ಈಗ ಟ್ರಾಫಿಕ್ ಜಂಜಾಟವಿಲ್ಲದೆ ಬೆಂಗಳೂರಿನೊಳಗೆ ಸುಲಭವಾಗಿ ಪ್ರಯಾಣಿಸಿ!

Update: 2017-01-23 06:02 GMT

ಬೆಂಗಳೂರು, ಜ.23: ನಗರದಲ್ಲಿ ಸಬ್ ಅರ್ಬನ್ ರೈಲು ಯೋಜನೆ ಕೈಗೆತ್ತಿಕೊಳ್ಳಲು ಕಳೆದ ವಾರ ರಾಜ್ಯ ಸರಕಾರವು ರೈಲ್ವೆ ಇಲಾಖೆಯೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಇದೊಂದು ಸರಿಯಾದ ದಿಕ್ಕಿನಲ್ಲಿ ಇಟ್ಟ ಹೆಜ್ಜೆಯೆಂದು ಹೇಳಬಹುದಾದರೂ ಇದರ ಜಾರಿಗೆ ಸ್ವಲ್ಪ ಸಮಯ ಬೇಕೇ ಬೇಕು. ಅಷ್ಟೆಂದ ಮಾತ್ರಕ್ಕೆ ನಿಮ್ಮ ಕಾರು/ಬೈಕ್ ತ್ಯಜಿಸಿ ರೈಲು ಹತ್ತುವ ನಿಮ್ಮ ಉತ್ಸಾಹಕ್ಕೆ ಇದು ತಣ್ಣೀರೆರಚಿದೆಯೆಂದಲ್ಲ. ಈಗಲೂ ಜಾರಿಯಲ್ಲಿರುವ ಹಲವಾರು ಇಂಟರ್-ಸಿಟಿ ರೈಲುಗಳಲ್ಲಿ ನೀವು ಬೆಂಗಳೂರಿನಾದ್ಯಂತ ಅದಕ್ಕಿಂತ ಅರ್ಧದಷ್ಟು ಸಮಯದಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ ಸುತ್ತಬಹುದು.

ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಸುಹಾಸ್ ನಾರಾಯಣಮೂರ್ತಿ ಅವರು ರೈಲು ಪ್ರಯಾಣವನ್ನೇ ಹೆಚ್ಚಾಗಿ ಪ್ರೋತ್ಸಾಹಿಸುವವರು. ಅವರು ತಮ್ಮೊಂದಿಗೆ ಇತರ ಸಮಾನಮನಸ್ಕರನ್ನು ಸೇರಿಸಿ ಕೆಲಸ ಮಾಡುತ್ತಿದ್ದು, ಬೆಂಗಳೂರಿಗರು ರೈಲು ಪ್ರಯಾಣವನ್ನೇಕೆ ಆಯ್ಕೆ ಮಾಡಬಾರದೆಂದು ಪ್ರಶ್ನಿಸುತ್ತಾರೆ.

ಒಮ್ಮೆ ಪ್ರಯತ್ನಿಸಿ ನೋಡಿ:
ಫಿಲ್ಮ್ ಮೇಕರ್ ಹಾಗೂ ಮನರಂಜನಾ ಕ್ಷೇತ್ರದಲ್ಲಿ ವೃತ್ತಿಪರೆಯಾಗಿರುವ ಪ್ರದೀಪಾ ರೈಲು ಪ್ರಯಾಣ ಉತ್ತೇಜಿಸುವ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ. ‘‘ಔಟರ್ ರಿಂಗ್‌ರೋಡ್ ನಾಚೆಗೆ ರೈಲು ನಿಲ್ದಾಣಗಳಿವೆಯೆಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದೇ ಕಾರಣದಿಂದ ಅವರು ರೈಲು ಪ್ರಯಾಣವನ್ನು ಆಯ್ಕೆ ಮಾಡಿಲ್ಲ. ಸಬ್ ಅರ್ಬನ್ ರೈಲು ಯೋಜನೆ ಜಾರಿಯಾಗಲು ಕಾಯುವ ಬದಲು ಈಗಿರುವ ರೈಲುಗಳ ಸದ್ಬಳಕೆ ಮಾಡುವಂತೆ ಜನರನ್ನು ಉತ್ತೇಜಿಸುವುದು ನಮ್ಮ ಉದ್ದೇಶ’’ಎನ್ನುತ್ತಾರಾಕೆ.

‘‘ಈ ರೈಲುಗಳಲ್ಲಿ ಪ್ರಯಾಣಿಸುವ ಅನೇಕರ ಜತೆ ನಾವು ಮಾತನಾಡಿದ್ದೇವೆ ಹಾಗೂ ಪ್ರಮುಖರೊಂದಿಗೆ ಸಂದರ್ಶನ ಕೂಡ ನಡೆಸಿದ್ದೇವೆ. ವಿವಿಧ ಕಂಪೆನಿಗಳಿಗೆ ಈ ಸಾಕ್ಷ್ಯಚಿತ್ರ ತೋರಿಸಿ ಅವರು ತಮ್ಮ ಉದ್ಯೋಗಿಗಳು ಈ ರೈಲುಗಳ ಸದುಪಯೋಗಪಡಿಸಲು ಹುರಿದುಂಬಿಸುವಂತೆ ಮಾಡುತ್ತೇವೆ. ಈ ಸಾಕ್ಷ್ಯಚಿತ್ರಕ್ಕೆ ಸಂಗೀತ ಒದಗಿಸಲು ವಾಸು ದೀಕ್ಷಿತ್ ಮುಂದೆ ಬಂದಿದ್ದಾರೆ’’ ಎಂದು ಪ್ರದೀಪಾ ವಿವರಿಸುತ್ತಾರೆ.

