ಕೇಂದ್ರದಿಂದ ಭ್ರಷ್ಟಾಚಾರ ತಡೆಯುವ ಸಂಸ್ಥೆಗಳ ದುರ್ಬಲ; ಪ್ರಶಾಂತ್‌ಭೂಷಣ್

Update: 2017-01-22 14:18 GMT

ಬೆಂಗಳೂರು, ಜ.22: ಭ್ರಷ್ಟಾಚಾರ ತಡೆಯುವ ಎಲ್ಲ ಸಂಸ್ಥೆಗಳ ಬಲವನ್ನು ಕೇಂದ್ರದ ಮೋದಿ ಸರಕಾರ ದುರ್ಬಲಗೊಳಿಸುತ್ತಿದೆ ಎಂದು ಹಿರಿಯ ನ್ಯಾಯವಾದಿ ಹಾಗೂ ಸ್ವರಾಜ್ ಅಭಿಯಾನದ ರಾಷ್ಟ್ರೀಯ ಅಧ್ಯಕ್ಷ ಪ್ರಶಾಂತ್ ಭೂಷಣ್ ಇಂದಿಲ್ಲಿ ಕಿಡಿಕಾರಿದ್ದಾರೆ.

ರವಿವಾರ ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಕರ್ನಾಟಕ ಜನಶಕ್ತಿ, ದಸಂಸ ಹಾಗೂ ಸ್ವರಾಜ್ ಅಭಿಯಾನ ಹಮ್ಮಿಕೊಂಡಿದ್ದ, ನೋಟು ರದ್ದತಿಯ ಉದ್ದೇಶ,ಪರಿಣಾಮ ಮತ್ತು ಪರಿಹಾರದ ಬಗ್ಗೆ ‘ಬಹಿರಂಗ ಮುಕ್ತ ಚರ್ಚೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ಭ್ರಷ್ಟಾಚಾರ ತಡೆಯುತ್ತಿದ್ದ ಎಲ್ಲ ಸಂಸ್ಥೆಗಳ ಸೊಂಟ ಮುರಿಯಲು ಸಾಧ್ಯವಿರುವ ಕರಾಮತ್ತುಗಳನ್ನೂ ಮಾಡಿರುವ ಮನುಷ್ಯವೆಂದರೆ ಅದು ಪ್ರಧಾನಿ ನರೇಂದ್ರ ಮೋದಿ ಎಂದ ಅವರು, ಇದೀಗ ಮೋದಿ ಕಪ್ಪುಹಣ ತಡೆಯುವ ನಾಯಕನಂತೆ ಬಿಂಬಿಸಿಕೊಳ್ಳಲು ನೋಡುತ್ತಿದ್ದಾರೆ ಎಂದು ಆರೋಪಿಸಿದರು.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸಿಬಿಐ ನಿರ್ದೇಶಕರ ನಿವೃತ್ತಿಯ ಆರು ತಿಂಗಳ ಮೊದಲೇ ಮುಂದಿನ ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗಿದೆ. ಆದರೆ ಮುಖ್ಯಸ್ಥನ ನಿವೃತ್ತಿಯ ನಂತರ ಸುದೀರ್ಘ ಅನುಭವ ಹೊಂದಿದ್ದ ಆರ್.ಕೆ.ದತ್ತಾ ಎಂಬವರನ್ನು ನೇಮಕ ಮಾಡಬೇಕಿತ್ತು. ಆದರೆ, ದತ್ತಾ ಅವರಿಗೆ ಅನುಭವ ಇಲ್ಲದೆ ಇರುವಂತಹ ಭಯೋತ್ಪಾದನಾ ಜಾಲಗಳಿಗೆ ಹಣಪೂರೈಕೆ ತಡೆಯುವ ಘಟಕಕ್ಕೆ ವರ್ಗಾವಣೆ ಮಾಡಲಾಯಿತು ಎಂದು ದೂರಿದರು.

ನೋಟು ರದ್ದುಮಾಡಿದ ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ, ಕಪ್ಪುಹಣ, ಭಯೋತ್ಪಾದನೆ ಹಾಗೂ ಭ್ರಷ್ಟಾಚಾರ ತಡೆಗೆ ನೋಟು ರದ್ದು ಮಾಡಿರುವುದಾಗಿ ಹೇಳಿದರು. ಆದರೆ, ಶೇ.86ರಷ್ಟು ನೋಟುಗಳನ್ನು ವಾಪಾಸ್ ತೆಗೆದುಕೊಂಡಾಗ ಈ ಬಗ್ಗೆ ಯಾವ ಪರಿಣತರನ್ನೂ ಅಭಿಪ್ರಾಯ ಕೇಳಿರಲಿಲ್ಲ. ಇನ್ನೂ ರಿಸರ್ವ್ ಬ್ಯಾಂಕ್‌ನ ನಿರ್ದೇಶಕ ಮಂಡಳಿಗೆ ಒಂದು ಗಂಟೆಯ ಮುಂಚೆ ಈ ವಿಷಯ ತಿಳಿಸಲಾಯಿತು ಎಂದರು.

ನೋಟು ರದ್ದತಿ ಈ ದೇಶದ ಜನರ ಬದುಕು, ಅವರ ಉದ್ಯೋಗ ಮತ್ತು ಆರ್ಥಿಕತೆ ಸೇರಿ ಎಲ್ಲವನ್ನೂ ಬೀದಿಗೆಸೆದಿದೆ ಎಂದ ಅವರು, ಕಪ್ಪುಹಣ ಮತ್ತು ಭ್ರಷ್ಟಾಚಾರ ಎನ್ನುವುದು ದೇಶದ ಮುಂದಿರುವ ದೊಡ್ಡ ಸಮಸ್ಯೆಗಳೇ ನಿಜ. ಆದರೆ ಅವರ ನೋಟು ರದ್ದತಿಯ ಕ್ರಮದ ಹಿಂದಿನ ಉದ್ದೇಶ ಏನು? ಎಂದು ಪ್ರಶಾಂತ್ ಪ್ರಶ್ನಿಸಿದರು.

ಲೋಕ್‌ಪಾಲ್’ ಜಾರಿಗೆ ನೆಪ: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಮರ್ಥವಾಗಿರುವ ಲೋಕ್‌ಪಾಲ್ ಮಸೂದೆಯನ್ನು ಜಾರಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೆಪ ಹೇಳುತ್ತಿರುವುದು ಸರಿಯಲ್ಲ. ಅಲ್ಲದೆ, ದೊಡ್ಡ ಸಾಮಾಜಿಕ ಚಳವಳಿಯ ನಂತರ ಲೋಕ್‌ಪಾಲ್ ಮಸೂದೆಗೆ 2013ರಲ್ಲೆ ಸಂಸತ್ತಿನ ಅನುಮತಿ ಸಿಕ್ಕರೂ, ಬಳಿಕ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಆದರೆ, ಇದೀಗ ಈ ಬಗ್ಗೆ ಚರ್ಚೆಯೇ ನಡೆಯುತ್ತಿಲ್ಲ. ಇನ್ನೂ ಲೋಕ್‌ಪಾಲ್‌ನ್ನು ನಿಯೋಜನೆ ಮಾಡಲು ವಿರೋಧ ಪಕ್ಷದ ನಾಯಕರ ಅನುಮತಿ ಬೇಕು. ಆದರೆ ಅಧಿಕೃತ ವಿರೋಧ ಪಕ್ಷಕ್ಕೆ ಬೇಕಿರುವಷ್ಟು ಸ್ಥಾನಗಳಿಲ್ಲ ಎಂದು ಮೋದಿ ಸರಕಾರ ನೆಪ ಹೇಳುತ್ತಿದೆ ಎಂದು ವಿವರಿಸಿದರು.

ಪತ್ರ ಬರೆದಿದ್ದೇ: 2014ರ ಜೂನ್‌ನಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ತಾನು ಪತ್ರ ಬರೆದಿದ್ದೇ. ಅದರಲ್ಲಿ, ಕೇಂದ್ರದ ಬಿಜೆಪಿ ಸರಕಾರ ಕಪ್ಪುಹಣದ ಸಮಸ್ಯೆ ಬಗೆಹರಿಸುವುದಾದರೆ, ಹೊರದೇಶಗಳಿಂದ ಕಪ್ಪುಹಣ ತರುವ ಉದ್ದೇಶ ಇದ್ದರೆ ಕೆಲವು ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಲಹೆ ಮಾಡಿದ್ದೇ. ಅಲ್ಲದೆ, ಇಲ್ಲಿನ ಕೆಲ ಕಾನೂನುಗಳೇ, ಕಪ್ಪು ಹಣ ಸೃಷ್ಟಿಗೆ ಅವಕಾಶ ಮಾಡಿಕೊಟ್ಟಿವೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದೇ ಎಂದು ನೆನಪು ಮಾಡಿದರು.

ದೇಶದಲ್ಲಿ ಲಕ್ಷ ಕೋಟಿಗಳಷ್ಟು ಹಣ ಬೇನಾಮಿ ಆಸ್ತಿ ರೂಪದಲ್ಲಿದೆ. ಇವೆಲ್ಲಾವೂ ಅನೈತಿಕ ಹಣ ಎಂದ ಅವರು, ‘ತೆರಿಗೆ ಕಳ್ಳರ ಸ್ವರ್ಗ’ ಇದ್ದಂತೆ. ಅಲ್ಲದೆ, ಬ್ಯಾಂಕ್ ಖಾತೆಗಳ ಮಾಹಿತಿ ಬಹಿರಂಗ ಪಡಿಸದ ಅನೇಕ ಬ್ಯಾಂಕುಗಳಿವೆ. ಅಲ್ಲಿ ತೆರಿಗೆಯೂ ಅತಿ ಕಡಿಮೆ. ಮಾರಿಶಸ್ ಪನಾಮಾ ದ್ವೀಪ ಸೇರಿ ಇನ್ನಿತರೆ ದೇಶಗಳು ಭ್ರಷ್ಟಾರಿಗೆ ಸ್ವರ್ಗಗಳಾಗಿವೆ ಎಂದು ಕಿಡಿಕಾರಿದರು.

