ಕೆಎಎಸ್ ಹುದ್ದೆಗಳ ನೇಮಕಾತಿಗೆ ಹೊರಡದ ಅಧಿಸೂಚನೆ : ಆಕಾಂಕ್ಷಿಗಳಲ್ಲಿ ವಯೋಮಿತಿ ಮೀರುವ ಆತಂಕ

Update: 2017-01-14 15:36 GMT

ಬೆಂಗಳೂರು, ಜ. 14: ಮೂರು ವರ್ಷಗಳಿಂದ ಪತ್ರಾಂಕಿತ(ಕೆಎಎಸ್) ‘ಎ’ ಮತ್ತು ‘ಬಿ’ ದರ್ಜೆ ಹುದ್ದೆಗಳ ನೇಮಕ ಸಂಬಂಧ ಅಧಿಸೂಚನೆ ಹೊರಡಿಸದ ಹಿನ್ನೆಲೆಯಲ್ಲಿ ಕೆಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸಿರುವ ಆಕಾಂಕ್ಷಿಗಳಲ್ಲಿ ವಯೋಮಿತಿ ಮೀರುವ ಆತಂಕ ಸೃಷ್ಟಿಯಾಗಿದೆ.

ರಾಜ್ಯದ ವಿವಿಧ ಇಲಾಖೆಗಳಲ್ಲಿ 1200ಕ್ಕೂ ಹೆಚ್ಚು ಕೆಎಎಸ್‌ನ ‘ಎ’ ಮತ್ತು ‘ಬಿ’ ದರ್ಜೆ ಹುದ್ದೆಗಳು ಖಾಲಿಯಿದ್ದು, ಸುಗಮ ಆಡಳಿತ ಚಟುವಟಿಕೆಗೆ ಅಡ್ಡಿಯಾಗಿದೆ. ಹೀಗಾಗಿ ಕೂಡಲೇ ಕೆಎಎಸ್ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. ಅಲ್ಲದೆ, ಗರಿಷ್ಠ ವಯೋಮಿತಿ 3ವರ್ಷ ಹೆಚ್ಚಿಸಬೇಕೆಂಬ ಆಗ್ರಹವೂ ಕೇಳಿಬಂದಿದೆ.

 2011ರ ನಂತರ 2014ರ ವರೆಗೆ ಕೆಎಎಸ್ ನೇಮಕಕ್ಕೆ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿರಲಿಲ್ಲ. ಹೈ.ಕ.ಮೀಸಲಾತಿ, ಮಹಿಳಾ ಮೀಸಲಾತಿ ಹೆಚ್ಚಳ ನೆಪದಲ್ಲಿ ರಾಜ್ಯ ಸರಕಾರ ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿದೆ ಎಂಬುದು ಕೆಎಎಸ್ ಪರೀಕ್ಷಾ ಆಕಾಂಕ್ಷಿಗಳ ಆರೋಪವಾಗಿದೆ.

ಉಲ್ಲಂಘನೆ:

ಪತ್ರಾಂಕಿತ(ಕೆಎಎಸ್) ‘ಎ’ ಮತ್ತು ‘ಬಿ’ ದರ್ಜೆ ಹುದ್ದೆಗಳಿಗೆ ಪ್ರತಿವರ್ಷ ನೇಮಕಾತಿ ನಡೆಸಬೇಕೆಂಬ ಕೇಂದ್ರ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ‘ಪಿ.ಸಿ.ಹೋಟಾ ಸಮಿತಿ’ ಶಿಫಾರಸ್ಸನ್ನು ರಾಜ್ಯ ಸರಕಾರ ಪಾಲಿಸುತ್ತಿಲ್ಲ. ಹೀಗಾಗಿ ಕೆಎಎಸ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡು, ಬೇರೆ ಉದ್ಯೋಗಗಳಿಗೆ ಹೋಗಲು ಆಗದೆ ಆಕಾಂಕ್ಷಿಗಳು ತೊಳಲಾಟದಲ್ಲಿ ಸಿಲುಕಿದ್ದಾರೆ.

