ಲೋಕಾಯುಕ್ತರ ನೇಮಕ: ಎಲ್ಲಿಯವರೆಗೆ ಈ ನಾಟಕ?

Update: 2017-01-18 18:44 GMT

‘‘ನೀವು ಹೊಡೆದಂತೆ ಮಾಡಿ-ನಾವು ಅತ್ತಂತೆ ಮಾಡುತ್ತೇವೆ...’’ ನೂತನ ಲೋಕಾಯುಕ್ತರ ನೇಮಕದ ಕಣ್ಣಾ ಮುಚ್ಚೆ ಆಟ ನೋಡುವಾಗ ಮೇಲಿನ ಪ್ರಹಸನ ನೆನಪಾಗುತ್ತದೆ. ಲೋಕಾಯುಕ್ತ ಹುದ್ದೆಗೆ ರಾಜ್ಯ ಸರಕಾರ ಈಗಾಗಲೇ ನಿವೃತ್ತ ನ್ಯಾಯಾಧೀಶರನ್ನು ಶಿಫಾರಸು ಮಾಡಿದೆ. ಆದರೆ ಈ ಹೆಸರನ್ನು ಮರು ಪರಿಶೀಲನೆ ಮಾಡುವಂತೆ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ ಎನ್ನುವುದು ಮಗದೊಂದು ಸುದ್ದಿ. ಇದರ ಬೆನ್ನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘‘ಏನು ಮಾಡೋದು, ಪ್ರತಿ ಬಾರಿ ಹೀಗೆ ಆಗುತ್ತಿದೆ. ನಾವು ಪ್ರಸ್ತಾಪ ಮಾಡಿರುವ ನ್ಯಾಯಾಧೀಶರ ಹೆಸರುಗಳನ್ನು ರಾಜ್ಯಪಾಲರು ವಾಪಸ್ ಕಳುಹಿಸುತ್ತಿದ್ದಾರೆ. ನಾವೇನು ಮಾಡೋಕಾಗುತ್ತೆ’’ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅಂದರೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಲೋಕಾಯುಕ್ತರ ನೇಮಕ ತಡವಾಗುತ್ತಿರುವುದಕ್ಕೆ ರಾಜ್ಯಪಾಲರನ್ನು ಹೊಣೆ ಮಾಡುತ್ತಿದೆ.

ಇತ್ತ ರಾಜ್ಯಪಾಲರು ಸರಕಾರವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ಯಾವುದೇ ನ್ಯಾಯಾಧೀಶರ ಹೆಸರನ್ನು ಪ್ರಸ್ತಾಪಿಸಿದರೂ, ಆ ಹೆಸರಿನ ಜೊತೆ ಜೊತೆಗೇ ಅವರ ಹಿಂದಿನ ಕಳಂಕಗಳು ಹೊರಬರುತ್ತಿರುವ ಕಾರಣ, ಲೋಕಾಯುಕ್ತ ನೇಮಕ ಸಾಧ್ಯವೇ ಇಲ್ಲವೇನೋ ಎನ್ನುವಂತಹ ಸ್ಥಿತಿಗೆ ಬಂದು ನಿಂತಿದೆ. ಇದು ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ಇಂದು ಲೋಕಾಯುಕ್ತ ಸ್ಥಾನದ ಜವಾಬ್ದಾರಿಯನ್ನು ವಹಿಸಲು ನಿವೃತ್ತ ನ್ಯಾಯಾಧೀಶರು ಹಿಂದೇಟು ಹಾಕತೊಡಗಿದ್ದಾರೆ. ಅನಗತ್ಯವಾಗಿ, ವಿವಾದಕ್ಕೆ ಸಿಲುಕಿಕೊಳ್ಳುವುದು ನ್ಯಾಯಾಧೀಶರಿಗೆ ಇಷ್ಟವಿಲ್ಲದ ಸಂಗತಿಯಾಗಿದೆ. ಒಟ್ಟಿನಲ್ಲಿ ಹಾವು ಸಾಯಬಾರದು, ಕೋಲು ಮುರಿಯಬಾರದು ಎನ್ನುವಂತಹ ಸ್ಥಿತಿ ಲೋಕಾಯುಕ್ತ ನೇಮಕಾತಿಯಲ್ಲಿ ಮುಂದುವರಿದಿದೆ.
 
