ಬೆಂಗಳೂರು : ಕುಡಿಯುವ ನೀರಿನಿಂದ ಕ್ಯಾನ್ಸರ್ ?

Update: 2016-10-28 12:18 GMT

ಬೆಂಗಳೂರು,ಅ.28: ಬೆಂಗಳೂರು,ಹೈದರಾಬಾದ್,ಚೆನ್ನೈ ಮತ್ತು ಕೊಚ್ಚಿಗಳಲ್ಲಿಯ ನದಿಗಳ ನೀರಿನಲ್ಲಿ ಕರಗಿರುವ,ಅಲ್ಪಪ್ರಮಾಣದಲ್ಲಿರುವ ಮೂಲಧಾತುಗಳು ಮಾನವನ ಆರೋಗ್ಯಕ್ಕೆ ಉಂಟು ಮಾಡಬಹುದಾದ ಅಪಾಯಗಳ ಬಗ್ಗೆ ರಾಜ್ಯದ ಮಣಿಪಾಲ ವಿವಿ,ಮದ್ರಾಸ್ ವಿವಿ ಮತ್ತು ಜಪಾನಿನ ರಾಷ್ಟ್ರೀಯ ಕೃಷಿ ಮತ್ತು ಆಹಾರ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳ ತಂಡವೊಂದು ಕೈಗೊಂಡ ಅಧ್ಯಯನವು ಬೆಂಗಳೂರಿನಲ್ಲಿ ಕುಡಿಯುವ ನೀರು ಕ್ಯಾನ್ಸರ್‌ಗೆ ಕಾರಣವಾಗಬಹುದೆಂಬ ಆಘಾತಕಾರಿ ಅಂಶವನ್ನು ಹೊರಗೆಡವಿದೆ. ಅಧ್ಯಯನ ನಡೆಸಲಾದ ಪ್ರದೇಶಗಳಲ್ಲಿಯ ನೀರಿನ ಮೂಲಗಳಲ್ಲಿ ಪತ್ತೆಯಾಗಿರುವ ಆರ್ಸೆನಿಕ್ ಅಲ್ಲಿಯ ನಿವಾಸಿಗಳಲ್ಲಿ ಆರೋಗ್ಯ ಸಮಸ್ಯೆಗೆ ಕಾರಣವಾಗುವ ಸಂಭವನೀಯತೆ ಹೆಚ್ಚಿದೆ ಮತ್ತು ಸುದೀರ್ಘ ಕಾಲ ಈ ನೀರಿನ ಸೇವನೆ ಕ್ಯಾನ್ಸರ್ ಮಾರಿಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂಬ ತೀರ್ಮಾನಕ್ಕೆ ಈ ವಿಜ್ಞಾನಿಗಳು ಬಂದಿದ್ದಾರೆ.

ಆರ್ಸೆನಿಕ್ ನೀರಿನಲ್ಲಿಯ ಅತ್ಯಂತ ಅಪಾಯಕಾರಿ ಮಾಲಿನ್ಯಕಾರಕ ಎನ್ನುವುದನ್ನು ಅಧ್ಯಯನದ ಫಲಿತಾಂಶವು ಬೆಟ್ಟು ಮಾಡಿದೆ. ಇದು ಜನರಲ್ಲಿ,ನಿರ್ದಿಷ್ಟವಾಗಿ ಸೂಕ್ಷ್ಮ ಪ್ರಕೃತಿಯ ಮಕ್ಕಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗಬಹುದು. ಹೀಗಾಗಿ ಸ್ಥಳೀಯರು... ವಿಶೇಷವಾಗಿ ಮಕ್ಕಳು ಆರ್ಸೆನಿಕ್ ಅಪಾಯಕ್ಕೊಡ್ಡಿಕೊಳ್ಳುವ ಸಮಸ್ಯೆಯತ್ತ ಹೆಚ್ಚಿನ ಗಮನವನ್ನು ಹರಿಸಬೇಕು ಮತ್ತು ಸುಸ್ಥಿರ ಆರೋಗ್ಯಪೂರ್ಣ ಜಲ ಪರಿಸರ ವ್ಯವಸ್ಥೆಗಾಗಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಸಂಶೋಧನಾ ತಂಡವು ತನ್ನ ವರದಿಯಲ್ಲಿ ಹೇಳಿದೆ.

