ನಿರ್ದೇಶಕ ಕಮಲ್ ಗೆ ದೇಶ ಬಿಡಲು ಹೇಳಿದ ಬಿಜೆಪಿ ನಾಯಕರ ವಿರುದ್ಧ ವಿಶಿಷ್ಟ ಪ್ರತಿಭಟನೆ ಮಾಡಿದ ನಟ

Update: 2017-01-14 06:58 GMT

ಕಾಸರಗೋಡು, ಜ.14: ಭಾರತದಲ್ಲಿರಲು ಕಷ್ಟವಾಗುವುದಾದರೆ ದೇಶ ಬಿಟ್ಟು ಹೋಗಬಹುದೆಂದು ಮಲಯಾಳಂ ಫಿಲ್ಮ್ ಮೇಕರ್‌ ಕಮಾಲುದ್ದೀನ್ ಮುಹಮ್ಮದ್ ಅವರಿಗೆ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎ.ಎನ್.ರಾಧಾಕೃಷ್ಣನ್‌ ಹೇಳಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಇದನ್ನು ವಿರೋಧಿಸಿ ಹಾಗೂ ಕಮಾಲುದ್ದೀನ್ ಅವರನ್ನು ಬೆಂಬಲಿಸಿ ಖ್ಯಾತ ಮಲಯಾಳಂ ನಟ ಅಲೆನ್ಸೀರ್ ಲೇ ಲೋಪೆಝ್ ಏಕವ್ಯಕ್ತಿ ನಾಟಕವೊಂದನ್ನು ಕಾಸರಗೋಡಿನ ಬಸ್ಸು ನಿಲ್ದಾಣದಲ್ಲಿ ಪ್ರದರ್ಶಿಸಿ ಹಲವರ ಗಮನ ಸೆಳೆದಿದ್ದಾರೆ.

ಕೇವಲ ಒಂದು ಮುಂಡು ಧರಿಸಿದ್ದ ಲೋಪೆರ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಬಸ್ಸೊಂದನ್ನು ಏರಿ, ಈ ಬಸ್ಸು ಪಾಕಿಸ್ತಾನ ಅಥವಾ ಅಮೆರಿಕಕ್ಕೆ ಹೋಗುವುದೇ ಎಂದು ಪ್ರಶ್ನಿಸಿದರು.

''ನಾನು ಈ ಮಣ್ಣಿನಲ್ಲಿಯೇ ಹುಟ್ಟಿ ಬೆಳೆದವನು. ಆದರೆ ಕೆಲ ಜನ ನನ್ನನ್ನು ಇತರ ದೇಶಗಳಿಗೆ ಹೋಗುವಂತೆ ಹೇಳುತ್ತಿದ್ದಾರೆ. ನೀವೂ ನನ್ನೊಂದಿಗೆ ಬರುತ್ತೀರಾ?'' ಎಂದು ನಟ ಬಸ್ಸಿನೊಳಗಿದ್ದುಕೊಂಡೇ ತಮ್ಮ ಡೈಲಾಗ್ ಬಿಟ್ಟರು.

ಅಲ್ಲಿದ್ದ ಜನರಿಗೆ ಇವರು ಮಾಡುತ್ತಿರುವುದು ನಾಟಕ ಎಂದು ತಿಳಿಯಲು ಸ್ವಲ್ಪ ಹೊತ್ತೇ ತಗಲಿತ್ತು. ಇವರೊಬ್ಬ ಖ್ಯಾತ ನಟನೆಂದು ತಿಳಿಯುತ್ತಲೇ ಅಲ್ಲಿ ಜನ ಸೇರಿ ಲೋಪೆಝ್ ಅವರ ಪ್ರತಿಭಟನೆಯನ್ನು ಆಸಕ್ತಿಯಿಂದ ಗಮನಿಸತೊಡಗಿದರು.

ಲೋಪೆಝ್ ಅವರು ಕೂಡ ಅಲ್ಲಿ ನಿಂತಿದ್ದ ಪ್ರತಿಯೊಂದು ಬಸ್ಸನ್ನು ಏರಿ ಇದೇ ಡೈಲಾಗ್ ಹೇಳಲಾರಂಭಿಸಿದರು. ನಂತರ ಅವರು ಬಸ್ಸಿನಿಂದಿಳಿದು ನಿಲ್ದಾಣದ ಮಧ್ಯ ಭಾಗದಲ್ಲಿ ನಿಂತು ತಾವು ಧರಿಸಿದ್ದ ಗುಲಾಬಿ ಬಣ್ಣದ ಲುಂಗಿಯನ್ನು ಬಿಚ್ಚಿದಾಗ ಅದರಡಿಯಲ್ಲಿ ಅವರು ಧರಿಸಿದ್ದ ಅಮೆರಿಕನ್ ಧ್ವಜ ಎಲ್ಲರ ಕಣ್ಣಿಗೆ ಬಿದ್ದಿತು.

ಲೋಪೆಝ್ ಅವರ ಈ ವಿನೂತನ ಪ್ರತಿಭಟನೆ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬೆಂಬಲ ಗಿಟ್ಟಿಸಿದೆ. ಮಲಯಾಳಂನ ಪ್ರಮುಖ ನಾಯಕ ನಟರು ಈ ವಿವಾದದ ವಿಚಾರದಲ್ಲಿ ಮೌನಧಾರಣೆ ಮಾಡಿರುವ ಸಂದರ್ಭದಲ್ಲಿ ಲೋಪೆಝ್ ಅವರ ಪ್ರತಿಭಟನೆ ಅವರಿಗೆ ಪ್ರಚಾರವನ್ನೂ ನೀಡಿದೆ.

ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ನಿರ್ದೇಶಕ ಕಮಲ್ ಅವರು ಕೇರಳ ಚಲನಚಿತ್ರ ಆಕಾಡಮಿ ಅಧ್ಯಕ್ಷರೂ ಆಗಿದ್ದು, ಈ ಹಿಂದೆ ಪ್ರಧಾನಿ ಮೋದಿಯನ್ನು 'ನರ-ಭಕ್ಷಕ' ಎಂದು ಬಣ್ಣಿಸಿ ವಿವಾದಕ್ಕೀಡಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News