ರಾಜ್ಯ ಸರಕಾರ ಕಂಬಳದ ಪರ: ಸಿದ್ದರಾಮಯ್ಯ

Update: 2017-01-23 06:34 GMT
ಮುಖ್ಯಮಂತ್ರಿಗಳು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.

ಬೆಂಗಳೂರು, ಜ.23: ರಾಜ್ಯ ಸರಕಾರವು ಕಂಬಳ ಪರವಾಗಿದೆ. ಕೇಂದ್ರ ಸರಕಾರವು ಜಲ್ಲಿಕಟ್ಟು ಮಾದರಿಯಲ್ಲೇ ಕಂಬಳ ಕ್ರೀಡೆಗೆ ಅವಕಾಶ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ರಾಜ್ಯಪಾಲ ವಜುಭಾಯಿ ವಾಲಾ ರುಡವಾಲ ಅವರ ಜನ್ಮದಿನ್ಮಕ್ಕೆ ಶುಭ ಕೋರಲೆಂದು ರಾಜಭವನಕ್ಕೆ ಇಂದು ಬೆಳಗ್ಗೆ ಆಗಮಿಸಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯ ಸರಕಾರವೂ ಕಂಬಳದ ಪರವಾಗಿಯೇ ಇದೆ. ಕೇಂದ್ರ ಸರಕಾರವು ಈ ಬಗ್ಗೆ ಜಲ್ಲಿಕಟ್ಟುವಿಗೆ ಅವಕಾಶ ಕಲ್ಪಿಸಿದಂತೆ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ಬರ ಪರಿಹಾರ ಆಗಿಲ್ಲ ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ರಾಜ್ಯ ಸರಕಾರವು ಬರ ಪರಿಹಾರಕ್ಕೆ ಸಂಬಂಧಿಸಿ ಕಳೆದ ಅಕ್ಟೋಬರ್ 27ರಂದು ಕೇಂದ್ರ ಸರಕಾರಕ್ಕೆ ವಿವರ ಸಲ್ಲಿಸಿ ಪರಿಹಾರಧನಕ್ಕೆ ಬಿಡುಗಡೆಗೆ ಆಗ್ರಹಿಸಿದೆ. ಅದರಂತೆ 1,780 ಕೋ.ರೂ. ಬಿಡುಗಡೆ ಮಾಡಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಆದರೆ ಇದುವರೆಗೆ ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ. ಬಿಜೆಪಿಗರು ಮಾತ್ರ ಬರ ಪರಿಹಾರ ಆಗಿಲ್ಲ ಎಂದು ಎಲ್ಲೆಡೆ ಡಂಗುರ ಸಾರುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದರು.

ಭಾರೀ ಪರಿಹಾರಧನ ಬಿಡುಗಡೆ ಮಾಡಿದ್ದೇವೆ. ಇಷ್ಟು ಪ್ರಮಾಣದಲ್ಲಿ ಈ ಹಿಂದೆ ಯಾರು ಮಾಡಿಯೇ ಇಲ್ಲ ಎಂದು ಬಿಜೆಪಿಗರು ಬುರುಡೆ ಬಿಡುತ್ತಿದ್ದಾರೆ. ಯಡಿಯೂರಪ್ಪ ಆಡಳಿತದಲ್ಲಿ 2009ರ ಅಕ್ಟೋಬರ್‌ನಲ್ಲಿ ಪ್ರವಾಹ ಬಂದಿದ್ದ ವೇಳೆ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಖುದ್ದು ಅವಲೋಕನ ನಡೆಸಿ ಸ್ಥಳದಲ್ಲೇ 1,500 ಕೋ.ರೂ. ಪರಿಹಾರ ಘೋಷಿಸಿದ್ದರು. ಇದು ಯಾಕೆ ನೆನಪಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News