ಕನ್ನಡ ಭಾಷಾ ಸಂಬಂಧ

Update: 2016-12-21 19:02 GMT

ಸಂವಿಧಾನದ ಮತ್ತು ರಾಜಕೀಯ ಅಗತ್ಯಗಳಿಗಾಗಿ ಭಾಷಾವಾರು ರಾಜ್ಯ ವಿಂಗಡಣೆಯಾದ ನಂತರ ಭಾಷೆಗಳೂ ದೇಶದ ಒಗ್ಗಟ್ಟಿ ಗಿಂತ ವಿಭಜನೆಗೆ ಹೆಚ್ಚು ಯತ್ನಿಸಿದಂತೆ ಕಾಣುತ್ತದೆ. ನನ್ನ ಸ್ನೇಹಿತರೊಬ್ಬರು ಇದನ್ನು ‘ಭಾಷಾಡಿಚ್ಟ’ ಎಂದು ಕೆಣಕುತ್ತಿದ್ದರು. ಇದಕ್ಕೆ ಕಾರಣ ಭಾಷೆ ಯನ್ನು ಭೌಗೋಳಿಕ, ಪ್ರಾದೇಶಿಕ ಮಿತಿಯಲ್ಲಿ ನೋಡಿ ಆನಂತರ ಅದನ್ನು ಸ್ವಪ್ರತಿಷ್ಠೆಯ ಬೆಳವಣಿಗೆಗೆ ಬೇಕಾದ ಟಾನಿಕ್‌ನಂತೆ ಬಳಸಿದ್ದು. ಜನರ ನಡುವಣ ಭಾಷೆಯ ನೈಜ ಉದ್ದೇಶವಾದರೂ ಏನು? ಅದು ಇರಬೇಕಾದ್ದಲ್ಲಿ?

ಕನ್ನಡ ಭಾಷೆಯ ಬಳಕೆ ಹೇಗಿದೆ? ನಮ್ಮ ಸಿನೆಮಾಗಳಲ್ಲಿ ನಾಯಕ, ನಾಯಕಿ, ಮತ್ತು ಪೋಷಕ ಪಾತ್ರಗಳು ವಿದೇಶಕ್ಕೆ ಹೋಗಿ ಬಂದರೆ ಅಥವಾ ಬರುವವರಾದರೆ ಅವರ ಕನ್ನಡ ಭಾಷೆಯನ್ನು ಗಂಭೀರವಾಗಿಯೋ, ಲವಲವಿಕೆಯಿಂದಲೋ, ಹುಡುಗಾಟದಿಂದಲೋ ಚಿತ್ರಿಸುತ್ತಾರೆ. ಆದರೆ ಹಾಸ್ಯ ಪಾತ್ರಗಳು ವಿದೇಶದಿಂದ ಬಂದರೆ ಅವರು ಬಳಸುವ ಕನ್ನಡವನ್ನು ಸಾಕಷ್ಟು ಹಾಸ್ಯಾಸ್ಪದವಾಗಿಯೇ ಚಿತ್ರಿಸುತ್ತಾರೆ. ಹಾಗೆಯೇ ವಿದೇಶದಲ್ಲಿ ಭಾರತೀಯ ಪಾತ್ರಗಳು ಬದುಕುವ ರೀತಿಯಲ್ಲೂ ಈ ಭಾಷಾ ಭಿನ್ನತೆಯಿದೆ. ಅಲ್ಲಿ ಪಡುವ ಪಾಡು ಮತ್ತು ಸಾಂಸ್ಕೃತಿಕ ಭಿನ್ನತೆಯನ್ನು ಗುರುತಿಸುವ ಭಾಷಾವಿನ್ಯಾಸ ಹಾಗೂ ಆಚಾರ-ವಿಚಾರಗಳಲ್ಲಿ ಕಾಣುವ ವ್ಯತ್ಯಾಸ ಇವುಗಳಿಂದಾಗಿ ಸಂಭವಿಸುವ ಪ್ರಮಾದಗಳು ಇವು ಅನೇಕ ಬದುಕುಗಳ ಕಥೆಗಳಾಗುತ್ತವೆ. ನಾಟಕಗಳಲ್ಲಿ ಈಚೀಚೆಗೆ ಸಾಂಸ್ಕೃತಿಕ ವಿಪರ್ಯಾಸಗಳು ಅಷ್ಟಾಗಿ ರಂಗದಲ್ಲಿ ಸುದ್ದಿ ಮಾಡುತ್ತಿಲ್ಲ. ಆದರೆ ಹಿಂದೆ ನಾಟಕಗಳಲ್ಲಿ ಆಧುನಿಕತೆ ಮತ್ತು ಪರಂಪರೆಗಳನ್ನು ದೇಶೀಭಾಷೆ ಮತ್ತು ಇಂಗ್ಲಿಷ್‌ಗಳ ನಡುವಣ ಮುಖಾಮುಖಿಯಂತೆ ತೋರಿಸುತ್ತಿದ್ದಾಗ ಮನರಂಜನೆಗಾಗಿ ಅತಿಯಾದ ಭಿನ್ನತೆಯನ್ನು ತೋರಿಸುತ್ತಿದ್ದರು.

