ಧ್ವಂಸಗೊಂಡ ಸಂವಿಧಾನ ಪುನರ್ ಸ್ಥಾಪನೆಯಾಗಲಿ

Update: 2016-12-06 05:41 GMT

ಮತ್ತೆ ಡಿಸೆಂಬರ್ 6 ಬಂದಿದೆ. ಒಂದು ಗುಂಪಿಗೆ ಕರಾಳ ದಿನ. ಮಗದೊಂದು ಗುಂಪಿಗೆ ವಿಜಯದ ದಿನ. ಇಂದು ಬಹುಸಂಖ್ಯಾತ ಜಾತ್ಯತೀತರೂ ಸೇರಿದಂತೆ ದೊಡ್ಡ ಗುಂಪು ಡಿಸೆಂಬರ್ 6ನ್ನು ಕೇವಲ ಮುಸ್ಲಿಮರಿಗೆ ಸೀಮಿತವಾದ ದಿನವಾಗಿ ನೋಡುತ್ತಾ ಬಂದಿದೆ. ಮತ್ತು ಬಾಬರಿ ಮಸೀದಿ ಮರು ನಿರ್ಮಾಣ ಮಾಡುವ ಮೂಲಕ ಮುಸ್ಲಿಮರಿಗೆ ನ್ಯಾಯ ನೀಡಬೇಕು ಎಂಬ ಅರ್ಥದಲ್ಲೂ ಮಾತನಾಡುತ್ತಿದೆ. ಆದರೆ ಡಿಸೆಂಬರ್ 6 ಈ ದೇಶದ ಮುಸ್ಲಿಮರಿಗಷ್ಟೇ ಸೀಮಿತವಾದ ದಿನವೇ? ನಿಜಕ್ಕೂ ಅಂದು ಧ್ವಂಸಗೊಂಡದ್ದು ಮಸೀದಿಯೋ ಅಥವಾ ಸಂವಿಧಾನವೋ? ಈ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳುವವರಿಗೆ ಡಿಸೆಂಬರ್ 6ರ ಸಮಸ್ಯೆಗೆ ಪರಿಹಾರವೂ ದೊರಕುವುದಿಲ್ಲ. ಹಾಗೆ ನೋಡಿದರೆ ಬಾಬರ್‌ನಿಗೂ ಮುಸ್ಲಿಮ್ ಧರ್ಮಕ್ಕೂ ಇರುವ ಸಂಬಂಧ ತೀರಾ ತೆಳುವಾದುದು.

ಬಾಬರ್ ರಾಜಕೀಯ ಕಾರಣಕ್ಕಾಗಿ ಈ ದೇಶಕ್ಕೆ ಆಗಮಿಸಿದ. ಆತ ಪಕ್ಕಾ ಧಾರ್ಮಿಕ ವ್ಯಕ್ತಿಯೂ ಆಗಿರಲಿಲ್ಲ. ಧರ್ಮ ವಿಸ್ತರಣೆ ಅವನ ಗುರಿಯೂ ಆಗಿರಲಿಲ್ಲ. ಆತನ ಬದುಕು, ದೈನಂದಿನ ಜೀವನಗಳು ಯಾವುದೇ ಕಟ್ಟರ್ ಮುಸ್ಲಿಮನನ್ನು ಹೋಲುತ್ತಿರಲಿಲ್ಲ. ಆತ ಬರೆದ ಕೃತಿಯಲ್ಲೇ ಅದು ಸಾಬೀತಾಗುತ್ತದೆ. ಆದುದರಿಂದ ಆತ ಒಂದು ವೇಳೆ ಮಸೀದಿ ಕಟ್ಟಿದ್ದಾನೆಂದಾಕ್ಷಣ ಆ ಮಸೀದಿ ಮುಸ್ಲಿಮರ ಪಾಲಿಗೆ ವಿಶೇಷವಾಗಬೇಕಾಗಿಲ್ಲ. ಹಾಗೆ ನೋಡಿದರೆ ಯಾವುದೇ ಕಟ್ಟಡದಲ್ಲಿ ನಿಯಮಿತವಾಗಿ ನಮಾಝ್ ನಡೆಯುತ್ತಿದ್ದರೆ ಮಾತ್ರ ಅದನ್ನು ಮುಸ್ಲಿಮರು ಮಸೀದಿಯೆಂದು ಪರಿಗಣಿಸುತ್ತಾರೆ. ಆದುದರಿಂದ ಬಾಬರ್ ಕಟ್ಟಿಸಿದ ಎನ್ನುವ ಕಾರಣಕ್ಕಾಗಿ ಬಾಬರಿ ಮಸೀದಿ ಮುಸ್ಲಿಮರ ಪಾಲಿಗೆ ಯಾವ ರೀತಿಯಲ್ಲೂ ಪ್ರಮುಖವಾಗಬೇಕಾಗಿಲ್ಲ.

