ಪ್ರಶಸ್ತಿಯ ‘ಭೋಗ’

Update: 2016-11-05 18:35 GMT

 ಕರ್ನಾಟಕ ಏಕೀಕರಣವಾಗಿ ಅರವತ್ತೊಂದು ವರ್ಷಗಳಾದವು. ಈಗ ವಜ್ರಮಹೋತ್ಸವದ ಸಂಭ್ರಮ. ಕರ್ನಾಟಕ ಸರಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡಮಾಡುವುದನ್ನು ಶುರುಮಾಡಿ ಐವತ್ತು ವರ್ಷಗಳಾದವು. ಅದಕ್ಕೀಗ ಸುವರ್ಣ ಮಹೋತ್ಸವದ ಸಂಭ್ರಮ. ಈ ವರ್ಷದ ರಾಜ್ಯೋತ್ಸವ ಆಚರಣೆಗೆ ಇದಕ್ಕಿಂತ ಮಿಗಿಲಾದ ಸ್ಫೂರ್ತಿ ಸಡಗರಗಳು ಇನ್ನೇನು ಇದ್ದೀತು? ವರ್ಷಕ್ಕೊಮ್ಮೆ ಬಂದು ಹೋಗುವ ರಾಜ್ಯೋತ್ಸವದಂತಲ್ಲದೆ ಈ ವರ್ಷದ ರಾಜ್ಯೋತ್ಸವ ವಜ್ರಸುವರ್ಣಗಳ ಮೆರುಗಿನಿಂದ ಭರ್ಜರಿಯಾಗಿಯೇ ನಡೆಯಿತು. ಈ ಸಂದರ್ಭದಲ್ಲಿ ಕರ್ನಾಟಕ ಸರಕಾರ ಅರವತ್ತೊಂದು ಜನ ಪ್ರತಿಭಾವಂತರನ್ನು ಪ್ರಶಸ್ತಿ ನೀಡಿ ಗೌರವಿಸಿತು. ಅರವತ್ತೊಂದು ಎನ್ನುವುದು ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೂ ದೊಡ್ಡ ಸಂಖ್ಯೆಯೇ! ಆದರೇನು, ತಮಗೆ ಬರಲಿಲ್ಲ ಎಂದು ಅಲವತ್ತುಕೊಳ್ಳುವವರ ಸಂಖ್ಯೆ ಇದಕ್ಕೂ ನೂರುಪಟ್ಟು ಹೆಚ್ಚು ಇದ್ದೀತು. ಈ ಸಲದ ವಿಶೇಷವೆಂದರೆ, ಲೇಖಕರೊಬ್ಬರು ತಮಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿಸುವಂತೆ ನ್ಯಾಯಾಲಯದ ಮೊರೆಹೊಕ್ಕಿದ್ದು. ಪ್ರಶಸ್ತಿ ನೀಡಲು ಮಾನದಂಡಗಳೇನು ಎಂದು ಕೇಳಿ ತಿಳಿದ ರಾಜ್ಯ ಹೈಕೋರ್ಟ್, ಪ್ರಕಟನೆಗೆ ಮುನ್ನ ಪ್ರಶಸ್ತಿ ವಿಜೇತರ ಪಟ್ಟಿಯನ್ನು ತನ್ನ ಗಮನಕ್ಕೆ ತರುವಂತೆ ಆದೇಶಿಸಿತು. ಸರಕಾರ ಮುಚ್ಚಿದ ಲಕೊಟೆಯಲ್ಲಿ ಈ ವರ್ಷದ ತನ್ನ ಆಯ್ಕೆಯನ್ನು ನ್ಯಾಯಾಧೀಶರ ಅವಗಾಹನೆಗೆ ಒಪ್ಪಿಸಿತು. ನ್ಯಾಯಾಧೀಶರು ನೋಡಿದರು. ನಂತರ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟವಾಯಿತು. ನ್ಯಾಯಾಲಯದ ಮೂಗಿನಡಿಯಲ್ಲೇ ಈ ಸಲದ ಆಯ್ಕೆ ನಡೆದಿರುವುದರಿಂದ ಅತೃಪ್ತಿ-ಅಸಮಾಧಾನಗಳಿರಲಿಕ್ಕಿಲ್ಲ ಎಂದು ಭಾವಿಸಬಹುದು. ಇನ್ನು ಕೆಲವರು ನ್ಯಾಯಾಲಯದ ಪರಾಮರ್ಶೆಯಿಂದ ಪಾರಾದುದಕ್ಕೆ ನಿರಾಳದ ನಿಟ್ಟುಸಿರು ಬಿಟ್ಟಿರಲಿಕ್ಕೂ ಸಾಕು.