ಟಿಪ್ಪುಸುಲ್ತಾನ್, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ನಾಟಕಗಳಲ್ಲಿ (ಸಿನೆಮಾಗಳಲ್ಲೂ) ಬರುತ್ತಿದ್ದ ಆಂಗ್ಲರು ಮಾತನಾಡುವ ಕನ್ನಡವೆಂದರೆ ಅದು ಹಾಸ್ಯವಾಗಿಯೇ ಕಾಣಿಸುತ್ತಿತ್ತು. ಪ್ರಾಯಃ ಆ ಕಾಲದಲ್ಲೂ ವಿದೇಶೀಯರು ಕನ್ನಡ ಮಾತನಾಡುವುದಕ್ಕೆ ಅಷ್ಟೇನೂ ಕಷ್ಟಪಟ್ಟಂತೆ ಕಾಣುವುದಿಲ್ಲ. ಕನ್ನಡದ ಅನೇಕ ಗ್ರಂಥಗಳನ್ನು ಸಂಪಾದಿಸಿದ ಆಂಗ್ಲ ವಿದ್ವಾಂಸರು, ಅರ್ಥಕೋಶವನ್ನು ಸಂಪಾದಿಸಿದ ಮೊದಲ ಕನ್ನಡ ಡಾಕ್ಟರೇಟ್ ಪಡೆದ ಜರ್ಮನ್ ವಿದ್ವಾಂಸ ಕಿಟ್ಟೆಲ್, ಸಂಸ್ಕೃತ ಗ್ರಂಥಗಳನ್ನು ಅನುವಾದಿಸಿದ ಮ್ಯಾಕ್ಸ್ ಮುಲ್ಲರ್ ಇಂಥವರನ್ನು ಗಮನಿಸಿದರೆ ಕನ್ನಡ ಅವರಿಗೆ ಕಬ್ಬಿಣದ ಕಡಲೆಯಾಗಿರಲಿಲ್ಲವೆನ್ನುವುದು ಸ್ಪಷ್ಟವಾಗುತ್ತದೆ. ಅಲ್ಲದೆ ಇಂಗ್ಲಿಷ್ ಬರಲಿಲ್ಲವೆಂಬ ಕಾರಣಕ್ಕೆ ವಿದ್ವತ್ತನ್ನು ಕಡೆಗಣಿಸಿದ ಉದಾಹರಣೆಗಳು ಬ್ರಿಟಿಷ್ ಭಾರತದಲ್ಲಿ ಅಪರೂಪ. ಕರ್ನಾಟಕದಲ್ಲಿ ನೆಲೆಸಿದ ಕನ್ನಡದ ನೆರೆ ರಾಜ್ಯಗಳವರು, ಐಎಎಸ್, ಐಪಿಎಸ್ ಮಾಡಿ ಕರ್ನಾಟಕದಲ್ಲಿ ದುಡಿಯುವ ಇತರ ರಾಜ್ಯದ ಅಧಿಕಾರಿಗಳು