ಬಹುಶಃ ನ್ಯಾಯಮೂರ್ತಿ ವೆಂಕಟಾಚಲ ಅವರ ಆಯ್ಕೆಯಾಗುವವರೆಗೂ ಲೋಕಾಯುಕ್ತರ ಆಯ್ಕೆ ಸರಕಾರಕ್ಕೆ ಇಷ್ಟು ಸಮಸ್ಯೆಯಾಗಿರಲಿಲ್ಲ. ಲೋಕಾಯುಕ್ತರೊಬ್ಬರು ಇದ್ದಾರೆ ಎನ್ನುವುದೇ ಅರಿವಿಲ್ಲದಂತಹ ಸ್ಥಿತಿ ರಾಜ್ಯದಲ್ಲಿತ್ತು. ಆದರೆ ವೆಂಕಟಾಚಲ ಅವರು ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಲೋಕಾಯುಕ್ತದ ಕುರಿತಂತೆ ರಾಜ್ಯದಲ್ಲಿ ಜಾಗೃತಿ ಮೂಡಿಸಿದರು. ಆರೋಪಿಗಳಿಗೆ ಶಿಕ್ಷೆಯಾಗುತ್ತದೆಯೋ ಇಲ್ಲವೋ ತದನಂತರದ ವಿಷಯ. ಆದರೆ ಸಿಕ್ಕಿ ಹಾಕಿಕೊಂಡ ಆರೋಪಿಗಳ ವರ್ಚಸ್ಸನ್ನು ಮಾಧ್ಯಮಗಳ ಮೂಲಕ ಲೋಕಾಯುಕ್ತರು ಹರಾಜು ಹಾಕುತ್ತಿದ್ದರು. ಪತ್ರಕರ್ತರೊಂದಿಗೆ ಸರಕಾರಿ ಕಚೇರಿಗಳಿಗೆ ದಾಳಿ ನಡೆಸುತ್ತಿದ್ದರು. ತಮ್ಮ ಜೋರು ದನಿಯ ಛೀಮಾರಿಗಳ ಮೂಲಕವೇ ಪತ್ರಿಕೆಗಳ ಮುಖಪುಟದಲ್ಲಿ ಲೋಕಾಯುಕ್ತರು ಕಾಣಿಸಿಕೊಳ್ಳತೊಡಗಿದರು. ಲೋಕಾಯುಕ್ತ ಎನ್ನುವ ಸಂಸ್ಥೆಯ ಕುರಿತಂತೆ ಜನರು ಅಭಿಮಾನ ಪಡಲು ಶುರು ಹಚ್ಚಿದ್ದು ವೆಂಕಟಾಚಲ ಅವರ ಕಾಲದಲ್ಲಿ.

ಇದಾದ ಬಳಿಕ, ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಲೋಕಾಯುಕ್ತರಾಗಿ ಆಯ್ಕೆಯಾದುದು ನ್ಯಾ. ಸಂತೋಷ್ ಹೆಗ್ಡೆ. ಈ ಆಯ್ಕೆ ಸಾರ್ವಜನಿಕವಾಗಿ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಹೆಗ್ಡೆಯವರು ಬಿಜೆಪಿ ಒಲವುಳ್ಳವರು. ಅಡ್ವಾಣಿಯವರನ್ನು ತಂದೆಗೆ ಸಮಾನವೆಂದು ಭಾವಿಸಿದವರು. ರಾಜ್ಯದಲ್ಲಿರುವುದು ಬಿಜೆಪಿ ಸರಕಾರ. ಹೀಗಿರುವಾಗ, ಅವರಿಂದ ಎಷ್ಟರಮಟ್ಟಿಗೆ ನ್ಯಾಯಯುತ ತನಿಖೆ ನಡೆದೀತು ಎಂಬ ಅನುಮಾನವನ್ನು ಹಲವರು ವ್ಯಕ್ತಪಡಿಸಿದ್ದರು. ಆದರೆ ರಾಜ್ಯದೊಳಗೆ ಬಿಜೆಪಿ ಸರಕಾರವಿದ್ದರೂ, ಬಿಜೆಪಿ ಎರಡಾಗಿ ಒಡೆದಿತ್ತು. ಅದಾಗಲೇ ಗಣಿದೊರೆಗಳು ಬಿಜೆಪಿಯ ಮೇಲೆ ತಮ್ಮ ಸಂಪೂರ್ಣ ಹಿಡಿತವನ್ನು ಹೊಂದಿದ್ದರು. ಎಲ್ಲರೂ ಸೇರಿ ರಾಜ್ಯವನ್ನು ದೋಚುವ ಕೆಲಸದಲ್ಲಿ ನಿರತರಾಗಿದ್ದರು. ಇಂತಹ ಸಂದರ್ಭದಲ್ಲಿ ಅಡ್ವಾಣಿಯವರು ನ್ಯಾ. ಹೆಗ್ಡೆಯವರನ್ನು ಬಳಸಿಕೊಂಡು ಗಣಿ ರೆಡ್ಡಿಗಳನ್ನು ಮತ್ತು ಯಡಿಯೂರಪ್ಪರನ್ನು ಹಣಿದರು ಎನ್ನುವ ಮಾತುಗಳಿವೆ. ಒಟ್ಟಿನಲ್ಲಿ, ವೆಂಕಟಾಚಲರಂತೆ ಸಂತೋಷ್ ಹೆಗ್ಡೆ ಮಾಧ್ಯಮಗಳ ಮೂಲಕ ಗದ್ದಲ ಎಬ್ಬಿಸಲಿಲ್ಲ. ಆದರೆ ಅವರು ತನ್ನ ಅಧಿಕಾರಾವಧಿಯಲ್ಲಿ ಭ್ರಷ್ಟ ಅಧಿಕಾರಿಗಳಿಗಷ್ಟೇ ಅಲ್ಲ, ಭ್ರಷ್ಟ ರಾಜಕಾರಣಿಗಳಿಗೂ ದುಃಸ್ವಪ್ನವಾದರು.

