ವೆಲ್ಲೂರಿನಲ್ಲಿ 24 ಕೋ.ರೂ.ಗಳ ಹೊಸನೋಟುಗಳು ಪತ್ತೆ

Update: 2016-12-10 09:06 GMT

ಚೆನ್ನೈ,ಡಿ.10: ನೋಟು ರದ್ದತಿಯ ಬಳಿಕ ಅತ್ಯಂತ ಬೃಹತ್ ನಗದು ಮತ್ತು ಚಿನ್ನ ವಶ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಮತ್ತೆ 24 ಕೋ.ರೂ.ಗಳ ಹೊಸನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ನಿನ್ನೆಯವರೆಗೆ 142 ಕೋ.ರೂ.ಗೂ ಅಧಿಕ ಮೌಲ್ಯದ ಅಕ್ರಮ ಸಂಪತ್ತನ್ನು ವಶಪಡಿಸಿಕೊಳ್ಳಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಅಧಿಕಾರಿಗಳು ವಿಚಾರಣೆಗೊಳಪಡಿಸಿರುವ ಆರೋಪಿಯು ನೀಡಿದ ಮಾಹಿತಿಯಂತೆ ವೆಲ್ಲೂರಿನಲ್ಲಿ ಕಾರೊಂದರಲ್ಲಿ 24 ಕೋ.ಮೌಲ್ಯದ 2,000 ರೂ.ನೋಟುಗಳು ಪತ್ತೆಯಾಗಿವೆ. ಇದರೊಂದಿಗೆ ಇದೊಂದೇ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿರುವ ಅಕ್ರಮ ಸಂಪತ್ತಿನ ಮೌಲ್ಯ 166 ಕೋ.ರೂ.ಗೇರಿದೆ.

 ಕಳೆದೆರಡು ದಿನಗಳಲ್ಲಿ ತಮಿಳುನಾಡಿನಲ್ಲಿ ಮರಳು ಗಣಿಗಾರಿಕೆಯಲ್ಲಿ ತೊಡಗಿಕೊಂಡಿರುವ ಉದ್ಯಮಿಗಳ ಗುಂಪೊಂದಕ್ಕೆ ಸೇರಿದ ಎಂಟು ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದ್ದ ಅಧಿಕಾರಿಗಳು 96.89 ಕೋ.ರೂ.ವೌಲ್ಯದ ಹಳೆಯ 500 ಮತ್ತು 1,000 ರೂ.ನೋಟುಗಳು, 9.63 ಕೋ.ರೂ.ಮೌಲ್ಯದ ಹೊಸ 2,000 ರೂ.ನೋಟುಗಳು ಮತ್ತು ಸುಮಾರು 36.29 ಕೋ.ರೂ.ಮೌಲ್ಯದ 127 ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದರು.

ಸರಕಾರಿ ಗುತ್ತಿಗೆದಾರ ಶೇಖರ ರೆಡ್ಡಿ ಎಂಬಾತ ಸಂಪೂರ್ಣ ಹಣ ಮತ್ತು ಚಿನ್ನ ತನಗೆ ಸೇರಿದ್ದು ಎಂದು ಹೇಳಿಕೊಂಡಿದ್ದು, ಅಧಿಕಾರಿಗಳು ಆತನನ್ನು ಮತ್ತು ಇತರ ಕೆಲವರನ್ನು ವಿಚಾರಣೆಗೊಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News