ಮಾತನಾಡುವಂತೆ ಉಚ್ಛಾರದಲ್ಲಿ ಸ್ವಲ್ಪವ್ಯತ್ಯಾಸ, ಬಳಕೆಯಲ್ಲಿ ಸ್ವಲ್ಪ ಸಹಜ ಅಪಭ್ರಂಶವಿದ್ದಿರಲಿಕ್ಕೂ ಸಾಕು. ಮಂಗಳೂರಿನಿಂದ ಬೆಳಗಾವಿ/ಬೀದರ್‌ವರೆಗೆ ಕನ್ನಡ ಭಾಷಾ ಭಿನ್ನತೆ ಎಷ್ಟಿದೆಯೆಂದರೆ ಒಬ್ಬ ಕನ್ನಡಿಗನ ಭಾಷಾ ಬಳಕೆಯನ್ನು ಇನ್ನೊಬ್ಬ ಕನ್ನಡಿಗನೇ ಲೇವಡಿ ಮಾಡುವುದು ಪ್ರಚಲಿತದಲ್ಲಿದೆ. (ಅನೇಕ ಹಾಸ್ಯ ಸಂಜೆಗಳಿಗೆ ಇದೇ ಬಂಡವಾಳ; ಶ್ರೀರಕ್ಷೆ!) ಹಾಗೆ ನೋಡಿದರೆ ಇಂದು ಬಹುತೇಕ ಕನ್ನಡಿಗರು ನಗರವಾಸಿಗಳಾಗುತ್ತಿರುವುದರಿಂದ ಮತ್ತು ಅಲ್ಲಿ ಕನ್ನಡದ ಬಳಕೆಯ ಅನಿವಾರ್ಯತೆ ಕಡಿಮೆಯಾಗಿರುವುದರಿಂದ ಕನ್ನಡಿಗರು ಮಾತನಾಡುವ ಕನ್ನಡವೇ ಹಾಸ್ಯಾಸ್ಪದ ಸ್ಥಿತಿಯಲ್ಲಿದೆ. ಭಾಷಾಭಿಮಾನವೆಷ್ಟೇ ಇರಲಿ, ಅದೊಂದು ಓದುವ, ಬರೆಯುವ, ಮಾತನಾಡುವ ಮಾಧ್ಯಮ ಮಾತ್ರ ಮತ್ತು ಸಂಸ್ಕೃತಿಯ ಒಂದಂಗವೇ ಹೊರತು ಅದೇ ಬದುಕಾಗಲು ಸಾಧ್ಯವಿಲ್ಲವಾದ್ದರಿಂದ ಭಾಷೆಯ ಆಧಾರದಲ್ಲಿ ಯಾವುದನ್ನೂ ಮೇಲು-ಕೀಳಾಗಿ ನಿರ್ಣಯಿಸಬಾರದು. ನಮ್ಮಲ್ಲಿ ಕನ್ನಡ ಮಾತ್ರ ಗೊತ್ತಿದ್ದವನಿ(ಳಿ)ಗೆ ಸಾರ್ವಜನಿಕ ಸ್ವೀಕಾರಾರ್ಹತೆ ಸ್ವಲ್ಪಕಡಿಮೆಯೇ.