 ಕೆಲವು ಮೂಲಧಾತುಗಳ ಅಂಶಗಳು ಅತ್ಯಲ್ಪ ಪ್ರಮಾಣದಲ್ಲಿ ಜೀವಿಗಳಿಗೆ ಅಗತ್ಯವಾಗಿವೆ. ಹೀಗಾಗಿ ಜಲ ಪರಿಸರ ವ್ಯವಸ್ಥೆಯಲ್ಲಿ ಇವು ಮಹತ್ವದ ಪಾತ್ರವನ್ನು ಹೊಂದಿವೆ. ಆದರೆ ಕೆಲವು, ಉದಾಹರಣೆಗೆ ಆರ್ಸೆನಿಕ್,ಪಾದರಸ,ಸೀಸ ಮತ್ತು ಕ್ಯಾಡ್ಮಿನಿಯಂನಂತಹ ಮೂಲಧಾತುಗಳು ಅತ್ಯಲ್ಪ ಪ್ರಮಾಣದಲ್ಲಿಯೂ ವಿಷಕಾರಿ ಯಾಗಿವೆ. ಮೇಲ್ಮೈ ನೀರು ಮಾನವ ಮತ್ತು ಇತರ ಜೀವಿಗಳಿಗೆ ಪ್ರಮುಖ ಕುಡಿಯುವ ನೀರಿನ ಮೂಲವಾಗಿರುವುದರಿಂದ ಜಲವ್ಯವಸ್ಥೆಗಳಲ್ಲಿಯ ಮೂಲಧಾತುಗಳ ಅಂಶಗಳ ಸಾಂದ್ರತೆ ಮತ್ತು ಅವುಗಳ ಜೈವಿಕ-ರಾಸಾಯನಿಕ ಪರಿಣಾಮವನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ದಕ್ಷಿಣ ಭಾರತದಲ್ಲಿ ಪ್ರಮುಖ ಕೈಗಾರಿಕಾ ಕೇಂದ್ರಗಳು ಬೆಂಗಳೂರು,ಚೆನ್ನೈ,ಹೈದರಾಬಾದ್ ಮತ್ತು ಕೊಚ್ಚಿ ಮಹಾನಗರಗಳಲ್ಲಿ ಸ್ಥಿತಗೊಂಡಿವೆ. ಇಂತಹ ಕೈಗಾರಿಕೆಗಳಿಂದ ಭಾಗಶಃ ಸಂಸ್ಕರಿತ ಅಥವಾ ಸಂಸ್ಕರಣಗೊಳ್ಳದ ನೀರನ್ನು ನದಿಗಳು ಮತ್ತು ತೊರೆಗಳಿಗೆ ಬಿಡಲಾಗುತ್ತದೆ. ಆದರೆ ಮೂಲಧಾತು ಅಂಶಗಳ ಸಾಂದ್ರತೆಗೆ ಸಂಬಂಧಿಸಿದಂತೆ ಈ ನದಿಗಳ ನೀರಿನ ಗುಣಮಟ್ಟದ ಮೇಲೆ ನಿಗಾಯಿರಿಸುವ ಯಾವುದೇ ಕ್ರಿಯಾಶೀಲ ವ್ಯವಸ್ಥೆಯಿಲ್ಲ ಎಂದು ವರದಿಯು ಹೇಳಿದೆ.

