ಅಂಬೇಡ್ಕರ್ ತೋರಿಸಿದ ಬೆಳಕಿನ ದಾರಿ

Update: 2016-12-04 18:15 GMT

ಬಾಲ ಗಂಗಾಧರ ತಿಲಕ್, ಸಾವರ್ಕರ್ ಅಂತಹವರನ್ನು ಮಾತ್ರ ರಾಷ್ಟ್ರನಾಯಕರನ್ನಾಗಿ ಮಾಡಿದ ನಮ್ಮ ಜಾತಿಪೀಡಿತ ವ್ಯವಸ್ಥೆ ಇಡೀ ದೇಶಕ್ಕೆ ಸಮಾನತೆಯ ಬೆಳಕನ್ನು ನೀಡಿದ, ರಾಷ್ಟ್ರ ಮುನ್ನಡೆಯಲು ಸಂವಿಧಾನವನ್ನು ನೀಡಿದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಕೇವಲ ದಲಿತ ನಾಯಕರನ್ನಾಗಿ ಮಾಡಿ, ಒಂದು ಜಾತಿಗೆ ಸೀಮಿತಗೊಳಿಸುವ ಹುನ್ನಾರ ಮುಂಚಿನಿಂದಲೂ ನಡೆಯುತ್ತ್ತಾ ಬಂದಿದೆ. ಅಂಬೇಡ್ಕರ್ ದಲಿತರಿಗೆ ಮಾತ್ರ ಬೆಳಕನ್ನು ನೀಡಲಿಲ್ಲ. ಇಡೀ ದೇಶಕ್ಕೆ ಹೊಸ ದಾರಿಯನ್ನು ತೋರಿಸಿದರು. 40 ಕೋಟಿ ಜನ ಸಂಖ್ಯೆಯಿದ್ದಾಗ, ಅವರು ರೂಪಿಸಿದ ಸಂವಿಧಾನ 125 ಕೋಟಿ ಜನಸಂಖ್ಯೆಗೂ ಉಪಯುಕ್ತವಾಗಿದೆ ಎಂಬುದನ್ನು ಯಾರೂ ಅಲ್ಲಗಳೆಯುವುದಿಲ್ಲ.

ಬಾಬಾ ಸಾಹೇಬರನ್ನು ಅವರು ಬದುಕಿದ್ದಾಗ, ದ್ವೇಷಿಸಿದ ಮನುವಾದಿಗಳು ಅವರ ಸ್ಮರಣೆಯನ್ನೇ ಅಳಿಸಿ ಹಾಕಲು, ಅವರ ವಿಚಾರಗಳನ್ನು ವಿರೂಪಗೊಳಿಸಲು ಮಸಲತ್ತು ನಡೆಸುತ್ತಲೇ ಬಂದಿದ್ದಾರೆ. ಡಿಸೆಂಬರ್ 6 ಬಾಬಾ ಸಾಹೇಬರ ಪರಿನಿರ್ವಾಣ ದಿನ. ಈ ದಿನದಂದು ದೇಶದ ಎಲ್ಲಾ ದಮನಿತ ಸಮುದಾಯ ತಮ್ಮ ಬದುಕನ್ನು ಬೆಳಗಿದ ಮಹಾನ್ ಚೇತನವನ್ನು ನೆನಪಿಸಿಕೊಳ್ಳುತ್ತದೆ. ಆದರೆ ಕೋಮುವಾದಿ ಶಕ್ತಿಗಳು ಇದೇ ದಿನವನ್ನು ತಮ್ಮ ಫ್ಯಾಶಿಸ್ಟ್ ಅಜೆಂಡಾ ಜಾರಿಗೆ ತರಲು ಬಳಸಿಕೊಂಡವು. ಇದೇ ದಿನದಂದು ಅಯೋಧ್ಯೆಯ ಬಾಬರಿ ಮಸೀದಿ ನೆಲಸಮಗೊಳಿಸಿದವು. ಆರ್ಥಿಕವಾಗಿ, ಸಾಮಾಜಿಕವಾಗಿ ಶೋಷಣೆಗೆ ಒಳಗಾದ ಜನ ಒಂದುಗೂಡದಂತೆ ಮಾಡಲು 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕರಸೇವಕರು ನೆಲಸಮಗೊಳಿಸಿದರು. ಅಂದಿನಿಂದ ಈ ದೇಶವನ್ನು ಸುಡುತ್ತಿರುವ ಕೋಮುವಾದದ ಬೆಂಕಿ ಇನ್ನೂ ಆರಿಲ್ಲ. ಒಡೆದ ಮನಸ್ಸುಗಳನ್ನು ಮತ್ತಷ್ಟು ಒಡೆಯಲು ಸಂಚುಗಳು ನಡೆಯುತ್ತಲೇ ಇವೆ. ಬಾಬಾ ಸಾಹೇಬರ ಸ್ಮರಣೆಯನ್ನು ಸದಾ ಮನದಲ್ಲೇ ಹಸಿರಾಗಿಟ್ಟುಕೊಂಡ ದಲಿತ ಸಮುದಾಯ ಮಾತ್ರ ಈ ಸಂಚಿಗೆ ಬಲಿಯಾಗಿಲ್ಲ. ಆದರೂ ಕೂಡ ಈ ಸಮುದಾಯವನ್ನು ಎಡಗೈ ಮತ್ತು ಬಲಗೈಯೆಂದು ಒಡೆಯುವಲ್ಲಿ ಮನುವಾದಿ ಶಕ್ತಿಗಳು ಯಶಸ್ವಿಯಾಗಿವೆ.