ಇಂಗ್ಲಿಷ್‌ನಲ್ಲಿ ಮಾತನಾಡಿದಾಗ ಆತ/ಆಕೆ ಕನ್ನಡದಲ್ಲೇನಾದರೂ ಉತ್ತರಿಸಿದರೆ ಅವರನ್ನು ನಿಂದಾರ್ಹ ದೃಷ್ಟಿಯಿಂದ ವೀಕ್ಷಿಸುವ ಹೊಸ ಸಂಪ್ರದಾಯವೂ ಇದೆ. ಸ್ವಲ್ಪಸಜ್ಜನಿಕೆಯ ಅಭಾವವಿರುವವರಾದರೆ ನಿಮಗೆ ಇಂಗ್ಲಿಷ್ ಬರೋದಿಲ್ವ? ಅಥವಾ ನೀವು ಎಷ್ಟು ಓದಿದ್ದೀರಿ? ಮುಂತಾದ ಲಜ್ಜಾಹೀನ ಪ್ರಶ್ನೆಗಳನ್ನು ಹಾಕುತ್ತಾರೆ. ಇನ್ನು ಕೆಲವರು ನಮ್ಮ ಮನೆಯಲ್ಲಿ ನಾವೆಲ್ಲರೂ ಇಂಗ್ಲಿಷೇ ಮಾತನಾಡುವುದು ಎಂದು ಸ್ವಪ್ರಶಂಸಾ ಮಾತುಗಳನ್ನಾಡುತ್ತಾರೆ. ಇದನ್ನು ಎದುರಿಸಲು ಬೇಕಾದ ಅಸ್ಮಿತೆ, ಸ್ವಾಭಿಮಾನವಿದ್ದವರಾದರೆ ಎದುರಿಸಬಲ್ಲರು ಮತ್ತು ಆತ್ಮವಿಶ್ವಾಸವನ್ನು ಉಳಿಸಿಕೊಳ್ಳುವರು. ಸ್ವಲ್ಪಮುದುಡುವ, ಸಂಕೋಚದ ಸ್ವಭಾವದವರು ಇನ್ನಷ್ಟು ಮುದುರಿಕೊಳ್ಳುವರು. ನಾವು ನಮ್ಮ ಮನೆಗಳಲ್ಲಿ ಕನ್ನಡವನ್ನೇ ಮಾತನಾಡುತ್ತೇವಲ್ಲವೇ? ಅವರವರ ಜಾತಿಗೆ, ಪ್ರದೇಶಕ್ಕೆ ವಿಶಿಷ್ಟವಾದ ಕನ್ನಡ ಭಾಷಾ ಪ್ರಭೇದವಿದೆಯಾದರೂ ನಾವು ಪ್ರಜ್ಞಾಪೂರ್ವಕವಾಗಿ ಎಲ್ಲ ಪ್ರದೇಶಗಳಲ್ಲೂ ಬಳಸಿದರೆ ಅರ್ಥವಾಗಬಹುದಾದ, ಕನ್ನಡವನ್ನು ಬಳಸುತ್ತೇವೆ. ಒಟ್ಟಿನಲ್ಲಿ ಕನ್ನಡದ ಬಳಕೆ ನಮಗೆ ಮುಖ್ಯವಾಗಬೇಕು.

 ಕೆಲವು ದಶಕಗಳ ಹಿಂದೆ ಅನೇಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಕಳಿಸಿದ್ದರೆ ಅದಕ್ಕೆ ಕನ್ನಡ ಭಾಷೆಯ ಅಭಿಮಾನದ ಕೊರತೆ ಕಾರಣವಲ್ಲ; ಬದಲಾಗಿ ಶಾಲೆ ಮನೆಯ ಸಮೀಪದಲ್ಲಿತ್ತು; ವ್ಯಾವಹಾರಿಕವಲ್ಲದ, ಶಿಕ್ಷಣದ, ಬದುಕಿನ ಅಂದರೆ ಆರ್ಥಿಕ ಅನುಕೂಲವಿತ್ತು. ಜೊತೆಗೆ ಮಕ್ಕಳು ತಮ್ಮ ಜೊತೆಯಲ್ಲೇ ಇರುತ್ತಾರೆಂಬ ಸಂತೋಷವೂ ಇತ್ತು. (ಮಕ್ಕಳು ಕನಿಷ್ಠ 10ನೆ ತರಗತಿಯ ವರೆಗಾದರೂ ಹೆತ್ತವರ ಜೊತೆಗೇ ಇರಬೇಕೆಂಬುದು ನನ್ನ ಅಭಿಪ್ರಾಯ.) ನಮ್ಮ ಮಕ್ಕಳು ಯಾವ ಕಾರಣಕ್ಕೂ ಕನ್ನಡದ ಸಂಬಂಧ ಕಡಿಯದಂತೆ ನೋಡಿಕೊಳ್ಳುವುದು ಅಗತ್ಯ. ಮನೆಯಲ್ಲಿ ಕನ್ನಡ ಮಾತನಾಡುತ್ತಿದ್ದ ನನ್ನ ಪರಿಚಿತರ ಮನೆಯ ಹುಡುಗ ಓದುತ್ತಿದ್ದ ಶಾಲೆಯಲ್ಲಿ ಶಿಕ್ಷಕರೊಬ್ಬರು ಕೇಳುತ್ತಿದ್ದರಂತೆ: ‘‘ಮನೆಯಲ್ಲಿ ಯಾವ ಭಾಷೆ ಮಾತನಾಡುತ್ತೀರಿ?’’ ಬಹುತೇಕ ಮಕ್ಕಳು ‘‘ಇಂಗ್ಲಿಷ್’’ ಎನ್ನುತ್ತಿದ್ದರಂತೆ. (ಇದರಲ್ಲಿ ಸತ್ಯ ಹೇಳಿದವ ರೆಷ್ಟೋ ಸುಳ್ಳು ಹೇಳಿದವರೆಷ್ಟೋ ಗೊತ್ತಿಲ್ಲ!) ಈ ಹುಡುಗ ‘‘ಕನ್ನಡ’’ ಅಂದನಂತೆ. ಆ ಶಿಕ್ಷಕರು ‘‘ನೋಡು, ನೀನು ಇಂಗ್ಲಿಷ್ ಮಾತನಾಡದಿದ್ದರೆ ಪರೀಕ್ಷೆಯಲ್ಲಿ ಪಾಸಾಗುವುದು ಕಷ್ಟವಾದೀತು’’ ಎಂದರಂತೆ. ಅಷ್ಟೇ ಅಲ್ಲ, ಶಾಲೆಯ ಇಂಗ್ಲಿಷ್ ನಾಟಕದಲ್ಲಿ ಅದೇ ಕಾರಣಕ್ಕಾಗಿ ಈ ಹುಡುಗನಿಗೆ ಪಾತ್ರವನ್ನು ನಿರಾಕರಿಸಿದರಂತೆ. ಆ ಹುಡುಗ ನೊಂದುಕೊಂಡು ಈ ವಿಚಾರ ತಿಳಿಸಿದ. ನಾನು ‘‘ಚೆನ್ನಾಗಿ ಓದು, ಯಾವುದೇ ವಿಷಯ ಅರ್ಥವಾಗುವುದು ಮತ್ತು ಇಂಗ್ಲಿಷ್ ಮಾತನಾಡುವುದು ಪ್ರತ್ಯೇಕ’’ ಎಂದು ಹೇಳಿದೆ. ಆ ವರ್ಷದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಆ ಹುಡುಗ ಚೆನ್ನಾಗಿ ಅಂಕ ಗಳಿಸಿದ ಮಾತ್ರವಲ್ಲ ಇಂಗ್ಲಿಷ್‌ನಲ್ಲಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ.