ಅಧ್ಯಯನ ಕೈಗೊಂಡ ಪ್ರದೇಶಗಳಲ್ಲಿಯ ನೀರಿನ ಮೂಲಗಳಲ್ಲಿ ಕ್ರೋಮಿಯಂ, ಸೆಲೆನಿಯಂ, ಆರ್ಸೆನಿಕ್, ಕಬ್ಬಿಣ ಮತ್ತು ಮ್ಯಾಂಗನೀಸ್‌ಗಳು ಪ್ರಮುಖ ಮಾಲಿನ್ಯಕಾರಕಗಳಾದ್ದು, ಇವುಗಳ ಸಾಂದ್ರತೆಯು ವೃಷಭಾವತಿ, ಎನ್ನೋರ್, ಅಡ್ಯಾರ್, ಕೂವಂ ಮತ್ತು ಪೆರಿಯಾರ ನದಿ ಪಾತ್ರಗಳಲ್ಲಿಯ ವಿವಿಧೆಡೆಗಳಲ್ಲಿ ನಿಗದಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜಲ ಗುಣಮಟ್ಟ ಮಾನದಂಡಗಳಿಗಿಂತ ಹೆಚ್ಚಾಗಿದೆ ಎಂದು ಹೇಳಿರುವ ವರದಿಯು,ಕೈಗಾರಿಕಾ ತ್ಯಾಜ್ಯಗಳು,ಒಳಚರಂಡಿ ತ್ಯಾಜ್ಯ,ಬಣ್ಣ ತಯಾರಿಕೆ ಕಾರ್ಖಾನೆಗಳ ತ್ಯಾಜ್ಯ ಮತ್ತು ವಾಹನ ಕ್ಷೇತ್ರಗಳ ತ್ಯಾಜ್ಯಗಳು ಪ್ರಮುಖ ಮಾಲಿನ್ಯ ಮೂಲಗಳಾಗಿವೆ ಎಂದಿದೆ.

 ಕರ್ನಾಟಕ ಮತ್ತು ಬೆಂಗಳೂರಿನ ಜನತೆಯ ಆರೋಗ್ಯದ ಮೇಲೆ ಕುಡಿಯುವ ನೀರು ಉಂಟುಮಾಡಬಹುದಾದ ಅಪಾಯಗಳ ಬಗ್ಗೆ ನಡೆಸಲಾದ ಅಧ್ಯಯನದಲ್ಲಿ ಸಂಶೋಧಕರು ಮೇಲ್ ಕಾವೇರಿ ಪಾತ್ರದಲ್ಲಿಯ ಮೇಲ್ಮೈ ನೀರಿನ ಸ್ಯಾಂಪಲ್‌ಗಳನ್ನು ಮುಖ್ಯವಾಗಿಟ್ಟುಕೊಂಡಿದ್ದರು. ಈ ಪ್ರದೇಶದಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಪ್ರಮಖ ಮಾಲಿನ್ಯಕಾರಕಗಳು ಎನ್ನುವುದು ಬೆಳಕಿಗೆ ಬಂದಿದೆ. ಆರ್ಸೆನಿಕ್ ಕೂಡ ಇವುಗಳೊಡನೆ ಸೇರಿದೆ. ಬೆಂಗಳೂರು ನಗರದಲ್ಲಿ ಹರಿಯುವ ವೃಷಭಾವತಿಯ ಎಲ್ಲ ಕಡೆಗಳಲ್ಲಿ ಕಬ್ಬಿಣದ ಸಾಂದ್ರತೆ ಹೆಚ್ಚಿದೆ ಮತ್ತು ಕಾವೇರಿ ನದಿಗೆ ಸೇರುವ ಈ ಉಪನದಿಯು ಅದರ ಮಾಲಿನ್ಯವನ್ನು ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ಹೊಂದಿದೆ ಎಂದಿರುವ ವರದಿಯು, ಜನರ ಆರೋಗ್ಯ ರಕ್ಷಣೆಯತ್ತ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News