ಆಕ್ಸಿಸ್ ಬ್ಯಾಂಕ್ ಪರವಾನಿಗೆ ರದ್ದಾಗುವ ' ಸುದ್ದಿ' ಯ ಸತ್ಯವೇನು ?

Update: 2016-12-12 16:39 GMT

 ಮುಂಬೈ,ಡಿ.12: ತನ್ನ ಬ್ಯಾಂಕಿಂಗ್ ಪರವಾನಿಗೆಯನ್ನು ರದ್ದುಗೊಳಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಪ್ರಾದೇಶಿಕ ವೃತ್ತಪತ್ರಿಕೆಯೊಂದರ ವರದಿಯನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಖಾಸಗಿ ರಂಗದ ಮೂರನೇ ಅತಿ ದೊಡ್ಡ ಬ್ಯಾಂಕ್ ಆಗಿರುವ ಆ್ಯಕ್ಸಿಸ್ ಬ್ಯಾಂಕ್ ಈ ವರದಿಯು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶ ಪೂರಿತವಾಗಿದೆ ಎಂದು ಹೇಳಿದೆ. ತಾನು ಸದೃಢ ವ್ಯವಸ್ಥೆಯನ್ನು ಹೊಂದಿದ್ದು, ಆರ್‌ಬಿಐ ನಿಯಮಾವಳಿಗಳನ್ನು ಚಾಚೂತಪ್ಪದೆ ಪಾಲಿಸುತ್ತಿರುವುದಾಗಿ ಅದು ಹೇಳಿದೆ.


 ಸರಕಾರದ ಆದೇಶದಂತೆ ಹಳೆಯ ನೋಟುಗಳ ವಿನಿಮಯ ಯೋಜನೆ ಜಾರಿ ಸಂದರ್ಭ ತನ್ನ ಒಂದು ಶಾಖೆಯಲ್ಲಿ ನಡೆದಿರುವ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸುಮಾರು 19 ನೌಕರರನ್ನು ಅಮಾನತುಗೊಳಿಸಿರುವುದಾಗಿ ಬ್ಯಾಂಕ್ ಕಳೆದ ವಾರ ತಿಳಿಸಿತ್ತು.
 ಅಮಾನತುಗೊಂಡಿರುವ ನೌಕರರು ಕಪ್ಪುಹಣವನ್ನು ಬಿಳಿ ಮಾಡುವ ದಂಧೆ ನಡೆಸುತ್ತಿದ್ದು, ಆ್ಯಕ್ಸಿಸ್ ಬ್ಯಾಂಕ್ ತನ್ನ ಪರವಾನಿಗೆಯನ್ನು ಕಳೆದುಕೊಳ್ಳಬಹುದು ಎಂದು ಸ್ಥಳೀಯ ಹಿಂದಿ ದೈನಿಕ ‘ದೋಪಹರ್’ನಲ್ಲಿ ಶನಿವಾರ ಪ್ರಕಟಗೊಂಡಿದ್ದ ವರದಿಗೆ ಪ್ರತಿಕ್ರಿಯೆಯಾಗಿ ಬ್ಯಾಂಕ್ ಈ ಹೇಳಿಕೆಯನ್ನು ನೀಡಿದೆ.


ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದಲ್ಲಿ ಇಂದು ಮಧ್ಯಾಹ್ನ ಆ್ಯಕ್ಸಿಸ್ ಬ್ಯಾಂಕಿನ ಶೇರಿನ ಬೆಲೆ ಶೇ.2.5ರಷ್ಟು ಕುಸಿದು 445 ರೂ.ಗೆ.ತಲುಪಿತ್ತು.
ತನ್ನ ನೌಕರರು ಕಪ್ಪುಹಣವನ್ನು ಬಿಳಿಮಾಡುವ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೆಚ್ಚಿನ ಎಚ್ಚರಿಕೆಯ ಮತ್ತು ಕಪ್ಪುಹಣವನ್ನು ಬಿಳಿ ಮಾಡುವ ಯಾವುದೇ ಪ್ರಯತ್ನವನ್ನು ವಿಫಲಗೊಳಿಸುವ ಕ್ರಮವಾಗಿ ಬ್ಯಾಂಕು ಕೆಲವು ಚಿನ್ನಬೆಳ್ಳಿ ವ್ಯಾಪಾರಿಗಳ ಖಾತೆಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.


