ಮಾಮಿಯ ಬಾಯಲ್ಲಿ ಅಮ್ಮನ ಮಾತು...

Update: 2016-11-02 18:11 GMT

ಧಾರಾವಾಹಿ-39

ಮರುದಿನ ಬೆಳಗ್ಗೆ ಎಲ್ಲರೂ ಹೊರಟು ಬಿಟ್ಟಿದ್ದರು. ಇಡೀ ಮನೆ ಬಣಗುಟ್ಟತೊಡಗಿತ್ತು. ಐಸುಳ ಮುಖದಲ್ಲಿ ಕಳೆಯೇ ಇರಲಿಲ್ಲ. ಅಜ್ಜಿ ಸುಮ್ಮನೆ ಬಿದ್ದುಕೊಂಡಿದ್ದರು. ಆದರೆ ನಾಸರ್ ಮಾತ್ರ ನೆರಳಿನಂತೆ ಅವಳ ಹಿಂದೆಯೇ ಸುತ್ತತೊಡಗಿದ್ದ. ಏನೋ ಮಾತನಾಡುವ ತವಕ ಅವನ ಮುಖದಲ್ಲಿ್ದುದನ್ನು ಅವಳು ಗಮನಿಸಿದ್ದಳು.
ಅಂದು ಮಧ್ಯಾಹ್ನ ಯಾರೂ ಇಲ್ಲದ ಸಮಯ ನೋಡಿ ಆತ ಅವಳ ಕೋಣೆಗೆ ಬಂದಿದ್ದ. ಅವಳು ಏನೋ ಯೋಚಿಸುತ್ತಾ ಕನ್ನಡಿಯ ಮುಂದೆ ನಿಂತಿದ್ದಳು.
‘‘ತಾಹಿರಾ’’ ಆತ ಅವಳ ಬಳಿ ಬಂದ.
ಅವಳು ತಲೆ ಎತ್ತಿ ಅವನನ್ನು ನೋಡಿದಳು. ಅವಳ ಕಣ್ಣಲ್ಲಿ ಜೀವವೇ ಇಲಿಲ್ಲ.
‘‘ಏನು ಯೋಚಿಸುತ್ತಾ ಇದ್ದಿಯಾ ತಾಹಿರಾ.’’
‘‘ನಾನು ನಾಳೆ ಒಂದು ದಿನ ಇರ್ತೀನಿ. ನಾಡದ್ದು ಹೋಗ್ತೇನೆ.’’
‘‘ಏನು ಅವಸರ. ನಾನು ಇನ್ನೂ ನಾಲ್ಕು ದಿನ ಇದ್ದೇನೆ. ಆ ಮೇಲೆ ಹೋದರಾಗದಾ?’’
‘‘ಇಲ್ಲ, ನನಗೆ ಹೋಗಬೇಕು.’’
‘‘ಯಾಕೆ ನನ್ನ ಮೇಲೆ ಕೋಪನಾ?’’
‘‘ಅಲ್ಲ, ನಾನು ಬಂದು ತಿಂಗಳಾಯಿತು.’’
‘‘ಇನ್ನೆರಡು ದಿನ ಇದ್ದು ಹೋದರಾಗದಾ?’’
‘‘ಬೇಡ. ಅಮ್ಮ ಕೋಪಿಸಿಕೊಳ್ಳುತ್ತಾರೆ.’’
‘‘ನಿನ್ನ ಅಮ್ಮ ನಮ್ಮ ಮದುವೆಗೆ ಒಪ್ಪಬಹುದಾ?’’
‘‘ಗೊತ್ತಿಲ್ಲ.’’ ಅವಳು ತಲೆ ತಗ್ಗಿಸಿದಳು.
‘‘ನಿನಗೆ ಒಪ್ಪಿಗೆನಾ?’’
‘‘ಗೊತ್ತಿಲ್ಲ’’
‘‘ನಿನಗೆ ನಾನು ಇಷ್ಟನಾ?’’