ಬಾಬಾ ಸಾಹೇಬ ಅಂಬೇಡ್ಕರ್ ಬರೀ ದಲಿತ ನಾಯಕರಾಗಿದ್ದರೇ, ಬರೀ ಒಂದು ಸಮುದಾಯಕ್ಕೆ ಮಾತ್ರ ದುಡಿದರೇ ಎಂಬ ಪ್ರಶ್ನೆಗಳು ಪದೇ ಪದೇ ಉದ್ಭವವಾಗುತ್ತವೆ. ಈ ದೇಶದಲ್ಲಿ ಹತ್ತು ಅವತಾರಗಳು ಆಗಿ ಹೋದರೂ ನನ್ನ ಜನತೆಯ ಕತ್ತಲೆ ಬದುಕಿಗೆ ಬೆಳಕು ಸಿಗಲಿಲ್ಲ ಎಂಬ ಅಂಬೇಡ್ಕರ್ ಹೇಳಿದ್ದು ನಿಜ. ಶತಮಾನಗಳಿಂದ ಶೋಷಣೆಗೆ ಒಳಗಾದ ಸಮುದಾಯದ ಹಿತ ರಕ್ಷಿಸಲು ಸಂವಿಧಾನ ಸಮಿತಿಯ ಸದಸ್ಯರಾಗಲು ಒಪ್ಪಿಕೊಂಡಿದ್ದು ನಿಜ. ಆದರೆ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷ ಸ್ಥಾನ ಅವರ ಮನೆಬಾಗಿಲಿಗೆ ತಾನಾಗಿ ಬಂದಾಗ, ಅದನ್ನು ಒಪ್ಪಿಕೊಂಡ ಅಂಬೇಡ್ಕರ್ ಬರೀ ಒಂದು ಸಮುದಾಯದ ಬಗ್ಗೆ ಮಾತ್ರ ಚಿಂತಿಸಲಿಲ್ಲ. ಅವರ ದೃಷ್ಟಿಯಲ್ಲಿ ಬ್ರಾಹ್ಮಣರಿಂದ ಅಸ್ಪಶ್ಯರವರೆಗೆ ಎಲ್ಲರೂ ದೇಶದ ಸಮುದಾಯವೇ ಆಗಿದ್ದಾರೆ. ಅವರು ರೂಪಿಸಿದ ಕಾನೂನುಗಳು ಒಂದು ಸಮುದಾಯಕ್ಕೆ ಮಾತ್ರವೇ ಸೀಮಿತವಾಗಿರಲಿಲ್ಲ. ಸಮಸ್ತ ಭಾರತೀಯರ ಸರ್ವತೋಮುಖ ಅಭಿವೃದ್ಧಿಗೆ ಅವರು ಆದ್ಯತೆ ನೀಡಿದರು. ಅಂತಲೇ ಅವರು ವಿಶ್ವನಾಯಕ, ಕಾರ್ಮಿಕ ನಾಯಕ, ಶ್ರೇಷ್ಠ ಅರ್ಥಶಾಸ್ತ್ರಜ್ಞ, ಸಮಾಜಶಾಸ್ತ್ರಜ್ಞ, ಸಮಾಜ ವಿಜ್ಞಾನಿಯಾಗಿ ಬೆಳೆದು ನಿಂತರು.