ಹೀಗಾಗಿ, ಈ ಸಲದ ಆಯ್ಕೆ ಬಗ್ಗೆ ಅತೃಪ್ತಿ-ಅಸಮಾಧಾನಗಳ ಬಹಿರಂಗ ಅಭಿವ್ಯಕ್ತಿ ಇರಲಿಕ್ಕಿಲ್ಲ. ಗೋಪ್ಯ ಗೋಳಾಟಗಳ ಬಗ್ಗೆ ತಲೆಕೆಡಿಸಿಕೊಳ್ಳದಿರುವುದೇ ಉತ್ತಮ. ಆದರೆ ಇಲ್ಲೊಂದು ನೈತಿಕ ಪ್ರಶ್ನೆ ಉದ್ಭವಿಸುತ್ತದೆ. ನಾಡುನುಡಿಗಳ ಸೇವೆ, ಸಾಧನೆಗಳಿಗೆ ಮಾನ್ಯತೆಯ ಪ್ರತೀಕವಾಗಿ ನೀಡಲಾಗುವ ಪ್ರಶಸ್ತಿಗಳನ್ನು ಹಕ್ಕೊತ್ತಾಯವಾಗಿ ಕೇಳಬಹುದೇ?
ಜುಲೈ-ಆಗಸ್ಟ್ ತಿಂಗಳುಗಳಿಂದಲೇ ರಾಜ್ಯೋತ್ಸವ ಪ್ರಶಸ್ತಿಯ ಜ್ವರ ಶುರುವಾಗುತ್ತದೆ. ಆಕಾಂಕ್ಷಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅರ್ಜಿಗಳನ್ನು ಸಲ್ಲಿಸುತ್ತಾರೆ, ಅಕಾಡಮಿಗಳಿಗೆ ದುಂಬಾಲು ಬೀಳುತ್ತಾರೆ, ತಮ್ಮ ಸಾಧನೆಗಳ ದಫ್ತರನ್ನು ಸಿದ್ಧಪಡಿಸಿ ಅದನ್ನು ಸಚಿವರು/ಶಾಸಕರುಗಳ ಕೈಯ್ಯಲ್ಲಿರಿಸಿ ಪ್ರಶಸ್ತಿಗೆ ತಾವೆಷ್ಟು ಯೋಗ್ಯರೆಂದು ಸ್ವಯಂಸೇವೆಯ ಗಿಳಿಗಳಾಗುತ್ತಾರೆ. ತಮ್ಮ ಜಿಲ್ಲೆ, ಜಾತಿಗಳ ಪ್ರವರಗಳನ್ನು ಹೇಳಿ ತಮ್ಮ ಯೋಗ್ಯತೆ-ಅರ್ಹತೆಗಳನ್ನು ಮತ್ತಷ್ಟು ಸಾಬೀತುಗೊಳಿಸುವ ಪ್ರಯತ್ನ ಮಾಡುತ್ತಾರೆ. ಶಿಫಾರಸುಗಳನ್ನು ಮಾಡಿಸುತ್ತಾರೆ. ಪ್ರಶಸ್ತಿ ಪ್ರಕಟವಾಗುವವರೆಗೂ ಈ ಕಸರತ್ತುಗಳು ನಡೆದೇ ಇರುತ್ತವೆ. ಏನಕೇನ ಪ್ರಶಸ್ತಿ ಪಡೆಯಲೇಬೇಕೆಂಬ ನಿರ್ಲಜ್ಜ ಮನಸ್ಸುಗಳ ಇಂಥ ಹರಸಾಹಸಗಳಿಂದಾಗಿ ಸಮಿತಿ ಅಥವಾ ಸಂಸ್ಕೃತಿ ಇಲಾಖೆ ಮಾಡಿದ ಶಿಫಾರಸುಗಳು ಮೂಲೆಗುಂಪಾಗಿ ಕೊನೆಗಳಿಗೆಯಲ್ಲಿ ಅನರ್ಹರ ಅನಿರೀಕ್ಷಿತ ಹೆಸರುಗಳು ಜಯಿಸುವುದೂ ಉಂಟು. ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಪತ್ರಕರ್ತರೊಬ್ಬರು ‘‘ಪ್ರಶಸ್ತಿಯಿಲ್ಲದೆ ಜಾಗಬಿಟ್ಟು ಕದಲೆ’’ ಎಂದು ಮುಖ್ಯಮಂತ್ರಿಗಳ ಕಚೇರಿ ಎದುರು ಧರಣಿ ನಡೆಸಿದ್ದರಿಂದಾಗಿ ಸಹಿಯಾಗಿದ್ದ ಅಧಿಕೃತ ಪ್ರಕಟನೆಯನ್ನು ತಡೆಹಿಡಿದು ಆ ಮಹಾನುಭಾವರ ಹೆಸರು ಸೇರಿಸಿ ಪ್ರಶಸ್ತಿ ಪ್ರಕಟಿಸಿದ ಪ್ರಸಂಗ ಈ ಅಂಕಣಕಾರನ ನೆನಪಿನಲ್ಲಿ ಇನ್ನೂ ಹಸಿರಾಗಿದೆ. ಇದೊಂದು ಉದಾಹರಣೆಯಷ್ಟೆ. ಮುಖ್ಯ ಮಂತ್ರಿಗಳ ಕಚೇರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ತಡವಿದರೆ ಇಂಥ ಉದಾಹರಣೆಗಳು ಹಲವಾರು ಸಿಕ್ಕಾವು. ಪ್ರಶಸ್ತಿಗಾಗಿ ನಡೆಸುವ ಈ ಪರದಾಟಗಳನ್ನು ಕಂಡಾಗ ಕೆಲವೊಮ್ಮೆ ಅಂಥವರ ಬಗ್ಗೆ ಕನಿಕರ ಉಂಟಾಗುತ್ತದೆ. ಇನ್ನು ಕೆಲವೊಮ್ಮೆ ಪ್ರಶಸ್ತಿಯ ಮಾನದಂಡಗಳೇ ಸರಿಯಿಲ್ಲದಿರಬಹುದೇ ಎಂಬ ಗುಮಾನಿಯೂ ಉಂಟಾಗುತ್ತದೆ. ಸೆಪ್ಟಂಬರ್ ಮಧ್ಯಭಾಗವಿರಬೇಕು, ನನಗೆ ಪರಿಚಯಸ್ಥರಾದ ರಂಗಭೂಮಿ ಕಲಾವಿದರೊಬ್ಬರ ಭೇಟಿಯಾಯಿತು. ಕಂಡವರೇ ಕೈಹಿಡಿದು ನಿಲ್ಲಿಸಿ, ‘‘ಸರ್, ನಿಮ್ಮಿಂದ ಸ್ವಲ್ಪ ಸಲಹೆಬೇಕು ಎಂದರು. ನಾನು ಹುಬ್ಬೇರಿಸಿದೆ. ಅವರು ಮಾತು ಮುಂದುವರಿಸಿದರು-ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ನಾನು ಅರ್ಜಿ ಹಾಕಬೇಕೆಂದಿರುವೆ. ನೀವೇನನ್ನುವಿರಿ? ನನಗೆ.....ಈ ಸಚಿವರು ಚೆನ್ನಾಗಿ ಗೊತ್ತು. ಅವರಿಗೆ ನನ್ನ ಸಾಧನೆಯ ಪರಿಚಯವಿದೆ. ಅವರು ನನ್ನ ಅರ್ಜಿಯ ಮೇಲೆ ಒಂದು ಷರಾ ಬರೆದರೆ ಸಾಕು ಪ್ರಶಸ್ತಿ ಗ್ಯಾರಂಟಿ...ಏನಂತೀರಿ?’’ ನಾನು ಅನ್ನ್ನುವುದು ಏನೂ ಉಳಿದಿರಲಿಲ್ಲ. ‘‘ಪ್ರಶಸ್ತಿ ಪಡೆದುಕೊಳ್ಳಲು ನೀವು ಈಗಾಗಲೇ ಮನಸ್ಸು ಮಾಡಿರುವುದರಿಂದ ನಾನು ಹೇಳುವುದು ಏನೂ ಇಲ್ಲ.’’
‘‘ಹಾಗಲ್ಲ. ಈ ಮಾರ್ಗ ಸರಿಯೇ?’’
‘‘ನೋಡಿ ಆತ್ಮಗೌರವ ಉಳ್ಳವರು ಯಾರೂ ಪ್ರಶಸ್ತಿ ಪುರಸ್ಕಾರಗಳಿಗೆ ಹೀಗೆ ಕೈ ಒಡ್ಡಿ ಬೇಡಬಾರದು...’’
‘‘ಹಾಗಂತಾನೆ ಇಷ್ಟು ವರ್ಷ ಸುಮ್ಮನಿದ್ದೆ...’’