ರಾಜಕಾರಣಿಗಳು ಲೋಕಾಯುಕ್ತಕ್ಕೆ ಅಂಜುವಂತಹ ಸ್ಥಿತಿಯನ್ನು ಅವರು ತಂದಿಟ್ಟವರು ಸಂತೋಷ್ ಹೆಗ್ಡೆ. ಅಂತಿಮವಾಗಿ ಒಬ್ಬ ಮುಖ್ಯಮಂತ್ರಿ ರಾಜೀನಾಮೆ ನೀಡುವಂತಹ ಸನ್ನಿವೇಶವನ್ನು ಸೃಷ್ಟಿಸಿದ್ದೂ ಲೋಕಾಯುಕ್ತವೇ ಆಗಿದೆ. ಹೀಗೆ, ಯಾವಾಗ ಲೋಕಾಯುಕ್ತರು ತಮ್ಮ ಮೇಲೆಯೇ ಎರಗಬಹುದು ಎನ್ನುವುದನ್ನು ರಾಜಕಾರಣಿಗಳು ಅರಿತುಕೊಂಡರೋ, ಅಲ್ಲಿಂದ ಲೋಕಾಯುಕ್ತವನ್ನು ದುರ್ಬಲಗೊಳಿಸುವುದು ಅವರ ಆದ್ಯತೆಯಾಯಿತು. ಪ್ರಾಮಾಣಿಕ ನ್ಯಾಯಾಧೀಶರನ್ನು ಲೋಕಾಯುಕ್ತ ಸ್ಥಾನದಲ್ಲಿ ತಂದು ಕುಳ್ಳಿರಿಸಿದರೆ, ಒಂದಲ್ಲ ಒಂದು ದಿನ ಅವರು ತಮಗೇ ಮುಳುವಾಗಬಹುದು ಎಂಬ ಭಯದಿಂದ ಅಂತಹ ಆಯ್ಕೆಯೇ ನಡೆಯದಂತೆ ಪಕ್ಷ ಭೇದ ಮರೆತು ಶ್ರಮಿಸುತ್ತಿದ್ದಾರೆ.

