ನೋಟು ನಿಷೇಧ ಕುರಿತು ಸಂಸತ್ತಿನಲ್ಲಿ ಮಾತನಾಡಲು ಬಿಡದ ಪ್ರತಿಪಕ್ಷಗಳು : ಪ್ರಧಾನಿಯಿಂದ ತೀವ್ರ ತರಾಟೆ

Update: 2016-12-10 09:20 GMT

ದೀಸಾ(ಗುಜರಾತ್),ಡಿ.10: 500 ಮತ್ತು 1,000 ರೂ.ಗಳ ಹಳೆಯ ನೋಟುಗಳ ರದ್ದತಿ ಕುರಿತಂತೆ ಸಂಸತ್ತಿನಲ್ಲಿ ಪದೇಪದೇ ವ್ಯತ್ಯಯವನ್ನುಂಟು ಮಾಡುತ್ತಿರುವುದಕ್ಕಾಗಿ ಇಂದು ಪ್ರತಿಪಕ್ಷಗಳನ್ನು ತೀವ್ರ ತರಾಟೆಗೆತ್ತಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ನೋಟು ರದ್ದತಿ ಕುರಿತು ತನಗೆ ಸಂಸತ್ತಿನಲ್ಲಿ ಮಾತನಾಡಲೂ ಅವು ಅವಕಾಶವನ್ನು ನೀಡುತ್ತಿಲ್ಲ ಎಂದು ಹೇಳಿದರು.

ಇಲ್ಲಿ ಕೃಷಿಕರ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಚರ್ಚೆಗೆ ಸಿದ್ಧವಿರುವುದಾಗಿ ಸರಕಾರವು ಹೇಳುತ್ತಲೇ ಇದೆ. ಆದರೂ ತನಗೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನೀಡಲಾಗುತ್ತಿಲ್ಲ, ಹೀಗಾಗಿ ಜನಸಭೆಯಲ್ಲಿ ಮಾತನಾಡುತ್ತಿದ್ದೇನೆ ಎಂದರು.

ಪ್ರತಿಪಕ್ಷಗಳು ಗಲಾಟೆಯೆಬ್ಬಿಸುವ ಮೂಲಕ ಸಂಸತ್ತು ಕಾರ್ಯ ನಿರ್ವಹಿಸಲು ಅವಕಾಶವನ್ನು ನೀಡುತ್ತಿಲ್ಲ. ಸಂಸತ್ತಿನಲ್ಲಿ ನಡೆಯುತ್ತಿರುವ ಘಟನೆಗಳು ಅಪಾರ ರಾಜಕೀಯ ಅನುಭವವಿರುವ ರಾಷ್ಟ್ರಪತಿಗಳನ್ನೂ ಸಿಟ್ಟಿಗೆಬ್ಬಿಸಿದೆ ಎಂದು ಬೆಟ್ಟು ಮಾಡಿದರು.

ಹಣಕ್ಕಾಗಿ ಸರದಿ ಸಾಲುಗಳಲ್ಲಿ ನಿಲ್ಲಬೇಕಾಗಿಲ್ಲ ಮತ್ತು ಮೊಬೈಲ್ ಬ್ಯಾಂಕಿಂಗ್‌ನ್ನು ಬಳಸಬಹುದಾಗಿದೆ ಎನ್ನುವುದನ್ನು ಜನರಿಗೆ ತಿಳಿಸುವಲ್ಲಿ ನೆರವಾಗುವಂತೆ ಅವರು ಪ್ರತಿಪಕ್ಷಗಳನ್ನು ಕೋರಿದರು.

  ಮಹಾತ್ಮಾ ಗಾಂಧಿ ಮತ್ತು ಸರದಾರ ವಲ್ಲಭಭಾಯಿ ಪಟೇಲ್ ಅವರಿಗೆ ಜನ್ಮ ನೀಡಿರುವ ಈ ನೆಲದಲ್ಲಿ ನಿಂತು ಪ್ರತಿಪಕ್ಷದಲ್ಲಿಯ ನನ್ನ ಸ್ನೇಹಿತರೊಂದಿಗೆ ಇದನ್ನು ಹಂಚಿಕೊಳ್ಳಲು ಬಯಸುತ್ತಿದ್ದೇನೆ. ಚುನಾವಣೆಗಳ ಸಂದರ್ಭದಲ್ಲಿ ನಾವು ಬಹಳಷ್ಟು ಕಾವೇರಿದ ಚರ್ಚೆಗಳಲ್ಲಿ, ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುತ್ತೇವೆ. ಆದರೆ ನಾವೆಲ್ಲ ಹೆಚ್ಚಿನ ಮತದಾನಕ್ಕೆ ಕರೆ ನೀಡುತ್ತಿರುತ್ತೇವೆ. ಅದೇ ರೀತಿ ನೀವು ನನ್ನನ್ನು ವಿರೋಧಿಸಬಹುದು. ಆದರೆ ಹಣಕಾಸು ವಹಿವಾಟುಗಳಿಗಾಗಿ ಬ್ಯಾಂಕಿಂಗ್, ತಂತ್ರಜ್ಞಾನ ಬಳಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಎಂದು ಅವರು ಹೇಳಿದರು.

ಆದರೆ ಪ್ರಧಾನಿಯವರ ಹೇಳಿಕೆಗೆ ತಿರುಗೇಟು ನೀಡಿರುವ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು, ನೋಟು ರದ್ದತಿಯಿಂದಾಗಿ ಜನರು ಎದುರಿಸುತ್ತಿರುವ ಬವಣೆಗಳಿಗೆ ಮೋದಿಯವರ ಬಳಿ ಯಾವುದೇ ಪರಿಹಾರವಿಲ್ಲ ಎಂದು ಕುಟುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News