ಕಾನ್ಪುರ ಕಟ್ಟಡ ಕುಸಿತ:ಐವರ ಸಾವು

Update: 2017-02-02 12:46 GMT

 ಕಾನ್ಪುರ,ಫೆ.2: ಇಲ್ಲಿಯ ಜಾಜ್‌ಮಾವು ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಆರು ಅಂತಸ್ತುಗಳ ಕಟ್ಟಡ ನಿನ್ನೆ ಮಧ್ಯಾಹ್ನ ಕುಸಿದು ಬಿದ್ದು ಸಂಭವಿಸಿದ ದುರಂತದಲ್ಲಿ ಐವರು ಮೃತಪಟ್ಟಿದ್ದು, ಅವಶೇಷಗಳಡಿ ಇನ್ನೂ ಹಲವಾರು ಜನರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ದುರಂತ ಸಂಭವಿಸಿದ ಸುಮಾರು 15 ಗಂಟೆಗಳ ಬಳಿಕ,ಇಂದು ನಸುಕಿನ 3:30 ರ ಸುಮಾರಿಗೆ ಅವಶೇಷಗಳಡಿಯಿಂದ ಮೂರು ವರ್ಷ ಪ್ರಾಯದ ಹೆಣ್ಣುಮಗುವನ್ನು ರಕ್ಷಣಾ ತಂಡವು ಬದುಕಿಸಿದೆ.

ಅವಶೇಷಗಳಡಿ ಕನಿಷ್ಠ 25ರಿಂದ 30 ಜನರು ಸಿಕ್ಕಿಹಾಕಿಕೊಂಡಿರಬಹುದೆಂದು ರಕ್ಷಣಾ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ. ರಾತ್ರಿಯಿಡೀ ಕಾರ್ಯಾಚರಣೆ ನಡೆದಿದ್ದು ಬದುಕಿದ್ದವರನ್ನು ಪತ್ತೆ ಹಚ್ಚಲು ಕ್ಯಾಮರಾಗಳನ್ನು ಬಳಸಲಾಗಿತ್ತು.

ಕಟ್ಟಡದ ಮಾಲಕ,ಸ್ಥಳೀಯ ಸಮಾಜವಾದಿ ಪಾರ್ಟಿಯ ನಾಯಕ ಮೆಹ್ತಾಬ್ ಆಲಂ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದುರಂತ ಸಂಭವಿಸಿದ ಬೆನ್ನಿಗೇ ಆಲಂ ಮತ್ತು ಆತನ ಕುಟುಂಬ ತಲೆಮರೆಸಿಕೊಂಡಿದೆ.

ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುಮತಿ ಪಡೆದಿರಲಿಲ್ಲ, ಹೀಗಾಗಿ ನಿರ್ಮಾಣ ಕಾರ್ಯವನ್ನು ನಿಲ್ಲಿಸುವಂತೆ ಮೂರು ಬಾರಿ ನೋಟಿಸುಗಳನ್ನು ಜಾರಿ ಮಾಡಲಾಗಿತ್ತು. ಆದರೂ ನಿರ್ಮಾಣ ಕಾರ್ಯ ಮುಂದುವರಿದಿತ್ತು ಎಂದು ಕಾನ್ಪುರ ಅಭಿವೃದ್ಧಿ ಪ್ರಾಧಿಕಾರವು ಹೇಳಿದೆ.

ಕಟ್ಟಡದ ತಳಪಾಯ ಸುಭದ್ರವಾಗಿರಲಿಲ್ಲ ಎನ್ನುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

 ವಾರಣಾಸಿ ಮತ್ತು ಲಕ್ನೋಗಳಿಂದ ಆಗಮಿಸಿದ್ದ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆಯ ತಂಡಗಳು ಮತ್ತು ಸೇನೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಅವಶೇಷಗಳಡಿ ಸಿಕ್ಕಿಕೊಂಡಿದ್ದ 18 ಜನರನ್ನು ಈವರೆಗೆ ರಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News