ಹೊಸ ವರ್ಷದಿಂದ ಎಟಿಎಂನಿಂದ ಹಣ ಪಡೆಯುವ ಮಿತಿ ಹೆಚ್ಚಳ

Update: 2016-12-31 03:23 GMT

ಹೊಸದಿಲ್ಲಿ, ಡಿ.31: ನೋಟು ರದ್ದತಿ ಬಳಿಕ ಎಟಿಎಂನಿಂದ ಪಡೆಯುವ ಹಣದ ಮೊತ್ತಕ್ಕೆ ನಿರ್ಬಂಧ ವಿಧಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ವರ್ಷದಿಂದ ಇದನ್ನು ಸ್ವಲ್ಪಮಟ್ಟಿಗೆ ಸಡಿಲಿಸಲು ನಿರ್ಧರಿಸಿದೆ. ಒಂದು ಬಾರಿ ಎಟಿಎಂನಿಂದ ಪಡೆಯುವ ಮೊತ್ತವನ್ನು 2,500 ರೂ.ನಿಂದ 4,500 ರೂ.ಗೆ ಹೆಚ್ಚಿಸಲು ತೀರ್ಮಾನಿಸಲಾಗಿದ್ದು, ಇದು 2017ರ ಜನವರಿ ಒಂದರಿಂದ ಜಾರಿಗೆ ಬರಲಿದೆ.

ಆದರೆ ಬ್ಯಾಂಕ್ ಖಾತೆಯಿಂದ ಪಡೆಯಬಹುದಾದ ಹಣದ ಪ್ರಮಾಣದಲ್ಲಿ ಯಾವ ಬದಲಾವಣೆಯೂ ಇಲ್ಲ. ಖಾತೆದಾರರು ತಮ್ಮ ಬ್ಯಾಂಕ್ ಖಾತೆಗಳಿಂದ ವಾರಕ್ಕೆ 24 ಸಾವಿರ ಸಾವಿರ ರೂಪಾಯಿ ಪಡೆಯಬಹುದಾಗಿದೆ.

"ದೇಶದ ಹಣಕಾಸು ಸ್ಥಿತಿಗತಿಯ ಪರಾಮರ್ಶೆ ನಡೆಸಿದ ಬಳಿಕ, ಎಟಿಎಂನಿಂದ ಪಡೆಯುವ ದೈನಂದಿನ ಹಣದ ಮೊತ್ತವನ್ನು 2,500 ರೂಪಾಯಿಗಳಿಂದ 4,500 ರೂಪಾಯಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಆದರೆ ಖಾತೆಯಿಂದ ಪಡೆಯುವ ಹಣದ ಮೊತ್ತದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೀಗೆ ಹಣ ವಿತರಿಸುವಾಗ ಮುಖ್ಯವಾಗಿ 500 ರೂಪಾಯಿ ನೋಟುಗಳನ್ನು ನೀಡುವಂತೆ ಸೂಚಿಸಲಾಗುವುದು" ಎಂದು ಆರ್‌ಬಿಐ ಪ್ರಕಟನೆ ಹೇಳಿದೆ.

ಈ ಮುನ್ನ ಹಣಕಾಸು ಸಚಿವ ಅರುಣ್ ಜೇಟ್ಲೆಯವರು, "ಆರ್‌ಬಿಐ ಬಳಿ ಸಾಕಷ್ಟು ಕರೆನ್ಸಿ ದಾಸ್ತಾನು ಇದ್ದು, ನಗದು ಪೂರೈಕೆ ಸ್ಥಿತಿ ಗಣನೀಯವಾಗಿ ಸುಧಾರಿಸಿದೆ" ಎಂದು ಹೇಳಿಕೆ ನೀಡಿದ್ದರು. ಹಳೆಯ ನೋಟುಗಳ ವಿನಿಮಯಕ್ಕೆ ಡಿಸೆಂಬರ್ 30 ಕೊನೆಯ ದಿನವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News