ಇಂತಹ ಘಟನೆಗಳು ಅನೇಕ ನಡೆಯುತ್ತವೆ. ನಾವೆಲ್ಲ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದವರು. ಪ್ರತಿಷ್ಠಿತ ಕಾಲೇಜೊಂದರಲ್ಲಿ ಪಿಯುಸಿಗೆ ಸೇರಿದಾಗ ಮೊದಲ ದಿನವೇ ನಮ್ಮ ತರಗತಿಯ ಪ್ರಾಧ್ಯಾಪಕರು ‘‘ಇಲ್ಲಿ ಎಷ್ಟು ಮಂದಿ ಕನ್ನಡ ಮಾಧ್ಯಮದಿಂದ ಮತ್ತು ಎಷ್ಟು ಮಂದಿ ಇಂಗ್ಲಿಷ್ ಮಾಧ್ಯಮದಿಂದ ಬಂದಿದ್ದೀರಿ’’ ಎಂದು ಪ್ರಶ್ನಿಸಿದರು. 60 ಮಂದಿಯಿದ್ದ ತರಗತಿಯಲ್ಲಿ 6 ಮಂದಿ ಮಾತ್ರ ಇಂಗ್ಲಿಷ್ ಮಾಧ್ಯಮದಲ್ಲಿ ಓದಿ ಬಂದವರು. ಆ ಪ್ರಾಧ್ಯಾಪಕರು ಇದನ್ನು ತಿಳಿದ ನಂತರ ಆ 6 ಮಂದಿಗೆ ಪಾಸಾಗುವುದು ಕಷ್ಟವಿಲ್ಲವೆಂದೂ ಉಳಿದವರು ತುಂಬಾ ಶ್ರಮಿಸಬೇಕಾದೀತೆಂದೂ ಹೇಳಿದರು. ಒಂದು ರೀತಿಯಲ್ಲಿ 54 ವಿದ್ಯಾರ್ಥಿಗಳನ್ನು ಅವರು ಅವಮಾನಿಸಿದ್ದರು! ಮೊದಲ ಪರೀಕ್ಷೆಯಲ್ಲಿ ಮೊದಲ 10 ಸ್ಥಾನಗಳನ್ನು ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳೇ ಪಡೆದರೆಂಬುದು ವಿಶೇಷ. (ಈ ಸ್ಥಾನ ಕೊನೆಯ ಪರೀಕ್ಷೆಯ ವರೆಗೂ ಮುಂದುವರಿಯಿತು!)

ಇಂಗ್ಲಿಷ್ ಮಾಧ್ಯಮಕ್ಕೆ ಅದರದ್ದೇ ಆದ ಅನುಕೂಲಗಳಿರಬಹುದು. ಮುಖ್ಯವಾಗಿ ಇಂಗ್ಲಿಷ್ ಮಾತು ಸಲೀಸಾಗಿರುತ್ತದೆ. ಅರಳು ಹುರಿದಂತೆ ಇಂಗ್ಲಿಷ್ ಮಾತನಾಡುವ ವಿದ್ಯಾರ್ಥಿಗಳು ಅದೇ ಪ್ರಮಾಣದಲ್ಲಿ ಪಠ್ಯವನ್ನು ಅರ್ಥಮಾಡಿಕೊಳ್ಳುತ್ತಾರೆಂದಾಗಲೀ ತಮ್ಮ ಇಂಗ್ಲಿಷ್ ಮಾತಿನ ಪ್ರೌಢಿಮೆಯನ್ನು ಬರೆಹದಲ್ಲಿಳಿಸುತ್ತಾರೆಂದಾಗಲೀ ಭ್ರಮಿಸಬಾರದು. ಭಾಷಾ ಪ್ರವೇಶಿಕೆ ಬೇರೆ; ವಿಷಯ ಪ್ರವೇಶಿಕೆ ಬೇರೆ.

ಇಷ್ಟಾಗಿಯೂ ಇಂದು ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಬಹುಪಾಲು ಸರಕಾರಿ ಶಾಲೆಗಳೇ ಕನ್ನಡ ಮಾಧ್ಯಮ ಶಾಲೆಗಳು. ಎಷ್ಟೇ ಸೌಕರ್ಯಗಳನ್ನು ನೀಡಿದರೂ ತೀರಾ ಬಡ ಕೆಲವು ಮಕ್ಕಳಷ್ಟೇ ಸರಕಾರಿ ಇಲ್ಲವೇ ಕನ್ನಡ ಮಾಧ್ಯಮ ಶಾಲೆಗಳಿಗೆ ದಾಖಲಾಗುತ್ತಾ ರೆಂದರೆ ನಿಜಕ್ಕೂ ಬೇಸರದ ವಿಷಯ. ಒಂದಿಷ್ಟು ಆರ್ಥಿಕ ಶಕ್ತಿಯಿದ್ದರೂ (ಅಥವಾ ಶಿಕ್ಷಣಕ್ಕಾಗಿ ಸಾಲ ಮಾಡುವ ಶಕ್ತಿಯಿದ್ದರೂ ಸಾಕು!) ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ದಾಖಲಿಸುತ್ತಾರೆ. ಅವರಾದರೋ ಹಿಂದೆ ಮೆಡಿಕಲ್ ಇಂಜಿನಿಯರಿಂಗ್ ಕಾಲೇಜುಗಳಿಗೆ ಮೀಸಲಾಗಿದ್ದ ಬಸ್ ಮುಂತಾದ ರೀತಿಯ ವಾಹನಗಳನ್ನು ನೇಮಿಸಿಕೊಂಡು ಮಕ್ಕಳನ್ನು ಮನೆಯಿಂದಲೇ ಎತ್ತಿಹಾಕಿಕೊಂಡು ಬರುತ್ತಾರೆ. ಯಾರಿಗೆ ಬೇಡ ಈ ಸೌಕರ್ಯ?