ಆಧುನಿಕ ಭಾರತದ ನಿರ್ಮಾಣಕ್ಕೆ ಬಾಬಾ ಸಾಹೇಬ ಅಂಬೇಡ್ಕರ್ ಅವರ ಕೊಡುಗೆ ಅಮೂಲ್ಯವಾದದ್ದು. 536 ಸಂಸ್ಥಾನಗಳಾಗಿ ಒಡೆದು ಹೋಗಿದ್ದ ಭಾರತವನ್ನು ಏಕೀಕೃತ ರಾಷ್ಟ್ರವನ್ನಾಗಿ ಮಾಡುವ ಪ್ರಸ್ತಾವನೆಯನ್ನು ಮೊದಲು ಮುಂದಿಟ್ಟವರು ಅಂಬೇಡ್ಕರ್. ವಿಭಿನ್ನ ಧರ್ಮ, ಜಾತಿ, ಸಂಸ್ಕೃತಿ, ಭಾಷೆ, ರಾಷ್ಟ್ರೀಯತೆಗಳನ್ನು ಒಳಗೊಂಡಿದ್ದ ಭಾರತಕ್ಕೆ ಸಮಗ್ರವಾಗಿ ಅನ್ವಯವಾಗುವಂತಹ, ಎಲ್ಲರಿಗೂ ಸಮಾಧಾನ ಆಗುವಂತಹ ಸಂವಿಧಾನವನ್ನು ನೀಡಿದವರು ಅಂಬೇಡ್ಕರ್. ಸಂವಿಧಾನ ರಚನಾ ಸಮಿತಿಯಲ್ಲಿ ಪಾಲ್ಗೊಂಡ ಅನೇಕರು ತಮ್ಮ ತಮ್ಮ ಜಾತಿ, ಮತ, ಭಾಷೆಗಳ ಹಿತಾಸಕ್ತಿಗಾಗಿ ಪ್ರತಿಪಾದಿಸಿದರೆ, ಮಾನವತಾವಾದಿಯಾದ ಅಂಬೇಡ್ಕರ್ ಅವರು ಸಮಗ್ರ ಭಾರತೀಯರ ಏಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶ್ಲೇಷಣೆ ಮಾಡುತ್ತಿದ್ದರು. ವಿದೇಶದಲ್ಲಿ ಶಿಕ್ಷಣ ಮುಗಿಸಿ, 1923ರಲ್ಲಿ ಮುಂಬೈಗೆ ಬಂದ ಅಂಬೇಡ್ಕರ್ ವಕೀಲಿ ವೃತ್ತಿ ಆರಂಭಿಸಿದರು.

ಅಸ್ಪಶ್ಯ ಅವಮಾನ ಅನುಭವಿಸುತ್ತಿದ್ದ ಸಮುದಾಯವನ್ನು ಕಟ್ಟಿಕೊಂಡು ಹೋರಾಡುತ್ತಿರುವಾಗಲೇ ಆ ದಿನಗಳಲ್ಲಿ ಮುಂಬೈಯಲ್ಲಿ ನಡೆಯುತ್ತಿದ್ದ ಕಾರ್ಮಿಕರ ಹೋರಾಟಗಳನ್ನು ಅವರು ಗಮನಿಸಿದರು. ಕಾರ್ಮಿಕ ವರ್ಗದ ವಿಮೋಚನೆಯಾಗದೆ ಇಡೀ ಮಾನವ ಜನಾಂಗದ ವಿಮೋಚನೆಯಾಗದು ಎಂದು ಕಾರ್ಲ್ ಮಾರ್ಕ್ಸ್‌ಭಾವಿಸಿದಂತೆ ದಲಿತರ ವಿಮೋಚನೆಯಾಗದೆ ಇಡೀ ಭಾರತದ ವಿಮೋಚನೆಯಾಗದು ಎಂದು ಅಂಬೇಡ್ಕರ್ ಭಾವಿಸಿದ್ದರು. 1930ರಲ್ಲಿ ಪ್ರಥಮ ದುಂಡು ಮೇಜಿನ ಸಭೆೆಯಲ್ಲಿ ಭಾಗವಹಿಸಿದ್ದ ಅಂಬೇಡ್ಕರ್ ಭಾರತದಲ್ಲಿ ಬಂಡವಾಶಾಹಿಗಳು ಮತ್ತು ಭೂಮಾಲಕರು ಕಾರ್ಮಿಕರನ್ನು ಮತ್ತು ದಲಿತರನ್ನು ಶೋಷಿಸುತ್ತಿದ್ದಾರೆ ಎಂದು ಹೇಳಿದರು. ಶತಮಾನಗಳಿಂದ ಅನ್ಯಾಯಕ್ಕೆ ಒಳಗಾದ ದಲಿತರಿಗೆ ಅಂಬೇಡ್ಕರ್ ಮೀಸಲಾತಿ ನೀಡಿದರೆಂದು ಮಾತ್ರ ಹೆಚ್ಚಿನ ಪ್ರಚಾರ ನೀಡಲಾಗುತ್ತದೆ. ಆದರೆ 1942 ರಿಂದ 1946ರವರೆಗೆ ಬ್ರಿಟಿಷ್ ವೈಸರಾಯ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿದ್ದ ಅಂಬೇಡ್ಕರ್ ಅವರು ಕಾರ್ಮಿಕರಿಗಾಗಿಯೇ ಅನೇಕ ಕಾನೂನುಗಳನ್ನು ರೂಪಿಸಿದರು. ತರಬೇತಿ ಹೊಂದಿದ ಕಾರ್ಮಿಕರು ಬೀದಿ ಬೀದಿ ಅಲೆಯಬಾರದೆಂದು ಉದ್ಯೋಗ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಿದರು.