ಬಾಬರಿ ಮಸೀದಿಯಲ್ಲಿ ರಾಮನ ದೇವಸ್ಥಾನವಿತ್ತು ಎನ್ನುವುದು ನ್ಯಾಯಾಲಯದ ಮೂಲಕ ದಾಖಲೆ ಸಮೇತ ಸಾಬೀತಾಗಿದ್ದೇ ಆದರೆ ಮುಸ್ಲಿಮರು ಅದನ್ನು ನ್ಯಾಯಾಲಯಕ್ಕೆ ಒಪ್ಪಿಸಲೂ ಸಿದ್ಧರಿದ್ದರು. ಆದರೆ ನ್ಯಾಯಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲೇ ಆ ಕಟ್ಟಡವನ್ನು ಸಂವಿಧಾನಕ್ಕೆ, ನ್ಯಾಯಾಲಯಕ್ಕೆ ವಂಚಿಸಿ, ರೌಡಿಗಳು ಮತ್ತು ಕ್ರಿಮಿನಲ್‌ಗಳನ್ನು ಬಳಸಿ ಧ್ವಂಸಗೊಳಿಸಲಾಯಿತು. ಅಂದು ನಿಜಕ್ಕೂ ಧ್ವಂಸಗೊಂಡದ್ದು ಮಸೀದಿಯಲ್ಲ, ಈ ದೇಶದ ಸಂವಿಧಾನ. ಆದುದರಿಂದ ಡಿಸೆಂಬರ್ 6 ಸಂವಿಧಾನವನ್ನು ಒಪ್ಪಿಕೊಂಡಂತಹ ಸಕಲ ಭಾರತೀಯರಿಗೂ ಕರಾಳ ದಿನವೇ ಹೌದು.

ಅಯೋಧ್ಯೆಯಲ್ಲಿ ಮರುಸ್ಥಾಪನೆಗೊಳ್ಳಬೇಕಾದುದು ಮಸೀದಿಯಲ್ಲ, ಬದಲಿಗೆ ಧ್ವಂಸಗೊಂಡ ಸಂವಿಧಾನ ಮರುಸ್ಥಾಪನೆಗೊಳ್ಳಬೇಕಾಗಿದೆ. ಈ ದೇಶದ ಸಂವಿಧಾನಕ್ಕೆ ಧಕ್ಕೆಯಾದರೆ, ನ್ಯಾಯವ್ಯವಸ್ಥೆಗೆ ಅವಮಾನವಾದರೆ ಅದು ಸಕಲ ಭಾರತೀಯರ ಅವಮಾನವಾಗಿರುತ್ತದೆ. ಇಡೀ ದೇಶ ಅದರ ಫಲಾನುಭವಿಯಾಗಿರುತ್ತದೆ. ಆದುದರಿಂದ ಡಿಸೆಂಬರ್ 6 ನಮ್ಮ ಪಾಲಿಗೆ, ದುರ್ಬಲಗೊಳ್ಳುತ್ತಿರುವ ಸಂವಿಧಾನದ ಬುಡವನ್ನು ಗಟ್ಟಿಗೊಳಿಸುವುದಕ್ಕಾಗಿರುವ ದಿನವಾಗಿ ಪರಿವರ್ತನೆಯಾಗಬೇಕಾಗಿದೆ.