‘‘................’’
‘‘ನಾನು ಬಂದು ನಿನ್ನ ತಂದೆ, ತಾಯಿ ಜೊತೆ ಮಾತನಾಡಲಾ?’’
‘‘ಗೊತ್ತಿಲ್ಲ’’
‘‘ಮತ್ತೇನು ಮಾಡಬೇಕು ನಾನು ಹೇಳು’’
‘‘ತಾಯಿ ಮಾತನ್ನು ಮೀರಿ ನಡೆಯುವ ಧೈರ್ಯ ನನಗಿಲ್ಲ.’’

ಐಸು ಬಚ್ಚಲು ಮನೆಯಿಂದ ಬಂದ ಶಬ್ದ ಕೇಳಿಸಿತು. ಆತ ಅವಳ ಮುಖ ನೋಡಿದ. ಅದು ಬಿಳುಚಿಕೊಂಡಿತ್ತು. ಆತ ಕೋಣೆಯಿಂದ ಹೊರ ಬಂದ. ‘‘ಯಾಕಮ್ಮ ಸಪ್ಪಗಿದ್ದಿಯಾ?’’ ಅಂದು ರಾತ್ರಿ ತನ್ನ ಪಕ್ಕ ಮಲಗಿದ್ದ ತಾಹಿರಾಳ ತಲೆ ಸವರುತ್ತಾ ಐಸು ಕೇಳಿದಳು.
ತಾಹಿರಾ ಮಾತನಾಡಲಿಲ್ಲ.
‘‘ಬೋರಾಗ್ತದಾ?’’
‘‘ಹೂಂ...’’
ಒಮ್ಮೆ ಜೋರು ಮಳೆ ಬಂದು ನಿಂತರೆ ಹೇಗೊ ಹಾಗೆಯೇ - ಈ ಹಬ್ಬ ಬಂದರೆ ಮನೆ ತುಂಬ ಜನ ತುಂಬಿ ಎಲ್ಲರೂ ಸಂಭ್ರಮಿಸುತ್ತಾರೆ. ನಾವೂ ಎಲ್ಲ ನೋವುಗಳನ್ನು, ಕಷ್ಟಗಳನ್ನು ಮರೆತು ಸಂತೋಷವಾಗಿರುತ್ತೇವೆ. ಅವರೆಲ್ಲ ಹೋದ ಮೇಲೆ ಮನೆ ಸ್ಮಶಾನದಂತಾಗುತ್ತದೆ. ಇದು ಇನ್ನು ಸರಿಯಾಲಿಕ್ಕೆ ಒಂದು ತಿಂಗಳಾದರೂ ಬೇಕು.
‘‘ಮಾಮಿ ನಾನು ನಾಡಿದ್ದು ಹೋಗ್ತೇನೆ.’’
‘‘ಯಾಕಮ್ಮಾ, ಬೇಜಾರಾ?’’
‘‘ನಾನು ಬಂದು ತಿಂಗಳಾಯಿತು.’’
‘‘ಇನ್ಯಾವಾಗ ಬರ್ತಿ?’’
‘‘ಬರ್ತೇನೆ, ಅಮ್ಮ ಒಪ್ಪಿಗೆ ಕೊಟ್ಟ ದಿನ ಬರ್ತೇನೆ’’
ಐಸು ಮಾತನಾಡಲಿಲ್ಲ.
‘‘ಮಾಮಿ, ನನಗೆ ನಿಮ್ಮಲ್ಲಿ ಒಂದು ಮಾತು ಕೇಳಬೇಕು.’’
‘‘ಏನಮ್ಮಾ?’’