-ಈ ಮಿತ್ರರು ರಂಗಭೂಮಿಯಲ್ಲಿ ಕೆಲಸಮಾಡಿರುವುದಷ್ಟೇ ಅಲ್ಲದೆ ಬರವಣಿಗೆಯನ್ನೂ ರೂಢಿಸಿಕೊಂಡು ಹಲವಾರು ಕೃತಿಗಳನ್ನೂ ರಚಿಸಿದ್ದಾರೆ. ಸದಭಿರುಚಿಯುಳ್ಳವರು. ಗುಣವಂತ. ಹಿಂದುಳಿದ ವರ್ಗಕ್ಕೆ ಸೇರಿದವರು. ಅವರ ಆಸೆ ತಪ್ಪೇನಲ್ಲ. ಇಲ್ಲಿಯ ತನಕ ಕಾದೆ, ತಾನಾಗಿ ಮನ್ನಣೆ ಬರಲಿಲ್ಲ ಎಂಬ ಅತೃಪ್ತಿಯೂ ಅವರ ಮಾತಿನಲ್ಲಿ ಸುಳಿದಿದೆ. ತಮ್ಮ ತುತ್ತೂರಿ ತಾವೇ ಊದಿಕೊಳ್ಳದೆ ಈ ವ್ಯವಸ್ಥೆಯಲ್ಲಿ ಏನೂ ಆಗದು ಎಂದು ಅನಿಸಿರಲೂಬಹುದು. ತಮ್ಮ ಸಾಧನೆಯನ್ನು ತಾವೇ ಕೊಚ್ಚಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ ಎನ್ನುವುದು ಇತ್ತೀಚಿನ ಮನೋಧರ್ಮ. ಕಲೆ, ಸಾಹಿತ್ಯ ಇತ್ಯಾದಿಗಳು ಪ್ರಕೃತಿಯ, ಬದುಕಿನ ರೀತಿನೀತಿಗಳಿಗೆ ಸಂವೇದನಾಶೀಲರ ಪ್ರತಿಕ್ರಿಯೆಯಷ್ಟೆ. ಇಂಥ ಅನಿಸಿಕೆ, ಪ್ರತಿಕ್ರಿಯೆಗಳ ಅಭಿವ್ಯಕ್ತಿಗೆ ಸಂವೇದನಾಶೀಲ ಪ್ರತಿಭೆ ತನ್ನದೇ ಆದ ಮಾರ್ಗವನ್ನು ಸ್ವಯಂಸ್ಫೂರ್ತಿಯಿಂದ ಕಂಡುಕೊಳ್ಳುತ್ತದೆ. ಇದು ಅನ್ಯರ ಉಮೇದಿನಿಂದಾಗಲೀ ನಿಯೋಜನೆ/ಪ್ರಾಯೋಜಕತೆಗಳಿಂದಾಗಲೀ ಸೃಷ್ಟಿಯಾಗುವಂಥದಲ್ಲ. ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡು ಎನ್ನುತ್ತಾನೆ ಕೃಷ್ಣ ಪರಮಾತ್ಮ. ಅಂಥ, ಫಲಾಪೇಕ್ಷೆಯಿಲ್ಲದೆ ಮಾಡಬೇಕಾದಂಥ ಕೆಲಸವಿದು. ಈ ಬಗೆಯ ಆತ್ಮಾಭಿವ್ಯಕ್ತಿಗೆ ಸಾಧನೆಯ ಮೆರುಗು ಕೊಟ್ಟು ಪ್ರಶಸ್ತಿ ಸಿಗಲೇಬೇಕೆಂದು ಹಕ್ಕೊತ್ತಾಯ ಮಾಡುವುದು ಸರಿಯೇ? ಇಂಥ ಕೆಲಸ ಸಮಾಜಕ್ಕೆ ಉಪಯುಕ್ತವಾದರೆ, ಸಮಾಜದ ಮೆಚ್ಚುಗೆ ಪಡೆದರೆ ಅದೇ ದೊಡ್ಡ ಪ್ರಶಸ್ತಿಯಲ್ಲವೇ? ಇದು ಆದರ್ಶದ ಮಾತಾಯಿತು. ಯಾರು ಕೇಳುತ್ತಾರೆ? ಇದನ್ನೆಲ್ಲ ಕೇಳುವ ಸ್ಥಿತಿಯಲ್ಲಿಲ್ಲ ನಮ್ಮ ಮಿತ್ರರು. ಅವರು ಪ್ರಶಸ್ತಿ ಪಡೆಯಲೇಬೇಕೆಂದು ಈಗಾಗಲೇ ಮನಸ್ಸು ಮಾಡಿಯಾಗಿದೆ. ಈ ಮಾತು ಹೇಳುವಾಗ ನನಗೆ ಇತ್ತೀಚೆಗಷ್ಟೆ ನಿಧನರಾದ (ನಿನ್ನೆಯಷ್ಟೇ ಅವರ ವೈಕುಂಠ ಸಮಾರಾಧನೆ ನಡೆಯಿತು) ಎಂ.