ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ ಹತ್ಯೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ 16ರಂದು ದಿಲ್ಲಿಯಲ್ಲಿ ಧರಣಿ

Update: 2017-02-13 18:36 GMT

ಹೊಸದಿಲ್ಲಿ, ಫೆ.13: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆಯ ಹಿಂದೆ ತೀವ್ರವಾದಿ ಕೇಸರಿ ಸಂಘಟನೆ ಸನಾತನ ಸಂಸ್ಥೆಯ ಕೈವಾಡವಿದ್ದು, ಅದನ್ನು ನಿಷೇಧಿಸಬೇಕೆಂದು ಮಹಾರಾಷ್ಟ್ರ ಅಂಧಶ್ರದ್ಧೆ ನಿರ್ಮೂಲನಾ ಸಮಿತಿಯು ಸೋಮವಾರ ಆಗ್ರಹಿಸಿದೆ.

ದಾಭೋಲ್ಕರ್, ಸಿಪಿಐ ನಾಯಕ ಗೋವಿಂದ ಪನ್ಸಾರೆ ಹಾಗೂ ಕನ್ನಡ ಸಾಹಿತಿ ಎಂ.ಎಂ. ಕಲಬುರ್ಗಿ ಅವರನ್ನು ಹತ್ಯೆಗೈಯಲು 'ಒಂದೇ ವಿಧದ ಶಸ್ತ್ರಾಸ್ತ್ರ'ಗಳನ್ನು ಬಳಸಲಾಗಿದೆಯೆಂದು ಮಹಾರಾಷ್ಟ್ರ ಅಂಧಶ್ರದ್ಧೆ ನಿರ್ಮೂಲನಾ ಸಮಿತಿ(ಮ್ಯಾನ್ಸ್)ಯ ಅಧ್ಯಕ್ಷ ಅವಿನಾಶ್ ಪಾಟೀಲ್ ಆಪಾದಿಸಿದ್ದಾರೆ ಹಾಗೂ ಈ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿವಿಧ ಸಂಸ್ಥೆಗಳ ನಡುವೆ ಸಮನ್ವಯತೆಯಿರಬೇಕೆಂದು ಅವರು ಆಗ್ರಹಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು ಮೂವರು ವಿಚಾರವಾದಿಗಳ ಹತ್ಯೆ ಪ್ರಕರಣದಲ್ಲಿ ಶಾಮೀಲಾದವರ ತ್ವರಿತ ಬಂಧನಕ್ಕೆ ಆಗ್ರಹಿಸಿ ಮ್ಯಾನ್ಸ್ ಮತ್ತಿತರ ಸಮಾನಮನಸ್ಕ ಸಂಘಟನೆಗಳು ಫೆಬ್ರವರಿ 16ರಂದು ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿವೆಯೆಂದು ತಿಳಿಸಿದ್ದಾರೆ.
 
''ಸನಾತನ ಸಂಸ್ಥೆಯ ಕಾರ್ಯಕರ್ತರು ದಾಭೋಲ್ಕರ್ ಕೊಲೆ ಪ್ರಕರಣದಲ್ಲಿ ಮಾತ್ರವಲ್ಲ ಗೋವಾ, ಪನ್ವೇಲ್ ಹಾಗೂ ಥಾಣೆಗಳಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲೂ ಹೆಸರಿಸಲ್ಪಟ್ಟಿರುವುದರಿಂದ ಮಹಾರಾಷ್ಟ್ರ ಸರಕಾರವು ಅದನ್ನು ಕೂಡಲೇ ನಿಷೇಧಿಸಬೇಕು'' ಎಂಂದು ಪಾಟೀಲ್ ಆಗ್ರಹಿಸಿದ್ದಾರೆ. ದಾಭೋಲ್ಕರ್ ಅವರನ್ನು 2013ರ ಆಗಸ್ಟ್ 20ರಂದು ಪುಣೆಯಲ್ಲಿ ಪಿಸ್ತೂಲ್‌ನಿಂದ ಗುಂಡಿಕ್ಕಿ ಕೊಲ್ಲಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಕಳೆದ ವರ್ಷ ಸನಾತನ ಸಂಸ್ಥೆಯ ಕಾರ್ಯಕರ್ತ ವೀರೇಂದ್ರ ತಾವಡೆಯನ್ನು ಬಂಧಿಸಿತ್ತು. ದಾಭೋಲ್ಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಸನಾತನ ಸಂಸ್ಥೆಯ ಕಾರ್ಯಕರ್ತರಾದ ಸಾರಂಗ್ ಆಕೋಲ್ಕರ್ ಹಾಗೂ ವಿನಯ್ ಪವಾರ್‌ರನ್ನು ಆರೋಪಿಗಳೆಂದು ಹೆಸರಿಸಿತ್ತು. ಇವರ ಪೈಕಿ ಸಾರಂಗ್ ಆಕೋಲ್ಕರ್ 2009ರ ಗೋವಾ ಸ್ಫೋಟ ಪ್ರಕರಣದಲ್ಲೂ ಆರೋಪಿಯಾಗಿ ಹೆಸರಿಸಲ್ಪಟ್ಟಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News