ಇಸ್ರೊ ಅಧಿಕಾರಿಯ ವಿಚಾರಣೆ ನಡೆಸಲಿದೆ ಕ್ರೈಂ ಬ್ರಾಂಚ್

Update: 2016-11-01 03:18 GMT

ಹೊಸದಿಲ್ಲಿ, ನ.1: ಐಎಸ್‌ಐಗೆ ಸೂಕ್ಷ್ಮ ರಕ್ಷಣಾ ಮಾಹಿತಿ ಸೋರಿಕೆ ಮಾಡಿದ ಆರೋಪ ಎದುರಿಸುತ್ತಿರುವ ಇಸ್ರೊ ಅಧಿಕಾರಿಯನ್ನು ದಿಲ್ಲಿ ಪೊಲೀಸ್ ಪಡೆಯ ಅಪರಾಧ ವಿಭಾಗ ವಿಚಾರಣೆಗೆ ಗುರಿಪಡಿಸಲಿದೆ.

 ಆರು ತಿಂಗಳ ಸತತ ತನಿಖೆ ಬಳಿಕ ಈ ಬೇಹುಗಾರಿಕೆ ಜಾಲವನ್ನು ಭೇದಿಸಿ, ಈ ಜಾಲ ನಡೆಸುತ್ತಿದ್ದ ಪಾಕಿಸ್ತಾನ ಹೈಕಮಿಷನ್ ಸಿಬ್ಬಂದಿ ಮೆಹಮೂದ್ ಅಖ್ತರ್ ವಿಚಾರಣೆ ವೇಳೆ ಇಸ್ರೊ ಅಧಿಕಾರಿಯ ಹೆಸರು ಬಹಿರಂಗವಾಗಿತ್ತು. ಭಾರತದ ಸಶಸ್ತ್ರ ಪಡೆಗಳ ಬಗೆಗಿನ ಸೂಕ್ಷ್ಮ ಮಾಹಿತಿಯನ್ನು ಈ ಅಧಿಕಾರಿ ಪಾಕಿಸ್ತಾನದ ಇಂಟರ್ ಸರ್ವೀಸ್ ಇಂಟೆಲಿಜೆನ್ಸ್ (ಐಎಸ್‌ಐ)ಗೆ ಸೋರಿಕೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರನ್ನು ಇದೀಗ ವಿಚಾರಣೆಗೆ ಗುರಿಪಡಿಸಲಾಗಿದ್ದು, ಈ ವೇಳೆ ರಹಸ್ಯ ರಕ್ಷಣಾ ದಾಖಲೆಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಇಸ್ರೋಗೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.

ಇದೇ ವೇಳೆ ಅಖ್ತರ್ ಜತೆ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾದ ಗಡಿಭದ್ರತಾ ಪಡೆಯ ಮಾಜಿ ಅಧಿಕಾರಿಯೊಬ್ಬರ ಬಂಧನಕ್ಕೂ ದಿಲ್ಲಿ ಪೊಲೀಸರು ಬಲೆ ಬೀಸಿದ್ದಾರೆ. ಇವರ ಶೋಧಕ್ಕಾಗಿ ಗಡಿಭಾಗ ಸೇರಿದಂತೆ ಹಲವು ಕಡೆಗಳಿಗೆ ತನಿಖಾ ತಂಡ ತೆರಳಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News