ಬಿ. ಸಿಂಗ್ ಅವರ ನೆನಪಾಗುತ್ತಿದೆ. ಕನ್ನಡ ನಿಯತಕಾಲಿಕ ಪತ್ರಿಕೋದ್ಯಮವನ್ನು ಇಪ್ಪತ್ತೊಂದನೆಯ ಶತಮಾನದ ಸವಾಲುಗಳನ್ನೆದುರಿಸುವಷ್ಟು ಪ್ರಬುದ್ಧವಾಗಿ ಬೆಳೆಸಿದ ಕೀರ್ತಿ ಇಬ್ಬರು ಪತ್ರಕರ್ತ ಮಹನೀಯರಿಗೆ ಸಲ್ಲಬೇಕು. ಅವರು, ‘ಪಾವೆಂ’ಎಂದೇ ಪ್ರಸಿದ್ಧರಾದ ಪಾಡಿಗಾರು ವೆಂಕಟರಮಣಾಚಾರ್ಯರು ಮತ್ತು ‘ಸಿಂಗ್’ಎಂದೇ ಚಿರಪರಿಚಿತರಾದ ಮದನ್ ಸಿಂಗ್ ಭುವನ್ ಸಿಂಗ್.ಸ್ವಾತಂತ್ರ್ಯಪೂರ್ವದಲ್ಲಿ ರಾಜಕೀಯ-ಯುದ್ಧ, ರಮ್ಯ ಕಥಾಸಾಹಿತ್ಯ ವಿಷಯಪ್ರಧಾನವಾಗಿದ್ದು, ನಂತರ ಕೇವಲ ಮನರಂಜನೆಗಷ್ಟೇ ತನ್ನನ್ನು ಬದ್ಧಗೊಳಿಸಿಕೊಂಡಿದ್ದ ಕನ್ನಡ ನಿಯತಕಾಲಿಕ ಪತ್ರಿಕೋದ್ಯಮಕ್ಕೆ ಹೊಸ ದಿಗಂತ ಹಚ್ಚಿದ ಕೀರ್ತಿ ಇವರಿಬ್ಬರಿಗೆ ಸಲ್ಲಬೇಕು. ಜ್ಞಾನಪ್ರಸಾರದ ಜೊತೆಗೆ ಆಧುನಿಕ ಸಾಹಿತ್ಯ-ವಿಜ್ಞಾನ- ತಂತ್ರಜ್ಞಾನ-ಕ್ರೀಡೆ-ಪರಿಸರ ಮೊದಲಾದ ಆಯಾಮಗಳನ್ನು ಜೋಡಿಸಿ ಓದುಗರಲ್ಲಿ ಸದಭಿರುಚಿಯನ್ನೂ ಜ್ಞಾನದಾಹವನ್ನು ಹೆಚ್ಚಿಸಿ ಕನ್ನಡ ವಾರ ಪತ್ರಿಕೆ ಮತು ಮಾಸ ಪತ್ರಿಕೆಗಳ ಪ್ರಸರಣವನ್ನು ಪ್ರಪ್ರಥಮವಾಗಿ ಲಕ್ಷದ ನಕ್ಷೆ ದಾಟಿಸಿದವರು ಸಿಂಗ್. ಅವರಿಗೆ ದೊರೆತಷ್ಟು ಸಾಂಸ್ಥಿಕ ಮತ್ತು ಆಧುನಿಕ ಮುದ್ರಣ ತಂತ್ರಜ್ಞಾನದ ಬೆಂಬಲ ಪಾವೆಂ ಅವರಿಗೆ ದೊರೆಯಲಿಲ್ಲವಾದರೂ ತಮ್ಮ ಇತಿಮಿತಿಯೊಳಗೇ ಅವರು ಕನ್ನಡಕ್ಕೊಂದು ‘ಡೈಜೆಸ್ಟ್’ ಕೊಟ್ಟು ನಿಯತಕಾಲಿಕ ಪತ್ರಿಕೋದ್ಯಮದಲ್ಲಿ ಹೊಸ ಹೆಜ್ಜೆಗಳನ್ನು ಮೂಡಿಸಿದರು. ಪಾವೆಂ ಅವರಿಗೆ ಸರಕಾರದ ಯಾವ ಪ್ರಶಸ್ತಿಯೂ ಲಭಿಸಲಿಲ್ಲ. ಗೋಯಂಕ ಪತ್ರಿಕೋದ್ಯಮ ಪ್ರಶಸ್ತಿ ದೊರೆಕಿತ್ತು(ಅದೂ ಅನಂತ ಮೂರ್ತಿ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದುದರಿಂದಾಗಿ).ಇನ್ನು ತಮ್ಮ ಪ್ರಯೋಗಶೀಲತೆಯಿಂದಾಗಿ ಹಲವಾರು ಹೊಸತುಗಳಿಗೆ ನಾಂದಿ ಹಾಡಿ ಕನ್ನಡ ನಿಯತ ಪತ್ರಿಕೋದ್ಯಮ ವ್ಯವಸಾಯದಲ್ಲಿ ಗಂಧತೇಯ್ದ ಭುವನ ಸಿಂಗರಿಗೆ, ಭುವನದ ಭಾಗ್ಯ ದಕ್ಕಿದ್ದು ಅಷ್ಟಕಷ್ಟೆಯೇ. ಎರಡು ಮೂರು ಪ್ರಶಸ್ತಿಯ ಗರಿಗಳು. ಸರಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲು 1996ರಲ್ಲಿ ಮುಂದಾಯಿತು. ಎಂ.ಬಿ.ಸಿಂಗ್ ‘ನಾ ಒಲ್ಲೆ’ ಎಂದರು ಎಂಬ ಸಂಗತಿ ಪ್ರಶಸ್ತಿಗಳ ಬೆನ್ನುಹತ್ತಿರುವ ಇಂದಿನ ಕಾಲಮಾನದಲ್ಲಿ ಆಶ್ಚರ್ಯವುಂಟುಮಾಡಬಹುದು. ಸರಕಾರ ಒಪ್ಪಿಗೆ ಕೇಳಿದಾಗ ಅವರೇ ಕೊಟ್ಟಿರುವ ಕಾರಣ ಹೀಗಿದೆ:
