ಜಿಲ್ಲಾಧಿಕಾರಿ,ತಹಶೀಲ್ದಾರ್‌ರನ್ನು ಜೈಲಿಗಟ್ಟಿದ ತ.ನಾ.ನ್ಯಾಯಾಲಯ

Update: 2017-02-02 11:25 GMT

ಮದುರೈ,ಫೆ.2: ತನ್ನ ನಿರ್ದೇಶವನ್ನು ಪಾಲಿಸದ್ದಕ್ಕಾಗಿ ಮದುರೈ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಆರು ವಾರಗಳ ಜೈಲುಶಿಕ್ಷೆಯನ್ನು ವಿಧಿಸಿರುವ ಇಲ್ಲಿಗೆ ಸಮೀಪದ ಮೇಲೂರಿನ ನ್ಯಾಯಾಲಯವು, ಇಬ್ಬರನ್ನೂ ಸಿವಿಲ್ ಕಾರಾಗೃಹದಲ್ಲಿರಿಸುವಂತೆ ಆದೇಶಿಸಿದೆ.

ತಮ್ಮ ಭೂಮಿಯ ಸರ್ವೆ ನಡೆಸಲು ಮತ್ತು ಅದನ್ನು ತಮ್ಮಲ್ಲಿ ಪಾಲು ಮಾಡಿಕೊಳ್ಳಲು ಬಯಸಿದ್ದ ಹುಸೇನ್ ಮುಹಮ್ಮದ್ ಮತ್ತು ಜವಾಹರ ಅಲಿ ಎನ್ನುವವರು ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಮುನ್ಸೀಫ್ ಕೋರ್ಟ್‌ನ ನ್ಯಾಯಾಧೀಶ ಸುರೇಶ ಅವರು ಈ ಆದೇಶವನ್ನು ಹೊರಡಿಸಿದರು.

ಅರ್ಜಿದಾರರು ಹಿಂದೆ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಜಾಗದ ಸರ್ವೆ ಮತ್ತು ವಿಭಜನೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರು ಯಾವುದೇ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಸರ್ವೆ ನಡೆಸುವಂತೆ ಮತ್ತು ಜಾಗವನ್ನು ವಿಭಜಿಸಿ ಪಟ್ಟಾಗಳನ್ನು ನೀಡುವಂತೆ ನ್ಯಾಯಾಲಯವು ಈ ಅಧಿಕಾರಿಗಳಿಗೆ ನಿರ್ದೇಶ ನೀಡಿತ್ತು.

 ಆದರೆ ಅಧಿಕಾರಿಗಳು ಇದಕ್ಕೂ ಸ್ಪಂದಿಸದಿದ್ದಾಗ ಅರ್ಜಿದಾರರು ಅವರ ವಿರುದ್ಧ ನ್ಯಾಯಾಂಗ ಉಲ್ಲಂಘನೆ ಕ್ರಮವನ್ನು ಜರುಗಿಸುವಂತೆ ಕೋರಿದ್ದರು. ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಇಬ್ಬರಿಗೂ ಆರು ವಾರಗಳ ಸಿವಿಲ್ ಜ್ಯೆಲು ಶಿಕ್ಷೆ ವಿಧಿಸಿತು. ಜೊತೆಗೆ ಅವರ ವಾಹನಗಳ ಜಪ್ತಿಗೂ ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News