ಕನ್ನಡ ಮಧ್ಯಮ ಶಾಲೆಗಳು ಮಾಮೂಲಾಗಿ ಸರಕಾರಿ ಶಾಲೆಗಳೇ ಆಗಿರುತ್ತವೆ. ಇಲ್ಲಿರುವ ಶಿಕ್ಷಕರಿಗೆ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಹೆಚ್ಚು ಪ್ರಮಾಣದ ಸಂಬಳ, ಸವಲತ್ತು ಮತ್ತು ಉದ್ಯೋಗ ಖಾತ್ರಿಯಿರುತ್ತದೆ. ಇವ್ಯಾವುದೂ ಇಲ್ಲದೆಯೂ ಖಾಸಗಿ ಶಾಲೆಗಳು ವಿದ್ಯಾರ್ಥಿಗಳನ್ನು ಆಕರ್ಷಿ ಸುತ್ತಾವೆಂದರೆ ಮಾಧ್ಯಮವೇ ಮುಖ್ಯ ಆಕರ್ಷಣೆಯೆಂದು ನಂಬಬಹುದು. ಭಾಷೆಯೇ ಮುಖ್ಯವಲ್ಲವೆಂದೆ. ಹಾಗಾದರೆ ಯಾವ ಭಾಷೆಯಲ್ಲಿ ಓದಿದರೇನು? ಕಲಿತರೇನು? ಆದರೆ ಮನೆಯ ಮಾತು ಬೆಸೆಯುವ ಸಂಬಂಧವನ್ನು ಇನ್ಯಾವ ಭಾಷೆಯೂ ಬೆಸೆಯಲಾರದು. ಅಳುವಾಗ, ನಗುವಾಗ, (ಮತ್ತು ಇನ್ನು ಅಚ್ಚರಿಪೂರ್ವಕವಾಗಿ) ಸಿಟ್ಟು ಬಂದಾಗ ಮನೆ ಮಾತೇ ಅಪ್ಪಿಕೊಳ್ಳುತ್ತದೆ. ಶಿವರಾಮ ಕಾರಂತರು ಇಂತಹ ಒಂದು ಸಂದರ್ಭದಲ್ಲಿ ‘‘ಇಂಗ್ಲಿಷಿನಲ್ಲಿ ನಗಬೇಕು’’ ಎಂದು ಲೇವಡಿ ಮಾಡಿದರಂತೆ! ಹೇಳಬೇಕಾದ್ದನ್ನು ನಮ್ಮದೇ ಭಾಷೆಯಲ್ಲಿ ಹೇಳುವುದಕ್ಕೂ ನಮ್ಮದಲ್ಲದ ಭಾಷೆಯಲ್ಲಿ ಹೇಳುವುದಕ್ಕೂ ವ್ಯತ್ಯಾಸವಿರುತ್ತದೆ. ಇಂಗ್ಲಿಷ್ ಬರಹಗಳನ್ನು ಓದಿದವರಿಗೆ ಭಾರತೀಯರ ಬರವಣಿಗೆಯು ಯುರೋಪಿನ, ಅಮೆರಿಕದ ಬರೆಹಗಾರರ ಬರವಣಿಗೆಗಿಂತ ಹೇಗೆ ಭಿನ್ನವಾಗಿದೆಯೆಂಬುದು ಗೊತ್ತಾಗುತ್ತದೆ. ‘ಸ್ವಧರ್ಮೇ ನಿಧನಂ ಶ್ರೇಯಃ, ಪರಧರ್ಮೋ ಭಯಾವಹಃ’ ಎಂಬ ಮಾತು ಯಥಾರ್ಥಕ್ಕೆ ಧರ್ಮಕ್ಕೆ ಅನ್ವಯಿಸುವುದಿಲ್ಲ; ಬದಲಾಗಿ ಭಾಷೆಗೆ, ಅಭಿವ್ಯಕ್ತಿಗೆ ಅನ್ವಯಿಸುತ್ತದೆ. (ಧರ್ಮವೆಂಬುದು ಅಭಿವ್ಯಕ್ತಿಯೆಂಬ ಅರ್ಥದಲ್ಲಿ ಮೂಲದ ಶ್ಲೋಕ ಸೃಷ್ಟಿಯಾಗಿದೆಯೆಂಬ ಅಭಿಪ್ರಾಯದ ಕುರಿತು ಅಧ್ಯಯನ ನಡೆಸಬೇಕಾದೀತು.)

