ನಾಳಿನ ನೊಬೆಲ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಬಾಬ್ ಡೈಲಾನ್ ಗೈರು

Update: 2016-12-08 18:47 GMT

ಸ್ಟಾಕ್‌ಹೋಮ್ (ಸ್ವೀಡನ್), ಡಿ. 8: ಈ ವರ್ಷ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದಿರುವ ರಾಕ್ ಗಾಯಕ ಬಾಬ್ ಡೈಲಾನ್ ನೊಬೆಲ್ ಪ್ರಶಸ್ತಿ ಸಮಿತಿಗೆ ಕೊನೆಗೂ ಸವಾಲಾಗಿಯೇ ಉಳಿದಿದ್ದಾರೆ.
ಈ ಒಲ್ಲದ ವ್ಯಕ್ತಿಗೆ ಪ್ರಶಸ್ತಿ ಕೊಟ್ಟು ತಾನು ತಪ್ಪು ಮಾಡಿದ್ದೇನೆಯೇ ಎಂಬುದಾಗಿ ನೊಬೆಲ್ ಸಮಿತಿ ಗಂಭೀರವಾಗಿ ಯೋಚಿಸುವಂತಾಗಿದೆ. ಮುಂದಿನ ವರ್ಷಗಳಲ್ಲಿ ಆಯ್ಕೆ ನಿಯಮಾವಳಿಗಳ ಬದಲಾವಣೆಗೂ ಈ ಘಟನೆ ಕಾರಣವಾದರೆ ಅಚ್ಚರಿಯಿಲ್ಲ.
ಸ್ಟಾಕ್‌ಹೋಮ್‌ನಲ್ಲಿ ಶನಿವಾರ ನಡೆಯಲಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಅಮೆರಿಕದ ಜನಪ್ರಿಯ ಗಾಯಕ ನಿರ್ಧರಿಸಿದ್ದಾರೆ.
ಸಾಹಿತ್ಯ, ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗಳ ವಿತರಣೆ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ಡಿಸೆಂಬರ್ 10ರಂದು ಸ್ಟಾಕ್‌ಹೋಮ್‌ನಲ್ಲಿ ನಡೆಯುತ್ತದೆ. ಆದರೆ, ಸಾಹಿತ್ಯ ನೊಬೆಲ್ ಪಡೆದ ಪ್ರಥಮ ಗೀತೆ ರಚನೆಕಾರ ಈ ಬಾರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ. 'ಪೂರ್ವನಿಗದಿತ ಕಾರ್ಯಕ್ರಮ'ಗಳಿಂದಾಗಿ ತನಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಸೂಚನೆಯನ್ನು ಅವರು ನೀಡಿದ್ದಾರೆ.
 ಅಕ್ಟೋಬರ್ 14ರಂದು ಪ್ರಶಸ್ತಿ ಘೋಷಣೆಯಾದಂದಿನಿಂದಲೂ ಡೈಲಾನ್ ಆಸಕ್ತಿರಹಿತರಾಗಿಯೇ ವರ್ತಿಸಿದ್ದರು. ಪ್ರಶಸ್ತಿ ಘೋಷಣೆಯ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಲು ಅವರು ಹಲವು ವಾರಗಳ ಕಾಲ ನಿರಾಕರಿಸಿದ್ದರು.
ಇದರಿಂದ ಬೇಸತ್ತ ಸ್ವೀಡಿಶ್ ಅಕಾಡಮಿಯ ಸದಸ್ಯರೊಬ್ಬರು, 75 ವರ್ಷದ ಡೈಲಾನ್‌ರನ್ನು ''ಅವಿನಯಿ ಮತ್ತು ಅಹಂಕಾರಿ'' ಎಂಬುದಾಗಿ ಬಣ್ಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News