ರೈಲು ಸೇವೆಯ ಮಾಹಿತಿ ನೀಡುವ ಆ್ಯಪ್
ಆ್ಯಪ್ ಉಪಯೋಗಿಸಿ ಟ್ಯಾಕ್ಸಿ ಸೇವೆ ಪಡೆಯುವುದು ಎಷ್ಟು ಸುಲಭ ಎಂಬುದು ಈಗಾಗಲೇ ಹಲವರು ತಮ್ಮ ಅನುಭವಗಳಿಂದ ತಿಳಿದುಕೊಂಡಿದ್ದಾರೆ. ಸದ್ಯದಲ್ಲಿಯೇ ರೈಲು ಸೇವೆಯ, ಅವುಗಳ ಸಮಯದ ಮಾಹಿತಿ ನೀಡುವ ಆ್ಯಪ್ ಒಂದು ಹೊರಬರಲಿದೆ. ‘‘ಇದೊಂದು ಉಪಯೋಗಿಸಲು ಬಹಳ ಸರಳವಾದ ಆ್ಯಪ್ ಆಗಿರುತ್ತದೆ. ಉದಾ.: ನೀವು ಮ್ಯಾಜೆಸ್ಟಿಕ್ ಬಳಿ ಇದ್ದರೆ ಹತ್ತಿರದ ನಿಲ್ದಾಣದ ಬಗ್ಗೆ ನಿಮಗೆ ಮಾಹಿತಿಯೊದಗಿಸುವುದು. ಅಲ್ಲಿಗೆ ಆಗಮಿಸುವ ವಿವಿಧ ರೈಲುಗಳು, ಅವುಗಳ ಸಮಯ, ಪ್ರಯಾಣದ ಅವಧಿ ಇತ್ಯಾದಿ ಮಾಹಿತಿ ನೀಡುವುದು. ರೈಲುಗಳ ಸ್ಟೇಟಸ್ ಶೇರ್ ಕೂಡ ಮಾಡಬಹುದಲ್ಲದೆ ಆ ಹೊತ್ತಿಗೆ ರೈಲು ಎಲ್ಲಿದೆಯೆಂದೂ ಆ್ಯಪ್ ಬಳಕೆದಾರರು ಕಂಡುಕೊಳ್ಳಬಹುದಾಗಿದೆ’’ ಎಂದು ಈ ಆ್ಯಪ್ ಅಭಿವೃದ್ಧಿ ಪಡಿಸುತ್ತಿರುವ ಕಂಪೆನಿಯ ರಾಕೇಶ್ ತೆರ್ಗುಂಡಿ ಹೇಳುತ್ತಾರೆ.

ಶಟಲ್ ಸೇವೆಗಳು
ಜನಪ್ರಿಯ ಆ್ಯಪ್ ಆಧರಿತ ಕ್ಯಾಬ್ ಸರ್ವಿಸ್‌ಹಾಗೂ ಬಿಎಂಟಿಸಿ ಜತೆಯಾಗಿ ವಿವಿಧ ರೈಲು ನಿಲ್ದಾಣಗಳಿಂದ ಫೀಡರ್ ಬಸ್ಸುಗಳ ವ್ಯವಸ್ಥೆ ಒದಗಿಸುವ ಬಗ್ಗೆಯೂ ಯೋಜನೆಯೊಂದಿದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಹಾಸ್ ‘‘ತನ್ನ ಶಟಲ್ ಸೇವೆಗಳಿಗಾಗಿ ಕ್ಯಾಬ್‌ಕಂಪೆನಿ ಪೂರ್ವನಿರ್ಧರಿತ ನಿಲುಗಡೆಗಳನ್ನು ಸೂಚಿಸುವುದು ಹಾಗೂ ಇಲ್ಲಿಂದ ಜನರು ವಾಹನಗಳಲ್ಲಿ ರೈಲು ನಿಲ್ದಾಣಗಳಿಗೆ ತಮ್ಮ ಮನೆಗಳಿಂದ ಹಾಗೂ ಕಂಪೆನಿಗಳಿಂದ ಪ್ರಯಾಣಿಸಬಹುದು. ಈ ಸೇವೆಗಾಗಿ ಎಷ್ಟು ವಾಹನಗಳು ಅಗತ್ಯವಿದೆಯೆಂದು ಬಿಎಂಟಿಸಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ’’ ಎಂದು ಸುಹಾಸ್ ವಿವರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News