ಚಳಿಗೆ ತತ್ತರಿಸಿರುವ ಉತ್ತರ ಭಾರತ

Update: 2017-01-14 15:22 GMT

ಹೊಸದಿಲ್ಲಿ,ಜ.14: ಉತ್ತರ ಭಾರತ ಚಳಿಯಿಂದ ತತ್ತರಿಸುತ್ತಿದ್ದು, ಉತ್ತರ ಪ್ರದೇಶದಲ್ಲಿ ಒಂಬತ್ತು ಸಾವುಗಳು ವರದಿಯಾಗಿವೆ. ಹಿಮಾಚಲ ಪ್ರದೇಶದ ಕೆಲಾಂಗ್‌ನಲ್ಲಿ ಮೈನಸ್ 13.9 ಮತ್ತು ಜಮ್ಮು-ಕಾಶ್ಮೀರದ ಕಾರ್ಗಿಲ್‌ನಲ್ಲಿ ಮೈನಸ್ 15.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದೇ ವೇಳೆ ರಾಷ್ಟ್ರ ರಾಜಧಾನಿ ದಿಲ್ಲಿ ಪ್ರಸಕ್ತ ಚಳಿಗಾಲದ ಕನಿಷ್ಠ ತಾಪಮಾನ(3.2 ಡಿ.ಸೆ.)ಕ್ಕೆ ಸಾಕ್ಷಿಯಾಗಿದೆ.

ಜ.15 ಮತ್ತು 16ರಂದು ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರದಲ್ಲಿ ಇನ್ನೊಂದು ಸುತ್ತಿನ ಮಳೆ ಮತ್ತು ಹಿಮಪಾತವನ್ನು ನಿರೀಕ್ಷಿಸಲಾಗಿದೆ ಎಂದು ಹವಾಮಾನ ಕಚೇರಿಯು ತಿಳಿಸಿದೆ.

ಇದರೊಂದಿಗೆ ಸೈಬೀರಿಯಾದಿಂದ ಬೀಸುವ ಗಾಳಿ ಮತ್ತು ಪಶ್ಚಿಮದಲ್ಲಿಯ ಪ್ರತಿಕೂಲ ಹವಾಮಾನದಿಂದಾಗಿ ಉತ್ತರ ಭಾರತದಲ್ಲಿ ತಾಪಮಾನ ಇನ್ನಷ್ಟು ತಗ್ಗುವುದರೊಂದಿಗೆ ಮುಂದಿನ ಕೆಲವು ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದೂ ಅದು ಭವಿಷ್ಯ ನುಡಿದಿದೆ.

ಉ.ಪ್ರದೇಶದ ರಾಜಧಾನಿ ಲಕ್ನೋದಲ್ಲಿ ತಾಪಮಾನವು ಶನಿವಾರ 7 ಡಿ.ಸೆ.ಗಳಷ್ಟು ಕುಸಿದಿದ್ದು, ಶುಕ್ರವಾರದಿಂದ ಕನೌಜ್ ಮತ್ತು ಕಾನ್ಪುರ ಗ್ರಾಮೀಣ ಜಿಲ್ಲೆಗಳಲ್ಲಿ ಚಳಿಯಿಂದಾಗಿ ಕನಿಷ್ಠ ಒಂಬತ್ತು ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೋರ್ವರು ಶನಿವಾರ ತಿಳಿಸಿದರು.

 ಜ.19ರವರೆಗೆ ತಾಪಮಾನ ತಗ್ಗುತ್ತಲೇ ಇರಲಿದೆ ಮತ್ತು ಆ ಬಳಿಕ ಉ.ಪ್ರದೇಶದ ಹವಾಮಾನ ಸ್ಥಿತಿಯಲ್ಲಿ ಕೊಂಚ ಸುಧಾರಣೆಯಾಗಲಿದೆ ಎಂದು ಹವಾಮಾನ ಕಚೇರಿಯು ತಿಳಿಸಿದೆ. ಸೋಮವಾರದವರೆಗೆ ರಾಜ್ಯದಲ್ಲಿ ಎಂಟನೇ ತರಗತಿವರೆಗಿನ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ.

ಲಕ್ನೋದಲ್ಲಿ ಶನಿವಾರ 0.4 ಡಿ.ಸೆ.ತಾಪಮಾನ ದಾಖಲಾಗಿದ್ದು,ರಾಜ್ಯದಲ್ಲಿಯೇ ಅತ್ಯಂತ ಹೆಚ್ಚಿನ ಚಳಿ ಬಿದ್ದಿರುವ ಸ್ಥಳವಾಗಿದೆ.

 ಡಿ.21ರಿಂದ ಆರಂಭಗೊಂಡಿರುವ 40 ದಿನಗಳ ಅವಧಿಯ ತೀವ್ರ ಚಳಿಗಾಲ ‘ಚಿಲ್ಲಾಯಿ ಕಲನ್ ’ ಜ.30ಕ್ಕೆ ಅಂತ್ಯಗೊಳ್ಳಲಿರುವುದರಿಂದ ಕಾಶ್ಮೀರ ಕಣಿವೆಯು ಚಳಿಯಿಂದ ತತ್ತರಿಸಿದೆ. ಕಣಿವೆಯಲ್ಲಿನ ಎಲ್ಲ ನೀರಿನ ಮೂಲಗಳು ಸಂಪೂರ್ಣವಾಗಿ ಅಥವಾ ಭಾಗಶಃ ಘನೀಕೃತಗೊಂಡಿವೆ. ಗುಲ್ಮಾರ್ಗ್ ಮತ್ತು ಪಹಲಗಾಮ್‌ಗಳಲ್ಲಿ ಮೈನಸ್ 14.4 ಮತ್ತು ಮೈನಸ್ 12 ಡಿ.ಸೆ.ತಾಪಮಾನ ದಾಖಲಾಗಿವೆ. ಹಿಮಾಚಲ ಪ್ರದೇಶದಲ್ಲಿಯೂ ಇದೇ ಪರಿಸ್ಥಿತಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News