‘‘ಮಾಮಿ, ನಾನು ಈಗ ಬಂದು ಒಂದು ತಿಂಗಳಾಯಿತು. ಈ ಮನೆಯಲ್ಲಿ ಕೂಟು-ಕುಟುಂಬ ಎಲ್ಲರೂ ಸೇರಿದರು. ಎಲ್ಲರೂ ಖುಷಿಯಿಂದ ಕಳೆದರು. ಆದರೆ ನನ್ನ ತಾಯಿ, ಅವರೇಕೆ ಬರಲಿಲ್ಲ. ಅವರೇಕೆ ಇಲ್ಲಿಗೆ ಬರುವುದಿಲ್ಲ. ಈ ಮನೆಯಲ್ಲಿ ಕೂಡಿದ ಎಲ್ಲರೂ ನನ್ನ ಬಗ್ಗೆ ಕೇಳಿದರು. ನನ್ನ ಓದಿನ ಬಗ್ಗೆ ಕೇಳಿದರು. ನನ್ನ ಇಷ್ಟದ ಬಗ್ಗೆ ಕೇಳಿದರು. ನನ್ನನ್ನು ಪ್ರೀತಿಯ ಹೊಳೆಯಲ್ಲಿ ಈಜಾಡಿಸಿದರು. ಆದರೆ ಒಬ್ಬನೇ ಒಬ್ಬ ‘ನಿನ್ನ ತಾಯಿ ಹೇಗಿದ್ದಾರೆ, ನಿನ್ನ ತಂದೆ ಹೇಗಿದ್ದಾರೆ’ ಎಂಬ ಒಂದೇ ಒಂದು ಮಾತು ಕೇಳಲಿಲ್ಲ. ನೀವೂ ಕೇಳಲಿಲ್ಲ. ಅಜ್ಜಿಯೂ ಕೇಳಲಿಲ್ಲ. ಯಾಕೆ ಮಾಮಿ ಹೀಗೆ? ನನ್ನ ಅಮ್ಮ ಅಜ್ಜಿಯ ಮಗಳಲ್ಲವೇ? ಅವರು ಅಂತಹ ತಪ್ಪು ಏನು ಮಾಡಿದ್ದಾರೆ.’’
‘‘ನಿನಗೆ ಗೊತ್ತಿಲ್ಲವಾ?’’
‘‘ಇಲ್ಲ’’
‘‘ನಿಜವಾಗಲೂ ಗೊತ್ತಿಲ್ಲವಾ?’’ ಐಸುಳ ಪ್ರಶ್ನೆಯಲ್ಲಿ ಈಗ ಒರಟುತನವಿತ್ತು.
‘‘ನಿಜವಾಗಲೂ ಗೊತ್ತಿಲ್ಲ.’
‘‘ನಿನ್ನಮ್ಮ ಏನೂ ಹೇಳಲಿಲ್ಲವಾ?’’
‘‘ಇಲ್ಲ’’
‘‘ನೀನು ಕೇಳಲಿಲ್ಲವಾ?’’
‘‘ಒಂದೆರಡು ಸಲ ಕುಟುಂಬದ ಬಗ್ಗೆ ಕೇಳಿದ್ದೆ. ಅದೆಲ್ಲ ನಿನಗೆ ಯಾಕೆ? ನಿನಗೀಗ ಏನು ಕಮ್ಮಿಯಾಗಿದೆ. ಸುಮ್ಮನೆ ಓದಿಕೊಂಡು ಹಾಯಾಗಿರು’’ ಎಂದು ಅಮ್ಮ ಗದರಿಸಿದ್ದರು. ಆಮೇಲೆ ಏನೂ ಕೇಳುವ ಧೈರ್ಯವಾಗಲಿಲ್ಲ. ಹಾಗೇನಾದರೂ ಕೇಳಿದರೆ ಅಮ್ಮ ಕೋಪಗೊಳ್ಳುತ್ತಾರೆ. ಒರಟಾಗುತ್ತಾರೆ. ಅಮ್ಮ ಹಾಗೆಯೇ.’’
