ಒಬಾಮ ಪ್ರಮಾಣವಚನದ ಫೋಟೋ ಎಗರಿಸಿ ಟ್ವಿಟ್ಟರ್ ಗೆ ಬಳಸಿದ ಟ್ರಂಪ್

Update: 2017-01-21 05:34 GMT

ವಾಷಿಂಗ್ಟನ್, ಜ.21: ಅಮೆರಿಕದ 45ನೆ ಅಧ್ಯಕ್ಷರಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್ ಮೊದಲ ದಿನವೇ ಎಡವಟ್ಟು ಮಾಡಿಕೊಂಡಿದ್ದಾರೆ. ನಿರ್ಗಮನ ಅಧ್ಯಕ್ಷ ಬರಾಕ್ ಒಬಾಮ ಅವರ 2009ರ ಪ್ರಮಾಣ ವಚನದ ಫೋಟೋವನ್ನು ಅಮೆರಿಕ ಅಧ್ಯಕ್ಷರ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ @ ಪೋಟಸ್ ಗೆ ಟ್ರಂಪ್ ಅಧಿಕಾರ ಸ್ವೀಕರಿಸಿದ ತಕ್ಷಣ ಬಳಸಿದ್ದು, ಸಾಕಷ್ಟು ಮಂದಿಯ ಕಣ್ಣು ಕೆಂಪಾಗಿಸಿದೆ. ವಾಸ್ತವಿಕವಾಗಿ ಅದು ಡೆಮಾಕ್ರೆಟ್ ಗಳು ಮಂದಸ್ಮಿತರಾಗಿ ಅಮೆರಿಕದ ಧ್ವಜಗಳನ್ನು ಒಬಾಮ ಪ್ರಮಾಣ ವಚನದ ಸಂದರ್ಭ ಬೀಸುತ್ತಿದ್ದ ಚಿತ್ರವಾಗಿತ್ತು.

ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗುತ್ತಿದ್ದಂತೆಯೇ ಈ ಹ್ಯಾಂಡಲ್ ನ ಹಿನ್ನೆಲೆ ಚಿತ್ರವಾಗಿ ಅಮೆರಿಕದ ರಾಷ್ಟ್ರಧ್ವಜದ ಚಿತ್ರವನ್ನು ಬಳಸಲಾಯಿತು. ಮತ್ತೆ ಸ್ವಲ್ಪ ಸಮಯದ ನಂತರ ಇದನ್ನೂ ಬದಲಾಯಿಸಿ ಟ್ರಂಪ್ ಅವರು ಗಂಭೀರವದನರಾಗಿ ಕಿಟಿಕಿಯ ಹೊರಗೆ ನೋಡುತ್ತಿರುವ ಫೋಟೋ ಒಂದನ್ನು ಫೋಸ್ಟ್ ಮಾಡಲಾಗಿದೆ.
ತರುವಾಯ ಟ್ರಂಪ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ ಜನಸ್ತೋಮ ಹಾಗೂ ಒಬಾಮ ಹಾಗೂ ಜಾರ್ಜ್ ಬುಷ್ ಅವರ ಪ್ರಮಾಣವಚನಕ್ಕೆ ಸೇರಿದ ಜನಸ್ತೋಮದ ಬಗ್ಗೆಯೂ ಟ್ವಿಟ್ಟರಿಗರು ಪ್ರತಿಕ್ರಿಯಿಸಿದ್ದಾರೆ. ಒಬಾಮ ಅವರ ಪ್ರಮಾಣವಚನಕ್ಕೆ ಭಾರೀ ಜನಸ್ತೋಮವಿದ್ದರೆ ಅದರ ಮೂರನೇ ಒಂದಂಶದಷ್ಟು ಜನರು ಟ್ರಂಪ್ ಅವರ ಸಮಾರಂಭದಲ್ಲಿ ಹಾಜರಿರಲಿಲ್ಲ ಎಂಬುದನ್ನು ಬಹಳಷ್ಟು ಮಂದಿ ಗಮನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News