ಪುಟಿನ್ ಸ್ವೀಕರಿಸಲು ನಿರಾಕರಿಸಿದ ಜಪಾನ್ ಉಡುಗೊರೆ ಯಾವುದು ?

Update: 2016-12-13 06:22 GMT

ಟೋಕಿಯೋ, ಡಿ.13: ಜಪಾನ್ ಸರಕಾರ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ನೀಡಲುದ್ದೇಶಿಸಿದ್ದ ಉಡುಗೊರೆಯೊಂದನ್ನು ಅಧ್ಯಕ್ಷರು ನಿರಾಕರಿಸಿದ್ದಾರೆಂದು ಜಪಾನೀ ಸಂಸದ ಕೊಯ್ಚಿ ಹಗಿಯುಡ ಹೇಳಿದ್ದಾರೆ. ಅಷ್ಟಕ್ಕೂ ಆ ಉಡುಗೊರೆಯೇನು ಗೊತ್ತೇ? ಒಂದು ಗಂಡುಶ್ವಾನ. ಆದರೆ ಅಧ್ಯಕ್ಷರು ತಾವು ಉಡುಗೊರೆ ಸ್ವೀಕರಿಸದೇ ಇರಲು ಕಾರಣವೇನೆಂದು ಕೊಯ್ಚಿ ಹೇಳಿಲ್ಲ.

ಜಪಾನ್ ಈ ಹಿಂದೆ 2012ರಲ್ಲಿ ಪುಟಿನ್ ಅವರಿಗೆ ಹೆಣ್ಣು ಶ್ವಾನ ಅಕಿತಾಳನ್ನು ನೀಡಿತ್ತು. ಇತ್ತೀಚೆಗೆ ನೀಡಲು ಉದ್ದೇಶಿಸಲಾಗಿದ್ದ ಶ್ವಾನ ಅದಕ್ಕೆ ಸಂಗಾತಿಯಾಗಬಹುದೆಂದು ಜಪಾನ್ ಯೋಚಿಸಿತ್ತು.
‘‘ವರನೊಬ್ಬನನ್ನು ಉಡುಗೊರೆಯಾಗಿ ನೀಡಬೇಕೆಂಬ ನಮ್ಮ ಆಸೆಗೆ ನಿರಾಸೆಯುಂಟಾಗಿದೆ’’ ಎಂದು ಹಗಿಯುಡ ತಮ್ಮ ಬ್ಲಾಗ್ ಪೋಸ್ಟ್ ಒಂದರಲ್ಲಿ ಬರೆದಿದ್ದಾರೆ.
ರಷ್ಯಾ ಈ ಗಂಡು ಶ್ವಾನದ ಉಡುಗೊರೆಯನ್ನು ಸ್ವೀಕರಿಸಲು ಒಪ್ಪಿದ್ದರೆ ಅದನ್ನು ರಷ್ಯಾದ ಅಧ್ಯಕ್ಷರಿಗೆ ಮುಂದಿನ ವಾರ ಜಪಾನಿನ ಪ್ರಧಾನಿ ಶಿನ್ಝೊ ಅಬೆ ಹಸ್ತಾಂತರಿಸಲಿದ್ದರು.
ಪುಟಿನ್ ಅವರ ಬಳಿ ಬುಲ್ಗೇರಿಯನ್ ಶೆಪರ್ಡ್ ಜಾತಿಯ ಗಂಡು ನಾಯಿ ಬಫಿ ಇದ್ದು, ಇದನ್ನು ಅವರಿಗೆ ಬಲ್ಗೇರಿಯಾದ ಪ್ರಧಾನಿ 2010ರಲ್ಲಿ ಉಡುಗೊರೆಯಾಗಿ ನೀಡಿದ್ದರು. ರಷ್ಯಾದ ರಕ್ಷಣಾ ಸಚಿವ ಸೆರ್ಗೆ ಶೊಯ್ಗು ಅಧ್ಯಕ್ಷರಿಗೆ ಉಡುಗೊರೆಯಾಗಿ ನೀಡಿದ್ದ ಲ್ಯಾಬ್ರಡಾರ್ ಕೊನ್ನಿ 2014ರಲ್ಲಿ ಮೃತಪಟ್ಟಿತ್ತು. ಈ ನಾಯಿಯನ್ನು ಪುಟಿನ್ ಒಮ್ಮೆ ನಾಯಿಗಳ ಬಗ್ಗೆ ಭಯವಿರುವ ಜರ್ಮನ್ ಚಾನ್ಸಲರ್ ಏಂಜಲಾ ಮರ್ಕೆಲ್ ಅವರೊಂದಿಗಿನ ತಮ್ಮ ಸಭೆಗೆ ಕರೆತಂದಿದ್ದರು. ಆಕೆಯನ್ನು ಬೆದರಿಸಲು ಪುಟಿನ್ ಈ ರೀತಿ ಮಾಡಿದ್ದರು ಎಂದು ಕೆಲ ವರದಿಗಳು ಆಗ ಹೇಳಿದ್ದವು. ಆದರೆ ಏಂಜೆಲಾ ಅವರಿಗೆ ನಾಯಿಗಳನ್ನು ಕಂಡರೆ ಭಯವೆಂದು ತಮಗೆ ತಿಳಿದಿರಲಿಲ್ಲವೆಂದು ಸ್ಪಷ್ಟೀಕರಣ ನೀಡಿದ್ದ ಪುಟಿನ್ ತಾನು ಅವರಲ್ಲಿ ಕ್ಷಮೆ ಯಾಚಿಸಿದ್ದಾಗಿಯೂ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News