‘‘ಅವಳು ಅದನ್ನು ಹೇಗೆ ಹೇಳುವುದು. ಹೇಳಲಿಕ್ಕೆ ಅವಳಿಗೆ ನಾಲಗೆ ಹೊರಳಬೇಕಲ್ಲ. ನಾನೀಗ ಅದನ್ನೆಲ್ಲ ಹೇಳಿದರೆ ನೀನಿನ್ನು ಯಾವತ್ತೂ ಅವಳನ್ನೂ ‘ಅಮ್ಮಾ’ಂತ ಕರೆಯೋಲ್ಲ.’’
ಮಾಮಿಯ ಮಾತಿನಲ್ಲಿ ದ್ವೇಷದ ಾಸನೆಯನ್ನು ತಾಹಿರಾ ಗಮನಿಸಿದಳು.
‘‘ಹೇಳಿ ಮಾಮಿ, ನನಗೆ ಎಲ್ಲ ತಿಳಿದುಕೊಳ್ಳಬೇಕು. ಈ ಕುಟುಂಬದ ಎಲ್ಲರ ವಿಷಯವನ್ನು ಹೇಳಿದ್ದೀರಿ. ನಿಮ್ಮ ಕಷ್ಟವನ್ನೂ ಹೇಳಿಕೊಂಡಿದ್ದೀರಿ. ಆದರೆ ನನ್ನ ತಾಯಿಯ ಬಗ್ಗೆ ನಾನು ತಿಳಿದುಕೊಳ್ಳಬೇಡವಾ?’’
‘‘ಹೌದು, ನೀನು ಅವಳ ಬಗ್ಗೆ ಎಲ್ಲ ತಿಳಿದು ಕೊಳ್ಳಬೇಕು. ತಿಳಿದುಕೊಳ್ಳುವುದು ನಿನಗೆ ತುಂಬಾ ಒಳ್ಳೆಯದು.’’
ನಿನ್ನಮ್ಮ ಅಜ್ಜ-ಅಜ್ಜಿಯ ಕೊನೆಯ ಮಗಳು. ಅವಳನ್ನು ಬಹಳ ಮುದ್ದಿನಿಂದ ಸಾಕಿದ್ದರು. ಅವಳೂ ಹಾಗೆಯೆ ಬಹಳ ಚೂಟಿ. ಆರು ವರ್ಷವಾಗುತ್ತಲೇ ಅವಳನ್ನು ಶಾಲೆಗೆ ಸೇರಿಸಿದರು. ಆಗ ಮುಸ್ಲಿಂ ಹೆಣ್ಣು ಮಕ್ಕಳು ಹೆಚ್ಚಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಒಂದು ಹತ್ತು ವರ್ಷ ಪ್ರಾಯವಾಗುವವರೆಗೆ ಮದ್ರಸಾಕ್ಕೆ ಹೋಗುತ್ತಿದ್ದರು ಅಷ್ಟೆ. ನಿನ್ನ ದೊಡ್ಡಮ್ಮನವರೂ 3-4ನೆ ತರಗತಿಗಿಂತ ಹೆಚ್ಚು ಓದಿದವರಲ್ಲ. ಆದರೆ ನಿನ್ನ ತಾಯಿ ಬಹಳ ಪ್ರತಿಭಾವಂತೆ. ಶಾಲೆಗೆ ಸೇರಿಸಿದ ಮೇಲೆ ಅವಳ ಜೀವನ ಕ್ರಮವೇ ಬದಲಾಗಿ ಹೋಯಿತು. ಓದುವುದು - ಬರೆಯುವುದೇ ಅವಳಿಗೆ ಆಟವಾಗಿ ಹೋಯಿತು. ಅವಳು ಓದು ಮುಂದುವರಿಸಿದಳು.
