ರಜೆ ಇಲ್ಲ: ಖಿನ್ನತೆಗೆ ಒಳಗಾದ ಬ್ಯಾಂಕ್, ಅಂಚೆ ಕಚೇರಿ ಸಿಬ್ಬಂದಿ

Update: 2016-11-17 14:08 GMT

ಬೆಂಗಳೂರು, ನ.17: ಕೇಂದ್ರ ಸರಕಾರ ನ.8ರ ರಾತ್ರಿಯಿಂದ 500 ಹಾಗೂ 1000 ರೂ. ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ ನಂತರ ಒಂದು ವಾರದಿಂದ ರಜೆ ಇಲ್ಲದೇ ಹೈರಾಣಾಗಿರುವ ಬ್ಯಾಂಕ್ ಸಿಬ್ಬಂದಿ ರಜೆಗಾಗಿ ಕಾರಣ ಹುಡುಕಲು ಆರಂಭಿಸಿದ್ದಾರೆ.

 ದೇಶಾದ್ಯಂತ 500 ಹಾಗೂ 1000 ರೂ. ಮುಖಬೆಲೆಯ ನೋಟ್ ಬ್ಯಾನ್ ಆಗುತ್ತಿದ್ದಂತೆ ಸಿಕ್ಕಷ್ಟು ಹಣ ಪಡೆಯಲು ಬ್ಯಾಂಕ್, ಎಟಿಎಂ, ಅಂಚೆ ಕಚೇರಿಗಳತ್ತ ನುಗ್ಗುತ್ತಿರುವ ಗ್ರಾಹಕರು ತಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಬ್ಯಾಂಕ್ ಸಿಬ್ಬಂದಿಯನ್ನು ಹೆಚ್ಚಾಗಿ ಅವಲಂಬಿಸುತ್ತಿದ್ದಾರೆ. ಪದೇ ಪದೆ ಒಂದೇ ಪ್ರಶ್ನೆಗೆ ಉತ್ತರಿಸಿ ಬ್ಯಾಂಕ್ ಸಿಬ್ಬಂದಿ ಹೈರಾಣಾಗಿದ್ದಾರೆ. ಸದಾ ಒಂದಿಲ್ಲೊಂದು ರಜೆ ಪಡೆಯುತ್ತಾ, ಸರಕಾರಿ ರಜೆಗಳನ್ನು ನೆಮ್ಮದಿಯಿಂದ ಅನುಭವಿಸುತ್ತಿದ್ದ ಹಲವರಿಗೆ ಕೇಂದ್ರ ಸರಕಾರದ ನಿರ್ಧಾರ ನುಂಗಲಾಗದ ಬಿಸಿ ತುಪ್ಪವಾಗಿದೆ.

 ಬ್ಯಾಂಕ್‌ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ, ಅಂಚೆ ಕಚೇರಿ ನೌಕರರು ಕಳೆದ ಒಂದು ವಾರದಲ್ಲಿ ಬಂದ ಮೂರು ರಜೆಗಳನ್ನು ಮಿಸ್ ಮಾಡಿಕೊಂಡಿದ್ದಾರೆ. ಹಲವು ವರ್ಷಗಳಿಂದ ಅನುಭವಿಸದ ಒತ್ತಡವನ್ನು ಕಳೆದ ಒಂದು ವಾರದಲ್ಲಿ ಅನುಭವಿಸಿದ್ದಾರೆ. ಇದು ಅವರಿಗೆ ಸಹಿಸಲಾಗದ ಸ್ಥಿತಿ ತಂದಿಟ್ಟಿದೆ. ಮೊದಲೇ ಹಣಕಾಸು ವ್ಯವಹಾರ. ಇದೀಗ ಗ್ರಾಹಕರಿಗೆ ಮನವರಿಕೆ ಮಾಡಿಕೊಡುವ ಹೆಚ್ಚುವರಿ ಹೊಣೆಗಾರಿಕೆ ಬ್ಯಾಂಕ್, ಎಟಿಎಂ, ಅಂಚೆ ಕಚೇರಿ ಸಿಬ್ಬಂದಿಯನ್ನು ಹುಚ್ಚರನ್ನಾಗಿಸುತ್ತಿದೆ.

