕೃತ ಜಪಾನ್ ಪ್ರವಾಸಕ್ಕಾಗಿ ವಿಮಾನ ಏರುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ಅಮೆರಿಕವನ್ನು ಮತ್ತೊಮ್ಮೆ ಧಿಕ್ಕರಿಸಿದರು. ಫಿಲಿಪ್ಪೀನ್ಸ್ ಚೀನಾದತ್ತ ವಾಲುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ಮಿತ್ರದೇಶವಾಗಿರುವ ಜಪಾನ್ ಆತಂಕಗೊಂಡಿದೆ. ಫಿಲಿಪ್ಪೀನ್ಸ್‌ನಲ್ಲಿ ಅಮೆರಿಕ ದೊಡ್ಡ ಹೂಡಿಕೆದಾರನಾಗಿದೆ.
ಕಳೆದ ವಾರ ಜಪಾನ್ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಡುಟರ್ಟ್, ಅಮೆರಿಕದೊಂದಿಗಿನ ಸಂಬಂಧವನ್ನು ‘ಕಡಿದುಕೊಳ್ಳುವ’ ಬಗ್ಗೆ ಮೃದು ಮಾತುಗಳನ್ನು ಆಡಿದ್ದರು. ತಾನು ಮಿತ್ರಕೂಟವನ್ನು ಬದಲಿಸಲು ಯೋಚಿಸಿಲ್ಲ, ಚೀನಾದೊಂದಿಗೆ ವ್ಯಾಪಾರ ಮತ್ತು ವ್ಯವಹಾರ ಸಂಬಂಧವನ್ನು ವೃದ್ಧಿಪಡಿಸುವ ನಿಟ್ಟಿನಲ್ಲಿ ಮಾತ್ರ ಆಸಕ್ತನಾಗಿರುವುದಾಗಿ ಹೇಳಿದ್ದರು.

ಆದರೆ, ಮಂಗಳವಾರ ಇದಕ್ಕೆ ವ್ಯತಿರಿಕ್ತ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಡುಟರ್ಟ್, ಫಿಲಿಪ್ಪೀನ್ಸ್‌ನಲ್ಲಿ ವಿದೇಶಿ ಪಡೆಗಳನ್ನು ಇರಿಸಿಕೊಳ್ಳುವುದನ್ನು ತಾನು ದ್ವೇಷಿಸುತ್ತೇನೆ ಎಂದರು. ತನ್ನ ದೇಶವನ್ನು ‘‘ಸಂಕಲೆಯ ನಾಯಿ’’ ಎಂಬಂತೆ ಕಾಣಬೇಡಿ ಎಂದು ಅವರು ಅಮೆರಿಕಕ್ಕೆ ಹೇಳಿದರು. ಅಮೆರಿಕದ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಡೇನಿಯಲ್ ರಸೆಲ್ ಸೋಮವಾರ ಮನಿಲಾಗೆ ಭೇಟಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಫಿಲಿಪ್ಪೀನ್ಸ್ ಅಧ್ಯಕ್ಷ, ತಾನು ದೀರ್ಘಾವಧಿಗೆ ಫಿಲಿಪ್ಪೀನ್ಸ್‌ನ ಅಧ್ಯಕ್ಷನಾಗಿ ಮುಂದುವರಿದರೆ, ಫಿಲಿಪ್ಪೀನ್ಸ್ ಜೊತೆಗಿನ ಸುಧಾರಿತ ರಕ್ಷಣಾ ಒಪ್ಪಂದವನ್ನು ಅಮೆರಿಕ ಮರೆತುಬಿಡಬೇಕು ಎಂದರು. ‘‘ರಕ್ಷಣಾ ಒಪ್ಪಂದವನ್ನು ಮರೆತುಬಿಡಿ. ಫಿಲಿಪ್ಪೀನ್ಸ್ ಸೈನಿಕರನ್ನು ಹೊರತುಪಡಿಸಿ ಬೇರೆ ಯಾವುದೇ ದೇಶದ ಸೈನಿಕರನ್ನು ನಾನು ಫಿಲಿಪ್ಪೀನ್ಸ್‌ನಲ್ಲಿ ನೋಡಲು ಬಯಸುವುದಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News