ಅಜ್ಜ-ಅಜ್ಜಿಗೆ ಅದೇಕೋ ಕಿರಿಯ ಮಗಳೆಂದರೆ ಅತಿಯಾದ ಪ್ರೀತಿ. ಅವಳು ಶಾಲೆಗೆ ಹೋಗುವುದನ್ನು ನೋಡುವುದೇ ಅವರಿಗೆ ಸಂಭ್ರಮ. ಅವಳು ಮನೆಯಲ್ಲಿ ಓದುವಾಗ, ಬರೆಯುವಾಗ ಅವಳ ಪಕ್ಕ ಗದ್ದಕ್ಕೆ ಕೈಯೂರಿ ಕುಳಿತು ಅವಳನ್ನೇ ನೋಡುತ್ತಿದ್ದರು. ಅವಳ ಓದಿಗೆ ತೊಂದರೆಯಾಗದಂತೆ ಯಾರನ್ನೂ ಜೋರಾಗಿ ಮಾತನಾಡಲು, ಶಬ್ದ ಮಾಡಲು ಬಿಡುತ್ತಿರ ಲಿಲ್ಲ. ಶಾಲೆಯಲ್ಲಿ ಅವಳು ಅಧ್ಯಾಪಕರ ಅಚ್ಚು ಮೆಚ್ಚಿನ ವಿದ್ಯಾರ್ಥಿನಿ. ಅವಳ ಶಾಲೆಯ ಅಧ್ಯಾಪಕರು ಅದೆಷ್ಟೋ ಸಲ ನಿನ್ನಜ್ಜನಿಗೆ ದಾರಿ ಯಲ್ಲಿ ಸಿಕ್ಕಾಗ ‘‘ನಿಮ್ಮ ಮಗಳು ಓದುವುದರಲ್ಲಿ ತುಂಬಾ ಜಾಣೆ. ಆಟ-ಪಾಠ ಎಲ್ಲದರಲ್ಲೂ ಬಹಳ ಪ್ರತಿಭಾವಂತೆ. ಇಂತಹ ಮಕ್ಕಳನ್ನು ದೇವರು ಎಲ್ಲರಿಗೂ ಕೊಡುವುದಿಲ್ಲ. ನೀವು ಭಾಗ್ಯವಂತರು’’ ಎಂದು ಹೊಗಳುತ್ತಿದ್ದರಂತೆ. ಅವಳಿಂದಾಗಿ ತನಗೆ ಅಧ್ಯಾಪಕರಿಂದ ಸಿಗುತ್ತಿರುವ ಗೌರವ, ಆದರ ನೋಡಿ ಅಜ್ಜನಿಗೆ ಬಹಳ ಹೆಮ್ಮೆಯಾಗುತ್ತಿತ್ತು. ಅದನ್ನೆಲ್ಲ ಅವರು ಮನೆಗೆ ಬಂದು ಅಜ್ಜಿಯ ಜೊತೆ ಹೇಳಿ ಅಭಿಮಾನ ಪಟ್ಟುಕೊಳ್ಳುತ್ತಿದ್ದರು. ಕೆಲವು ಅಧ್ಯಾಪಕರು ಅಜ್ಜನನ್ನು ಶಾಲೆಗೆ ಕರೆಸಿ ಅವಳ ಕಲಿಕೆಯ ಬಗ್ಗೆ, ಅವಳ ಪ್ರತಿಭೆಯ ಬಗ್ಗೆ ಅಜ್ಜನಲ್ಲಿ ವರದಿ ಒಪ್ಪಿಸುತ್ತಿದ್ದರಂತೆ. ಅವಳ ವಿಷ್ಯದ ಬಗ್ಗೆ ಚರ್ಚಿಸುತ್ತಿದ್ದರಂತೆ.
ಅವಳ ಏಳನೇ ಕ್ಲಾಸು ಮುಗಿದಾಗ ನಿನ್ನ ಅಜ್ಜನಿಗೆ ಮಕ್ಕಳು, ಅಳಿಯಂದಿರಿಂದ, ಬಂಧುಗಳಿಂದ, ಗೆಳೆಯರಿಂದ, ಊರ ಬ್ಯಾರಿಗಳಿಂದ ಸಣ್ಣ ಮಟ್ಟಿನ ವಿರೋಧ ವ್ಯಕ್ತವಾಗತೊಡಗಿತು.