ಒತ್ತಡದಲ್ಲಿ ಕೆಲಸ: ಅದಾಗಲೇ ಒಂದು ವಾರದಿಂದ ಅನುಭವಿಸಿದ ಕಿರಿಕಿರಿಯಿಂದ ಬೇಸತ್ತು, ರಜೆಗೆ ಕಾರಣ ಹುಡುಕುತ್ತಿದ್ದಾರೆ. ಅನಾರೋಗ್ಯ, ಮಕ್ಕಳಿಗೆ ಸಮಸ್ಯೆ ಎದುರಾಗಿದೆ, ವಿಪರೀತ ಒತ್ತಡದಿಂದಾಗಿ ತಲೆ ಸುತ್ತು ಬರುತ್ತಿದೆ, ಮಾನಸಿಕ ಖಿನ್ನತೆಗೆ ಒಳಗಾಗಿದ್ದೇವೆ ಎಂಬಿತ್ಯಾದಿ ಕಾರಣ ನೀಡಿ ರಜೆ ಕೇಳುತ್ತಿದ್ದಾರೆ.

  ಏನಂತಾರೆ ವೈದ್ಯರು: ಸಾಮಾನ್ಯವಾಗಿ ಬ್ಯಾಂಕ್ ಕೆಲಸ ಒತ್ತಡದಿಂದಲೇ ಕೂಡಿರುತ್ತದೆ. ಜನರಿಗೆ ಉತ್ತರಿಸುವ ಜೊತೆಗೆ ಒಂದು ನೋಟು ಕೂಡ ವ್ಯತ್ಯಾಸವಾಗದಂತೆ ಕಾರ್ಯನಿರ್ವಹಿಸಬೇಕು. ಇದೀಗ ಎದುರಾಗಿರುವ ಒತ್ತಡ ಸಾಕಷ್ಟು ದೊಡ್ಡದು. ಇದು ಹಲವರನ್ನು ಖಿನ್ನತೆಗೆ ಈಡುಮಾಡುವುದು ಸುಳ್ಳಲ್ಲ. ನಿಜಕ್ಕೂ ಬ್ಯಾಂಕ್ ಸಿಬ್ಬಂದಿ ಹೆಚ್ಚಿನ ಒತ್ತಡಕ್ಕೆ ಒಳಗಾಗಿದ್ದು, ಕಳೆದ ಒಂದು ವಾರದಲ್ಲಿ ನನ್ನ ಬಳಿ ಬರುವ ರೋಗಿಗಳಲ್ಲಿ ಬ್ಯಾಂಕ್ ಸಿಬ್ಬಂದಿಯೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಮಾನಸಿಕ ತಜ್ಞ ಡಾ. ಚೆಲುವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

    ಖ್ಯಾತ ಮಾನಸಿಕ ರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಪ್ರಕಾರ, ಮನುಷ್ಯನಿಗೆ ಮಾನಸಿಕ ಸಮಸ್ಯೆಯಿಂದಾಗಿಯೇ ಶೇ. 80ರಷ್ಟು ರೋಗಗಳು ಕಂಡು ಬರುತ್ತವೆ. ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಂಡಷ್ಟೂ ಅನುಕೂಲ. ಇಂದು ಒಂದು ಹಂತದವರೆಗಿನ ಒತ್ತಡವನ್ನು ವ್ಯಕ್ತಿ ಸಹಿಸಿಕೊಳ್ಳಬಲ್ಲ. ಕೆಲವೊಮ್ಮೆ ಹೆಚ್ಚಿನ ಒತ್ತಡವನ್ನು ಒಂದೆರಡು ದಿನ ಸಹಿಸಿಕೊಳ್ಳಬಲ್ಲ. ಆದರೆ ವಾರಗಳು, ತಿಂಗಳುಗಳ ಕಾಲ ಸಹಿಸಿಕೊಳ್ಳುವುದು ಬಹಳ ಕಷ್ಟ. ಇದು ಅವರನ್ನು ದೊಡ್ಡ ಸಮಸ್ಯೆಗೆ ದೂಡಬಲ್ಲದು ಎನ್ನುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News