ಸಕಲ ಸೇನಾ ಗೌರವದೊಂದಿಗೆ ‘ಅಕ್ಷಯ್’ ಅಂತ್ಯಕ್ರಿಯೆ : ಹುತಾತ್ಮನಿಗೆ ಕಣ್ಣೀರಿನ ವಿದಾಯ

Update: 2016-12-01 14:46 GMT

ಬೆಂಗಳೂರು, ಡಿ.1: ಜಮ್ಮು ಕಾಶ್ಮೀರದ ನಗರೋಟಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಬೆಂಗಳೂರಿನ ಮೇಜರ್ ಅಕ್ಷಯ್ ಗಿರೀಶ್‌ಕುಮಾರ್(31) ಅವರ ಅಂತ್ಯಕ್ರಿಯೆ ಸಕಲ ಸೇನಾ ಗೌರವದೊಂದಿಗೆ ನಡೆಯಿತು.ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ವಿಶೇಷ ವಿಮಾನದ ಮೂಲಕ ನಗರದ ಯಲಹಂಕದ ವಾಯು ನೆಲೆಗೆ ಪಾರ್ಥಿವ ಶರೀರವನ್ನು ತರಲಾಯಿತು. ಈ ವೇಳೆ ಸೇನೆಯ ಹಿರಿಯ ಅಧಿಕಾರಿಗಳು, ಸಚಿವ ಟಿ.ಬಿ.ಜಯಚಂದ್ರ, ಮೇಯರ್ ಪದ್ಮಾವತಿ ಸೇರಿ ಪ್ರಮುಖರು ಗಣ್ಯರು ಅಗಲಿದ ವೀರಯೋಧ ಅಕ್ಷಯ್ ಅವರಿಗೆ ಸರಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿದರು.ಬಳಿಕ ಪಾರ್ಥಿವ ಶರೀರವನ್ನು ಸಾದಹಳ್ಳಿ ಗೇಟ್ ಬಳಿಯಿರುವ ಜೇಡ್ ಗಾರ್ಡನ್ ಅಪಾರ್ಟ್‌ಮೆಂಟ್‌ಗೆ ಮಧ್ಯಾಹ್ನ 1 ಗಂಟೆಗೆ ತರಲಾಯಿತು. ಕುಟುಂಬಸ್ಥರು, ಸ್ನೇಹಿತರು ಹಾಗೂ ಸಾರ್ವಜನಿಕರಿಗೆ ಅಂತಿಮ ದರ್ಶನ ಪಡೆಯಲು ಸಂಜೆ 4:30 ವರೆಗೂ ಅವಕಾಶ ಕಲ್ಪಿಸಲಾಗಿತ್ತು.

ಈ ವೇಳೆ ಸಾವಿರಾರು ಜನರು ಆಗಮಿಸಿ ವೀರಯೋಧನಿಗೆ ನಮನ ಸಲ್ಲಿಸಿ ‘ಅಕ್ಷಯ್ ಅಮರ್ ರಹೇ’ ಎಂಬ ಘೋಷಣೆಗಳು ಮೊಳಗಿದವು. ಇನ್ನು ಹುತಾತ್ಮ ಯೋಧನ ಅಂತಿಮ ದರ್ಶನಕ್ಕೆ ಜೇಡ್ ಗಾರ್ಡನ್ ಅಪಾರ್ಟ್‌ಮೆಂಟ್ ಬಳಿ ತಂಡೋಪತಂಡವಾಗಿ ಶಾಲೆಯ ಮಕ್ಕಳು, ಸಾರ್ವಜನಿಕರು ಆಗಮಿಸುವ ಜೊತೆಗೆ ಅಕ್ಷಯ್ ಅವರ ಭಾವ ಚಿತ್ರವನ್ನ ಹಿಡಿದು ಅಂತಿಮ ನಮನ ಸಲ್ಲಿಸಿ ಕಂಬನಿ ಮಿಡಿದರು.ರಾಜ್ಯ ಸರಕಾರದ ಪರವಾಗಿ ಕಾನೂನು ಸಚಿವ, ಬಿಬಿಎಂಪಿ ಮೇಯರ್ ಪದ್ಮಾವತಿ, ಬೆಂ.ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಸೇರಿದಂತೆ ಪ್ರಮುಖರು ಪಾರ್ಥಿವ ದೇಹಕ್ಕೆ ಅಂತಿಮ ಗೌರವ ಸಲ್ಲಿಸಿದರು. ಸಾವಿರಾರು ಜನರ ಸಮ್ಮುಖದಲ್ಲಿ ಸಂಜೆ 5 ಗಂಟೆ ಸುಮಾರಿಗೆ ಮೆರವಣಿಗೆ ಮೂಲಕ ಹೆಬ್ಬಾಳದ ಚಿರಶಾಂತಿ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಈ ವೇಳೆ ಅಕ್ಷಯ್ ನಿವಾಸ ಹಾಗೂ ಪ್ರಾರ್ಥಿವ ಶರೀರದ ಮೆರವಣಿಗೆ ವೇಳೆ ಈಶಾನ್ಯ ವಲಯದ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.ಬೆಂಗಳೂರಿನ ಯಲಹಂಕದ ಜೇಡ್‌ಗೇಟ್ ಗಾರ್ಡನ್ ನಿವಾಸಿಯಾಗಿರುವ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಮಂಗಳವಾರದ(ನ.29) ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಏಳು ಯೋಧರ ಪೈಕಿ ಒಬ್ಬರಾಗಿದ್ದರು.

