ನೋಟು ರದ್ದತಿ ಬಳಿಕ ಉಗ್ರ ದಾಳಿ ಹೆಚ್ಚುತ್ತಿರುವುದು ಏಕೆ ? : ಕೇಂದ್ರಕ್ಕೆ ಶಿವಸೇನೆ ಪ್ರಶ್ನೆ

Update: 2016-12-02 14:30 GMT

ಮುಂಬೈ, ಡಿ.2: ಗಡಿಯಲ್ಲಿ ಸೈನಿಕರ ಹತ್ಯೆಯ ಕುರಿತು ಕೇಂದ್ರ ಸರಕಾರದ ವಿರುದ್ಧ ದಾಳಿ ನಡೆಸಿರುವ ಮಿತ್ರ ಪಕ್ಷ ಶಿವಸೇನೆ, ನ.8ರಂದು ನೋಟು ರದ್ದುಗೊಳಿಸಿದ ಬಳಿಕ ಅಂತಹ ದಾಳಿಗಳು ಹೆಚ್ಚಾಗಿರುವುದೇಕೆಂದು ಇಂದು ಪ್ರಶ್ನಿಸಿದೆ.

ರೂ. 500 ಹಾಗೂ 1000ದ ನೋಟುಗಳನ್ನು ರದ್ದುಗೊಳಿಸಿದ ವೇಳೆ ಸರಕಾರವು, ಭಯೋತ್ಪಾದಕರು, ನಿಧಿಗಾಗಿ ಹಾಗೂ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ದೊಡ್ಡ ಮುಖ ಬೆಲೆಯ ನೋಟುಗಳನ್ನು ಅವಲಂಬಿಸಿದ್ದಾರೆ. ನೋಟು ರದ್ದತಿಯ ಮೂಲಕ ಅವರ ಬೆನ್ನೆಲುಬನ್ನು ಮುರಿಯಲಾಗಿದೆಯೆಂದು ಹೇಳಿತ್ತು. ಅದು ನಿಜವಾಗಿದ್ದರೆ. ನ.8ರ ಬಳಿಕ ಭಯೋತ್ಪಾದಕ ದಾಳಿಗಳು ಹೆಚ್ಚಾಗಿರುವುದೇಕೆಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯವೊಂದು ಕೇಳಿದೆ.

ನ.8ರ ಬಳಿಕ ಹುತಾತ್ಮರಾದ ಸೈನಿಕರ ಸಂಖ್ಯೆಯನ್ನು ರಕ್ಷಣಾ ಸಚಿವರು ಸ್ಪಷ್ಟಪಡಿಸಬೇಕೆಂದು ಅದು ಆಗ್ರಹಿಸಿದೆ.

ರಾಷ್ಟ್ರಗೀತೆಯನ್ನು ಸಿನಿಮಾ ಮಂದಿರಗಳಲ್ಲಿ ಗೌರವಿಸುವಾಗ, ನಮ್ಮ ಸೈನಿಕರ ಪ್ರಾಣದ ಬಗ್ಗೆ ಗೌರವ ಉಳಿದಿದೆಯೇ ಎಂಬುದು ಪ್ರಶ್ನೆಯಾಗಿದೆ. ಗಡಿಯಲ್ಲಿ ನಮ್ಮ ಸೈನಿಕರು ಪ್ರತಿದಿನ ಸಾಯುತ್ತಿದ್ದಾರೆ. ಅದು ನಿಲ್ಲದಿದ್ದಲ್ಲಿ, ದೇಶದ ರಕ್ಷಣಾ ಸಿದ್ಧತೆಯ ಕುರಿತು ಪ್ರಶ್ನೆಯೊಂದು ಮೂಡುತ್ತದೆಂದು ಶಿವಸೇನೆ ಹೇಳಿದೆ.

ಗುಂಡು ಹಾರಾಟ ನಿಲ್ಲಿಸುವಂತೆ ಪಾಕಿಸ್ತಾನವು ಕರೆ ಮಾಡಿ ಭಾರತಕ್ಕೆ ಮನವಿ ಮಾಡಿದೆಯೆಂಬ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್‌ರ ಪ್ರತಿಪಾದನೆಯನ್ನು ಉಲ್ಲೇಖಿಸಿದ ಸಂಪಾದಕೀಯ, ಸಚಿವರು ನೆರೆಯ ದೇಶ ಮೊಣಕಾಲೂರಿದೆ ಹಾಗೂ ಪಾಕಿಸ್ತಾನದಿಂದ ಇನ್ನು ಮುಂದೆ ಭಯೋತ್ಪಾದನಾ ಬೆದರಿಕೆ ಬಾರದೆಂಬ ಭಾವನೆ ಮೂಡಿಸುತ್ತಿದ್ದಾರೆ. ಆದರೆ, ಅವರು ಮಾತು ಮುಗಿಸುವ ಮುನ್ನವೇ ಪಾಕಿಸ್ತಾನವು ಭಾರತೀಯ ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಎಲ್ಲ ಶಾಂತಿ ಬಷ್ಟವಾಗಿದೆ. ನಮ್ಮ ಸೇನೆ ಅನುಭವಿಸುವ ನಷ್ಟವನ್ನು ತಡೆಯುವುದು ಹೇಗೆ? ಮೊದಲು ಪಠಾಣ್‌ಕೋಟ್, ಬಳಿಕ ಉರಿ ಹಾಗೂ ಈಗ ನಗ್ರೋಟ- ಭಯೋತ್ಪಾದಕರು ಎಗ್ಗಿಲ್ಲದೆ ನಮ್ಮ ಸೈನಿಕರ ರಕ್ತ ಚೆಲ್ಲುತ್ತಿದ್ದಾರೆಂದು ಅದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News