ತುಂಬೆ ಡ್ಯಾಂ ಸಂತ್ರಸ್ತರಿಗೆ ನ್ಯಾಯೋಚಿತ ಪರಿಹಾರ

Update: 2017-01-23 10:34 GMT

ವಿಟ್ಲ (ಬೆಂಗಳೂರು), ಜ.23: ಬಂಟ್ವಾಳ ತಾಲೂಕಿನ ತುಂಬೆ ವೆಂಟೆಡ್ ಡ್ಯಾಂ ಮುಳುಗಡೆ ಪ್ರದೇಶಗಳ ಸಂತ್ರಸ್ತ ರೈತರಿಗೆ ನ್ಯಾಯೋಚಿತ ಪರಿಹಾರ ನೀಡುವ ಬಗ್ಗೆ ರೈತರ ಪರವಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದ ನಿಯೋಗ ಇತ್ತೀಚೆಗೆ ಸರಕಾರದ ಮುಖ್ಯ ಕಾರ್ಯದರ್ಶಿಯನ್ನು ಬೆಂಗಳೂರಿನ ವಿಧಾನಸೌಧದಲ್ಲಿ ಭೇಟಿ ಮಾಡಿ ಚರ್ಚಿಸಿತು.

ತುಂಬೆಯ ನೂತನ ಡ್ಯಾಂನಲ್ಲಿ 4.5 ಮೀಟರ್ ನೀರು ಸಂಗ್ರಹಿಸಲಾಗಿದೆ. ಈ ಸಂಬಂಧ ಮುಳುಗಡೆಗೊಂಡಿರುವ ಜಮೀನಿನ ಸಂತ್ರಸ್ತರಿಗೆ ಈ ವರ್ಷವೇ ನ್ಯಾಯೋಚಿತ ಪರಿಹಾರ ನೀಡಲಾಗುವುದು ಹಾಗೂ ಮುಂದಿನ ವರ್ಷ 5 ಮೀಟರ್ ನೀರು ಸಂಗ್ರಹಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧವೂ ಸಂತ್ರಸ್ತ ರೈತರಿಗೆ ಅದೇ ವರ್ಷ ಶಾಶ್ವತ ಪರಿಹಾರ ನೀಡುವ ಬಗ್ಗೆ ತೀರ್ಮಾನಕ್ಕೆ ಬರಲಾಯಿತು.

ತುಂಬೆ ನೂತನ ವೆಂಟೆಡ್ ಡ್ಯಾಂನಲ್ಲಿ ಸಂಗ್ರಹಿಸುವ ನೀರಿನಿಂದ ಒಟ್ಟು 488 ಎಕ್ರೆ ಜಮೀನು ಮುಳುಗಡೆಯಾಗುವ ಬಗ್ಗೆ ಈಗಾಗಲೇ ಸರ್ವೇ ನಡೆಸಲಾಗಿದೆ. ಈ ಜಮೀನುಗಳ ಸಂತ್ರಸ್ತರಿಗೆ ನೀಡಬೇಕಾಗಿರುವ ಒಟ್ಟು ಪರಿಹಾರದ ಮೊತ್ತ 125 ಕೋ.ರೂ. ಎಂದು ಅಂದಾಜಿಸಲಾಗಿದೆ. ಈ ಪರಿಹಾರ ಮೊತ್ತವನ್ನು ಮಂಗಳೂರು ಮಹಾನಗರ ಪಾಲಿಕೆ ಹಾಗೂ ಹಣಕಾಸು ಇಲಾಖೆ ಜಂಟಿಯಾಗಿ ಠೇವಣಿ ಇಟ್ಟು ವಿತರಿಸುವುದು ಎಂಬ ತೀರ್ಮಾನಕ್ಕೂ ಸಭೆಯಲ್ಲಿ ಬರಲಾಗಿದೆ.

ಸಭೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್ ಕುಂಟಿ, ನಗರಾಭಿವೃದ್ಧಿ ಇಲಾಖೆ ಅಪರ ಕಾರ್ಯದರ್ಶಿ ವಿ.ಪೊನ್ನುರಾಜ್, ಹಣಕಾಸು ಯೋಜನೆ ಇಲಾಖೆಯ ಕಾರ್ಯದರ್ಶಿ ಅರವಿಂದ ಶ್ರೀವಾಸ್ತವ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಮಣ ರೆಡ್ಡಿ, ರಾಜ್ಯ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಪದನಿಮಿತ್ತ ಆಯುಕ್ತ ಹಾಗೂ ಪೌರಾಡಳಿತ ಇಲಾಖೆಯ ನಿರ್ದೇಶಕ ಶಿವಸ್ವಾಮಿ ಕಳಸದ್, ದ.ಕ. ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ಕಾರ್ಯನಿರ್ವಾಹಕ ಇಂಜಿನಿಯರ್ ಮಳವಳ್ಳಿ ಮೊದಲಾದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಂತ್ರಸ್ತ ರೈತರ ಪರವಾಗಿ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಜಿಪ ಮುನ್ನೂರು ಗ್ರಾಪಂ ಸದಸ್ಯರಾದ ಯೂಸುಫ್ ಕರಂದಾಡಿ, ಅಹ್ಮದ್ ಕಬೀರ್, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಪರಮೇಶ್ವರ, ಸಂತ್ರಸ್ತ ರೈತರಾದ ಇಕ್ಬಾಲ್ ಪಡ್ಪು, ಕೆ.ಎಂ.ಅಬ್ದುಲ್ ರಹಿಮಾನ್ ಉದ್ದೋಟ್ಟು, ಆದಂ ಬಾಳಿಕೆ, ಧನಂಜಯ ಶೆಟ್ಟಿ ಪರಾರಿ, ಮುಹಮ್ಮದ್ ರಫೀಕ್ ಕರಂದಾಡಿ, ಹಸನಬ್ಬ ಉದ್ದೊಟ್ಟು, ಅಬ್ದುಲ್ ಕರೀಂ ಮೊದಲಾದವರು ಉಸ್ತುವಾರಿ ಸಚಿವರ ನಿಯೋಗದಲ್ಲಿದ್ದರು. .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News