ಸಂತೋಷ್ ಹೆಗ್ಡೆಯ ಆನಂತರ, ನ್ಯಾ. ಶಿವರಾಜ್ ಪಾಟೀಲ್ ಅವರನ್ನು ಆಯ್ಕೆ ಮಾಡಲಾಯಿತಾದರೂ ಅವರು ಆ ಸ್ಥಾನವನ್ನು ಅಲಂಕರಿಸಿದ್ದು ಕೇವಲ ಮೂರೇ ತಿಂಗಳು. ಭ್ರಷ್ಟರನ್ನು ಹಿಡಿಯಬೇಕಾದ ಲೋಕಾಯುಕ್ತರ ವಿರುದ್ಧವೇ ಭ್ರಷ್ಟಾಚಾರದ ಆರೋಪ ಕೇಳಿ ಬಂದುದರಿಂದ ಆ ಹುದ್ದೆಯಿಂದ ಅವರು ದೂರ ಸರಿಯಬೇಕಾಯಿತು. ಇದಾದ ಬಳಿಕ, ಹೆಚ್ಚಿನ ನ್ಯಾಯಾಧೀಶರು ಲೋಕಾಯುಕ್ತ ಸ್ಥಾನವೆಂದರೆ ಅಂಜುವಂತಹ ಸ್ಥಿತಿ ನಿರ್ಮಾಣವಾಯಿತು. ಮತ್ತೆ ಸುಮಾರು ಹತ್ತು ತಿಂಗಳ ಕಾಲ ಈ ಸ್ಥಾನ ಬರಿದಾಗಿಯೇ ಉಳಿಯಿತು. ಬಳಿಕ ನ್ಯಾ. ಭಾಸ್ಕರರಾವ್ ಆ ಸ್ಥಾನವನ್ನು ತುಂಬಿದರಾದರೂ ಅವರೂ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಕೆಳಗಿಳಿಯಬೇಕಾಯಿತು. ಇಂದು ಯಾವುದೇ ನ್ಯಾಯಾಧೀಶನ ಹೆಸರನ್ನು ಮುಂದಿಟ್ಟರೂ, ಯಾವುದಾದರೊಂದು ನೆಪದಲ್ಲಿ ವಿರೋಧಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಂದರೆ, ಭ್ರಷ್ಟಾಚಾರದ ವಿರುದ್ಧದ ಕಾರ್ಯಾಚರಣೆಯ ನೇತೃತ್ವ ವಹಿಸುವ ಲೋಕಾಯುಕ್ತರ ವಿಶ್ವಾಸಾರ್ಹತೆಯನ್ನೇ ನಷ್ಟಗೊಳಿಸಿ, ಅವರ ಕೈಗಳನ್ನು ಕಟ್ಟಿ ಹಾಕುವ ಉದ್ದೇಶವನ್ನು ರಾಜಕಾರಣಿಗಳು ಹೊಂದಿದ್ದಾರೆ.

ಆಡಳಿತ ಪಕ್ಷ-ವಿರೋಧಪಕ್ಷದ ಎಲ್ಲ ನಾಯಕರೂ ಇದರ ಹಿಂದೆ ಕೆಲಸ ಮಾಡುತ್ತಿದ್ದಾರೆ. ಒಬ್ಬ ನ್ಯಾಯಾಧೀಶನ ಹೆಸರನ್ನು ಲೋಕಾಯುಕ್ತಕ್ಕೆ ಶಿಫಾರಸು ಮಾಡಿದಾಕ್ಷಣ ಯಾಕೆ ಆತನ ವಿರುದ್ಧ ಆರೋಪಗಳು ಕೇಳಿ ಬರುತ್ತವೆ? ನಿಜಕ್ಕೂ ಅವನು ಅಕ್ರಮ ಎಸಗಿದ್ದಿದ್ದರೆ ಅವನ ಮೇಲೆ ಈ ಹಿಂದೆಯೇ ದೂರು ದಾಖಲಾಗಿ ಅದು ತನಿಖೆಗೊಳಪಡಬೇಕಾಗಿತ್ತಲ್ಲವೆ? ತಮ್ಮ ವೃತ್ತಿ ಬದುಕಿನಲ್ಲಿ ಒಂದಿನಿತೂ ಅಕ್ರಮವೆಸಗದ ಒಬ್ಬ ನ್ಯಾಯಾಧೀಶನನ್ನು ಲೋಕಾಯುಕ್ತ ಸ್ಥಾನಕ್ಕೆ ತರುವುದಾದರೆ ಲೋಕಾಯುಕ್ತ ಸ್ಥಾನವನ್ನು ತುಂಬುವುದು ಸದ್ಯಕ್ಕೆ ಅಸಾಧ್ಯದ ಮಾತು. ಇರುವುದರಲ್ಲಿ ಹೆಚ್ಚು ಪ್ರಾಮಾಣಿಕ, ನಿಷ್ಠುರನಾಗಿರುವ ನ್ಯಾಯಾಧೀಶರನ್ನು ಆಯ್ಕೆ ಮಾಡಿ, ಅವರ ಹೆಸರನ್ನು ಶಿಫಾರಸು ಮಾಡುವುದು ಸದ್ಯದ ತುರ್ತಾಗಿದೆ. ಹಾಗೂ ಅದಕ್ಕೆ ಸ್ಪಂದಿಸಿ ತಕ್ಷಣ ಅನುಮೋದನೆ ನೀಡುವುದು ರಾಜ್ಯಪಾಲರ ಕರ್ತವ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News