ನಿನಗೆ ಯಾರು ಹೆಚ್ಚು ಸುಖ ಕೊಟ್ಟಿದ್ದು ಎಂದು ಸಂತ್ರಸ್ತೆಯನ್ನು ಕೇಳಿದ್ದ ಇನ್‌ಸ್ಪೆಕ್ಟರ್ ಅಮಾನತು

Update: 2016-11-07 17:39 GMT

ತಿರುವನಂತಪುರ,ನ.7: ನಾಲ್ವರ ಪೈಕಿ ನಿನಗೆ ಹೆಚ್ಚು ಸುಖ ನೀಡಿದ್ದು ಯಾರು ಎಂದು ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯನ್ನು ಪ್ರಶ್ನಿಸಿದ್ದ ತ್ರಿಶೂರು ಜಿಲ್ಲೆಯ ಪೇರಮಂಗಲಂ ಪೊಲೀಸ್ ಠಾಣೆಯ ವಿಕೃತ ಮನಸ್ಸಿನ ಇನ್‌ಸ್ಪೆಕ್ಟರ್ ಎಂ.ವಿ.ಮಣಿಕಂಠನ್‌ರನ್ನು ಸೋಮವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ.
 ತ್ರಿಶೂರಿನ 32ರ ಹರೆಯದ ಸಂತ್ರಸ್ತೆ ತನ್ನ ಪತಿಯೊಂದಿಗೆ ಸಾಮೂಹಿಕ ಅತ್ಯಾಚಾರದ ಬಗ್ಗ ದೂರು ದಾಖಲಿಸಲು ಠಾಣೆಗೆ ಬಂದಿದ್ದಾಗ ಅತ್ಯಾಚಾರ ಆರೋಪಿಗಳ ಎದುರಿನಲ್ಲೇ ಈ ಅಸಭ್ಯ ಪ್ರಶ್ನೆಯನ್ನು ಕೇಳುವ ಮೂಲಕ ಮಣಿಕಂಠನ್ ತನ್ನ ಮೃಗೀಯತೆಯನ್ನು ಮೆರೆದಿದ್ದರು. ತೀರ ಅವಹೇಳನಕ್ಕೊಳಗಾಗಿದ್ದ ಮಹಿಳೆ ನೊಂದುಕೊಂಡು ತನ್ನ ದೂರನ್ನು ವಾಪಸ್ ಪಡೆದಿದ್ದಳು.
ಓರ್ವ ರಾಜಕೀಯ ಮುಖಂಡ ಸೇರಿದಂತೆ ಮಹಿಳೆಯ ಪತಿಯ ನಾಲ್ವರು ಸ್ನೇಹಿತರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು.
ಐಜಿಪಿ ಎಂ.ಆರ್.ಅಜಿತಕುಮಾರ್ ಅವರು ಮಣಿಕಂಠನ್ ವಿರುದ್ಧದ ಆರೋಪದ ಕುರಿತು ವಿಚಾರಣೆಯನ್ನು ಆರಂಭಿಸಿದ್ದಾರೆ.
 ತನ್ಮಧ್ಯೆ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ವಡಕ್ಕಂಚೇರಿ ಮುನ್ಸಿಪಲ್ ಕೌನ್ಸಿಲರ್ ಜಯಂತನ್ ಮತ್ತು ಪಕ್ಷದ ಇನ್ನೋರ್ವ ಕಾರ್ಯಕರ್ತನನ್ನು ಸಿಪಿಎಂ ಪಕ್ಷದಿಂದ ಅಮಾನತುಗೊಳಿಸಿದೆ.
ಇದೇ ವೇಳೆ ಸಂತ್ರಸ್ತೆಯ ಹೆಸರನ್ನು ಮಾಧ್ಯಮಗಳಿಗೆ ಬಹಿರಂಗಗೊಳಿಸಿದ್ದಕ್ಕಾಗಿ ಸಿಪಿಎಂ ತ್ರಿಶೂರು ಜಿಲ್ಲಾ ಕಾರ್ಯದರ್ಶಿ ಕೆ.ರಾಧಾಕೃಷ್ಣನ್ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆಗ್ರಹಿಸಿದೆ.
===============================================

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News