ಅಮೇರಿಕಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಫ್ಲಿನ್ನ್ ರಾಜೀನಾಮೆ

Update: 2017-02-14 06:33 GMT

ವಾಷಿಂಗ್ಟನ್, ಫೆ.14: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಹುದ್ದೆಯಿಂದ ಮೈಖೇಲ್ ಫ್ಲಿನ್ನ್ ರಾಜೀನಾಮೆ ನೀಡಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸುವ ಮುನ್ನ ರಷ್ಯಾದ ಅಧಿಕಾರಿಗಳೊಂದಿಗೆ ಅವರಿಗಿದ್ದ ಸಂಪರ್ಕದ ಹಿನ್ನೆಲೆಯಲ್ಲಿ ಅವರ ರಾಜೀನಾಮೆ ಬಂದಿದೆಯೆನ್ನಲಾಗಿದೆ.

ಉನ್ನತ ಅಧಿಕಾರಿಯೊಬ್ಬರಿಗೆ ರಷ್ಯಾದೊಂದಿಗೆ ಇದ್ದ ಸಂಪರ್ಕ ಅಧ್ಯಕ್ಷರಿಗೆ ತೊಂದರೆ ತಂದೊಡ್ಡಬಹುದೆಂದು ಜಸ್ಟಿಸ್ ಇಲಾಖೆನೀಡಿದ ಎಚ್ಚರಿಕೆಯ ಬೆನ್ನಲ್ಲೇ ಫ್ಲಿನ್ನ್ ಅವರ ರಾಜೀನಾಮೆ ಬಂದಿದೆ.

‘‘ನಿಯೋಜಿತ ಉಪಾಧ್ಯಕ್ಷರು ಹಾಗೂ ಇತರರಿಗೆ ರಷ್ಯಾದ ರಾಯಭಾರಿಯೊಂದಿಗಿನ ನನ್ನ ಫೋನ್ ಕರೆಗಳ ಬಗ್ಗೆ ನಾನು ಅಪೂರ್ಣ ಮಾಹಿತಿಯೊದಗಿಸಿದ್ದೆ’’ ಎಂದು ತಮ್ಮ ಅಧಿಕೃತ ರಾಜೀನಾಮೆ ಪತ್ರದಲ್ಲಿ ಫ್ಲಿನ್ನ್ ಹೇಳಿದ್ದಾರೆ. ಫ್ಲಿನ್ನ್ ಅವರ ಬದಲಿಗೆ ಶ್ವೇತ ಭವನದ ರಾಷ್ಟ್ರೀಯ ಸುರಕ್ಷಾ ಕೌನ್ಸಿಲ್ ನ ಚೀಫ್ ಆಫ್ ಸ್ಟಾಫ್‌ ನಿವೃತ್ತ ಜನರಲ್ ಕೀತ್ ಕೆಲ್ಲಾಗ್ ಅವರನ್ನುತಾತ್ಕಾಲಿಕವಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಆ ಹುದ್ದೆಗೆ ಮುಂದಿನ ನೇಮಕಾತಿ ಬಗ್ಗೆ ಟ್ರಂಪ್ ನಿರ್ಧರಿಸಲಿದ್ದಾರೆ.

ಫ್ಲಿನ್ನ್ ಅವರು ಟ್ರಂಪ್ ಅವರ ಕಟ್ಟಾ ಬೆಂಬಲಿಗರಾಗಿದ್ದರೂ ಅವರು ರಷ್ಯಾದೊಂದಿಗೆ ಇಟ್ಟುಕೊಂಡಿದ್ದ ನಂಟು ಇತರ ಅಧಿಕಾರಿಗಳಿಗೆ ಪಥ್ಯವಾಗಿರಲಿಲ್ಲ. ತಾನು ರಷ್ಯಾದ ರಾಯಭಾರಿಯೊಂದಿಗೆ ನಿರ್ಬಂಧ ಕುರಿತಾಗಿ ಮಾತುಕತೆ ನಡೆಸಿರಲಿಲ್ಲವೆಂದು ಫ್ಲಿನ್ನ್ ಆರಂಭದಲ್ಲಿ ಟ್ರಂಪ್ ಸಲಹೆಗಾರರಿಗೆ ಹೇಳಿದ್ದರೆ ನಂತರ ಅವರು ತಾವು ಈ ಬಗೆಗೆ ಚರ್ಚೆ ನಡೆಸಿರಬಹುದೆಂದು ಮಾತು ಬದಲಾಯಿಸಿದ್ದರು. ಹೊಸ ಸರಕಾರದ ನಿಲುವುಗಳ ಬಗ್ಗೆ ಅವರು ರಷ್ಯಾದ ಬಳಿ ಹೇಳಿಕೊಂಡಿದ್ದಾರೆಯೇ ಎಂಬ ಸಂಶಯಗಳೂ ಮೂಡಲಾರಂಭಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News