ದಿನದ 14 ಗಂಟೆಯಿದ್ದ ಕೆಲಸದ ಅವಧಿಯನ್ನು 8 ಗಂಟೆಗೆ ಇಳಿಸಿದರು. ಮಹಿಳಾ ಕಾರ್ಮಿಕರಿಗೆ ಹೆರಿಗೆ ರಜೆ ಸೌಲಭ್ಯಗಳನ್ನು ನೀಡಿದರು. ವೇತನ ಸಹಿತ ರಜಾ ದಿನ ಸೌಲಭ್ಯ ಜಾರಿಯಾಗಿದ್ದು ಅಂಬೇಡ್ಕರ್ ಕಾಲದಲ್ಲಿ. ಕಾರ್ಮಿಕರಿಗೆ ಕಡ್ಡಾಯ ವಿಮೆ ಜಾರಿಗೊಳಿಸಿದರು. ಕನಿಷ್ಠ ಕೂಲಿ, ಭವಿಷ್ಯನಿಧಿ ಕಾಯ್ದೆ ಜಾರಿಯಾಗಿದ್ದು ಕೂಡ ಅಂಬೇಡ್ಕರ್ ಅವರು ಕಾರ್ಮಿಕ ಸಚಿವರಾಗಿದ್ದಾಗ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು. ಜವಾಹರಲಾಲ್ ನೆಹರೂ ಅವರ ಸಂಪುಟದಲ್ಲಿ ಅಂಬೇಡ್ಕರ್ ಕಾನೂನು ಸಚಿವರಾದರು. ಸಚಿವ ಪದವಿ ಜೊತೆಗೆ ಸಂವಿಧಾನ ರಚನಾ ಸಭೆಯ ಕರಡು ಸಮಿತಿ ಅಧ್ಯಕ್ಷರಾಗಿ ಅಂಬೇಡ್ಕರ್ ಕಾರ್ಯನಿರ್ವಹಿಸಿದರು. ಸಂವಿಧಾನ ರಚನಾ ಸಭೆೆಯಲ್ಲಿ 272 ಜನರಿದ್ದರೂ ಅಂಬೇಡ್ಕರ್ ಅವರು ದಿನಕ್ಕೆ 14 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಬೇಕಾಯಿತು. ಜಗತ್ತಿನ ಅತೀ ದೊಡ್ಡ ಲಿಖಿತ ಸಂವಿಧಾನವನ್ನು ದೇಶಕ್ಕೆ ನೀಡಿದ ಅಂಬೇಡ್ಕರ್ ಅವರ ಕೊಡುಗೆಯನ್ನು ಮನದುಂಬಿ ಶ್ಲಾಘಿಸಿದ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಇದಕ್ಕಾಗಿ ಕೃತಜ್ಞನಾಗಿದ್ದೇನೆ ಎಂದುಅಹೇಳಿದರು.