ಅಕ್ಷಯ್ ಅವರ ತಂದೆ ಗಿರೀಶ್ ಅವರು ಬೆಂಗಳೂರಿನ ಯಲಹಂಕದಲ್ಲಿ ನೆಲೆಸಿದ್ದು, ಹುತಾತ್ಮ ಅಕ್ಷಯ್‌ಗೆ ಪತ್ನಿ ಸಂಗೀತಾ ರವೀಂದ್ರನ್ ಹಾಗೂ 2 ವರ್ಷದ ಮಗುವನ್ನು ಅಗಲಿದ್ದಾರೆ.

ಬೈ ಬೈ ಎಂದ ನೈನಾ..!

ಅಂತಿಮ ಯಾತ್ರೆಯ ವೇಳೆ ಮೇಜರ್ ಅಕ್ಷಯ್, ಸಂಗೀತಾ ದಂಪತಿಯ 2 ವರ್ಷ ಪ್ರಾಯದ ಮುದ್ದಾದ ಪುಟ್ಟ ಮಗಳು ‘ನೈನಾ’ನನ್ನು ಕಂಡು ಎಲ್ಲರ ಕಣ್ಣಲ್ಲಿ ನೀರು ಜಿನುಗಿತ್ತು. ಯಲಹಂಕ ವಾಯುನೆಲೆಯಲ್ಲಿ ಮಿಲಿಟರಿ ಗೌರವ ಸಲ್ಲಿಸಿ ಪಾರ್ಥೀವ ಶರೀರವನ್ನು ಕೊಂಡೊಯ್ಯುವ ವೇಳೆ ಹಿಂಬದಿಯ ಕಾರಿನಲ್ಲಿದ್ದ ಪುತ್ರಿ ನೈನಾ ನಗು ನಗುತ್ತಾ ಸಂಬಂಧಿಕರತ್ತ ಕೈ ಬೀಸುತ್ತಾ ಬೈ..ಬೈ .ಹೇಳುತ್ತಿದ್ದುದು ಅಲ್ಲಿದ್ದವರ ಮನ ಕಲುಕಿತು, ಕಣ್ಣಂಚಲ್ಲಿ ನೀರು ಜಿನುಗುವಂತೆ ಮಾಡಿತು.

ಸರಕಾರ 25 ಲಕ್ಷ ರೂ. ಘೋಷಣೆ.

‘ಹುತಾತ್ಮ ಮೇಜರ್ ಅಕ್ಷಯ್‌ಗಿರೀಶ್‌ಕುಮಾರ್ ಕುಟುಂಬಕ್ಕೆ ರಾಜ್ಯ ಸರಕಾರ 25 ಲಕ್ಷ ರೂ. ಪರಿಹಾರ ಘೋಷಿಸಿದೆ ಎಂದು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

‘ಮೇಲ್ಸೇತುವೆಗೆ ಮೇಜರ್ ಹೆಸರು

‘ಬಿಬಿಎಂಪಿ ವ್ಯಾಪ್ತಿಯ ಹೆಬ್ಬಾಳ ಮೇಲ್ಸೇತುವೆಗೆ ಅಕ್ಷಯ್‌ಗಿರೀಶ್‌ಕುಮಾರ್ ಅವರ ಹೆಸರಿಡುವ ಜೊತೆಗೆ ಅವರ ಪುತ್ರಿ ಹೆಸರಲ್ಲಿ 10 ಲಕ್ಷ ರೂ.ಠೇವಣಿ ಮಾಡಲಾಗುವುದು’

-ಪದ್ಮಾವತಿ, ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News