ಅಕ್ಷಯ್ ಚಿತ್ರದ ನಿರ್ದೇಶಕನ ನಾಲಗೆ ತಂದವರಿಗೆ ಒಂದು ಕೋಟಿ ಘೋಷಿಸಿದ ಮಥುರಾದ ಧಾರ್ಮಿಕ ನಾಯಕ

Update: 2016-11-22 09:20 GMT

ಹೊಸದಿಲ್ಲಿ, ನ. 22 : ಅಕ್ಷಯ್ ಕುಮಾರ್ ಹಾಗು ಭೂಮಿ ಪೆಡ್ನೆಕರ್ ಪ್ರಧಾನ ಪಾತ್ರದಲ್ಲಿರುವ ಟಾಯ್ಲೆಟ್ - ಏಕ್ ಪ್ರೇಮ್ ಕಥಾ ಚಿತ್ರದ ನಿರ್ದೇಶಕ ನಾರಾಯಣ್ ಸಿಂಗ್ ಅವರ ನಾಲಗೆ ತಂದವರಿಗೆ ಒಂದು ಕೋಟಿ ಬಹುಮಾನ ಕೊಡುವುದಾಗಿ ಮಥುರಾದ ಧಾರ್ಮಿಕ ನಾಯಕರೊಬ್ಬರು ಘೋಷಿಸಿದ್ದಾರೆ. 

ಚಿತ್ರ ಮಥುರಾದ ಎರಡು ಗ್ರಾಮಗಳಾದ ಬರ್ಸಾನಾ ಹಾಗು ನಂದ್ ಗಾಂವ್ ಗಳ ನಡುವೆ ಇರುವ ಅಲಿಖಿತ ಕಾನೂನನ್ನು ಮುರಿಯುವ ಹಾಗು ಇದನ್ನು ನಂಬುವ ಜನರ ಭಾವನೆಗೆ ಧಕ್ಕೆ ತರುವ ಆರೋಪ ಈ ಚಿತ್ರದ ಮೇಲೆ ಬಂದಿದೆ.

ನಂದ್ ಗಾಂವ್  ಭಗವಾನ್ ಕೃಷ್ಣನ ಊರು ಹಾಗು ಬರ್ಸಾನಾ ರಾಧೆಯ ಊರು. ಹಾಗಾಗಿ ಈ ಎರಡು ಊರುಗಳ ನಡುವೆ ಮದುವೆ ಸಂಬಂಧ ನಡೆಯುವುದಿಲ್ಲ . ಅದು ಇಲ್ಲಿನ ಸಂಪ್ರದಾಯ. ಆದರೆ ಈಗ ಅಕ್ಷಯ್ ಚಿತ್ರ ಈ ನಂಬಿಕೆಗೆ ವಿರುದ್ಧವಾದ ಕತೆ ಹೊಂದಿದೆ ಎಂಬುದು ಆರೋಪ. ಹಾಗಾಗಿ ಚಿತ್ರದ ಹೆಸರು ಹಾಗು ಕತೆ ಬದಲಾಯಿಸದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಇಲ್ಲಿ ನಡೆದ ಗ್ರಾಮಸ್ಥರ ಮಹಾಪಂಚಾಯತ್ ನಲ್ಲಿ ಪೂಲ್ ಧೋಲ್ ಬಿಹಾರಿ ದಾಸ್ ಮಹಾರಾಜ್ ಅವರು ಘೋಷಿಸಿದ್ದಾರೆ. ಜೊತೆಗೆ ನಿರ್ದೇಶಕನ ನಾಲಗೆ ತಂದವರಿಗೆ ಒಂದು ಕೋಟಿ ಬಹುಮಾನ ನೀಡುವುದಾಗಿಯೂ ಹೇಳಿದ್ದಾರೆ. 

ಆದರೆ ಇದನ್ನು ನಿರಾಕರಿಸಿರುವ ನಿರ್ದೇಶಕ ನಾರಾಯಣ್ ಸಿಂಗ್,  ಚಿತ್ರದಲ್ಲಿ ಇಂತಹ ಯಾವುದೇ ಅಂಶಗಳಿಲ್ಲ. ಚಿತ್ರ ನೋಡಿದರೆ ಇದು ಎಲ್ಲರಿಗೂ ಸ್ಪಷ್ಟವಾಗಲಿದೆ. ಇದು ಮಹಿಳಾ ಸಬಲೀಕರಣ ಹಾಗು ಸ್ವಚ್ಛತೆಯನ್ನು ಎತ್ತಿ ಹಿಡಿಯುವ ಚಿತ್ರ ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News