‘‘ಇನ್ನು ಸಾಕು ಕಾಕಾ, ಹೆಣ್ಣುಮಕ್ಕಳು ಓದಿ ಏನಾಗಬೇಕು. ಮದುವೆ ಮಾಡಿ ಬಿಡಿ. ಅವಳೇನು ಓದಿ ನಿಮ್ಮನ್ನು ಸಾಕಬೇಕಾ?’’ ಎಂಬ ಮಾತುಗಳನ್ನು ಅಜ್ಜನಿಗೆ ಹೇಳತೊಡಗಿದರಂತೆ. ಅಜ್ಜ ಯಾರ ಮಾತಿಗೂ ಕಿವಿಗೊಡಲಿಲ್ಲ. ನಿನ್ನ ತಾಯಿ ಹೇಳಿದರೆ ಕೇಳುವ ಜಾಯಮಾನದವಳೂ ಅಲ್ಲ. ಅವಳ ಹಟ ಅಜ್ಜನಿಗೆ ಗೊತ್ತಿತ್ತು. ಅಜ್ಜ ಅವಳ ಇಷ್ಟದಂತೆ ಓದಿಸಿದರು. ಅವಳು ಹತ್ತನೆ ತರಗತಿ ಪಾಸು ಮಾಡಿದಾಗ ಅಜ್ಜನಿಗೆ ಮತ್ತೆ ಚಿಂತೆ ಶುರುವಾಯಿತು. ನಿನ್ನ ತಾಯಿ ಕಾಲೇಜಿಗೆ ಹೋಗುತ್ತೇನೆಂದು ಹಟ ಹಿಡಿದಳು. ಅಜ್ಜನಿಗೆ ಧರ್ಮ ಸಂಕಟ. ಅದಕ್ಕೆ ಇನ್ನೊಂದು ಕಾರಣವೂ ಇತ್ತು. ನಿನ್ನ ತಾಯಿ ವಯಸ್ಸಿಗಿಂತಲೂ ಎತ್ತರವಾಗಿ, ದಷ್ಟಪುಷ್ಟವಾಗಿ, ಸುಂದರಿಯಾಗಿ ಬೆಳೆದು ನಿಂತಿದ್ದಳು. ಅವಳು ರಸ್ತೆಯಲ್ಲಿ ಹೋಗುತ್ತಿದ್ದರೆ ಸಾವಿರ ಕಣ್ಣುಗಳು ಅವಳನ್ನು ಹಿಂಬಾಲಿಸುತ್ತಿದ್ದವು. ಮದುವೆಯಾಗುವ ವಯಸ್ಸು, ಕನಸುಗಳು, ಕಾಮನೆಗಳು ಚಿಗುರುವ ಸಮಯ. ಏನಾದರೂ ಹೆಚ್ಚು ಕಡಿಮೆಯಾದರೆ. ಮದುವೆ ಮಾಡಿಬಿಡಬೇಕು. ಆದಷ್ಟು ಬೇಗ ಮದುವೆ ಮಾಡಿ ಬಿಡಬೇಕು. ಅಜ್ಜನ ಎದೆಯಲ್ಲಿ ಭಯದ ಕಿಡಿಯೊಂದು ಅದಾಗಲೇ ಹೊತ್ತಿಕೊಳ್ಳ ತೊಡಗಿತ್ತು.
‘‘ಯಾವುದ್ಯಾವುದು ಯಾವ ಯಾವ ಸಮಯದಲ್ಲಿ ಆಗಬೇಕೋ ಅದು ಆ ಸಮಯದಲ್ಲೇ ಮಾಡಿ ಮುಗಿಸಬೇಕು. ಇಲ್ಲದಿದ್ದರೆ ದೇಹದಲ್ಲಿ ಸೈತಾನ ಆಕ್ರಮಿಸಿ ಬಿಡುತ್ತಾನೆ’’ ಮೌಲವಿಯವರು ಮತ ಪ್ರಸಂಗದಲ್ಲಿ ಹೇಳಿದ ಮಾತನ್ನು ಅಜ್ಜಿ ಆಗಾಗ ಅಜ್ಜನಿಗೆ ನೆನಪಿಸಿಕೊಡುತ್ತಿದ್ದರು.