ನಿರುದ್ಯೋಗ ನಿವಾರಣೆಗೆ ಸರಕಾರ ಹಲವು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪತ್ರಾಂಕಿತ (ಕೆಎಎಸ್) ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಸಲು ಅಧಿಸೂಚನೆ ಹೊರಡಿಸದ ವಿಳಂಬ ನೀತಿಯಿಂದ ಆಕಾಂಕ್ಷಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ.

ಭರವಸೆಯೂ ಹುಸಿ:

2015ರ ನವೆಂಬರ್‌ನಲ್ಲಿ ನಡೆದ ಅಧಿವೇಶನದಲ್ಲಿ ಕೆಎಎಸ್ ಅಧಿಕಾರಿಗಳ ನೇಮಕಕ್ಕೆ ಪ್ರತಿವರ್ಷ ಕ್ರಮ ವಹಿಸಲಾಗುವುದು. 403 ಕೆಎಎಸ್ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲಾಗುವುದೆಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು.

ಆದರೆ, ಕೆಎಎಸ್ ಅಧಿಕಾರಿಗಳ ನೇಮಕಾತಿ ಸಂಬಂಧ ಈವರೆಗೂ ಅಧಿಸೂಚನೆ ಹೊರಡಿಸಲು ಸರಕಾರ ಮುಂದಾಗಿಲ್ಲ. ಹೀಗಾಗಿ ಪರೀಕ್ಷಾರ್ಥಿಗಳು ಗೊಂದಲದಲ್ಲಿ ಮುಳುಗಿದ್ದಾರೆ. ಪ್ರತಿವರ್ಷ ನೇಮಕಾತಿ ನಡೆಸಬೇಕೆಂಬ ಹೋಟಾ ನೇತೃತ್ವದ ಸಮಿತಿ ಶಿಫಾರಸ್ಸನ್ನು ಗಾಳಿಗೆ ತೂರಲಾಗಿದೆ.

ರಾಜ್ಯದಲ್ಲಿ ಖಾಲಿಯಾಗುವ ಹಾಗೂ ಕೇಂದ್ರ ಸೇವೆಗೆ ಮುಂಬಡ್ತಿ ಕೆಎಎಸ್ ಅಧಿಕಾರಿಗಳ ವಿವರಗಳನ್ನು ಪ್ರತಿ ವರ್ಷ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಕೆಪಿಎಸ್ಸಿಗೆ ರಾಜ್ಯ ಸರಕಾರ ಕಳುಹಿಸಬೇಕು. ಆ ವರದಿಯನ್ನು ಆಧರಿಸಿ ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕೆಂಬ ನಿರ್ದೇಶನಕ್ಕೂ ಕಿಮ್ಮತ್ತಿಲ್ಲದಂತಾಗಿದೆ.

ಪತ್ರಾಂಕಿತ (ಕೆಎಎಸ್) ಎ ಮತ್ತು ಬಿ ದರ್ಜೆ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸದ ಹಿನ್ನೆಲೆಯಲ್ಲಿ ಸರಕಾರದಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಜನರಿಗೂ ಉತ್ತಮ ಆಡಳಿತ ಸೇವೆ ಒದಗಿಸುವಲ್ಲಿಯೂ ತೊಡಕಾಗಿದೆ ಎಂಬ ಆಪಾದನೆಗಳಿಗೇನು ಬರವಿಲ್ಲ.

‘ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಲು ರಾಜ್ಯ ಸರಕಾರ ಮತ್ತು ಕೆಪಿಎಸ್ಸಿ ಅಧಿಕಾರಿಗಳಿಗೆ ಆಸಕ್ತಿಯೇ ಇಲ್ಲ. ಇದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಭ್ರಷ್ಟಾಚಾರ, ಪರೀಕ್ಷಾ ಗೊಂದಲಗಳಿಂದ ಕೆಪಿಎಸ್ಸಿಯನ್ನು ಹೊರತರಬೇಕು. ಅಲ್ಲದೆ, ಕೂಡಲೇ ಕೆಎಎಸ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಬೇಕು’

-ಕೆಎಎಸ್ ಆಕ್ಷಾಂಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News