ದೇಶದ ನಿರ್ಮಾಣ ಸಂಸ್ಥೆಗಳಿಗೆ ಬ್ಯಾರೀಸ್ ಗ್ರೂಪ್ ಮಾದರಿ: ಡಾ.ಸುಭಾಷ್ ಕುಂಟಿಯಾ

Update: 2017-02-11 12:58 GMT

ಬೆಂಗಳೂರು, ಫೆ.11: ದೇಶ ಹಾಗೂ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ನಿರ್ಮಾಣ ರಂಗದಲ್ಲಿ ಬ್ಯಾರಿ ಸಮೂಹ ಸಂಸ್ಥೆ ಪ್ರತಿಪಾದಿಸುವ ಕಲ್ಪನೆಗಳು ಇತರರಿಗೆ ಸ್ಫೂರ್ತಿ ನೀಡುವಂತಹವು. ದೇಶದ ಇತರ ನಿರ್ಮಾಣ ಸಂಸ್ಥೆಗಳಿಗೆ ಬ್ಯಾರೀಸ್ ಗ್ರೂಪ್ ಮಾದರಿ ಎಂದು ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಡಾ.ಸುಭಾಷ್ ಕುಂಟಿಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 ಶನಿವಾರ ನಗರದ ವೈಟ್‌ಫೀಲ್ಡ್ ಸಮೀಪವಿರುವ ಬ್ಯಾರೀಸ್ ಗ್ಲೋಬಲ್ ರಿಸರ್ಚ್ ಟ್ರೈಯಾಂಗಲ್(ಬಿಜಿಆರ್‌ಟಿ) ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಬಿಜಿಆರ್‌ಟಿ ವಿಶೇಷತೆಗಳ ಅನಾವರಣ ಹಾಗೂ ನಿರ್ಮಾಣ ಕ್ಷೇತ್ರದ ವಿವಿಧ ತಜ್ಞರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಬ್ಯಾರಿ ಸಮೂಹ ಸಂಸ್ಥೆಗಳು ಕೈಗೆತ್ತಿಕೊಳ್ಳುವಂತಹ ಯೋಜನೆಗಳಲ್ಲಿ ವಿಶೇಷತೆ - ವೈವಿಧ್ಯತೆಗಳಿರುತ್ತವೆ. ಈ ಹಿಂದೆ ಅವರು ನಿರ್ಮಿಸಿರುವಂತಹ ಹಲವು ಕಟ್ಟಡಗಳನ್ನು ನಾನು ನೋಡಿದ್ದೇನೆ. ಪ್ರತಿಯೊಂದರಲ್ಲೂ ಪರಿಸರಸ್ನೇಹಿ ಹಾಗೂ ನೈಸರ್ಗಿಕವಾಗಿ ಸಿಗುವ ಸೌಲಭ್ಯಗಳನ್ನು ಸದುಪಯೋಗವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿರುತ್ತದೆ ಎಂದು ಕುಂಟಿಯಾ ಅವರು ಹೇಳಿದರು.

ಮನುಷ್ಯನು ಗೊತ್ತಿದ್ದೋ, ಗೊತ್ತಿಲ್ಲದೆಯೋ ಕೈಗಾರಿಕೆಗಳ ಬೆಳವಣಿಗೆಗಳ ಹೆಸರಿನಲ್ಲಿ ನಡೆಸುತ್ತಿರುವ ಅನಾಹುತಗಳಿಂದಾಗಿ ಕಳೆದ ಒಂದು ಶತಮಾನದಿಂದ ಜಾಗತಿಕ ತಾಪಮಾನ ನಿರಂತವಾಗಿ ಏರಿಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅಭಿವೃದ್ಧಿಯೊಂದಿಗೆ ಪರಿಸರದ ಮೇಲೆ ಆಗುವ ಅನಾಹುತವನ್ನು ತಪ್ಪಿಸಲು ಹಸಿರು ಕಟ್ಟಡಗಳ ಪರಿಕಲ್ಪನೆಯ ಅನುಷ್ಠಾನ ಶ್ಲಾಘನಾರ್ಹ ಎಂದು ಸುಭಾಷ್ ಕುಂಟಿಯಾ ತಿಳಿಸಿದರು.

