ಕೊಲಂಬಿಯದಲ್ಲಿ ಗೂಳಿ ಕಾಳಗ ವಿರುದ್ಧ ಪ್ರತಿಭಟನೆ

Update: 2017-01-23 18:50 GMT

ಬೊಗೊಟ (ಕೊಲಂಬಿಯ), ಜ. 23: ತಮಿಳುನಾಡಿನಲ್ಲಿ ಹೋರಿಗಳನ್ನು ಮಣಿಸುವ ‘ಜಲ್ಲಿಕಟ್ಟು’ವಿಗಾಗಿ ಬೃಹತ್ ಹೋರಾಟ ನಡೆಯುತ್ತಿದ್ದರೆ, ದೂರದ ಕೊಲಂಬಿಯ ದೇಶದಲ್ಲೂ ‘ಗೂಳಿ ಕಾಳಗ’ದ ವಿಷಯದಲ್ಲಿ ಹೋರಾಟ ನಡೆಯುತ್ತಿದೆ.
ಆದರೆ, ಈ ಹೋರಾಟಗಳ ನಡುವೆ ವ್ಯತ್ಯಾಸವಿದೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಬೇಕೆಂದು ಒತ್ತಾಯಿಸಿ ಜನರು ಬೀದಿಗಿಳಿದರೆ, ಕೊಲಂಬಿಯದಲ್ಲಿ ಗೂಳಿ ಕಾಳಗ ಬೇಡ ಎಂದು ಒತ್ತಾಯಿಸಿದ ಜನರು ಪ್ರತಿಭಟನೆಗಿಳಿದಿದ್ದಾರೆ.

ರಾಜಧಾನಿ ಬೊಗೊಟದಲ್ಲಿ ರವಿವಾರ ಗೂಳಿ ಕಾಳಗ ನಡೆಯುತ್ತಿದ್ದ ಸ್ಥಳಕ್ಕೆ ನೂರಾರು ಪ್ರತಿಭಟನಾಕಾರರು ನುಗ್ಗಿ ಪೊಲೀಸರೊಂದಿಗೆ ಹೊಯ್‌ಕೈ ನಡೆಸಿದರು ಹಾಗೂ ಪ್ರೇಕ್ಷಕರಿಗೆ ಕಿರುಕುಳ ನೀಡಿದರು.

‘ಫೀಸ್ಟ ಬ್ರಾವ’ (ಗೂಳಿ ಕಾಳಗ) ನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ ಬೊಗೊಟಕ್ಕೆ ಮರಳಿದೆ.

1930ರ ದಶಕದ ಅವಧಿಯ ಕಲ್ಲಿನ ಗೂಳಿ ಕಾಳಗದ ಅಖಾಡಕ್ಕೆ ಹೋಗುತ್ತಿದ್ದ ಪ್ರೇಕ್ಷಕರನ್ನು ‘ಕೊಲೆಗಡುಕರು’ ಮತ್ತು ‘ಹಿಂಸೆ ನೀಡುವವರು’ ಎಂಬುದಾಗಿ ಪ್ರತಿಭಟನಾಕಾರರು ನಿಂದಿಸಿದರು.

ಗೂಳಿ ಕಾಳಗದ ವಿಷಯದಲ್ಲಿ ಕೊಲಂಬಿಯ ಇಬ್ಭಾಗವಾಗಿದೆ. ಸಮಾಜದ ಶ್ರೀಮಂತ ಉನ್ನತ ಸ್ತರದ ಜನರು ಗೂಳಿ ಕಾಳಗ ಬೇಕೆಂದು ಹೇಳಿದರೆ, ಕೆಳ ಸ್ತರದ ಜನರು ಅದನ್ನು ವಿರೋಧಿಸುತ್ತಿದ್ದಾರೆ.

ಬೊಗೊಟದ ಹಿಂದಿನ ಎಡಪಂಥೀಯ ಮೇಯರ್ 2012ರಲ್ಲಿ ಗೂಳಿಕಾಳಗವನ್ನು ನಿಷೇಧಿಸಿದ್ದರು. ಆದರೆ, ಬಳಿಕ ಸಾಂವಿಧಾನಿಕ ನ್ಯಾಯಾಲಯವು ನಿಷೇಧವನ್ನು ರದ್ದುಪಡಿಸಿತು. ಅದು ಕೊಲಂಬಿಯದ ಸಾಂಸ್ಕೃತಿ ಪರಂಪರೆ ಹಾಗೂ ಅದಕ್ಕೆ ತಡೆ ಹಾಕಲಾಗದು ಎಂದು ನ್ಯಾಯಾಲಯ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News