ಭಾರತದ ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರ ಮತ್ತು ರಾಷ್ಟ್ರೀಯ ಚಿಹ್ನೆಯಾಗಿ ಸಾರನಾಥದಲ್ಲಿ ಅಶೋಕ ಸ್ತಂಭದಲ್ಲಿರುವ ಸಿಂಹವನ್ನು ಪರಿಗಣಿಸಬೇಕೆಂದು ಅಂಬೇಡ್ಕರ್ ಸೂಚಿಸಿದಾಗ, ಇಡೀ ದೇಶವೇ ಅದನ್ನು ಒಪ್ಪಿಕೊಂಡಿತು. ಅಂತಲೇ ಅಂಬೇಡ್ಕರ್ ಬರೀ ಒಂದು ಸಮುದಾಯದ ನಾಯಕರಾಗಿ ಉಳಿದಿಲ್ಲ. ಲಂಡನ್‌ನ ಮ್ಯೂಸಿಯಂನಲ್ಲಿ ಕಾರ್ಲ್ ಮಾರ್ಕ್ಸ್‌ಜೊತೆಗೆ ಅಂಬೇಡ್ಕರ್ ಅವರ ಭಾವಚಿತ್ರವನ್ನು ಅತ್ಯಂತ ಗೌರವದಿಂದ ಅನಾವರಣಗೊಳಿಸಲಾಗಿದೆ.

ಭಾರತದ ಜನತೆಗೆ ಡಾ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿದ ಮೂಲಭೂತದ ಹಕ್ಕುಗಳನ್ನು ಕಸಿದುಕೊಂಡು ಅದರ ಆಶಯಗಳನ್ನು ಬುಡಮೇಲು ಮಾಡುತ್ತಿರುವ ಈ ದಿನಗಳಲ್ಲಿ ಅಂಬೇಡ್ಕರ್ ಅವರನ್ನು ಮತ್ತೆ ನಾವು ನೆನಪಿಸಿಕೊಳ್ಳಬೇಕಿದೆ. ಅವರು ರಚಿಸಿದ ಸಾಹಿತ್ಯವನ್ನು ನಿತ್ಯವೂ ಓದಿಕೊಳ್ಳಬೇಕಿದೆ. ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ನೋಡಲಾಗುತ್ತಿರುವುದು ಕಂಡು ಅಂಬೇಡ್ಕರ್ ಮಹಿಳೆಗೆ ಸ್ವಾತಂತ್ರ್ಯ ನೀಡುವ ಆಸ್ತಿ ಹಕ್ಕು ಪ್ರತಿಪಾದಿಸುವ ಹಿಂದೂ ಕೋಡ್ ಬಿಲ್ ಮಂಡಿಸಿದರು. ಅದಕ್ಕೆ ಹಿಂದೂ ಮೂಲಭೂತವಾದಿಗಳಿಂದಲೇ ವಿರೋಧ ಬಂತು. ಇದರಿಂದ ತೀವ್ರವಾಗಿ ನೊಂದುಕೊಂಡ ಅಂಬೇಡ್ಕರ್ ಅಂದೇ ತಮ್ಮ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸೈದ್ಧಾಂತಿಕ ಕಾರಣಕ್ಕಾಗಿ ಕೇಂದ್ರ ಸಚಿವ ಸ್ಥಾನಕ್ಕಾಗಿ ರಾಜೀನಾಮೆ ನೀಡಿದ ಇನ್ನೊಬ್ಬ ವ್ಯಕ್ತಿ ಈ ದೇಶದಲ್ಲಿ ಇಲ್ಲ.

ಈ ದೇಶಕ್ಕೆ ಅಂಬೇಡ್ಕರ್ ಅವರು ನೀಡಿರುವ ಕೊಡುಗೆಯನ್ನು ಕಡೆಗಣಿಸಿ ಕಳೆದ 70 ವರ್ಷಗಳಲ್ಲಿ ಯಾವ ಸಾಧನೆಯೂ ಆಗಿಲ್ಲ. ದೇಶವನ್ನು ಉದ್ಧಾರ ಮಾಡಲು ತಾನು ಅವತರಿಸಿ ಬಂದಿದ್ದೇನೆಂದು ಮರಿ ಹಿಟ್ಲರ್‌ನೊಬ್ಬ ಅರಚಾಡುತ್ತಿರುವ ಈ ದಿನಗಳಲ್ಲಿ ಅಂಬೇಡ್ಕರ್ ಅವರು ತೋರಿಸಿದ ಬೆಳಕಿನ ದಾರಿಯಲ್ಲಿ ನಾವು ಸಾಗಬೇಕಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News