ದಕ್ಷಿಣ ಕೊರಿಯ ಅಧ್ಯಕ್ಷೆ ವಿರುದ್ಧ ಡಿಸೆಂಬರ್‌ನಲ್ಲಿ ವಾಗ್ದಂಡನೆ : ಪ್ರತಿಪಕ್ಷಗಳ ಘೋಷಣೆ

Update: 2016-11-24 16:18 GMT

ಸಿಯೋಲ್ (ದಕ್ಷಿಣ ಕೊರಿಯ), ನ. 24: ದಕ್ಷಿಣ ಕೊರಿಯದ ಹಗರಣ ಕಳಂಕಿತ ಅಧ್ಯಕ್ಷೆ ಪಾರ್ಕ್ ಗುಯನ್-ಹೈ ಅವರನ್ನು ವಾಗ್ದಂಡನೆಗೆ ಗುರಿಪಡಿಸುವುದಕ್ಕೆ ಸಂಬಂಧಿಸಿದ ಮತದಾನ ಮುಂದಿನ ವಾರ ನಡೆಯಬಹುದಾಗಿದೆ ಎಂದು ಸಂಸದರು ಗುರುವಾರ ಹೇಳಿದ್ದಾರೆ.

ಅಧ್ಯಕ್ಷೆಯನ್ನು ಪದಚ್ಯುತಿಗೊಳಿಸುವಂತೆ ಕೋರಿ ಪ್ರತಿಪಕ್ಷಗಳು ನಡೆಸುತ್ತಿರುವ ಅಭಿಯಾನಕ್ಕೆ ಆಡಳಿತ ಪಕ್ಷದ ರಾಜಕಾರಣಿಗಳೂ ಬೆಂಬಲ ನೀಡುತ್ತಿದ್ದಾರೆ. ಅಧ್ಯಕ್ಷೆಯ ಆತ್ಮೀಯ ಸ್ನೇಹಿತೆ ಚೋಯ್ ಸೂನ್ ಸಿಲ್ ಅಧ್ಯಕ್ಷೆಯ ಪ್ರಭಾವ ಬಳಸಿ ವಾಣಿಜ್ಯ ಕಂಪೆನಿಗಳಿಂದ ಹಣ ವಸೂಲು ಮಾಡುತ್ತಿರುವ ಬೃಹತ್ ಹಗರಣವೊಂದು ಬೆಳಕಿಗೆ ಬಂದಿದ್ದು, ದೇಶ ತಲ್ಲಣಗೊಂಡಿದೆ.

‘‘ಡಿಸೆಂಬರ್ 2ರಂದೇ ವಾಗ್ದಂಡನೆ ಮತದಾನ ನಡೆಯಬೇಕೆಂದು ನಾವು ಕೋರುತ್ತೇವೆ. ಏನಿದ್ದರೂ, ವಾಗ್ದಂಡನೆಯು ಡಿಸೆಂಬರ್ 9ರ ಮೊದಲು ನಡೆಯಬೇಕು’’ ಎಂದು ಪ್ರಧಾನ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಸದನದ ನಾಯಕ ವೂ ಸಾಂಗ್-ಹೊ ಹೇಳಿರುವುದಾಗಿ ಯೊನ್‌ಹಾಪ್ ವಾರ್ತಾ ಸಂಸ್ಥೆ ತಿಳಿಸಿದೆ.

ವಾಗ್ದಂಡನೆ ಮಸೂದೆ ಅಂಗೀಕಾರಗೊಳ್ಳಲು ಮೂರನೆ ಎರಡು ಬಹುಮತ ಬೇಕಿರುವುದರಿಂದ ಆರಂಭದಲ್ಲಿ ಮಸೂದೆ ಮಂಡಿಸಲು ಪ್ರತಿಪಕ್ಷಗಳು ಹಿಂಜರಿದಿದ್ದವು. 300 ಸದಸ್ಯ ಬಲದ ಸಂಸತ್ತಿನಲ್ಲಿ ಪ್ರತಿಪಕ್ಷಗಳು ಬಹುಮತವನ್ನು ಹೊಂದಿವೆ.

ಆದರೆ, ಆಡಳಿತಾರೂಢ ಪಕ್ಷದ ಮಾಜಿ ಮುಖ್ಯಸ್ಥ ಕಿಮ್ ಮೂ ಸುಂಗ್ ಬುಧವಾರ ಕಣಕ್ಕಿಳಿಯುವುದರೊಂದಿಗೆ ವಾಗ್ದಂಡನೆ ವಿಚಾರ ವೇಗ ಪಡೆದುಕೊಂಡಿದೆ. ಸಂವಿಧಾನವನ್ನು ಉಲ್ಲಂಘಿಸಿರುವುದಕ್ಕಾಗಿ ಅಧ್ಯಕ್ಷೆಯ ವಿರುದ್ಧ ವಾಗ್ದಂಡನೆ ನಡೆಯಬೇಕು ಎಂಬುದಾಗಿ ಅವರು ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News