ಭವ್ಯ ಅಮೆರಿಕ ನಿರ್ಮಾಣ ಮಾಡೋಣ: ಟ್ರಂಪ್

Update: 2017-01-20 18:53 GMT

ವಾಶಿಂಗ್ಟನ್,ಜ.20: ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಮೆರಿಕ ಅಧ್ಯಕ್ಷರಾಗಿ ತನ್ನ ಚೊಚ್ಚಲ ಭಾಷಣ ಮಾಡಿದ ಟ್ರಂಪ್, ಇಂದು ಇಡೀ ಅಮೆರಿಕ ಸಂಭ್ರಮಿಸುವ ದಿನವಾಗಿದೆ. ಯಾವ ಪಕ್ಷ ಅಧಿಕಾರದಲ್ಲಿರುತ್ತೆ ಅನ್ನುವುದು ಮುಖ್ಯವಲ್ಲ. ಅದು ಉತ್ತಮ ಆಡಳಿತ ನೀಡುತ್ತದೆಯೇ ಎಂಬುದು ಇಲ್ಲಿ ಪ್ರಮುಖವಾಗಿರುತ್ತದೆ ಎಂದರು. ವಿದ್ಯಾರ್ಥಿಗಳು ಕ್ರಿಮಿನಲ್ ಕೃತ್ಯಗಳಲ್ಲಿ ಮುಳುಗಿದ್ದಾರೆ. ಈ ಸಂಪ್ರದಾಯ ಈ ಕ್ಷಣದಿಂದಲೇ ನಿಲ್ಲಲಿದೆ. ಇಂದಿನಿಂದ ಅಮೆರಿಕದಲ್ಲಿ ನಡೆಯುವ ಲೂಟಿ ನಿಲ್ಲಲಿದೆ. ದೇಶದಲ್ಲಿ ಇನ್ನು ಬದಲಾವಣೆಯ ಪರ್ವ ಆರಂಭವಾಗಲಿದೆ. ಜನತೆ ತನಗೆ ವಹಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ನಡೆಸಿಕೊಡುವೆ ಎಂದು ಭರವಸೆ ನೀಡಿದ ಅವರು, ‘ಅಮೆರಿಕದ ಜನರ ಕನಸೇ ನಮ್ಮ ಕನಸಾಗಲಿದೆ’ ಎಂದರು. ದೇಶದ ಮೂಲಸೌಕರ್ಯಗಳು ನಿಧಾನಗತಿಯಲ್ಲಿ ಸಾಗುತ್ತಿದ್ದವು ಎಂದು ಗಮನಸೆಳೆದ ಟ್ರಂಪ್, ತನ್ನ ಆಡಳಿತದಲ್ಲಿ ದೇಶದಲ್ಲಿ ನೂತನ ರಸ್ತೆಗಳು, ವಿಮಾನನಿಲ್ದಾಣಗಳ ನಿರ್ಮಾಣ ಕಾರ್ಯಗಳು ವ್ಯಾಪಕವಾಗಿ ನಡೆಯಲಿದೆಯೆಂದು ಹೇಳಿದರು.

ಭಯೋತ್ಪಾದನೆಯನ್ನು ಮಟ್ಟಹಾಕುವುದಾಗಿಯೂ ಅವರು ಈ ಸಂದರ್ಭದಲ್ಲಿ ಪ್ರತಿಜ್ಞೆಗೈದರು. ಅಮೆರಿಕನ್ನರ ಮೂಲಕ ನಾವು ಹೊಸ ಅಮೆರಿಕ ನಿರ್ಮಿಸಲಿದ್ದೇವೆ ಎಂದರು. ಇಂದಿನಿಂದ ದೇಶದ ಜನರೇ ಆಡಳಿತಗಾರರಾಗಲಿದ್ದಾರೆಂದು ಹೇಳಿದ ಅವರು ಎಲ್ಲಾ ವಿಚಾರಗಳಲ್ಲೂ ಅಮೆರಿಕಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಎಂದರು. ಅಮೆರಿಕ ಒಗ್ಗಟ್ಟಾದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮತ್ತೆ ಅಮೆರಿಕ ವಿಜಯಪಥದಲ್ಲಿ ಸಾಗಲಿದೆಯೆಂದು ಜನಸ್ತೋಮದ ಕರತಾಡನದ ಮಧ್ಯೆ ಹೇಳಿದರು. ಕಪ್ಪು, ಕಂದುಬಣ್ಣದವರೋ, ಬಿಳಿಯರೋ ಎಂಬುದು ಮುಖ್ಯವಲ್ಲ ನಾವೆಲ್ಲ ಅಮೆರಿಕನ್ನರು ಎಂಬುದಷ್ಟೇ ಮುಖ್ಯವಾಗುತ್ತದೆ ಎಂದವರು ಹೇಳಿದರು. ತನ್ನ ಹಿಂದಿನ ಆಡಳಿತಗಾರರ ಬಗ್ಗೆ ಪರೋಕ್ಷ ಟೀಕೆ ಮಾಡಿದ ಟ್ರಂಪ್, ಹಿಂದಿನವರು ಅರ ಅಭಿವೃದ್ಧಿಯ ಬಗ್ಗೆಯೇ ಚಿಂತಿಸಿದರೇ ಹೊರತು ನಿಮ್ಮ ಬಗ್ಗೆ ಅಲ್ಲ ಎಂದು ಕಟಕಿಯಾಡಿದರು. ಕೆಲವರು ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆಯೇ ಹೊರತು ಅದಕ್ಕೆ ಪರಿಹಾರ ಹುಡುಕುವುದಿಲ್ಲ. ಇನ್ನು ಮುಂದೆ ಈ ಅಸಹಾಯಕತೆ ಕೇಳಿಸಕೂಡದು ಎಂದರು.

 ಹಿಂದಿನದನ್ನು ಮರೆತು ಭವಿಷ್ಯದ ಕಡೆಗೆ ಗಮನಹರಿಸಬೇಕಿದೆ. ನಮ್ಮ ರಕ್ಷಣೆಗೆ ಪ್ರಮುಖ ಆದ್ಯತೆ ನೀಡಬೇಕಾಗಿದೆ. ನಾವು ಹೊಸ ರಸ್ತೆಗಳು, ವಿಮಾನನಿಲ್ದಾಣಗಳನ್ನು ನಿರ್ಮಿಸಲಿದ್ದೇವೆ. ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡಬೇಕಿದೆ. ಎಲ್ಲಾ ವಿಚಾರಗಳಲ್ಲೂ ಅಮೆರಿಕಕ್ಕೆ ಆದ್ಯತೆ ನೀಡಲಿದ್ದೇವೆ.ಅಮೆರಿಕ ಮತ್ತೆ ವಿಜಯದ ಪಥದಲ್ಲಿ ಸಾಗಲಿದೆ. ಇಂದಿನಿಂದ ದೇಶದ ಜನರೇ ಆಡಳಿತಗಾರರು ಎಂದು ಟ್ರಂಪ್ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News