 ಡಿಸೆಂಬರ್ 6 ನಮ್ಮ ಸಂವಿಧಾನಕ್ಕೆ, ನ್ಯಾಯಾಲಯಕ್ಕೆ ಆಗಿರುವ ಅತಿ ದೊಡ್ಡ ಮುಖಭಂಗ. ಅದರ ಮುಂದುವರಿಕೆಯ ರೂಪದಲ್ಲಿ ದೇಶಾದ್ಯಂತ ಹಿಂಸಾಚಾರ ನಡೆಯಿತು. ಮುಂಬೈ ಕೋಮುಗಲಭೆಗಳು ನಡೆದವು. ಮುಂದಿನ ಗುಜರಾತ್ ಹತ್ಯಾಕಾಂಡದ ಮೇಲೂ ಸಂವಿಧಾನದ ಈ ವೈಫಲ್ಯ ತನ್ನದೇ ರೀತಿಯಲ್ಲಿ ಕೆಲಸ ಮಾಡಿದೆ. ಡಿಸೆಂಬರ್ 6ರ ದುರಂತ ನಡೆದಿರುವುದು ಕೇವಲ ದುಷ್ಕರ್ಮಿಗಳಿಂದಲೋ ಅಥವಾ ಭಾವುಕ ಮತಾಂಧರಿಂದಲೋ ಆಗಿದ್ದರೆ ಅದನ್ನು ಇಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿರುವ ಅಗತ್ಯವಿರಲಿಲ್ಲವೇನೋ. ಕೇಂದ್ರದಲ್ಲಿ ಆಗ ಅಧಿಕಾರದಲ್ಲಿದ್ದುದು ಕಾಂಗ್ರೆಸ್ ಸರಕಾರ. ಪಿ. ವಿ. ನರಸಿಂಹರಾವ್ ಆಗ ಪ್ರಧಾನಿಯಾಗಿದ್ದರು. ಬಾಬರಿ ಮಸೀದಿ ಧ್ವಂಸವೆನ್ನುವುದು ಎಲ್ಲೋ ಕಾಡಲ್ಲಿ ಗುಟ್ಟಾಗಿ ನಡೆದ ಕೃತ್ಯವಲ್ಲ.

ಬಹಿರಂಗವಾಗಿ, ಸಾರ್ವಜನಿಕವಾಗಿ ಹಾಡಹಗಲೇ ನಡೆದ ಕೃತ್ಯ ಅದು. ಈ ದೇಶದಲ್ಲಿ ಗುಪ್ತಚರ ಇಲಾಖೆಯಿದೆ. ಪೊಲೀಸರಿದ್ದಾರೆ. ಆದರೂ ಈ ಬಗ್ಗೆ ಒಂದು ಸಣ್ಣ ಸುಳಿವೂ ಕೇಂದ್ರ ಸರಕಾರಕ್ಕೆ ಸಿಗಲಿಲ್ಲ ಎನ್ನುವುದೇ ಹಾಸ್ಯಾಸ್ಪದ ವಿಷಯ. ಅಂದಿನ ಪ್ರಧಾನಿ ನರಸಿಂಹ ರಾವ್ ಅವರು ಬಾಬರಿ ಮಸೀದಿ ಧ್ವಂಸಕ್ಕೆ ನೇರವಾಗಿಯೇ ಸಹಕರಿಸಿದ್ದರು ಎಂಬ ವರದಿಗಳು ಈಗಾಗಲೇ ಮಾಧ್ಯಮಗಳಲ್ಲಿ ಬಂದಿವೆ. ಇದರಲ್ಲಿ ಸತ್ಯಾಂಶ ಇಲ್ಲದೇ ಇಲ್ಲ. ಕೇಂದ್ರ ಸರಕಾರ ಸೂಕ್ತ ಸಮಯದಲ್ಲಿ ಸೇನೆಯನ್ನು ರವಾನಿಸಿ ಮುಂಜಾಗೃತೆ ವಹಿಸಿದ್ದರೆ ಆ ಕೃತ್ಯವನ್ನು ತಡೆಯಬಹುದಿತ್ತು. ಆದರೆ ಅದನ್ನು ತಡೆಯುವಲ್ಲಿ ಯಾವ ರೀತಿಯ ಪ್ರಯತ್ನವನ್ನೂ ಕೇಂದ್ರ ಸರಕಾರ ಮಾಡಲಿಲ್ಲ. ಅದರ ಅರ್ಥ, ಬಾಬರಿ ಮಸೀದಿ ಧ್ವಂಸ ಪಿ.ವಿ. ನರಸಿಂಹರಾವ್ ಅವರ ಒಳಗಿನ ಬೇಡಿಕೆಯೂ ಆಗಿತ್ತು ಎಂದಲ್ಲವೆ? ಹೀಗೆ ಒಂದು ಸರಕಾರದ ನೇತೃತ್ವದಲ್ಲಿ ನಮ್ಮ ಸಂವಿಧಾನಕ್ಕೆ ದ್ರೋಹ ಎಸಗಲಾಯಿತು.

