ಕುಬೇರರ ಬಳಗವಾಗಲಿರುವ ಟ್ರಂಪ್ ಸಂಪುಟ

Update: 2016-12-02 14:53 GMT

ವಾಶಿಂಗ್ಟನ್, ಡಿ. 2: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಿಸಿರುವ ನೂತನ ಸರಕಾರದ ಸಂಪುಟವು ಬಹುಮಿಲಿಯಾಧೀಶ ವ್ಯಾಪಾರಿ ಕುಳಗಳ ಗುಂಪಾಗಿದೆ. ಸಂಪುಟ ಸದಸ್ಯರ ಸಂಪತ್ತು ಅಮೆರಿಕದ ಇತಿಹಾಸದಲ್ಲೇ ಅಭೂತಪೂರ್ವವಾಗಿದೆ.

ಸ್ವತಃ ಬಿಲಿಯಾಧೀಶ ರಿಯಲ್ ಎಸ್ಟೇಟ್ ಕುಳವಾಗಿರುವ ಟ್ರಂಪ್, ವಿದೇಶಾಂಗ ಕಾರ್ಯದರ್ಶಿಯಾಗಿ ಮಿಟ್ ರಾಮ್ನಿಯನ್ನು ನೇಮಿಸಿದರೆ ಈ ಹೆಗ್ಗಳಿಕೆಗೆ ಪುಷ್ಟಿ ನೀಡುತ್ತಾರೆ.

ಮಿಟ್ ರಾಮ್ನಿ 230 ಮಿಲಿಯ ಡಾಲರ್ (ಸುಮಾರು 1569 ಕೋಟಿ ರೂಪಾಯಿ) ಸಂಪತ್ತಿನ ಒಡೆಯರಾಗಿದ್ದಾರೆ. ಅವರು ಈ ಹಿಂದೆ ಬೇನ್ ಕ್ಯಾಪಿಟಲ್ ಎಂಬ ಖಾಸಗಿ ಇಕ್ವಿಟಿ ಸಂಸ್ಥೆಯ ಮುಖ್ಯಸ್ಥರಾಗಿದ್ದರು.

ಅಮೆರಿಕ ಮತ್ತು ಅದರ ಮಧ್ಯಮ ವರ್ಗ ‘‘ಭಾರೀ ಲಾಭ ಪಡೆಯಬಹುದು’’ ಎಂಬ ಟ್ರಂಪ್‌ರ ಭರವಸೆಯನ್ನು ಅಣಕಿಸಬಲ್ಲ ಕೆಲವರ ವಿವರ ಇಲ್ಲಿದೆ.
ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ 2.5 ಬಿಲಿಯ ಡಾಲರ್ (ಸುಮಾರು 17,060 ಕೋಟಿ ರೂಪಾಯಿ) ಸಂಪತ್ತನ್ನು ಸಂಗ್ರಹಿಸಿದ್ದಾರೆ ಎಂಬುದಾಗಿ ‘ಫೋರ್ಬ್ಸ್’ ವರದಿ ಮಾಡಿದೆ. ಅವರು ಅಮೆರಿಕದ 232ನೆ ಅತ್ಯಂತ ಶ್ರೀಮಂತ ವ್ಯಕ್ತಿ.

 ಶಿಕ್ಷಣ ಕಾರ್ಯದರ್ಶಿ ಬೆಟ್ಸಿ ಡೊವೋಸ್ ಅಮೆರಿಕದ ಬಹು ಹಂತದ ಮಾರುಕಟ್ಟೆ ದೈತ್ಯ ‘ಆ್ಯಮ್‌ವೇ’ಯ 5.1 ಬಿಲಿಯ ಡಾಲರ್ (ಸುಮಾರು 34,806 ಕೋಟಿ ರೂಪಾಯಿ) ಸಂಪತ್ತಿನ ಉತ್ತರಾಧಿಕಾರಿಯಾಗಿದ್ದಾರೆ.

ಖಜಾನೆ ಕಾರ್ಯದರ್ಶಿ ಸ್ಟೀವನ್ ಮನುಚಿನ್ 40 ಮಿಲಿಯ ಡಾಲರ್ (ಸುಮಾರು 273 ಕೋಟಿ ರೂಪಾಯಿ) ಸಂಪತ್ತಿನ ಒಡೆಯರಾಗಿದ್ದಾರೆ.

 ‘ಫೋರ್ಬ್ಸ್’ ಪತ್ರಿಕೆಯ ಪ್ರಕಾರ, ಟ್ರಂಪ್‌ರ ಒಟ್ಟು ಸಂಪತ್ತು 3.8 ಬಿಲಿಯ ಡಾಲರ್ (ಸುಮಾರು 26,000 ಕೋಟಿ ರೂಪಾಯಿ).
ಅವರ ತಂಡವು ಇತರ ಅತಿ ಶ್ರೀಮಂತರನ್ನು ಸಂಪುಟಕ್ಕೆ ತರಲು ಪ್ರಯತ್ನಿಸುತ್ತಿದೆ.

ತೈಲ ಮತ್ತು ಅನಿಲ ಉದ್ಯಮದ ದೈತ್ಯ ಹೆರಾಲ್ಡ್ ಹ್ಯಾಮ್ ಅವರ ಸಂಪತ್ತು 16.9 ಬಿಲಿಯ ಡಾಲರ್ (1,15,338 ಕೋಟಿ ರೂಪಾಯಿ)ನಷ್ಟು ಅಗಾಧ. ಅವರನ್ನು ಇಂಧನ ಕಾರ್ಯದರ್ಶಿಯನ್ನಾಗಿಸುವ ಪ್ರಯತ್ನಗಳು ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News