ನಿನ್ನಜ್ಜ ಮಗಳಿಗೆ ಬುದ್ಧಿ ಹೇಳಿದರು. ‘‘ಓದು ಸಾಕು. ನಿನಗೆ ಮದುವೆ ಮಾಡುತ್ತೇನೆ. ಒಳ್ಳೆಯ ರಾಜಕುಮಾರನನ್ನು ತಂದು ನಿನಗೆ ಜೋಡಿ ಮಾಡುತ್ತೇನೆ’’ ಎಂದು ಆಶೆ ೋರಿಸಿದರು. ನಿನ್ನ ತಾಯಿ ಕೇಳಲಿಲ್ಲ.
‘‘ನನಗೆ ಕಾಲೇಜಿಗೆ ಹೋಗಬೇಕು. ಡಿಗ್ರಿ ಮಾಡಬೇಕು. ಆಮೇಲೆ ಮದುವೆ. ಅದಕ್ಕೆ ಮೊದಲು ಮದುವೆಯಾಗುವುದಿಲ್ಲ’’ ನಿನ್ನ ತಾಯಿ ಹಟ ಬಿಡಲಿಲ್ಲ.

ನಿನ್ನ ಅಜ್ಜ ತನ್ನ ಪ್ರೀತಿಯ ಮಗಳ ಹಟಕ್ಕೆ ಸೋಲ ತೊಡಗಿದ್ದರು. ಆ ಕಾಲದಲ್ಲಿ ಈ ಊರಿನಲ್ಲಿ ಏಳನೆ ತರಗತಿಗಿಂತ ಹೆಚ್ಚು ಕಲಿತ ಬ್ಯಾರಿಗಳ ಹೆಣ್ಣು ಮಕ್ಕಳು ಇರಲಿಲ್ಲ. ಅದೂ ದೊಡ್ಡ ಶ್ರೀಮಂತರ ಮಕ್ಕಳಿರಬಹುದು ಅಷ್ಟೆ. ಆದರೆ ನಿನ್ನ ತಾಯಿ ಹತ್ತನೆ ತರಗತಿ ಓದಿಯೂ ಮತ್ತೆ ಕಾಲೇಜಿಗೆ ಹೋಗುತ್ತೇನೇಂತ ಹಟ ಹಿಡಿದಾಗ ಅಜ್ಜನಿಗೆ ಹೇಗಾಗಬೇಡ ಹೇಳು. ವಿಷಯ ಊರಿಡೀ ಹರಡಿತು. ಮಸೀದಿಯ ಮಿಂಬರಿಗೂ ತಲುಪಿತು. ಊರ ಹೆಂಗಸರು ಸೇರಿದಲ್ಲೆಲ್ಲ ಇದೇ ವಿಷಯ ಚರ್ಚೆಯಾಗತೊಡಗಿತು. ‘‘ಇದೆಂತಹ ಕೇಡು ಕಾಲ ಇವಳಿಗೆ. ಹಿರಿಯರ ಭಯ ಇಲ್ಲ’’ ಎಂದು ಗಲ್ಲದ ಮೇಲೆ ಕೈಯಿಟ್ಟು ಹಳಿಯಲಾರಂಭಿಸಿದರೆ, ಗಂಡಸರು ಅಜ್ಜನನ್ನು ದಾರಿಯಲ್ಲಿ, ಮಸೀದಿಯಲ್ಲಿ ನಿಲ್ಲಿಸಿ ‘‘ಹೌದಾ ಕಾಕಾ, ನಿಮ್ಮ ಮಗಳನ್ನು ಕಾಲೇಜಿಗೆ ಕಳುಹಿಸುತ್ತೀರಂತೆ. ಯಾಕೆ ಕಾಕಾ ಇದೆಲ್ಲ. ಅವಳಿಗೆ ಬುದ್ಧಿ ಇಲ್ಲ, ನಿಮಗೆ ಬುದ್ಧಿ ಬೇಡವೇ. ಊರಿಗೆ ಬುದ್ಧಿ ಹೇಳುವ ನೀವೇ ಹೀಗೆ ಮಾಡಿದರೆ ಹೇಗೆ. ಇಬ್ಲೀಸನ ಸಂಚಿಗೆ ಬೀಳಬೇಡಿ’’ ಎಂದು ಭಾಷಣ ಬಿಗಿಯತೊಡಗಿದ್ದರು. ಕೊನೆಗೂ ನಿನ್ನಮ್ಮ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಅಜ್ಜ ಹೈರಾಣಾಗಿ ಬಿಟ್ಟಿದ್ದರು. ಅಜ್ಜಿಯ ಪಕ್ಕ ಮೌನವಾಗಿ ಕುಳಿತು ವಿಲ ವಿಲ ಒದ್ದಾಡತೊಡಗಿದ್ದರು.
ಒಂದು ದಿನ ಅಜ್ಜನಿಗೆ ಮಸೀದಿಯ ಅಧ್ಯಕ್ಷರಿಂದ ಕರೆ ಬಂತು. ಅಜ್ಜ ಮಸೀದಿಗೆ ಹೋದಾಗ ಅಲ್ಲಿ ಮಸೀದಿ ಕಮಿಟಿಯ ಸದಸ್ಯರೆಲ್ಲ ಸೇರಿದ್ದರಂತೆ. ಎಲ್ಲರೂ ಅಜ್ಜನಿಗೆ ಬುದ್ಧಿ ಹೇಳುವವರೇ. ಧರ್ಮ ಸೂಕ್ಷ್ಮಗಳ ಬಗ್ಗೆ ಬೋಧನೆ ಮಾಡುವವರೇ.. ಅಜ್ಜ ಎಲ್ಲರ ಮಾತನ್ನೂ ಕೇಳುತ್ತಾ ಕೆಪ್ಪನಂತೆ ಕುಳಿತು ಬಿಟ್ಟಿದ್ದರಂತೆ. ಕೊನೆಗೆ ಮಸೀದಿಯ ಗುರುಗಳು ಅಜ್ಜನನ್ನು ತನ್ನ ಕೋಣೆಗೆ ಕರೆಸಿಕೊಂಡು ‘‘ನೋಡಿ ಅಬ್ಬು ಕಾಕಾ. ಇದು ನಿಮ್ಮ ಮನೆಯ ವಿಷಯ. ಇಂತಹದ್ದರಲ್ಲೆಲ್ಲಾ ನಾನು ಮಧ್ಯೆ ತಲೆ ಹಾಕುವುದಿಲ್ಲ. ಆದರೂ ಒಂದು ಮಾತು ಹೇಳುತ್ತೇನೆ. ಇಡೀ ಊರನ್ನು ಎದುರು ಹಾಕಿಕೊಂಡು ನಿಮ್ಮ ಮಗಳಿಗೆ ಈ ಕಾಲೇಜು ಓದು ಬೇಕಾ? ಅವಳು ಇನ್ನು ಓದಿ ಏನಾಗಬೇಕಿದೆ. ಇಡೀ ಊರಿಗೆ ರಾಜನಂತೆ ಬಾಳಿದವರು ನೀವು. ಸುಮ್ಮನೆ ಯಾಕೆ ದಾರಿಯಲ್ಲಿ ಹೋಗುವ ಮಾರಿಯನ್ನು ಮನೆಯೊಳಗೆ ಕರೆತರುವುದು.’’

(ರವಿವಾರದ ಸಂಚಿಕೆಗೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News