 ಬಾಬರಿ ಮಸೀದಿ ಧ್ವಂಸಕ್ಕೆ ಡಿಸೆಂಬರ್ 6ನ್ನೇ ಯಾಕೆ ಆಯ್ಕೆ ಮಾಡಿಕೊಂಡರು? ಎಂಬ ಪ್ರಶ್ನೆಗೆ ತುಂಬಾ ತಲೆಕೆಡಿಸಿಕೊಳ್ಳುವ ಅಗತ್ಯವೇನೂ ಇಲ್ಲ. ಡಿಸೆಂಬರ್ 6ರಂದು ಅಂಬೇಡ್ಕರ್ ಅವರು ತೀರಿ ಹೋಗಿರುವ ದಿನ. ಆ ದಿನವನ್ನು ಸಂಘಪರಿವಾರ ರೂಪಕವಾಗಿ ಬಳಸಿಕೊಂಡಿತು. ಇಂದು ಬಾಬರಿ ಮಸೀದಿ ಧ್ವಂಸಗೈದು ವಿಜಯ ದಿನ ಆಚರಿಸುತ್ತಿರುವವರು ಪರೋಕ್ಷವಾಗಿ ಅಂಬೇಡ್ಕರ್ ತೀರಿ ಹೋದ ದಿನವನ್ನು ಸಂಭ್ರಮಿಸುತ್ತಿದ್ದಾರೆ. ಈ ದೇಶಕ್ಕೆ ಜಾತ್ಯತೀತ ಸಂವಿಧಾನವನ್ನು ಕೊಟ್ಟ ಅಂಬೇಡ್ಕರ್ ಅವರನ್ನು ಅವಮಾನಿಸುವುದು ಅವರ ಮುಖ್ಯ ಉದ್ದೇಶವೂ ಆಗಿತ್ತು. ಅವರ ಬಾಣದ ತೋರಿಕೆಯ ಗುರಿ ಬಾಬರಿ ಮಸೀದಿಯಾಗಿದ್ದರೂ, ಸೀಳಿದ್ದು ಅಂಬೇಡ್ಕರ್ ಸಂವಿಧಾನದ ಆಶಯಗಳನ್ನಾಗಿತ್ತು. ಇಂದು ನಾವು ಈ ಕಾರಣಕ್ಕಾಗಿ ಆತಂಕ ಪಡಬೇಕಾಗಿದೆ.

ನರೇಂದ್ರ ಮೋದಿಯ ಆಡಳಿತದ ಸಂದರ್ಭದಲ್ಲಿ ಸಂವಿಧಾನ ಇನ್ನಷ್ಟು ದುರ್ಬಲಗೊಳ್ಳುತ್ತಿದೆ. ಬಂಡವಾಳಶಾಹಿ ವ್ಯವಸ್ಥೆ ಮತ್ತು ಮತಾಂಧ ಶಕ್ತಿಗಳು ಈ ಸಂದರ್ಭದಲ್ಲಿ ಪ್ರಾಬಲ್ಯವನ್ನು ಸಾಧಿಸುತ್ತಿವೆ ಮತ್ತು ಎರಡೂ ಶಕ್ತಿಗಳು ಸಂವಿಧಾನದ ಮೇಲೆ, ಪ್ರಜಾಸತ್ತೆಯ ಮೇಲೆ ತಮ್ಮ ಹಿಡಿತವನ್ನು ಸಾಧಿಸಲು ಮುಂದಾಗಿವೆ. ಸಂವಿಧಾನ ಅತ್ಯಂತ ಆಪತ್ತಿನಲ್ಲಿರುವ ಸಂದರ್ಭ ಇದಾಗಿದೆ. ದುರದೃಷ್ಟವಶಾತ್ ಯಾವ ನ್ಯಾಯಾಲಯ ಸಂವಿಧಾನದ ರಕ್ಷಣೆಯ ಹೊಣೆಯನ್ನು ಹೊತ್ತುಕೊಳ್ಳಬೇಕಿತ್ತೋ, ಅದುವೇ ಹತ್ತು ಹಲವು ಗೊಂದಲಗಳನ್ನು ತನ್ನೊಳಗೆ ಸುತ್ತಿಟ್ಟುಕೊಂಡಿದೆ.