ಭಾಷೆ ಬಂಧುತ್ವ/ಬಾಂಧವ್ಯವನ್ನು ಸೃಷ್ಟಿಸಲು ಕೊಂಡಿಯಾಗಬೇಕು. ಇತರರಿಗೆ ನಮ್ಮ ಭಾಷೆಯ ವೈಶಿಷ್ಟ್ಯವನ್ನು ಹೇಳಿ ಅದು ಹೇಗೆ ಎಲ್ಲ ಭಾಷೆಗಳಂತೆ ಬಳಸಬಲ್ಲ ಭಾಷೆಯೆಂಬ ಬಗ್ಗೆ ವಿವರಣೆ ನೀಡಬೇಕು. ನಾವು ನಮ್ಮ ಭಾಷೆಯ ವೈಶಿಷ್ಟ್ಯದ ಬದಲು ಶ್ರೇಷ್ಠತೆಯನ್ನು ಅಂದರೆ ಅದು ಹೇಗೆ ಇತರ ಭಾಷೆಗಳಿಗಿಂತ ಶ್ರೇಷ್ಠವಾದ್ದೆಂದು ಜಾಸ್ತಿ ಹೇಳುತ್ತ ಹೋದರೆ ಅದು ಆದರದ ಬದಲಿಗೆ ಅನಾದರವನ್ನೇ ಸಂಪಾದಿಸುತ್ತದೆ. ಆಗ ಅನಾಕರ್ಷಕವಾಗಿಯೂ ಕಾಣಿಸುತ್ತದೆ. ಭಾಷೆಯ ಸೌಂದರ್ಯವಿರುವುದೇ ಅದರ ಸಂವಹನಾ ಮತ್ತು ಧಾರಣಾ ಶಕ್ತಿಯಲ್ಲಿ. ಸಂಗೀತದ ಭಾಷೆಯ ಹಾಗೆ. ‘ಎಂದರೋ ಮಹಾನುಭಾವುಲು’ ಎಂದು ಹಾಡಿದಾಗ ಅದು ನಮ್ಮ ಭಾಷೆಯಲ್ಲವೆಂದು ಅನ್ನಿಸೀತೇ? ಭಾಷೆ ಅಂದರೆ ಮಾತು. ಮಾತು ಕೊಡುವುದಕ್ಕೆ ಭಾಷೆ ಕೊಡುವುದು ಎಂದು ಬಂದದ್ದೇ ಒಂದು ವಿಶೇಷ. ಅದನ್ನು ಉಳಿಸಿಕೊಳ್ಳುವ ಕೆಲಸ ಭಾಷೆಯಿಂದ ಆಗಬೇಕು. ಅದಾಗದಿದ್ದರೆ ಭಾಷೆ ಬಂಧನವೇ ಹೊರತು ಸಂಬಂಧವಾಗಲು ಸಾಧ್ಯವಿಲ್ಲ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Editor - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News