ನೋಟು ರದ್ದತಿಯ ಬಳಿಕ ದಿಲ್ಲಿಯ ಆ್ಯಕ್ಸಿಸ್ ಬ್ಯಾಂಕ್‌ನ ಕೆಲವು ಶಾಖೆಗಳಲ್ಲಿ ಸೂಕ್ತ ದಾಖಲೆಗಳಿಲ್ಲದೆ ಹೊಸ ಖಾತೆಗಳನ್ನು ತೆರೆದು ಭಾರೀ ಪ್ರಮಾಣದಲ್ಲಿ ಹಳೆಯ 500 ಮತ್ತು 1,000 ರೂ.ನೋಟುಗಳನ್ನು ಜಮಾ ಮಾಡಲಾಗಿತ್ತು. ಬಳಿಕ ಈ ಖಾತೆಗಳಿಂದ ಹಣವನ್ನು ವರ್ಗಾವಣೆ ಮಾಡಲಾಗಿದ್ದು, ಈ ಖಾತೆಗಳ ಪೈಕಿ ಕೆಲವು ಚಿನ್ನಬೆಳ್ಳಿ ವ್ಯಾಪಾರಿಗಳಿಗೆ ಸಂಬಂಧಿಸಿದ್ದವು. ಈ ಹಿನ್ನೆಲೆಯಲ್ಲಿ ಬ್ಯಾಂಕು ಈ ಕ್ರಮವನ್ನು ಕೈಗೊಂಡಿದೆ ಎಂದು ಮೂಲಗಳು ತಿಳಿಸಿದವು.


ಕಪ್ಪುಹಣದ ಖದೀಮರೊಂದಿಗೆ ಕೈಜೋಡಿಸಿರುವ ಶಂಕಿತ ನೌಕರರ ವಿರುದ್ಧ ಬ್ಯಾಂಕುಗಳು ಈಗಾಗಲೇ ಚಾಟಿ ಬೀಸತೊಡಗಿವೆ. ನಿಯಮಗಳ ಉಲ್ಲಂಘನೆಗಾಗಿ ಆ್ಯಕ್ಸಿಸ್ ಬ್ಯಾಂಕ್ ತನ್ನ ಸುಮಾರು 30 ನೌಕರರನ್ನು ಅಮಾನತುಗೊಳಿಸಿದೆ.
ಕಳೆದ ಕೆಲವು ವಾರಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳ ದಾಳಿಗಳಲ್ಲಿ ನೂರಾರು ಕೋಟಿ ರೂ.ಪತ್ತೆಯಾಗಿವೆ.


ದಿಲ್ಲಿಯ ಚಾಂದನಿ ಚೌಕ್‌ನಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ ಶಾಖೆಗೆ ದಾಳಿ ನಡೆಸಿದ್ದ ಅಧಿಕಾರಿಗಳು 44 ನಕಲಿ ಖಾತೆಗಳಲ್ಲಿ 100 ಕೋ.ರೂ.ಗೂ ಅಧಿಕ ಹಣ ಜಮೆಯಾಗಿರುವುದನ್ನು ಪತ್ತೆ ಹಚ್ಚಿದ್ದರು.
ಇದಕ್ಕೂ ಮುನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಿಲ್ಲಿಯ ಕಾಶ್ಮೀರಿ ಗೇಟ್‌ನ ಆ್ಯಕ್ಸಿಸ್ ಬ್ಯಾಂಕ್ ಶಾಖೆಯ ಇಬ್ಬರು ಮ್ಯಾನೇಜರ್‌ಗಳನ್ನು ಕಪ್ಪುಹಣವನ್ನು ಬಿಳಿ ಮಾಡಿದ್ದ ಆರೋಪದಲ್ಲಿ ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News