‘‘ನೀವು ದೊಡ್ಡ ಪತ್ರಿಕೆಯವರಿಗೆ ಮಾತ್ರ ಪ್ರಶಸ್ತಿಕೊಡುತ್ತೀರಿ. ಸಣ್ಣ ಪತ್ರಿಕೆಯವರನ್ನು ಗಮನಿಸುವುದಿಲ್ಲ. ಇದು ಸರಿಯಲ್ಲ. ಅವರಿಗೂ ಗೌರವ ಸಂದಾಯವಾಗಬೇಕೆಂದು ನಾನು ಸಲಹೆ ಮಾಡಿದ್ದೇನೆ. ಆ ಸಲಹೆಯನ್ನು ನೀವು ಮಾನ್ಯಮಾಡಿಲ್ಲ. ಈ ತಾರತಮ್ಯ ನನಗೆ ಸರಿಕಾಣುವುದಿಲ್ಲ. ಆದ್ದರಿಂದ ನಾನು ನಿಮ್ಮ ಪ್ರಶಸ್ತಿಯನ್ನು ಸ್ವೀಕರಿಸಲಾರೆ’’
ಸಣ್ಣ ಪತ್ರಿಕೆಗಳ ಅಭಿವೃದ್ಧಿ ಕುರಿತು ಅಧ್ಯಯನ ಮಾಡಲು ಸರಕಾರ ಎಂ.ಬಿ.ಸಿಂಗ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಅವರ ಶಿಫಾರಸುಗಳಲ್ಲಿ ಸಣ್ಣ ಪತ್ರಿಕೆಗಳಲ್ಲಿ ದುಡಿಯುವ ಪತ್ರಕರ್ತರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿಕೆಯೂ ಒಂದಾಗಿತ್ತು. ಸರಕಾರ ಏಕೋ ಏನೋ ಇದನ್ನು ಮಾನ್ಯ ಮಾಡಿರಲಿಲ್ಲ. ಎಂದೇ ಸಿಂಗ್ ಮುನಿಸಿಕೊಂಡು ತಮಗೆ ಬಂದ ಪ್ರಶಸ್ತಿ ತಿರಸ್ಕರಿಸಿದ್ದರು. ಸಿಂಗ್ ಅವರ ನಿಲುವನ್ನು ಮೆಚ್ಚಿಕೊಂಡು ಹಾ.ಮಾ.ನಾಯಕರು ತಮ್ಮ ಅಂಕಣದಲ್ಲಿ ಬರೆದರು. ತಮ್ಮ ಪತ್ರಿಕೆಯಲ್ಲಿ ತಮ್ಮನ್ನು ಮೆರೆ‰ಕೊಳ್ಳುವುದು ಅನೀತಿಯಾಗುತ್ತದೆ ಎಂದು ಸಂಪಾದಕರಾಗಿದ್ದ ಸಿಂಗ್ ಈ ಲೇಖನದ ಪ್ರಕಟನೆಗೆ ಒಪ್ಪಲಿಲ್ಲ. ಕೊನೆಗೆ ಆಗ ಸಾಪ್ತಾಹಿಕ ಪುರವಣಿಯ ಸಂಪಾದಕನಾಗಿದ್ದ ಈ ಅಂಕಣಕಾರ ಸಿಂಗ್ ಅವರ ಹೆಸರನ್ನು ತೆಗೆದು ಲೇಖನ ಪ್ರಕಟಿಸಬೇಕಾಯಿತು, ಕನ್ನಡಿಗರನ್ನು ಮಾಹಿತಿಯಿಂದ ವಂಚಿಸದಿರಲು. ಸರಕಾರ ಮಣಿಯಿತು. ಸಣ್ಣಪತ್ರಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರೂ ರಾಜ್ಯೋತ್ಸವ ಪ್ರಶಸ್ತಿ ವ್ಯಾಪ್ತಿಗೆ ಬಂದರು. 1998ರಲ್ಲಿ ಸಿಂಗ್ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದರು.