ಬಿಜಿಆರ್‌ಟಿ ಕಟ್ಟಡದ ವಿನ್ಯಾಸವು ಅತ್ಯಂತ ಅದ್ಭುತವಾಗಿದೆ. ಶೇ.84ರಷ್ಟು ಸ್ಥಳ ಉಪಯೋಗಕ್ಕೆ ಲಭ್ಯ, ಶೇ.74ರಷ್ಟು ಕಡಿಮೆ ಪ್ರಮಾಣದಲ್ಲಿ ನೀರಿನ ಬಳಕೆ, ಶೇ.54ರಷ್ಟು ವಿದ್ಯುತ್ ಉಳಿತಾಯ ಮಾಡುವ ನಿಟ್ಟಿನಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಂಶೋಧನೆ ಹಾಗೂ ಅಭಿವೃದ್ಧಿ(ಆರ್ ಅಂಡ್ ಡಿ) ಕ್ಷೇತ್ರದಲ್ಲಿ ನಾವು ಸಾಕಷ್ಟು ಹಿಂದುಳಿದಿದ್ದೇವೆ. ಶೇ.1ರಷ್ಟು ಪ್ರಮಾಣದಲ್ಲಿಯೂ ಈ ಕ್ಷೇತ್ರದ ಪ್ರಗತಿಗೆ ಹೂಡಿಕೆಯಾಗುತ್ತಿಲ್ಲ. ಇದರಿಂದಾಗಿ ನಾವು ಅಭಿವೃದ್ಧಿ ಹೊಂದಿದ ಇತರ ದೇಶಗಳನ್ನು ಅವಲಂಬಿಸಿದಂತಾಗಿದೆ. ಆದರೆ, ಬ್ಯಾರಿ ಸಮೂಹವು ಸಂಶೋಧನೆ ಹಾಗೂ ಅಭಿವೃದ್ಧಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಸುಭಾಷ್ ಕುಂಟಿಯಾ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ವಿಜ್ಞಾನ, ತಂತ್ರಜ್ಞಾನದ ರಾಜಧಾನಿಯಾಗಿದೆ. ಖಾಸಗಿ ವಲಯದಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ. ಬೆಂಗಳೂರು ನವೋದ್ಯಮದ ರಾಜಧಾನಿಯಾಗಿ ಹೊರಹೊಮ್ಮಿದ್ದು, ಹೊಸ ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡುವಂತಹ ವಾತಾವರಣ ಇಲ್ಲಿದೆ ಎಂದು ಅವರು ಹೇಳಿದರು.

ಹೊಸದಿಲ್ಲಿಯ ಮಹೇಂದ್ರರಾಜ್ ಕನ್ಸಲ್ಟೆಂಟ್, ಮುಖ್ಯ ಸ್ಟ್ರಕ್ಚರಲ್ ಕನ್ಸಲ್ಟೆಂಟ್ ಮಹೇಂದ್ರರಾಜ್ ಮಾತನಾಡಿ, ಬ್ಯಾರಿ ಸಮೂಹದ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ, ಓರ್ವ ಹೃದಯ ವೈಶಾಲ್ಯತೆಯನ್ನು ಹೊಂದಿರುವ ವ್ಯಕ್ತಿ. ಪ್ರತಿಯೊಬ್ಬರನ್ನೂ ಗೌರವದಿಂದ ಕಾಣವುದು ಅವರ ಗುಣ. ಕೇವಲ ಹಣ ಸಂಪಾದನೆಯಷ್ಟೇ ಅವರ ಗುರಿಯಲ್ಲ. ಸಂಶೋಧನೆ ಹಾಗೂ ಅಭಿವೃದ್ಧಿ ಕ್ಷೇತ್ರಕ್ಕೆ ಹೊಸ ಆವಿಷ್ಕಾರಗಳನ್ನು ನೀಡಬೇಕೆಂಬ ತುಡಿತ ಅವರಲ್ಲಿದೆ. ಈ ಬಿಜಿಆರ್‌ಟಿ ಕಟ್ಟಡದ ನಿರ್ಮಾಣದಲ್ಲಿ ನನ್ನ ಸೇವೆಯನ್ನು ಪಡೆದುಕೊಂಡಿರುವುದಕ್ಕೆ ಅವರನ್ನು ಅಭಿನಂದಿಸುತ್ತೇನೆ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಬ್ಯಾರಿ ಸಮೂಹ ಸಂಸ್ಥೆಯ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಮಾತನಾಡಿ, ಬಿಜಿಆರ್‌ಟಿ ಯೋಜನೆಯು 180 ಕೋಟಿ ರೂ.ಗಳದ್ದು. ಕೇವಲ 2-3 ಕೋಟಿ ರೂ.ಗಳನ್ನು ಇಟ್ಟುಕೊಂಡು ನಾವು ಈ ಯೋಜನೆಯನ್ನು ಕೈಗೆತ್ತಿಕೊಂಡೆವು. ಅದಕ್ಕೂ ಮುನ್ನ ಬೆಂಗಳೂರು ನಗರದಲ್ಲಿ ಸಮೀಕ್ಷೆಯನ್ನು ನಡೆಸಿ, ಸಂಶೋಧನೆ ಹಾಗೂ ಅಭಿವೃದ್ಧಿಗೆ ಒತ್ತು ನೀಡುವಂತಹ ನಿರ್ಮಾಣ ಮಾಡುವ ತೀರ್ಮಾನವನ್ನು ಕೈಗೊಳ್ಳಲಾಯಿತು ಎಂದರು.

ಇದೊಂದು ವಸತಿ ಪ್ರದೇಶ.  ಇಲ್ಲಿ ನಮ್ಮ ಸಂಸ್ಥೆಯೂ ವಸತಿ ಗೃಹಗಳನ್ನೇ  ನಿರ್ಮಾಣ ಮಾಡಿದರೆ, ಈ ಪ್ರದೇಶಕ್ಕೆ ಯಾವ ಕೊಡುಗೆಯನ್ನು ನೀಡಲು ಸಾಧ್ಯವಾಗುತ್ತಿರಲಿಲ್ಲ. ಆದುದರಿಂದ, ಸ್ಥಳೀಯವಾಗಿ ಲಭ್ಯವಿರುವ ಪ್ರತಿಭಾವಂತರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಪ್ರಯತ್ನವನ್ನು ನಾವು ಮಾಡಿದ್ದೇವೆ ಎಂದು ಸಯ್ಯದ್  ಬ್ಯಾರಿ ಹೇಳಿದರು.

ಸಮಾಜ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ಆವಿಷ್ಕಾರಗಳನ್ನು ಕೊಡಲು ಇದು ಪ್ರಶಸ್ತ ತಾಣವಾಗಿದೆ. ನಮ್ಮ ಪ್ರಯತ್ನಕ್ಕೆ ಸಹಕಾರ ನೀಡಿದಂತಹ ಮಹನೀಯರನ್ನು, ತಾಂತ್ರಿಕ ಸಿಬ್ಬಂದಿಯನ್ನು ಇಂದಿನ ಸಮಾರಂಭದಲ್ಲಿ ಸನ್ಮಾನಿಸುತ್ತಿರುವುದು ಸಂತಸದಗಳಿಗೆಯಾಗಿದೆ ಎಂದು ಅವರು ಹೇಳಿದರು.

ಲೋಕಾರ್ಪಣೆ: ವಂದಿನಿ ಮೆಹ್ತಾ , ರೋಹಿತ್‌ರಾಜ್ ಮೆಹೆಂದಿರತ್ತ ಹಾಗೂ ಏರಿಯಲ್ ಹೂಬರ್ ಸಂಪಾದನೆಯ ‘ದ ಸ್ಟ್ರಕ್ಚರ್ : ವರ್ಕ್ಸ್ ಆಫ್ ಮಹೇಂದ್ರರಾಜ್’ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಅಲ್ಲದೆ, ಬಿಜಿಆರ್‌ಟಿ ಕಟ್ಟಡದ ವೈಶಿಷ್ಟತೆಗಳ ಕುರಿತು ನಿರ್ದೇಶಕ ಅಭಯ ಸಿಂಹ ಸಿದ್ಧಪಡಿಸಿರುವ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.

ಸಮಾರಂಭದಲ್ಲಿ ಕ್ಯಾಲಿಕಟ್‌ನ ಎನ್.ಎಂ.ಸಲೀಮ್ ಅಂಡ್ ಅಸೋಸಿಯೇಟ್ಸ್‌ನ ಪ್ರಧಾನ ಆರ್ಕಿಟೆಕ್ಟ್ ಎನ್.ಎಂ.ಸಲೀಮ್, ಬೆಂಗಳೂರಿನ ಆರ್ಕಿಟೆಕ್ಟ್ ಮತ್ತು ಇಂಟಿರಿಯರ್ ವಿನ್ಯಾಸಗಾರರಾದ ಮನೋಜ್ ಲಡ್ಹಾದ್ ಮತ್ತು ಸಂದೀಪ್ ಜಗದೀಶ್, ಮುಂಬೈನ ಕೊಲಾಬೊರೇಟಿವ್ ಆರ್ಕಿಟೆಕ್ಚರ್‌ನ ಮುಜೀಬ್ ಅಹ್ಮದ್ ಹಾಗೂ ಲಲಿತಾ ಥರಾನಿರನ್ನು ಬಿಜಿಆರ್‌ಟಿ ಕಟ್ಟಡದ ಮಾದರಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಎ.ಮೊಹಿದೀನ್, ಬ್ಯಾರೀಸ್ ಸಮೂಹ ಸಂಸ್ಥೆಯ ಮಾಸ್ಟರ್ ಮಹಮೂದ್ ಬ್ಯಾರಿ,  ಎ.ಸಿದ್ದೀಕ್ ಬ್ಯಾರಿ, ಅಶ್ರಫ್ ಬ್ಯಾರಿ, ಮಝರ್‌ ಬ್ಯಾರಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News