ಬಾಬರಿ ಮಸೀದಿ ಧ್ವಂಸದಲ್ಲಿ ಭಾಗಿಯಾದ ಒಬ್ಬನೇ ಒಬ್ಬ ನೇತಾರನನ್ನೂ ಶಿಕ್ಷಿಸಲು ನಮ್ಮ ನ್ಯಾಯಾಲಯಕ್ಕೆ ಸಾಧ್ಯವಾಗಲಿಲ್ಲ. ಜೊತೆಗೆ ಕಟ್ಟೆ ಪಂಚಾಯತ್ ರೀತಿಯಲ್ಲಿ ಬಾಬರಿ ಮಸೀದಿ ನೆಲವನ್ನು ಹಂಚಿ, ನ್ಯಾಯದ ಉದ್ದೇಶವನ್ನೇ ನಗೆಪಾಟಲಿಗೀಡು ಮಾಡಿತ್ತು. ಈ ನ್ಯಾಯ ತೀರ್ಮಾನ ಪರೋಕ್ಷವಾಗಿ ಬಾಬರಿ ಮಸೀದಿ ಧ್ವಂಸವನ್ನು ಸಮರ್ಥಿಸುವಂತಿತ್ತು. ನ್ಯಾಯಾಲಯವೇ ಸಂವಿಧಾನದ ಆಶಯಗಳನ್ನು ರಕ್ಷಿಸಲು ವಿಫಲವಾಗುತ್ತಿರುವ ಈ ಸಂದರ್ಭದಲ್ಲಿ, ಜನಸಾಮಾನ್ಯರು ಸಂಘಟಿತರಾಗಿ ಸಂವಿಧಾನದ ಪುನರ್ ಸ್ಥಾಪನೆಗೆ ಮುಂದಾಗುವುದು ಉಳಿದಿರುವ ಒಂದೇ ಒಂದು ದಾರಿ.

ಈ ನಿಟ್ಟಿನಲ್ಲಿ ಡಿಸೆಂಬರ್ 6 ಸಂವಿಧಾನದ ಆಶಯದ ಮೇಲೆ ನಂಬಿಕೆಯಿರುವ ಎಲ್ಲರ ದಿನವೂ ಹೌದು. ಇದು ಭಾವಾವೇಶದ ಮಾತುಗಳನ್ನಾಡುವ ದಿನವಾಗಬಾರದು. ಜನರನ್ನು ದೊಂಬಿಗೆಬ್ಬಿಸುವ ದಿನವಾಗಬಾರದು. ಬದಲಿಗೆ ಸಂವಿಧಾನವನ್ನು ಸರ್ವಾಧಿಕಾರಿಗಳಿಂದ, ಬಂಡವಾಳಶಾಹಿಗಳಿಂದ, ಮತಾಂಧರಿಂದ ರಕ್ಷಿಸುವುದಕ್ಕೆ ಸಂಘಟಿತರಾಗಲು ನಮಗೆಲ್ಲ ಈ ದಿನ ನೆಪವಾಗಬೇಕು. ಈ ಕಾರಣಕ್ಕಾಗಿಯೇ ಡಿಸೆಂಬರ್ 6ನ್ನು ಸಂವಿಧಾನದ ಕುರಿತಂತೆ ಜನಸಾಮಾನ್ಯರಲ್ಲಿ ಪ್ರಜ್ಞೆಯನ್ನು ಬಿತ್ತುವ ದಿನವಾಗಿ ಮಾರ್ಪಡಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News