ವಿಶ್ವಸಂಸ್ಥೆಯ ಭ್ರಷ್ಟಾಚಾರ ವಿರೋಧಿ ಒಪ್ಪಂದಕ್ಕೆ ಭಾರತ ಸೇರಿ ಅನೇಕ ದೇಶಗಳು ಸೇರಿವೆ.ಇದರಲ್ಲಿ ಯಾವುದೇ ದೇಶ ತನಗೆ ಬಾಕೀದಾರರಾಗಿರುವ ತೆರಿಗೆದಾರರ ಕುರಿತ ಮಾಹಿತಿ ಕೇಳಿದರೆ, ನೀಡಲೇಬೇಕಾಗಿದೆ ಎಂದ ಅವರು, ನೋಟು ರದ್ದತಿ ಬಿಸಿ ಕೇವಲ ಬಡವರಿಗೆ ಮಾತ್ರ.ಇದರಿಂದ ಬಂಡವಾಳಗಾರರಿಗೆ ಹಾಗೂ ಅನೈತಿಕ ಹಣ ಉಳ್ಳವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಜನಶಕ್ತಿ ಕಾರ್ಯಕಾರಿ ಸಮಿತಿ ಸದಸ್ಯ ತ್ರಿಮೂರ್ತಿ,ದಸಂಸ ಗುರುಪ್ರಸಾದ್ ಕೆರಗೋಡು, ಎಚ್.ವಿ.ವಾಸು,ಬರಹಗಾರ ಶ್ರೀಪಾದ್‌ಭಟ್, ಪ್ರೊ.ಯತಿರಾಜ್ ಸೇರಿ ಪ್ರಮುಖರು ಹಾಜರಿದ್ದರು.


ಅಂಬಾನಿ ವಿರುದ್ಧ ತನಿಖೆ ನಡೆಯಲಿ

‘ಸಿಂಗಾಪುರದಿಂದ ಭಾರತಕ್ಕೆ ಬಂದಿರುವ ಅತಿದೊಡ್ಡಹೂಡಿಕೆ 6,240 ಕೋಟಿ ಒಂದು ಪೋಸ್ಟ್ ಬಾಕ್ಸ್ (ಬೇನಾಮಿ) ಕಂಪೆನಿ ಮೂಲಕ ಬಂದಿದೆ. ಇದರ ಹೂಡಿಕೆ ಅಂಬಾನಿ ಒಡೆತನದ ನಾಲ್ಕು ಕಂಪೆನಿಗಳಲ್ಲಿ ಆಗಿದೆ. ಈ ಹೂಡಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತನಿಖೆ ನಡೆಸಲಿ’


-ಪ್ರಶಾಂತ್‌ಭೂಷಣ್, ಹಿರಿಯ ನ್ಯಾಯವಾದಿ


ಭಾರತೀಯರೇ ಹೂಡಿಕೆದಾರರು..!

ದೇಶದ ಬಂಡವಾಳಗಾರರು ತೆರಿಗೆ ಕಡಿಮೆ ಇರುವ ವಿದೇಶಗಳಲ್ಲಿ ಕಂಪೆನಿಗಳನ್ನು ಹುಟ್ಟುಹಾಕಿ.ಬಳಿಕ ಅದನ್ನು ವಿದೇಶಿ ಬಂಡವಾಳ ರೂಪದಲ್ಲಿ ನಮ್ಮ ದೇಶದಲ್ಲಿಯೇ ಹೂಡಿಕೆ ಮಾಡುತ್ತಿದ್ದಾರೆ. ಒಟ್ಟು ಶೇ.75 ರಷ್ಟು ವಿದೇಶಿ ನೇರ ಹೂಡಿಕೆ ಬರುತ್ತಿರುವುದು ಇಂತಹ ದೇಶಗಳಿಂದ. ಅದರಲ್ಲಿ ಮಾರಿಶಸ್ ಒಂದರಿಂದಲೇ ಶೇ.65ರಷ್ಟು ಬರುತ್ತಿದೆ.ಅಲ್ಲದೆ, ಭಾರತಕ್ಕೂ ಮಾರಿಶಸ್‌ಗೂ ನಡುವೆ ಅಂತಹ ಎರಡು ಪಟ್ಟು ತೆರಿಗೆ ತಡೆಯುವ ಒಪ್ಪಂದವೂ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News