 ಪ್ರಶಸ್ತಿ ನೀಡಿಕೆಗೆ ಸರಿಯಾದ ಮಾನದಂಡಗಳಿಲ್ಲ, ಅಪಾತ್ರರಿಗೆಲ್ಲ ಕೊಡಲಾಗು ತ್ತಿದೆ ಎಂಬ ಕೂಗಿನಲ್ಲಿ ಹೊಸದೇನೂ ಇಲ್ಲ. ಕೇಂದ್ರ ಸರಕಾರ ನೀಡುವ ಪದ್ಮ ಪ್ರಶಸ್ತಿಗಳ ಬಗ್ಗೆಯೂ ಇಂಥದೇ ಆರೋಪಮಾಡಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದೂ ಉಂಟು. ಕರ್ನಾಟಕ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದಂತೆ, ಸರ್ವೋಚ್ಚ ನ್ಯಾಯಾಲಯವೂ ಕೇಂದ್ರ ಸರಕಾರಕ್ಕೆ ಸೂಕ್ತ ಮಾನದಂಡಗಳನ್ನು ರೂಪಿಸುವಂತೆ ತಿಳಿಸಿತ್ತು. ಈ ಮಾನದಂಡಗಳೂ ದೋಷಮುಕ್ತವಾಗಿರುತ್ತವೆ, ಆರೋಪಮುಕ್ತವಾಗಿರುತ್ತವೆ ಎಂದು ಖಾತ್ರಿಯಾಗಿ ಹೇಳಲಾಗದು. ಕೆಲವೊಂದು ಮಾನದಂಡಗಳ ಆಧಾರದ ಮೇಲೆ ಪ್ರಶಸ್ತಿಗೆ ಆಯ್ಕೆ ಮಾಡಲು ಸಮಿತಿಯೊಂದನ್ನು ನೇಮಿಸಲಾಗುತ್ತದೆ. ಈ ಸಮಿತಿಯ ಸದಸ್ಯರು ಎಷ್ಟೇ ವಸ್ತುನಿಷ್ಠರಾಗಿದ್ದರೂ ಅವರೂ ಕೇವಲ ಮನುಷ್ಯರೇ. ಆದ್ದರಿಂದ ಪೂರ್ವಾಗ್ರಹಗಳಿಂದ ಮುಕ್ತರು ಎಂದು ಸಾರಾಸಗಟಾಗಿ ಹೇಳಲು ಬರುವುದಿಲ್ಲ. ಅಂತೆಯೇ ಆಕಾಂಕ್ಷಿಗಳಿಗೆ ತಮಗೆ ಬರದಿದ್ದಾಗ ಪಡೆದವರೆಲ್ಲ ಅಪಾತ್ರರಾಗೇ ಕಾಣುತ್ತಾರೆ. ಇವೆಲ್ಲ ಅರಸೊತ್ತಿಗೆಯ ಆಸ್ಥಾನ ವಿದ್ವಾಂಸ ಗೌರವದ ದಿನಗಳಿಂದ ಹಿಡಿದು ಪ್ರಜಾಸತ್ತೆಯ ಇಂದಿನ ದಿನಗಳಲ್ಲೂ ಇದ್ದದ್ದೇ. ಇಂಥ ದೂರು ದುಮ್ಮಾನಗಳು ಇದ್ದೇ ಇವೆ. ಅರ್ಹತೆ-ಯೋಗ್ಯತೆಗಳಿದ್ದೂ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗದೇ ಆಗಿಹೋದ ಸಾಹಿತಿ-ಕಲಾವಿದರು-ಸಾಧಕರು ಎಷ್ಟೋ ಮಂದಿ! ಈ ಯಾವ ಮಾನ್ಯತೆ ಸಿಗದಿದ್ದರೂ ಚರಿತ್ರೆ ಯಲ್ಲಿ ಇದ್ದಾರೆ. ಅನಂತ ಮೂರ್ತಿಯವರೆಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಿಗಲೇ ಇಲ್ಲ. ನಿತ್ಯೋತ್ಸವದ ಕವಿ ನಿಸಾರ್ ಅಹ್ಮದ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಭಾಗ್ಯ ಇನ್ನೂ ಬಂದಿಲ್ಲ. ಹೀಗೆ ನಮ್ಮ ಸಮಕಾಲೀನರಲ್ಲೇ ಪಡೆಯದ ಮಂದಿಯ ಯಾದಿ ಬೆಳೆಸಬಹುದು. ಇದರಿಂದಾಗಿ ಈ ಮಹನೀಯರ ಸಾಧನೆ ಕೊಡುಗೆಗಳ ಕಿಮ್ಮತ್ತೇನೂ ಕಡಿಮೆ ಯಾಗಿಲ್ಲ, ಘನತೆ ಗೌರವಗಳಿಗೆ ಕುಂದಾಗಿಲ್ಲ. ಜನಮಾನಸದಲ್ಲಿ ಅವರಿಗೆ ಪ್ರೀತಿ ಗೌರವ ಮೆಚ್ಚುಗೆಗಳ ಅತ್ಯುಚ್ಚ ಪ್ರಶಸ್ತಿ ಸಂದಿದೆ. ದಾನ ಮಾಡುವಾಗ ಪಾತ್ರರನ್ನು ನೋಡಿ ದಾನ ಮಾಡಬೇಕು ಎನ್ನುವುದು ಆರ್ಷೇಯ ಉಕ್ತಿ. ಇದು ಏಕಮುಖಿಯಾಗಬಾರದು. ಸ್ವೀಕರಿಸುವವರೂ ಕೊಡುವವರು ಎಷ್ಟರಮಟ್ಟಿಗೆ ನಿರ್ಮಲ ಹೃದಯ-ಶುದ್ಧ ಹಸ್ತಗಳನ್ನು ಹೊಂದಿದ್ದು ಕೊಡಲು ಪಾತ್ರರಾಗಿದ್ದಾರೆ ಎಂದೂ ಪರಾಮರ್ಶಿಸಬೇಕು.ಅವರು ಅಪಾತ್ರರಾಗಿದ್ದಲ್ಲಿ ಅವರ ಪಾಪಕಾರ್ಯಗಳಲ್ಲಿ ತೆಗೆದುಕೊಂಡವರೂ ಭಾಗಿಯಾದಂತಲ್ಲವೇ ಎನ್ನುವ ನೈತಿಕ ಪ್ರಶ್ನೆಯನ್ನು ಗಮನಿಸಬೇಕು. ತುರ್ತು ಪರಿಸ್ಥಿತಿಯ ಘೋರ ಅಪರಾಧದ ಕಳಂಕ ಮೆತ್ತಿಸಿಕೊಳ್ಳಲು ಇಷ್ಟಪಡದ ಶಿವರಾಮ ಕಾರಂತರು ಪದ್ಮಭೂಷಣ ಹಿಂದಿರುಗಿಸಿದ್ದರು. ಕಳೆದ ವರ್ಷ ಅನೇಕ ಮಂದಿ ಸಾಹಿತಿ ಕಲಾವಿದರು ಅಸಹಿಷ್ಣುತೆಯ ವಾತಾವರಣವನ್ನು ಪ್ರಚೋದಿಸಲಾಗುತ್ತಿದೆ ಎಂಬ ಕಾರಣದಿಂದ ಪ್ರತಿಭಟಿಸಿ ಪ್ರಶಸ್ತಿಗಳನ್ನು ಹಿಂದಿರುಗಿಸಿದ ನಿದರ್ಶನ ಇನ್ನೂ ಹಸಿರಾಗಿದೆ. ಹಣ ಮತ್ತು ಅಧಿಕಾರಬಲವುಳ್ಳ ಯಾವುದೇ ವ್ಯವಸ್ಥೆ ದೋಷಮುಕ್ತವಾಗಿ ಅಪರಂಜಿ ಚಿನ್ನವಾಗಿರುತ್ತದೆ ಎಂದು ಹೇಳಲಾಗದು. ಇಂಥ ವ್ಯವಸ್ಥೆಯ ಪಾಪಭಾರಗಳು-ಮುಲಾಜುಗಳು ತನಗೆ ಬೇಡವೇ ಬೇಡ ಎಂದು ಯಾವುದೇ ಆಸೆ ಆಕಾಂಕ್ಷೆಗಳಿಲ್ಲದೆ ಅವಧೂತನಂತೆ ತೋರುತ್ತಿದ್ದ ಫ್ರೆಂಚ್ ಸಾಹಿತಿ ಜೀನ್‌ಪಾಲ್ ಸಾರ್ತ್‌ೃ ನೊಬೆಲ್ ಪ್ರಶಸ್ತಿ ನಿರಾಕರಿಸಿದ(1964). ನೊಬೆಲ್ ಪ್ರಶಸ್ತಿಯ ಇತಿಹಾಸದಲ್ಲೇ ಅದನ್ನು ನಿರಾಕರಿಸಿದವನು ಪ್ರಾಯಶ: ಸಾರ್ತ್‌ೃ ಒಬ್ಬನೆ. ನಮ್ಮ ಡಿವಿಜಿ ಸ್ವಂತ ಭೋಗಕ್ಕೆ ಒಂದನ್ನೂ ಇಟ್ಟುಕೊಳ್ಳದೆ ಬಂದ ಪ್ರಶಸ್ತಿ ಪುರಸ್ಕಾರಗಳೆಲ್ಲವನ್ನೂ ಗೋಖಲೆ ಸಾರ್ವಜನಿಕ ಸಂಸ್ಥೆಗೆ ಧಾರೆ ಎರೆದರು. ಇಂಥ ಆದರ್ಶಪ್ರಾಯರಾದ ಮಹನೀಯರು ಇನ್ನಷ್ಟು ಮಂದಿ ಇಲ್ಲದೇ ಇಲ್ಲ. ‘‘ಸಾಹಿತ್ಯ ‘ಭೋಗ’ವಾಗದೆ ‘ಯೋಗ’ವಾಗಬೇಕು’’ ಎನ್ನುತ್ತಾರೆ ಕೆ.ವಿ.ಸುಬ್ಬಣ್ಣ. ಹೌದು, ಕಲೆ, ಸಾಹಿತ್ಯ ಇತ್ಯಾದಿಗಳನ್ನು ನಿಷ್ಕಾಮ ಕರ್ಮ‘ಯೋಗ’ವೆಂದು ತಿಳಿದು, ನಮ್ಮ ಸೃಜನಶೀಲರು ಪ್ರಶಸ್ತಿ ಪುರಸ್ಕಾರಗಳ ‘ಭೋಗ’ಕ್ಕಾಗಿ ತಹತಹಿಸದೆ ‘ಯೋಗ’ನಿಷ್ಠರಾಗಿ ಪ್ರಬುದ್ಧತೆಯನ್ನು ಮೆರೆದಲ್ಲಿ ಸಾರ್ವಜನಿಕ ಮುಜುಗರವಾದರೂ ತಪ್ಪೀತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News